ನಿಮ್ಮ ದಿನವನ್ನು ಈ ಸಾವಯವ ತಿಂಡಿಗಳೊಂದಿಗೆ ಆರಂಭಿಸಿ. ಸರಿಯಾದ ಆಹಾರದೊಂದಿಗೆ ಆರಂಭವಾಗುವ ದಿನ ಖಂಡಿತಾ ಚೆನ್ನಾಗಿರುತ್ತದೆ.
ಆರೋಗ್ಯ, ಫಿಟ್ನೆಸ್ ಬಗ್ಗೆ ಕಾಳಜಿ ಹೆಚ್ಚಿರುವ ಈ ದಿನಗಳಲ್ಲಿ ಸಾಂಪ್ರದಾಯಿಕ ತಿಂಡಿಗಳೊಂದಿಗೆ ಸಮಬಲದ ಹೋರಾಟ ನಡೆಸುತ್ತಿವೆ ಸಾವಯವ ತಿಂಡಿಗಳು. ಬೆಳಗಿನ ಬ್ರೇಕ್‌ಫಾಸ್ಟ್‌ನಲ್ಲಿ ವಾರಕ್ಕೆ ಮೂರು ದಿನ ಸಾವಯವ ತಿಂಡಿಗಳನ್ನೂ ಸೇರಿಸಿ. ವೈವಿಧ್ಯತೆಯೂ ಸಿಗುತ್ತದೆ. ಆರೋಗ್ಯಕರವೂ ಹೌದು.
ಬೇಯಿಸಿದ ಮೊಟ್ಟೆಗಳು
ಬೇಕಾಗುವ ಸಾಮಗ್ರಿಗಳು: ಮೊಟ್ಟೆಗಳು, 4 ದೊಣ್ಣೆಮೆಣಸು, ಸಣ್ಣಗೆ ಹೆಚ್ಚಿದ 10 ಟೊಮ್ಯಾಟೋಗಳು, 4 ಬೆಳ್ಳುಳ್ಳಿ ಎಸಳು (ನುರಿದದ್ದು), 1/4 ಚಮಚ ಚಿಲ್ಲಿ ಫ್ಲೇಕ್ಸ್, 2 ಚಮಚ ಜೀರಿಗೆ ಪುಡಿ, 20 ಎಂಎಲ್ ಆಲಿವ್ ಆಯಿಲ್, ರುಚಿಗೆ ತಕ್ಕಷ್ಟು ಉಪ್ಪು, ಪೆಪ್ಪರ್.
ಮಾಡುವ ವಿಧಾನ: ದೊಣ್ಣೆ ಮೆಣಸನ್ನು ಅದರ ಚರ್ಮ ಸುಕ್ಕಾಗುವವರೆಗೆ ಹುರಿಯಿರಿ. ಅಥವಾ ಓವನ್‌ನಲ್ಲಿಟ್ಟರೆ ಉತ್ತಮ. ನಂತರ ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಸುತ್ತಿ ತಣ್ಣಗಾಗಲು ಬಿಡಿ. ಬಳಿಕ ಸುಟ್ಟ ಸಿಪ್ಪೆಯನ್ನು, ಬೀಜಗಳನ್ನು ತೆಗೆದು, ಉದ್ದುದ್ದಗೆ ಹೆಚ್ಚಿ. ಬಾಣಲೆಗೆ ಆಲಿವ್ ಆಯಿಲ್ ಹಾಕಿ ಸ್ವಲ್ಪ ಬಿಸಿ ಮಾಡಿ. ಇದಕ್ಕೆ ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನು ಹಾಕಿ. ಟೊಮ್ಯಾಟೋ ಮೆತ್ತಗಾಗುವವರೆಗೆ ಸಣ್ಣ ಬೆಂಕಿಯಲ್ಲಿ ಬೇಯಿಸಿ. ಉಪ್ಪು ಮತ್ತು ಪೆಪ್ಪರ್ ಹಾಕಿ. ಇದನ್ನು ಶಕ್ಶೌಕ ಎನ್ನುತ್ತಾರೆ. ಈ ಶಕ್ಷೌಕವನ್ನು ಚಮಚದಿಂದ ಮಧ್ಯೆ ಹೊಂಡ ಮಾಡಿ. ಆ ಜಾಗಕ್ಕೆ ಎರಡು ಮೊಟ್ಟೆಗಳನ್ನು ಒಡೆದು ಸುರಿಯಿರಿ. ಮತ್ತೆ ಬಾಣಲೆಯನ್ನು ಮುಚ್ಚಿಟ್ಟು ಮೊಟ್ಟೆಯ ಬಿಳಿ ಭಾಗ ಸೆಟ್ ಆಗುವವರೆಗೂ ಸುಮಾರು 10 ನಿಮಿಷಗಳ ಕಾಲ ಸಣ್ಣ ಬೆಂಕಿಯಲ್ಲಿ ಬೇಯಿಸಿ. ಮೇಲಿನಿಂದ ಕೊತ್ತಂಬರಿ ಸೊಪ್ಪು ಅಥವಾ ನಿಮ್ಮಿಷ್ಟದ ಯಾವುದೇ ಟಾಪಿಂಗ್ಸ್ ಹಾಕಿಕೊಳ್ಳಬಹುದು.
ಹೃದ್ರೋಗಕ್ಕೆ ಮೊಳಕೆ ಕಾಳೆಂಬ ಮದ್ದು
ಚೀಸೀ ಓಟ್ಸ್ ವಿತ್ ವೆಜಿಟೇಬಲ್ಸ್
ಬೇಕಾಗುವ ಸಾಮಗ್ರಿಗಳು: 1 ಕಪ್ ಆರ್ಗ್ಯಾನಿಕ್ ಓಟ್ಸ್, 2 ಕಪ್ ನೀರು, 3 ಚಮಚ ಯೀಸ್ಟ್, 2 ಚಮಚ ಆಲಿವ್ ಆಯಿಲ್, ಅರ್ಧ ಚ. ಉಪ್ಪು, ಕಾಲು ಚಮಚ ಪೆಪ್ಪರ್, ಅರ್ಧರ್ಧ ಹೆಚ್ಚಿದ ಸಣ್ಣ ಟೋಮ್ಯಾಟೋಗಳು 6, ಅರ್ಧ ಬೆಣ್ಣೆ ಹಣ್ಣು, ಪಾಲಕ್ ಸೊಪ್ಪು ಒಂದು ಮುಷ್ಠಿ
ಮಾಡುವ ವಿಧಾನ: ಸಣ್ಣ ಬಾಣಲೆಯಲ್ಲಿ ಓಟ್ಸ್ ಹಾಗೂ ನೀರು ಹಾಕಿ ಕುದಿಸಿ. ನಂತರ ಸಣ್ಣ ಉರಿಯಲ್ಲಿ 3ರಿಂದ 5 ನಿಮಿಷ ಬೇಯಿಸಿ. ಮಧ್ಯೆ ಮಧ್ಯೆ ಸೌಟಾಡಿಸುತ್ತಿರಿ. ಇದಕ್ಕೆ ಯೀಸ್ಟ್, ಆಲಿವ್ ಆಯಿಲ್, ಉಪ್ಪು ಹಾಗೂ ಪೆಪ್ಪರ್ ಸೇರಿಸಿ. ಉರಿ ಆರಿಸಿ ಎಲ್ಲವನ್ನೂ ಬಟ್ಟಲಿಗೆ ಬಗ್ಗಿಸಿ. ಮೇಲೆ ಟೋಮ್ಯಾಟೋ, ಬೆಣ್ಣೆ ಹಣ್ಣಿನ ಹೋಳುಗಳು ಹಾಗೂ ಪಾಲಕ್‌ನಿಂದ ಅಲಂಕರಿಸಿ. ಇದನ್ನು ಮಾಡಿದ ತಕ್ಷಣವೇ ಸೇವಿಸಬೇಕು.
ಸಿಂಪಲ್ ಗ್ರೀನ್ ಸ್ಮೂತಿ
ಬೇಕಾಗುವ ಸಾಮಗ್ರಿಗಳು: 2 ಕಪ್ ಪಾಲಕ್ ಸೊಪ್ಪು, 1 ಕಪ್ ಬೆರೀಸ್, 2 ಖರ್ಜೂರ ಬೀಜ ತೆಗೆದದ್ದು, ಅರ್ಧ ಬಾಳೆಹಣ್ಣು, 1 ಚಮಚ ವಾಲ್ನಟ್, 4 ಚಮಚ ಸಸ್ಯಜನ್ಯ ಪ್ರೋಟೀನ್ ಪೌಡರ್, 2 ಕಪ್ ಹಾಲು ಅಥವಾ ನೀರು
ಮಾಡುವ ವಿಧಾನ: ಎಲ್ಲವನ್ನೂ ಜ್ಯೂಸ್ ಜಾರ್‌ಗೆ ಹಾಕಿ ಚೆನ್ನಾಗಿ ಮಿಕ್ಸಿ ಮಾಡಿ. ದಪ್ಪ ಹದದಲ್ಲಿ ತೆಗೆದು ಸೇವಿಸಿ.
ಎಳೆಸೌತೆ ಬೆಣ್ಣೆಹಣ್ಣಿನ ಟೋಸ್ಟ್
ಬೇಕಾಗುವ ಸಾಮಗ್ರಿಗಳು: 4 ಸ್ಲೈಸ್ ವ್ಹೀಟ್ ಬ್ರೆಡ್, 8 ಚಮಚ ನುರಿದ ಬೆಣ್ಣೆಹಣ್ಣು, 2 ಚಮಚ ನಿಂಬೆರಸ, 1 ಎಳೆಸೌತೆಯ ಚಿಕ್ಕ ಸ್ಲೈಸ್‌ಗಳು, ಹೆಚ್ಚಿಟ್ಟುಕೊಂಡ ಪುದೀನಾ ಸೊಪ್ಪುಗಳು, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಪೆಪ್ಪರ್
ಮಾಡುವ ವಿಧಾನ: ನುರಿದ ಬೆಣ್ಣೆಹಣ್ಣಿಗೆ ನಿಂಬೆರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಎಲ್ಲ ಬ್ರೆಡ್ ತುಣುಕುಗಳ ಮೇಲೂ ಚೀಸ್‌ನಂತೆ ಸವರಿ. ಪುದೀನಾ ಎಲೆಗಳು ಹಾಗೂ ಸೌತೆಕಾಯಿ ಹೋಳುಗಳನ್ನು ನೀಟಾಗಿ ಬ್ರೆಡ್ ಮೇಲಿಡಿ. ಉಪ್ಪು ಪೆಪ್ಪರ್ ಉದುರಿಸಿ. ಮೇಲಿನಿಂದ ಮತ್ತೊಂದು ಬ್ರೆಡ್ ಮುಚ್ಚಿ ಸಾಕುಬೇಕಾಗುವಷ್ಟು ಸವಿಯಿರಿ.
ಊಟದೊಂದಿಗೆ ನೀರು ಕುಡಿದ್ರೆ ತಪ್ಪಾ?