
ಬೀಜಿಂಗ್ (ನ.14) ಪ್ರತಿ ಮಕ್ಕಳು ಟಿವಿ ಹಾಗೂ ಮೊಬೈಲ್‌ಗೆ ಅಡಿಕ್ಟ್ ಆಗುತ್ತಾರೆ. ಊಟ ಮಾಡಲು ಮೊಬೈಲ್ ಅಥವಾ ಟಿವಿ, ಓದಬೇಕಾದರೆ, ಅಳುವುದು ನಿಲ್ಲಿಸಲು, ಹೀಗೆ ಎಲ್ಲದಕ್ಕೂ ಮಕ್ಕಳು ಮೊಬೈಲ್ ಅಥವಾ ಟಿವಿ ಕೇಳುತ್ತಾರೆ. ಮಕ್ಕಳನ್ನು ಟಿವಿ ಹಾಗೂ ಮೊಬೈಲ್‌ನಿಂದ ದೂರವಿಡುವುದು ಅತೀ ದೊಡ್ಡ ಸವಾಲು. ಹೀಗೆ ವ್ಯಕ್ತಿಯೊಬ್ಬರು ತಮ್ಮ ಮಗನ ಟಿವಿ ಚಟ ಬಿಡಿಸಲು ಕೂಗಾಡಿದರೆ ಪ್ರಯೋಜನವಿಲ್ಲ ಎಂದು ಅರಿತಿದ್ದಾರೆ. ಇದಕ್ಕಾಗಿ ಸ್ಮಾರ್ಟ್ ಐಡಿಯಾ ಮಾಡಿದ್ದಾರೆ. ಇದೀಗ ಈ ವ್ಯಕ್ತಿಯ ಐಡಿಯಾಗೆ ಮಕ್ಕಳ ಪೋಷಕರು ಮನಸೋತಿದ್ದಾರೆ. ತಮಗೂ ಈ ಐಡಿಯಾ ಹೇಳಿಕೊಡಿ ಎಂದು ಮನವಿ ಮಾಡುತ್ತಿದ್ದಾರೆ.
ಸಾಮಾನ್ಯವಾಗಿ ಮಕ್ಕಳ ಕೈಯಿಂದ ರಿಮೋಟ್ ಕಿತ್ತುಕೊಳ್ಳುವುದು ಅಥವಾ ಟಿವಿ ಬಂದ್ ಮಾಡುವುದು ಮನೆಯಲ್ಲಿ ಜಗಳಕ್ಕೆ ಕಾರಣವಾಗುತ್ತದೆ. ಹೀಗಾಗಿ ಚೀನಾದ ಶೆಂಜೆನ್‌ನ ಟ್ಯಾಕ್ಸಿ ಚಾಲಕ ತನ್ನ ಮಗನ ಟಿವಿ ಚಟ ಬಿಡಿಸಲು ಹೊಸ ಐಡಿಯಾ ಮಾಡಿದ್ದಾನೆ. ತಮ್ಮ ಮಗನ ಟಿವಿ ವೀಕ್ಷಣೆಯ ಸಮಯವನ್ನೇ ಒಂದು ಶೈಕ್ಷಣಿಕ ಆಟವನ್ನಾಗಿಸಿದ್ದಾನೆ. ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಬಳಸಿಕೊಂಡಿದ್ದಾನೆ. ಬಾಲಕ ಟಿವಿ ನೋಡಲು ಆರಂಭಿಸಿದ ಪ್ರತಿ 10 ನಿಮಿಷಕ್ಕೊಮ್ಮೆ ಟಿವಿ ಪರದೆಯ ಮೇಲೆ ಪ್ರಸಾರವಾಗುತ್ತಿರುವ ಕಾರ್ಯಕ್ರಮ ತಾನಾಗಿಯೇ ಸ್ಥಗಿತಗೊಳ್ಳುತ್ತದೆ.
ಟಿವಿ ಕಾರ್ಯಕ್ರಮ ಸ್ಥಗಿತಗೊಂಡ ತಕ್ಷಣ, ಪರದೆಯ ಮೇಲೆ ಶಾಲಾ ಪಠ್ಯಕ್ರಮಕ್ಕೆ ಸಂಬಂಧಿಸಿದ ಪ್ರಶ್ನೆಗಳು ಡಿಸ್‌ಪ್ಲೆ ಆಗಲಿದೆ. ಎಐ ತಂತ್ರಜ್ಞಾನದ ಸಹಾಯದಿಂದ ಸಿದ್ಧಪಡಿಸಲಾದ ಈ ವ್ಯವಸ್ಥೆಯಲ್ಲಿ, ಬಾಲಕನು ಆ ಶಾಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀಡಿದರೆ ಮಾತ್ರ ಟಿವಿ ಕಾರ್ಯಕ್ರಮ ಮತ್ತೆ ಮುಂದುವರಿಯುತ್ತದೆ. ಒಂದು ವೇಳೆ ತಪ್ಪು ಉತ್ತರ ನೀಡಿದರೆ ಅಥವಾ ಉತ್ತರಿಸದಿದ್ದರೆ ಟಿವಿ ಮುಂದೆ ಸಾಗುವುದಿಲ್ಲ. ಈ ಮೂಲಕ ಮಗನಿಗೆ ಟಿವಿ ನೋಡಲು ಅವಕಾಶ ನೀಡುತ್ತಲೇ, ಆತನಿಗೆ ತಿಳಿಯದಂತೆ ಓದಿನ ಕಡೆಗೂ ಗಮನ ಹರಿಸುವಂತೆ ಮಾಡುವಲ್ಲಿ ಈ ತಂದೆ ಯಶಸ್ವಿಯಾಗಿದ್ದಾರೆ.
ಮನೆಯಲ್ಲಿ ನಿತ್ಯ ನಡೆಯುತ್ತಿದ್ದ ಟಿವಿ ವೀಕ್ಷಣೆಯ ಜಗಳವನ್ನು ಈ ಎಐ ಆಧಾರಿತ ರಸಪ್ರಶ್ನೆ ವ್ಯವಸ್ಥೆಯು ಅತ್ಯಂತ ರಚನಾತ್ಮಕ ಹಾಗೂ ಕಲಿಕಾ ಪೂರಕ ವಾತಾವರಣವನ್ನಾಗಿ ಪರಿವರ್ತಿಸಿದೆ. ಮಗನು ಕೂಡ ಇದನ್ನು ಶಿಕ್ಷೆಯೆಂದು ಭಾವಿಸದೆ, ಟಿವಿ ನೋಡುವ ಉತ್ಸಾಹದಲ್ಲಿ ಪ್ರಶ್ನೆಗಳಿಗೆ ಉತ್ತರಿಸಲು ಮುಂದಾಗುತ್ತಿದ್ದಾನೆ. ಚೀನಾದ ತಂದೆಯ ಈ ತಂತ್ರಜ್ಞಾನ ಆಧಾರಿತ ಪೇರೆಂಟಿಂಗ್ ಐಡಿಯಾ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ವಿಶ್ವದಾದ್ಯಂತ ಇರುವ ಇತರ ಪೋಷಕರ ಗಮನವನ್ನೂ ಸೆಳೆದಿದೆ. ಮಕ್ಕಳ ಸ್ಕ್ರೀನ್ ಟೈಮ್ ಕಡಿಮೆ ಮಾಡಲು ಮತ್ತು ಕಲಿಕೆಯನ್ನು ಆಸಕ್ತಿದಾಯಕವಾಗಿಸಲು ಇಂತಹ ತಂತ್ರಜ್ಞಾನಗಳು ಅತ್ಯಂತ ಉಪಯುಕ್ತವಾಗಿವೆ ಎಂದು ಹಲವು ಪೋಷಕರು ಅಭಿಪ್ರಾಯಪಟ್ಟಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.