ಮ್ಯಾರಥಾನ್​ ವೇಳೆ ಮುಟ್ಟಿನ ರಕ್ತಸ್ರಾವವಾದ್ರೂ ಡೋಂಟ್​ ಕೇರ್​: ಗುರಿ ತಲುಪಿದ ಛಲಗಾತಿ- ವಿಡಿಯೋ ವೈರಲ್​

Published : Jul 24, 2026, 01:09 PM IST
Li Meizhen

ಸಾರಾಂಶ

ಚೀನಾದ ಮ್ಯಾರಥಾನ್ ಓಟಗಾರ್ತಿ ಲಿ ಮೀಜೆನ್, ಮ್ಯಾರಥಾನ್​ ಓಟದ ಮಧ್ಯದಲ್ಲಿ ಋತುಸ್ರಾವವಾದರೂ ಓಟ ನಿಲ್ಲಿಸದೆ ಗುರಿ ಸಾಧಿಸಿದರು. ಕ್ರೀಡೆಯಲ್ಲಿ ಮಹಿಳೆಯರು ಎದುರಿಸುವ ಸವಾಲು ಮತ್ತು ಮುಟ್ಟಿನ ಬಗೆಗಿನ ಕಳಂಕದ ಚರ್ಚೆಯನ್ನು ಹುಟ್ಟುಹಾಕಿದ ಅವರ ದೃಢಸಂಕಲ್ಪವು ಅನೇಕರಿಗೆ ಸ್ಫೂರ್ತಿದಾಯಕವಾಗಿದೆ.

ಸಾಧಿಸುವ ಛಲವೊಂದಿದ್ದರೆ, ಏನು ಬೇಕಾದರೂ ಸಾಧಿಸಬಹುದು. ಸಾಧನೆಗೆ ಯಾವುದೂ ಅಡ್ಡ ಬರುವುದಿಲ್ಲ. ಅಡ್ಡ ಬಂದರೂ ಅದನ್ನು ಬದಿಗೊತ್ತಿ ಸಾಧನೆ ಮಾಡಬಹುದು ಎಂದು ತೋರಿಸಿಕೊಟ್ಟಿರುವ ಹಲವಾರು ಮಂದಿ ಇದ್ದಾರೆ. ಕೈಕಾಲೆಲ್ಲಾ ಸರಿಯಿದ್ದರೂ, ಉದ್ಯೋಗ ಸಿಕ್ಕಿಲ್ಲ, ಅದು ಇಲ್ಲ, ಇದು ಇಲ್ಲ ಎಂದು ಹೇಡಿಗಳಂತೆ ಬದುಕುವವರ ನಡುವೆಯೇ, ಅಂಗವೈಕಲ್ಯವಿದ್ದರೂ ಅದೆಷ್ಟೋ ದೊಡ್ಡ ದೊಡ್ಡ ಸಾಧನೆ ಮಾಡಿರುವ ಹಲವಾರು ಮಂದಿ ನಮ್ಮ ಕಣ್ಣಮುಂದೆಯೇ ಇದ್ದಾರೆ. ಗುರಿಯೊಂದು ನಿಖರವಾಗಿದ್ದರೆ, ಯಾವ ವೈಕಲ್ಯವೂ ಅದಕ್ಕೆ ಅಡ್ಡ ಬರುವುದಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿ ನಿಂತಿದೆ ಇನ್ನೊಂದು ವೈರಲ್​ ವಿಡಿಯೋ.

ಋತುಸ್ರಾವದ ವೇಳೆಯೂ ಯಾವುದಕ್ಕೂ ಜಗ್ಗದೇ ಕುಗ್ಗದೇ ಸಾಧನೆ ಮಾಡಿರುವ ಹಲವು ಮಹಿಳೆಯರು ಇದ್ದಾರೆ. ಪಿರಿಯಡ್ಸ್​ ಎನ್ನೋದು ಅದೆಷ್ಟೋ ಬಾರಿ ಗೊತ್ತಿಲ್ಲದೇ ಆಗಿಬಿಡುವುದು ಉಂಟು. ದೇಹದಲ್ಲಿ ಹಾರ್ಮೋನ್​ ಬದಲಾವಣೆಯಾದಾಗ, ಅವಧಿಗೂ ಮುನ್ನವೇ ಆಗಿಬಿಡುತ್ತದೆ. ಅಂಥ ಸಂದರ್ಭದಲ್ಲಿ ಯಾವುದೇ ತಯಾರಿ ಇಲ್ಲದೇ ಇರುವ ಮಹಿಳೆಯರು ಪಡುವ ಮುಜುಗರ ಅಷ್ಟಿಷ್ಟಲ್ಲ. ಅಂಥದ್ದೇ ಒಂದು ಮುಜುಗರ ಅನುಭವಿಸಿದವರು ಚೀನಾದ ಮ್ಯಾರಥಾನ್​ ಓಟಗಾರ್ತಿ ಲಿ ಮೀಜೆನ್.

ಕೊನೆಯ ಎಂಟು ನಿಮಿಷಗಳ ಹೋರಾಟ

ಹೆಂಗ್‌ಶುಯಿ ಲೇಕ್ ಮ್ಯಾರಥಾನ್‌ನಲ್ಲಿ ಈಕೆ ಭಾಗವಹಿಸಿದ್ದಾಗ ಅವಧಿಗೂ ಮುನ್ನವೇ ಋತುಸ್ರಾವ ಆಗಿಬಿಟ್ಟಿದೆ. ಇನ್ನೇನು ಕೊನೆಯ ಸುಮಾರು 8 ಕಿ.ಮೀ. ದೂರ ಉಳಿದಿರುವಾಗ, ರಕ್ತಸ್ರಾವ ಹೆಚ್ಚಾಗಿ ಕಾಲಮೇಲೆಲ್ಲಾ ರಕ್ತಸೋರಿದೆ. ರಕ್ತಸ್ರಾವ ಆಗುತ್ತಿದೆ ಎಂದು ತಿಳಿದರೂ ಲಿ ಮೀಜೆನ್ ಅಲ್ಲಿಗೇ ನಿಲ್ಲಲಿಲ್ಲ. ಏಕೆಂದರೆ ಗುರಿಸಾಧನೆ ಆಕೆಗೆ ಮುಖ್ಯವಾಗಿತ್ತು. 2 ಗಂಟೆ 35 ನಿಮಿಷಗಳ ಸತತ ಓಟದ ಬಳಿಕ ಕೊನೆ ಎಂಟು ನಿಮಿಷ ಆಕೆಗೆ ತುಂಬಾ ನಿರ್ಣಾಯಕವಾಗಿತ್ತು. ಗುರಿ ಆಕೆಯ ಮುಂದಿತ್ತು. ಅಲ್ಲಿಯ ಜನರು ರಕ್ತಸ್ರಾವ ಆಗುತ್ತಿರುವ ಬಗ್ಗೆ ಕೂಗಿ ಕೂಗಿ ಹೇಳುತ್ತಿದ್ದರೂ, ರಕ್ತ ಸೋರುತ್ತಿದ್ದರೂ ಲಿ ಮೀಜೆನ್ ಓಟವನ್ನು ನಿಲ್ಲಿಸದೇ ಗುರಿಯನ್ನು ಸಾಧಿಸಿದಳು.

ಕೊನೆಗೆ ಆಕೆಗೆ ಈ ಬಗ್ಗೆ ಪ್ರಶ್ನಿಸಿದಾಗ, ನಾನು ಇದನ್ನು ಸಾಧಿಸಲೇಬೇಕಿತ್ತು. ಮುಂದಿನ ಪಂದ್ಯದಲ್ಲಿ ವಿಜೇತ ಆಗಲು, ಅದಕ್ಕೆ ಅರ್ಹತೆ ಪಡೆಯಲು ಇಷ್ಟು ವರ್ಷಗಳ ಪರಿಶ್ರಮವನ್ನುಬಿಟ್ಟುಕೊಡಲು ನಾನು ರೆಡಿ ಇರಲಿಲ್ಲ. ಆರಂಭದಲ್ಲಿ ಋತುಸ್ರಾವವಾಗಿ ಕಾಲ ಮೇಲೆ ರಕ್ತ ಚೆಲ್ಲುತ್ತಿದ್ದಾಗ ಭಯ ಆಯ್ತು, ಜೊತೆಗೆ ಮುಜುಗರವೂ ಆಯ್ತು. ಆದರೆ ಆ ಕ್ಷಣದಲ್ಲಿಯೇ ಅದ್ಯಾವುದೂ ನನಗೆ ದೊಡ್ಡದು ಅನ್ನಿಸಲೇ ಇಲ್ಲ. ಗುರಿ ನನ್ನ ಕಣ್ಣಮುಂದೆ ಸ್ಪಷ್ಟವಾಗಿತ್ತು. ನಿಗದಿತ ಅವಧಿಯಲ್ಲಿ ಗುರಿ ಸಾಧಿಸಿದೆ ಎಂದಿದ್ದಾರೆ ಲಿ ಮೀಜೆನ್ .

ಮಾದರಿಯಾದ ಲಿ ಮೀಜೆನ್

ಕ್ರೀಡೆಗಳಲ್ಲಿ ಋತುಚಕ್ರದ ಕಳಂಕ ಮತ್ತು ಸ್ಪರ್ಧಿಸುವಾಗ ಅನೇಕ ಮಹಿಳಾ ಕ್ರೀಡಾಪಟುಗಳು ಎದುರಿಸುವ ಕಾಣದ ಸವಾಲುಗಳ ಬಗ್ಗೆ ಲಿ ಮೀಜೆನ್ ದೃಢಸಂಕಲ್ಪವು ಚರ್ಚೆಯನ್ನು ಹುಟ್ಟುಹಾಕಿದೆ. ಮುಟ್ಟು ಜೀವನದ ನೈಸರ್ಗಿಕ ಭಾಗವಾಗಿದೆ, ಆದರೂ ಅದರ ಬಗ್ಗೆ ಮಾತನಾಡಲು ಮುಜುಗರ ಪಡುವ ಮಂದಿ ಹಲವರು ಇದ್ದಾರೆ. ಇದನ್ನು ಅಸಹ್ಯ ಎನ್ನುವವರೂಇದ್ದಾರೆ, ಜೊತೆಗೆ ಹಲವಾರು ರೀತಿಯ ಕಟ್ಟುಪಾಡುಗಳನ್ನು ಮಹಿಳೆ ಇಂದಿಗೂ ಎದುರಿಸಬೇಕಾದ ಅನಿವಾರ್ಯತೆ ಇದೆ. ಅದರ ನಡುವೆಯೂ, ಲಿ ಮೀಜೆನ್ ದೃಢಸಂಕಲ್ಪ ಅದೆಷ್ಟೋ ಕ್ರೀಡಾಪಟುಗಳಿಗೆ ಮಾತ್ರವಲ್ಲದೇ ಪ್ರತಿ ಮಹಿಳೆಗೂ ಮಾದರಿಯಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇನ್ನು ಗಂಟೆಗಟ್ಟಲೆ ಉಜ್ಜೋದು ಬೇಡ, ಟಾಯ್ಲೆಟ್ ಕಲೆಗಳನ್ನು ಕ್ಷಣದಲ್ಲೇ ತೆಗೆಯಲು ಇಲ್ಲಿದೆ ಸೂಪರ್ ಟಿಪ್ಸ್!
ದಿನಬಳಕೆಗೆ ಸೂಪರ್‌, ಬಜೆಟ್‌ ಫ್ರೆಂಡ್ಲಿ 1 ಗ್ರಾಂ ಗೋಲ್ಡ್‌ ಉಂಗುರಗಳು ಇಲ್ಲಿವೆ