
ಮೊದಲು ತಿಳಿಯಿರಿ ಸಮಸ್ಯೆಯ ಮೂಲ
ಕೆಲವು ಸಂದರ್ಭಗಳಲ್ಲಿ ಮಿ. ಪರ್ಫೆಕ್ಟ್ ಕೂಡ ತಪ್ಪು ಮಾಡುತ್ತಾನೆ. ಹಾಗೆ ನೋಡಿದರೆ ಮನುಷ್ಯ ಹುಟ್ಟಿನಿಂದಲೇ ಅಪೂರ್ಣ. ಎಲ್ಲರೂ ತಪ್ಪು ಮಾಡುತ್ತಾರೆ. ಹಾಗೆ ನಮ್ಮ ಜೊತೆಗಿರುವ ಸಂಗಾತಿಗಳೂ ಕೂಡ. ನಾವು ಅವರ ತಪ್ಪು, ಅಂದಿನ ಪರಿಸ್ಥಿತಿ, ಸಮಸ್ಯೆಯ ಮೂಲವನ್ನು ಮೊದಲು ಅರಿಯಬೇಕು. ಆಗ ನಮ್ಮ ಸಂಬಂಧಗಳಲ್ಲಿ ದೊಡ್ಡ ಬಿರುಕು ಉಂಟಾಗುವುದಿಲ್ಲ. ತಾಳ್ಮೆಯಿಂದ ಸಂಗಾತಿಯ ತಪ್ಪುಗಳ ಮೂಲ ಅರಿತು ಕ್ಷಮಿಸುವ ಗುಣ ಬೆಳೆಸಿಕೊಳ್ಳಬೇಕು.
ಯಾವುದನ್ನೂ ಮುಚ್ಚಿಡಬಾರದು
ಸತ್ಯವೇ ಕೊನೆಗೆ ಗೆಲ್ಲುವುದು ಎಂದು ಎಲ್ಲರೂ ಹೇಳುತ್ತಾರೆ. ಇದು ಸತ್ಯ ಕೂಡ ಹೌದು. ಆದರೆ ಎಲ್ಲರೂ ಎಲ್ಲಾ ಲದಲ್ಲಿಯೂ ಸತ್ಯ ಹೇಳಲು ಸಾಧ್ಯವಿಲ್ಲ ಅಲ್ಲವೇ? ಕೆಲವು ವೇಳೆ ಸಂಬಂಧ ಉಳಿದುಕೊಳ್ಳಲು, ಬೆಳೆಯಲು ಸುಳ್ಳನ್ನೂ ಹೇಳಬೇಕಾಗುತ್ತದೆ. ಅದಕ್ಕೇ ಅಲ್ಲವೇ ನಮ್ಮ ಹಿರಿಯರು ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂದಿರುವುದು. ನಾವು ಕೆಲವು ವೇಳೆಗಳಲ್ಲಿ ಅನಿವಾರ್ಯತೆಯ ಸುಳಿಗೆ ಸಿಲುಕಿ ಸುಳ್ಳನ್ನು ಹೇಳಬೇಕಾಗುತ್ತದೆ. ಸಂಬಂಧವೇ ಬೀಳುತ್ತಿದೆ ಎನ್ನುವ ಅನಿವಾರ್ಯ ವೇಳೆಯಲ್ಲಿ ಅದನ್ನು ಉಳಿಸಿಕೊಳ್ಳಲು ಸುಳ್ಳು ಸಹಾಯ ಮಾಡುತ್ತದೆ. ಆದರೆ ಇದನ್ನು ಕೊನೆಯವರೆಗೂ ಮುಚ್ಚಿಟ್ಟುಕೊಳ್ಳಬಾರದು. ಸರಿಯಾದ ಸಮಯದಲ್ಲಿ ನಾವು ಹೇಳಿದ ಸುಳ್ಳನ್ನು ಸಂಗಾತಿಗೆ ತಿಳಿಸಿಬಿಡಬೇಕು. ಇದರಿಂದ ಬಾಂಧವ್ಯ ಗಟ್ಟಿಯಾಗುತ್ತದೆ.
ಇರುವುದರಲ್ಲಿಯೇ ಸೌಂದರ್ಯ ಕಾಣಬೇಕು
ಹಲವಾರು ಸಂದರ್ಭದಲ್ಲಿ ನಮಗೆ ಇಷ್ಟವಿಲ್ಲದೇ ಇದ್ದರೂ ಮತ್ತೊಬ್ಬರೊಂದಿಗೆ ಅನಿವಾರ್ಯವಾಗಿ ಕಳೆಯಬೇಕಾದ ಪರಿಸ್ಥಿತಿ ಬಂದಿರುತ್ತದೆ. ಅದು ಜೀವನ ನಿರ್ವಹಣೆಗಾಗಿ ಇರಬಹುದು, ಮತ್ಯಾವುದೋ ಕಾರಣಕ್ಕೂ ಆಗಿರಬಹುದು. ಆದರೆ ಇಲ್ಲಿ ಕೇವಲ ಒದ್ದಾಟವೇ ಇರುತ್ತದೆ ಹೊರತು ಮತ್ತೇನೂ ಇರುವುದಿಲ್ಲ. ಬಾಳಬೇಕು ಎಂದು ಸಂಕಟದಿಂದ ಬಾಳಬೇಕು ಅಷ್ಟೇ. ಇಂತಹ ಸ್ಥಿತಿಯಲ್ಲಿ ಸಂಬಂಧಗಳು ಅರಳಲು ಸಾಧ್ಯವೇ ಇಲ್ಲ. ಹಾಗಾಗಿ ಇಂತಹ ಸಂದಿಗ್ದದಿಂದ ಹೊರ ಬರಬೇಕು. ಇಲ್ಲವೇ ಇರುವುದರಲ್ಲಿಯೇ ಸೌಂದರ್ಯ ಕಾಣಬೇಕು.
ಡಾಮಿನೇಟಿಂಗ್ ವ್ಯಕ್ತಿತ್ವ ಬೇಡ
ಸಂಬಂಧಗಳು ಎರಡು ಚಕ್ರಗಳ ಬಂಡಿ ಇದ್ದ ಹಾಗೆ. ಇದರಲ್ಲಿ ಯಾರೊಬ್ಬರೂ ಮೇಲಲ್ಲ, ಕೀಳಲ್ಲ. ಹಾಗಾಗಿ ಎಲ್ಲಿಯೂ ಕೂಡ ಸಂಗಾತಿಯ ಮೇಲೆ ಬಲವಂತವಾಗಿ ತನ್ನ ವಿಚಾರಗಳನ್ನು ಹೇರುವ ಪ್ರಯತ್ನ ಮಾಡಬಾರದು. ಪ್ರಬಲರು ಎಲ್ಲವನ್ನು ಹೇಳುವುದು ಇನ್ನೊಬ್ಬರು ಸೂತ್ರದ ಬೊಂಬೆಯಂತೆ ಎಲ್ಲವನ್ನೂ ಕೇಳುತ್ತಾ ಹೋದರೆ ಅದು ಸಂಬಂಧವನ್ನು ದೀರ್ಘಕಾಲದ ವರೆಗೆ ಉಳಿಸುವುದಿಲ್ಲ. ಹಾಗಾಗಿ ಪ್ರಬಲರಾಗದೇ ಸಮಾನರಾಗಬೇಕು.
ಮೋಸ ಬೇಡ
ಸಂಬಂಧಗಳು ಹೆಚ್ಚಿನ ವೇಳೆಯಲ್ಲಿ ದೂರವಾಗುವುದೇ ಈ ಮೋಸದಿಂದ. ಎಲ್ಲ ಸಂಬಂಧಗಳು ಮೊದಲಿಗೆ ಹುಟ್ಟುವುದು ನಂಬಿಕೆಯ ನೆಲೆಯಲ್ಲಿ. ಇನ್ನು ಕೊನೆಯಾಗುವುದು ಮೋಸದ ಬಲೆಯಲ್ಲಿ. ನಂಬಿಕೆಗೆ ಸಂಬಂಧ ಕಟ್ಟುವ ಗುಣವಿದ್ದರೆ ಮೋಸಕ್ಕೆ ಅದನ್ನು ಮುರಿಯುವ ಗುಣವಿದೆ.
ಎಲ್ಲದ್ದರಲ್ಲೂ ಭಾಗವಹಿಸಿ
ಸಂಗಾತಿಯ ಪ್ರತಿಯೊಂದು ಕ್ಷಣಗಳಲ್ಲಿಯೂ ಪಾಲುದಾರರಾಗಬೇಕು.ನೋವು-ನಲಿವುಗಳಲ್ಲಿ ಜೊತೆಯಾದವರು ಮಾತ್ರ ಒಳ್ಳೆಯ ಸಂಗಾತಿಗಳಾಗಲು ಸಾಧ್ಯ. ಪ್ರತಿ ಹೆಜ್ಜೆಯಲ್ಲೂ ಜೊತೆಗೆ ಸಾಗಿದಾಗ ಮಾತ್ರ ಬದುಕು ಸುಂದರ. ಸಂಬಂಧ ಸೊಗಸು
ಅತಿಯಾದ ಅಂತರ ಬೇಡ
ಸಂಗಾತಿಗಳ ವಿಚಾರದಲ್ಲಿ ಎಲ್ಲ ಸಮಯದಲ್ಲೂ ಅಂತರ ಕಾಯ್ದುಕೊಳ್ಳುವುದು ಒಳ್ಳೆಯದಲ್ಲ. ಕೆಲಸಗಳ ನಡುವಲ್ಲಿಯೂ ನಮ್ಮವರಿಗಾಗಿ ಮೀಸಲಿಡಬೇಕಾದ ಸಮಯವನ್ನು ನೀಡಲೇಬೇಕು. ಚಿಕ್ಕ ಚಿಕ್ಕ ಸಂಗತಿಗಳಲ್ಲೂ ಜೊತೆಯಾಗಿ ಪಾಲುದಾರರಾಗಬೇಕು. ಆಗ ಮಾತ್ರ ದೀರ್ಘಕಾಲದ ವರೆಗೂ ಉಳಿಯ ಬಹುದಾದ ನೆನಪುಗಳು ಅರಳಲು ಸಾಧ್ಯ. ನೋವು-ನಲಿವಿನಲ್ಲಿ ಜೊತೆಗೆ ನಿಂತು ಸಮಾಧಾನ ಮಾಡುವ ಕೈಯಾಗಿರಬೇಕು. ಕಣ್ಣೀರು ಬರುವಾಗ ಅದನ್ನು ಒರೆಸಲು ನಮ್ಮ ಕೈಗಳು ಮುಂದಾಗಿರಬೇಕು
ವಾಸ್ತವದಲ್ಲಿ ಪ್ರೀತಿಸಿ
ಇದು ಸೋಷಲ್ ಮೀಡಿಯಾ ಜಮಾನ. ಇಲ್ಲಿ ಎಲ್ಲವೂ ಫೇಸ್ ಬುಕ್, ವಾಟ್ಸಪ್, ಮೆಸೆಂಜರ್‌ಗಳಲ್ಲಿ ನಡೆದುಹೋಗುತ್ತದೆ. ಆದರೆ ಇದು ಸಂಬಂಧಗಳಿಗೂ ಅನ್ವಯವಾಗಬಾರದು. ಕೇವಲ ವಾಟ್ಸಪ್‌ನಲ್ಲಿ ಗಂಟೆಗಟ್ಟಲೆ ಮೆಸೇಜ್ ಮಾಡಿ, ಫೋನ್‌ನಲ್ಲಿ ಮಾತನಾಡಿದರೆ ಸಂಬಂಧ ಬೆಳೆಯುವುದಿಲ್ಲ. ವಾಸ್ತವದಲ್ಲಿ ಪ್ರೀತಿ ಮಾಡಬೇಕು. ಮಧುರ ಕ್ಷಣಗಳನ್ನು ದಾಖಲು ಮಾಡಬೇಕು. ಹಾಗಾದಾಗ ಮಾತ್ರ ಸಂಬಂಧಕ್ಕೆ ಗಟ್ಟಿಯಾದ ಆಯಾಮ ಸಿಗುವುದು. ತಂತ್ರಜ್ಞಾನದ ದೆಸೆಯಿಂದ ಪರಿಚಯವಾದರೂ ಕೂಡ ವಾಸ್ತವದಲ್ಲಿ ಪರಿಚಯದ ಸಸಿಯನ್ನು ಮರವಾಗಿ ಬೆಳೆಸಬೇಕು.
- ಸುಹಾಸಿನಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.