
ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಲ್ಲಿ ಅಥವಾ ಬಿಡು ಬೀಸಾಗಿರೋ ಜಾಗದಲ್ಲಿ ಕಟ್ಟಿಕೊಂಡ ಮನೆಯಲ್ಲಿ ಅತಿಥಿಗಳಿಗೆಂದೇ ಪ್ರತ್ಯೇಕ ಕೋಣೆ ಇರುತ್ತದೆ. ಮನೆಗೆ ಆಗಮಿಸುವ ಅವರಿಗೆ ಏನು ಅಗತ್ಯವೋ ಎಲ್ಲವನ್ನೂ ಅಲ್ಲಿಟ್ಟರೆ ಅತಿಥಿ ಸತ್ಕಾರಕ್ಕೊಂದು ವಿಶೇಷ ಅರ್ಥ ನೀಡಬಹುದು. ಅವರಿರುವಷ್ಟು ಹೊತ್ತು ಅಥವಾ ದಿನಗಳು ಆರಾಮಾಗಿ ಇದ್ದು ಹೋಗುವಂತೆ ಮಾಡಿದಾಗ 'ಅತಿಥಿ ದೇವೋ ಭವ'ದ ಪರಿಕಲ್ಪನೆ ಪರಿಪೂರ್ಣ.
- ಅತಿಥಿಗಳಿಗಾಗಿಯೇ ಕಟ್ಟಿಸುವ ರೂಂನಲ್ಲಿ ಡ್ರಾಯರ್‌ಗಾಗಿ ಜಾಗ ಮಾಡಿಸಬೇಕು.
- ಅಲ್ಲಿಡುವ ಮಂಚವನ್ನು ಬೇಡವೆಂದಾಗ ಮಡಿಸಿಡಲು ಅನುಕೂಲವಾಗುವಂತೆ ಮಾಡಿಸಿಕೊಂಡರೆ ಅತಿಥಿಗಳು ಇಲ್ಲದ ಸಮಯದಲ್ಲಿ ಮನೆಯನ್ನು ಸ್ವಚ್ಛಗೊಳಿಸಲು ಕಷ್ಟವಾಗುವುದಿಲ್ಲ.
- ಬಟ್ಟೆ ಸಿಗಿಸಲು ಹ್ಯಾಂಗಿಂಗ್, ಹಾಸಿಗೆಗೆ ಸ್ವಚ್ಛವಾಗಿರುವ ಬೆಡ್‌ಸ್ಪ್ರೆಡ್, ಬೆಡ್ ಶೀಟ್, ಅಲ್ಲೊಂದು ಅಲರಾಂ ಇಟ್ಟುಕೊಳ್ಳಬಹುದಾದ ಗಡಿಯಾರ (ಮೊಬೈಲ್
ಇಲ್ಲದವರಿಗೆ ಅನುಕೂಲವಾಗಲು), ಪ್ರತ್ಯೇಕ ರಗ್ ಮತ್ತು ದಿಂಬುಗಳು, ಡಸ್ಟ್ ಬಿನ್ ಇರಲಿ.
- ಬಾತ್ ರೂಂನಲ್ಲಿ ಒಗೆದ ಟವೆಲ್‌ಗಳು ಹಾಗೂ ಅತ್ಯವಶ್ಯ ಬಟ್ಟೆಗಳು, ಅವುಗಳನ್ನು ಸಿಕ್ಕಿಸಲು ಸೂಕ್ತ ಜಾಗ, ಟಾಯ್ಲೆಟ್ ಪೇಪರ್, ಟಿಶ್ಯೂ ಪೇಪರ್ ಮತ್ತು ಸೋಪ್, ಹೇರ್ ಡ್ರೈಯರ್, ಹೊಸ ಜಾಗದಲ್ಲಿ ಅತಿಥಿಗಳಿಗೆ ಎಲ್ಲವೂ ಕಾಣಿಸುವಂತೆ ಸಣ್ಣದಾಗಿ ಉರಿಯುವ ಬೆಡ್‌ಲೈಟ್ಸ್, ವ್ಯಾನಿಟಿ ಬ್ಯಾಗ್ ಮತ್ತಿತರೆ ವಸ್ತುಗಳನ್ನು ಸಿಕ್ಕಿಸಲು ಹುಕ್ ಇರಲಿ.
- ಆಧುನಿಕ ಅತಿಥಿಗಳನ್ನು ಖುಷಿಪಡಿಸಲು ರೂಂನಲ್ಲಿ ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ಇರಲಿ. ಅವುಗಳನ್ನು ಬಳಸೋದು ಹೇಗೆಂಬ ಸೂಚನೆಗಳು, ಕೆಲವು ಪುಸ್ತಕಗಳು, ದೈನಿಕಗಳು ಹಾಗೂ ಇತರೆ ಅಗತ್ಯ ಓದುವ ವಸ್ತುಗಳು, ನಿಮ್ಮ ಮನೆಯ ಸುತ್ತುಮುತ್ತಲಿರುವ ಪ್ರವಾಸಿ ತಾಣಗಳ ಟಿಪ್ಪಣಿ ಹಾಗೂ ಅಲ್ಲಿಗೆ ಹೋಗಲು ಇರುವ ಸುಲಭ ಮಾರ್ಗಗಳ ಮಾಹಿತಿ ಪುಸ್ತಕ, ನಿಮ್ಮ ಮನೆಯ ಕೀ ಮತ್ತು ಪ್ರಮುಖ ಸಂಪರ್ಕ ಸಂಖ್ಯೆಗಳನ್ನಿಡಿ.
- ರೂಂನಲ್ಲೊಂದು ಫೋನ್ ಜತೆಗೆ ಸ್ಥಳೀಯ ದೂರವಾಣಿ ಸಂಖ್ಯೆಗಳ ಪುಸ್ತಕವಿರಲಿ.
- ಲೋಟಗಳೊಂದಿಗೆ ಬಾಟಲ್‌ನಲ್ಲಿ ನೀರು, ಹಣ್ಣುಗಳು, ಚಾಕೊಲೇಟ್‌ಗಳು ಹಾಗೂ ರೂಂನ ಯಾವುದಾದರೂ ಮೂಲೆಯಲ್ಲಿ ತಾಜಾ ಹೂವುಗಳಿರುವ ಕುಂಡವನ್ನಿಟ್ಟರೆ ಅತಿಥಿಗಳು ಸಂತೃಪ್ತರಾಗುತ್ತಾರೆ.
- ಇನ್ನೊಬ್ಬರ ಮನೆಗೆ ತೆರಳುವಾಗ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಲು ಮರೆಯಲೇಬಾರದು. ಆದರೂ ಕೆಲವರು ಕೆಲವು ಅಗತ್ಯ ವಸ್ತುಗಳನ್ನು ತರಲು ಮರೆತಿರುತ್ತಾರೆ. ಅದಕ್ಕಾಗಿಯೇ ಅವರಿಗೆಂದು ಕೈಗೆ ಸಿಗುವೆಡೆ ಶ್ಯಾಂಪೂ, ಟೂತ್ ಬ್ರಶ್, ಪೇಸ್ಟ್, ಡಿಯೋಡ್ರೆಂಟ್, ಸ್ತ್ರೀಯರಿಗೆ ಅಗತ್ಯವಾದ ಉತ್ಪನ್ನಗಳು, ಬ್ಲೇಡ್, ಶೇವಿಂಗ್ ಕ್ರೀಂ, ಹತ್ತಿ, ನೇಲ್ ಕಟ್ಟರ್, ಬಾಡಿ ಲೋಷನ್,ಅತ್ಯಗತ್ಯವಾದ ಕೆಲವು ಔಷಧಿಗಳು ಕೈಗೆ ಸಿಗುವಂತಿಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.