ಕೊಬ್ಬರಿ ಎಣ್ಣೆ ದೇಹಕ್ಕೆ ‘ವಿಷ’ವೇ ?

By Web Desk  |  First Published Aug 24, 2018, 9:04 AM IST

ಭಾರತೀಯರು ಪ್ರತೀ ಕಾರ್ಯಕ್ಕೂ ಕೂಡ ಬಳಕೆ ಮಾಡುವ ಕೊಬ್ಬರಿ ಎಣ್ಣೆ ಇದೀಗ ವಿವಾದವೊಂದು ಎದ್ದಿದೆ. ಇದನ್ನು  ಶುದ್ಧ ವಿಷ ಎಂದು ಕರೆದು ಹಾರ್ವರ್ಡ್‌ ವಿವಿ ಪ್ರಾಧ್ಯಾಪಕಿಯೊಬ್ಬರು ವಿವಾದ ಸೃಷ್ಟಿಸಿದ್ದಾರೆ.


ನವದೆಹಲಿ: ಭಾರತದಲ್ಲಿ ಕೊಬ್ಬರಿ ಎಣ್ಣೆ ಎಂದರೆ ಬಲು ಶ್ರೇಷ್ಠ. ಯಾವುದೇ ಶುಭ ಕಾರ್ಯವಿರಲಿ.. ಇಡೀ ಮೈಗೆ, ತಲೆಗೆ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಅಭ್ಯಂಗ ಸ್ನಾನ ಮಾಡುತ್ತಾರೆ. ಇನ್ನು ನಿತ್ಯ ಕೊಬ್ಬರಿ ಎಣ್ಣೆಯನ್ನು ಕೂದಲಿಗೆ ಹಚ್ಚಿಕೊಳ್ಳುವುದರಿಂದ ಕೂದಲುಗಳು ಫಳಫಳ ಹೊಳೆಯುತ್ತವೆಯಲ್ಲದೆ, ಕೂದಲ ಆರೈಕೆಗೂ ಇದು ಉತ್ತಮ. ಕೇರಳ, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಅಡುಗೆಗೂ ಕೊಬ್ಬರಿ ಎಣ್ಣೆಯನ್ನು ಬಳಸಲಾಗುತ್ತದೆ. ಆದರೆ ಭಾರತೀಯರ ಇಂತಹ ಶ್ರೇಷ್ಠ ತೈಲವನ್ನು ‘ಶುದ್ಧ ವಿಷ’ ಎಂದು ಕರೆದು ಹಾರ್ವರ್ಡ್‌ ವಿವಿ ಪ್ರಾಧ್ಯಾಪಕಿಯೊಬ್ಬರು ವಿವಾದ ಸೃಷ್ಟಿಸಿದ್ದಾರೆ.

ಕರಿನ್‌ ಮಿಚೆಲ್ಸ್‌ ಎಂಬ ಪ್ರಾಧ್ಯಾಪಕಿಯೇ ಕೊಬ್ಬರಿ ಎಣ್ಣೆಗೆ ಶುದ್ಧ ವಿಷದ ಪಟ್ಟಕಟ್ಟಿರುವವರು. ಯೂಟ್ಯೂಬ್‌ನಲ್ಲಿ ಮಿಚೆಲ್‌ ಅವರು ಕೊಬ್ಬರಿ ಎಣ್ಣೆಯ ವಿರುದ್ಧ ಮಾತನಾಡಿರುವ ಅಂಶಗಳನ್ನು ‘ಯುಎಸ್‌ಎ ಟುಡೇ’ ಪ್ರಕಟಿಸಿದ್ದು, ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಮಾತ್ರವಲ್ಲ, ಹಾರ್ವರ್ಡ್‌ ಪ್ರಾಧ್ಯಾಪಕರಲ್ಲೇ ಹಲವರು ತಮ್ಮ ಸಹೋದ್ಯೋಗಿಯ ವಿತಂಡವಾದವನ್ನು ವಿರೋಧಿಸಿದ್ದಾರೆ.

Latest Videos

2011ರಲ್ಲಿ ಕೊಬ್ಬರಿ ಎಣ್ಣೆಗೆ ‘ಸೂಪರ್‌ ಫುಡ್‌’ ಸ್ಥಾನಮಾನ ದೊರಕಿತ್ತು. ಇದು ತೂಕ ಇಳಿಸಿಕೊಳ್ಳಲು ಹಾಗೂ ರೋಗ ನಿರೋಧಕತೆಗೆ ಸಹಕಾರಿ ಎಂದೂ ಬಣ್ಣಿಸಲ್ಪಟ್ಟಿತ್ತು. ಆದರೆ ಇದೇ ಕೊಬ್ಬರಿ ಎಣ್ಣೆ ಈಗ ಹಾರ್ವರ್ಡ್‌ ಪ್ರಾಧ್ಯಾಪಕಿ ಕರಿನ್‌ ಮಿಚೆಲ್ಸ್‌ ಕೆಂಗಣ್ಣಿಗೆ ಗುರಿಯಾಗಿದೆ.‘ಕೊಬ್ಬರಿ ಎಣ್ಣೆಯು ಖಾದ್ಯ ತೈಲದಲ್ಲೇ ಅತಿ ಕಳಪೆ. ಕೊಬ್ಬರಿ ಎಣ್ಣೆಯು ‘ಶುದ್ಧ ವಿಷ’ ಎಂದು ಮಿಚೆಲ್ಸ್‌ ಹೇಳುತ್ತಾರೆ. ‘ಶುದ್ಧ ವಿಷ’ ಎಂಬುದನ್ನು ಅವರು 3 ಬಾರಿ ಹೇಳುತ್ತಾರೆ.

ಇದಕ್ಕೆ ಅವರು ಕಾರಣವನ್ನೂ ನೀಡುತ್ತಾರೆ. ‘ಕೊಬ್ಬರಿ ಎಣ್ಣೆಯಿಂದ ಮೈಯಲ್ಲಿ ಕೊಬ್ಬಿನ ಅಂಶ ಹೆಚ್ಚಾಗುತ್ತದೆ. ಹೃದಯ ಕಾಯಿಲೆ ಬರುತ್ತದೆ. ಇದರಲ್ಲಿ ಸಂಗ್ರಹಿತ ಕೊಬ್ಬಿನ ಅಂಶ ಶೇ.80ಕ್ಕಿಂತ ಹೆಚ್ಚಿದೆ’ ಎಂದು ಅಮೆರಿಕ ಹಾರ್ಟ್‌ ಅಸೋಸಿಯೇಶನ್‌ ಮಾಡಿದ ಅಧ್ಯಯನವನ್ನು ಉಲ್ಲೇಖಿಸಿ ಮಿಚೆಲ್ಸ್‌ ಹೇಳಿದ್ದಾರೆ. ಸಂಗ್ರಹಿತ ಕೊಬ್ಬಿನ ಪ್ರಮಾಣ ಬೆಣ್ಣೆಯಲ್ಲಿ ಶೇ.63, ಗೋಮಾಂಸದಲ್ಲಿ ಶೇ.50, ಹಂದಿ ಮಾಂಸದಲ್ಲಿ ಶೇ.39 ಇರುತ್ತದೆ. ಅದಕ್ಕಿಂತ ಹೆಚ್ಚು ಸಂಗ್ರಹಿತ ಕೊಬ್ಬು ಕೊಬ್ಬರಿ ಎಣ್ಣೆಯಲ್ಲಿದೆ ಎಂದು ಅವರು ಅಧ್ಯಯನ ವರದಿಯನ್ನು ಉಲ್ಲೇಖಿಸಿದ್ದಾರೆ.

click me!