
ಕಾಲಚಕ್ರ ಹೇಗೆ ತಿರುಗುತ್ತದೆ ಎಂಬುದಕ್ಕೆ ಸಾಕ್ಷಿಯಾದ ಅಪರೂಪದ ಹಾಗೂ ಅಚ್ಚರಿಯ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೆಲಸಕ್ಕೆ ಸರಿಯಾಗಿ ಹಾಜರಾಗುತ್ತಿಲ್ಲ ಎಂಬ ಕಾರಣಕ್ಕೆ ಎರಡು ವರ್ಷಗಳ ಹಿಂದೆ ತನ್ನ ಅಧೀನದಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯನ್ನು ವಜಾಗೊಳಿಸಿದ್ದ ಬಾಸ್ ಗೆ ಈಗ ಅದೇ ವ್ಯಕ್ತಿಯಿಂದ ಉದ್ಯೋಗದ ಆಫರ್ ಬಂದಿದೆ. ಅಚ್ಚರಿಯ ಸಂಗತಿಯೆಂದರೆ, ಅಂದು ಸಾಮಾನ್ಯ ಉದ್ಯೋಗಿಯಾಗಿದ್ದ ವ್ಯಕ್ತಿ ಇಂದು ಪ್ರತಿಷ್ಠಿತ ಉತ್ಪಾದನಾ ಕಂಪನಿಯ ಕಾರ್ಯಾಚರಣೆ ವ್ಯವಸ್ಥಾಪಕರಾಗಿದ್ದಾರೆ. ತಮ್ಮನ್ನು ಕೆಲಸದಿಂದ ತೆಗೆದುಹಾಕಿದ್ದ ಹಿಂದಿನ ಬಾಸ್ಗೆ ಶೇ.20ರಷ್ಟು ಹೆಚ್ಚಿನ ಸಂಬಳ ಹಾಗೂ ಉತ್ತಮ ಕೆಲಸದ ಸಮಯದೊಂದಿಗೆ ಉದ್ಯೋಗ ನೀಡಲು ಮುಂದಾಗಿದ್ದಾರೆ. ಉನ್ನತ ಹುದ್ದೆಗೇರಿ ತನ್ನ ಹಳೆಯ ಬಾಸ್ಗೆ ಉದ್ಯೋಗದ ಆಫರ್ ನೀಡಿದ್ದಾರೆ. ಆದರೆ, ಒಮ್ಮೆ ತಾನು ಕೆಲಸದಿಂದ ವಜಾಗೊಳಿಸಿದ್ದ ವ್ಯಕ್ತಿಯ ಕೆಳಗೆ ಕೆಲಸ ಮಾಡಬೇಕಾದ ಪರಿಸ್ಥಿತಿ ಎದುರಾಗಿರುವುದರಿಂದ ಮಾಜಿ ಬಾಸ್ ಗೊಂದಲಕ್ಕೆ ಸಿಲುಕಿದ್ದಾರೆ. ಈ ಅಪರೂಪದ ಉದ್ಯೋಗದ ಕಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
@premwomp ಎಂಬ ಎಕ್ಸ್ (X) ಬಳಕೆದಾರರು ಹಂಚಿಕೊಂಡಿರುವ ರೆಡ್ಡಿಟ್ ಪೋಸ್ಟ್ನ ಸ್ಕ್ರೀನ್ಶಾಟ್ ಮೂಲಕ ಈ ವಿಶಿಷ್ಟ ಸನ್ನಿವೇಶ ಬೆಳಕಿಗೆ ಬಂದಿದೆ. ಎರಡು ವರ್ಷಗಳ ಹಿಂದೆ ನಾನು ಕೆಲಸದಿಂದ ತೆಗೆದುಹಾಕಿದ್ದ ವ್ಯಕ್ತಿಯೇ ಈಗ ನನಗೆ ಉದ್ಯೋಗದ ಆಫರ್ ನೀಡಿದ್ದಾರೆ. ನನ್ನ ಜಾಗದಲ್ಲಿ ನೀವಿದ್ದರೆ ಈ ಕೆಲಸವನ್ನು ಒಪ್ಪಿಕೊಳ್ಳುತ್ತಿದ್ದಿರಾ? ಎಂಬ ಶೀರ್ಷಿಕೆಯಡಿ ವ್ಯಕ್ತಿಯೊಬ್ಬರು ತಮ್ಮ ವೃತ್ತಿಜೀವನದ ಈ ಅನಿರೀಕ್ಷಿತ ಅನುಭವವನ್ನು ಹಂಚಿಕೊಂಡಿದ್ದಾರೆ.
ಈ ವ್ಯಕ್ತಿ ಎರಡು ವರ್ಷಗಳ ಹಿಂದೆ ಗೋದಾಮಿನ ತಂಡವೊಂದರ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆ ತಂಡದಲ್ಲಿದ್ದ ಉದ್ಯೋಗಿಯೊಬ್ಬರು ಪದೇ ಪದೇ ಹಾಜರಾತಿ ಸಮಸ್ಯೆ ಉಂಟುಮಾಡುತ್ತಿದ್ದ ಕಾರಣ, ಹೆಚ್ಆರ್ ಅವರನ್ನು ಕೆಲಸದಿಂದ ವಜಾಗೊಳಿಸುವ ನಿರ್ಧಾರ ಕೈಗೊಂಡಿತ್ತು. ಮೇಲ್ವಿಚಾರಕರಾಗಿ ಇವರು ಕಂಪನಿಯ ಆದೇಶವನ್ನು ಪಾಲಿಸಿ, ಆ ಉದ್ಯೋಗಿಗೆ ವಜಾ ವಿಷಯವನ್ನು ತಿಳಿಸಿದ್ದರು. ಈ ನಿರ್ಧಾರದಲ್ಲಿ ಯಾವುದೇ ವೈಯಕ್ತಿಕ ದ್ವೇಷವಿರಲಿಲ್ಲ, ಕೇವಲ ವೃತ್ತಿಪರ ಜವಾಬ್ದಾರಿಯನ್ನು ನಿಭಾಯಿಸಿದ್ದೆ ಎಂದು ಅವರು ಪೋಸ್ಟ್ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಘಟನೆ ನಡೆದು ಎರಡು ವರ್ಷಗಳ ಬಳಿಕ, ಈ ಮಾಜಿ ಮೇಲ್ವಿಚಾರಕರು ಉತ್ಪಾದನಾ ಕಂಪನಿಯೊಂದರಲ್ಲಿ 'ಆಪರೇಷನ್ಸ್' ವಿಭಾಗದ ಹುದ್ದೆಗಾಗಿ ಸಂದರ್ಶನಕ್ಕೆ ತೆರಳಿದ್ದರು. ಸಂದರ್ಶನದ ಕೊಠಡಿಯೊಳಗೆ ಕಾಲಿಟ್ಟ ಅವರಿಗೆ ಮೇಜಿನ ಎದುರು ಕುಳಿತಿದ್ದ ವ್ಯಕ್ತಿಯನ್ನು ಕಂಡು ಅಚ್ಚರಿಯೋ ಅಚ್ಚರಿ! ಏಕೆಂದರೆ ಸಂದರ್ಶನ ತೆಗೆದುಕೊಳ್ಳಲು ಕುಳಿತಿದ್ದ ಆ ಕಂಪನಿಯ ಆಪರೇಷನ್ಸ್ ಮ್ಯಾನೇಜರ್ ಬೇರೆ ಯಾರೂ ಆಗಿರಲಿಲ್ಲ, ಎರಡು ವರ್ಷಗಳ ಹಿಂದೆ ಇವರಿಂದಲೇ ವಜಾಗೊಂಡಿದ್ದ ಅದೇ ಮಾಜಿ ಉದ್ಯೋಗಿ.
ಹಳೆಯ ಬಾಸ್ನನ್ನು ಕಂಡ ತಕ್ಷಣ ಗುರುತು ಹಿಡಿದ ಆ ಮ್ಯಾನೇಜರ್, ಯಾವುದೇ ಅಸಮಾಧಾನ ತೋರದೆ ಹಳೆಯ ದಿನಗಳನ್ನು ನೆನೆದು ನಗು ಹಂಚಿಕೊಂಡರು. ಬಳಿಕ ಅತ್ಯಂತ ವೃತ್ತಿಪರವಾಗಿ ಸಂದರ್ಶನ ನಡೆಸಿದ ಅವರು, ಮಾಜಿ ಮೇಲ್ವಿಚಾರಕರಿಗೆ ಆ ಹುದ್ದೆಯ ಆಫರ್ ನೀಡಿದ್ದಾರೆ. ವಿಶೇಷವೆಂದರೆ, ಈ ಕೆಲಸದಲ್ಲಿ ಪ್ರಸ್ತುತ ವೇತನಕ್ಕಿಂತ ಶೇ. 20ರಷ್ಟು ಹೆಚ್ಚು ಮತ್ತು ಉತ್ತಮ ಕೆಲಸದ ಸಮಯವೂ ಸಿಗಲಿದೆ. ಅಷ್ಟೇ ಅಲ್ಲದೆ, ಅಂದು ವಜಾಗೊಳಿಸುವಾಗ ನೀವು ತೋರಿದ ವೃತ್ತಿಪರತೆ ಹಾಗೂ ನಡವಳಿಕೆಗೆ ನಾನು ಗೌರವ ನೀಡುತ್ತೇನೆ ಎಂದೂ ಮ್ಯಾನೇಜರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಷ್ಟೆಲ್ಲಾ ಆಕರ್ಷಕ ಸೌಲಭ್ಯಗಳಿದ್ದರೂ, ಈ ಆಫರ್ ಸ್ವೀಕರಿಸಲು ಅಭ್ಯರ್ಥಿಗೆ ಮನಸ್ಸು ಹಿಂದೇಟು ಹಾಕುತ್ತಿದೆ. ಒಮ್ಮೆ ತಾನೇ ಕೆಲಸದಿಂದ ತೆಗೆದುಹಾಕಿದ ವ್ಯಕ್ತಿಯ ಕೈಕೆಳಗೆ ಕೆಲಸ ಮಾಡಬೇಕಲ್ಲ ಎಂಬುದು ಆತನ ಸ್ವಾಭಿಮಾನಕ್ಕೆ ಪ್ರಶ್ನೆ ಹಾಕಿದಂತಿದೆ. ಈ ಆಫರ್ ಬಗ್ಗೆ ಗಂಭೀರವಾಗಿ ಯೋಚಿಸುತ್ತಿರುವುದಕ್ಕೆ ನನ್ನ ಪತ್ನಿಯೇ ನನ್ನನ್ನು 'ಹುಚ್ಚ' ಎಂದು ಕರೆಯುತ್ತಿದ್ದಾಳೆದಿದ್ದಾರೆ. ಆತ ನಿಜಕ್ಕೂ ಹಳೆಯ ಘಟನೆಯನ್ನು ಮರೆತಿದ್ದಾನೆಯೇ ಅಥವಾ ಈ ಕೆಲಸಕ್ಕೆ ಸೇರಿದರೆ ಮುಂದೆ ನನಗೆ ಮುಜುಗರದ ಪರಿಸ್ಥಿತಿ ಎದುರಾಗಬಹುದೇ ಎಂಬ ಆತಂಕ ಅವರನ್ನು ಕಾಡುತ್ತಿದೆ.
ಮೂಲ ರೆಡ್ಡಿಟ್ ಪೋಸ್ಟ್ ಈಗ ಡಿಲೀಟ್ ಆಗಿದ್ದರೂ, ಅದರ ಸ್ಕ್ರೀನ್ಶಾಟ್ ವೈರಲ್ ಆಗಿದ್ದು ನೆಟ್ಟಿಗರು ಬಗೆಬಗೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಲವರು ಈ ಆಫರ್ ಒಪ್ಪಿಕೊಳ್ಳುವಂತೆ ಸಲಹೆ ನೀಡಿದ್ದು, ಅಂದು ಆ ಘಟನೆ ನಡೆದಿದ್ದರಿಂದಲೇ ಆತ ಜೀವನದ ಪಾಠ ಕಲಿತು ಇಂದು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾನೆ. ಕೇವಲ ನಿಮ್ಮ ಮೇಲೆ ಸೇಡು ತೀರಿಸಿಕೊಳ್ಳಲು ಆತ ಇಷ್ಟೆಲ್ಲಾ ಕಷ್ಟಪಟ್ಟು ಮ್ಯಾನೇಜರ್ ಹುದ್ದೆಗೇರಿ, ನಿಮ್ಮನ್ನೇ ಸಂದರ್ಶನಕ್ಕೆ ಕರೆಸಿ ಕೆಲಸ ಕೊಡುತ್ತಾನೆ ಎಂದು ಯೋಚಿಸುವುದು ಅತಿಯಾಯಿತು ಎಂದು ಹಾಸ್ಯಮಯವಾಗಿ ಕಿವಿಮಾತು ಹೇಳಿದ್ದಾರೆ.
ಮತ್ತೊಬ್ಬ ಬಳಕೆದಾರರು, ಸಂದರ್ಶನದ ಉದ್ದಕ್ಕೂ ಆತ ವೃತ್ತಿಪರತೆ ಮೆರೆದಿದ್ದರೆ ಕೆಲಸ ಒಪ್ಪಿಕೊಳ್ಳಲು ಯಾವುದೇ ಅಡ್ಡಿಯಿಲ್ಲ. ವೃತ್ತಿ ಮತ್ತು ವೈಯಕ್ತಿಕ ಸಂಬಂಧಗಳನ್ನು ಬೇರೆ ಬೇರೆಯಾಗಿ ನೋಡುವ ಪ್ರಬುದ್ಧತೆ ಅವರಲ್ಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಕೆಲವರು ಎಚ್ಚರಿಕೆಯ ಮಾತನ್ನಾಡಿದ್ದು, ಒಂದೋ ಆತ ತನ್ನ ತಪ್ಪನ್ನು ತಿದ್ದಿಕೊಂಡು ಜೀವನದಲ್ಲಿ ಮುಂದೆ ಬಂದಿರಬಹುದು, ಇಲ್ಲವೇ ಮುಂದೊಂದು ದಿನ ನಿಮ್ಮನ್ನು ಕೆಲಸದಿಂದ ತೆಗೆದುಹಾಕಿ ಸೇಡು ತೀರಿಸಿಕೊಳ್ಳುವ ಉದ್ದೇಶವೂ ಇರಬಹುದು. ಹೀಗಾಗಿ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.