
ಮನೆಯಲ್ಲಿ ಏನೇ ಮಾಡಿದರೂ ಹೋಟೆಲ್ ಸ್ಟೈಲ್ನ ರುಚಿ ಬರುವುದೇ ಇಲ್ಲ ಎನ್ನುವುದು ಹಲವು ಮಹಿಳೆಯರ ಬೇಸರ. ಹೋಟೆಲ್ಗಳಲ್ಲಿ ಅದರಲ್ಲಿಯೂ ಸ್ಟಾರ್ ಹೋಟೆಲ್ಗಳಲ್ಲಿ ದುಬಾರಿಯ ಏನೇನೋ ಮಿಕ್ಸ್ ಮಾಡುತ್ತಾರೆ, ಅದಕ್ಕಾಗಿಯೇ ಈ ಟೇಸ್ಟ್ ಬರುತ್ತದೆ ಎಂದುಕೊಳ್ಳುವುದು ಉಂಟು. ಆದರೆ ಎಷ್ಟೋ ಬಾರಿ ಚಿಕ್ಕ ಪುಟ್ಟ ಹೋಟೆಲ್ಗಳಲ್ಲಿಯೂ ಸ್ಟಾರ್ ಹೋಟೆಲ್ ಸ್ವಾದ ಮೀರಿಸುವ ಅಡುಗೆ ಸಿಗುವುದು ಇದೆ. ಆಗಲೂ ಏನೋ ಟೇಸ್ಟಿಂಗ್ ಪೌಡರ್ ಮಿಕ್ಸ್ ಮಾಡ್ತಾರೆ ಎಂದುಕೊಳ್ಳುವವರೇ ಹೆಚ್ಚು. ಆದರೆ ಎಲ್ಲ ಸಂದರ್ಭಗಳಲ್ಲಿಯೂ ಇದು ನಿಜವಲ್ಲ. ಕೆಲವೊಂದು ಸುಲಭದ ಕಿಚನ್ ಟಿಪ್ಸ್ ಅರಿತುಕೊಂಡರೆ, ಮನೆಯಲ್ಲಿಯೇ ಇರುವ ತರಕಾರಿ ಅಥವಾ ಸಾಮಗ್ರಿಗಳಿಂದ ರೆಸ್ಟೋರೆಂಟ್ ಸ್ಟೈಲ್ನಲ್ಲಿಯೇ ರುಚಿಕರ ಅಡುಗೆ ಮಾಡಬಹುದು ಎನ್ನುವುದನ್ನು ಹೇಳಿಕೊಟ್ಟಿದ್ದಾರೆ ಷೆಫ್ ಮೋಹನ್.
ಪನೀರ್ ಅಡುಗೆ ಮನೆಯಲ್ಲಿ ಮಾಡಿದಾಗ, ಪನೀರ್ ಮಾಡಿಟ್ಟ ಕೆಲವೇ ಗಂಟೆಗಳಲ್ಲಿ ಗಟ್ಟಿಯಾಗುವುದು ಇದೆ. ಆದರೆ ಅದು ಬೆಣ್ಣೆಯಂತೆ ಗಂಟೆಗಟ್ಟಲೆ ಸಾಫ್ಟ್ ಆಗಿರಲು ಬೇಯಿಸಿದ ಬಳಿಕ ಎರಡು ನಿಮಿಷ ಪನೀರ್ ಅನ್ನು ಉಗುರುಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಮಜ್ಜಿಗೆ ಹಾಕಿ ಇಡುವಂತೆ ಸಲಹೆ ನೀಡಲಾಗಿದೆ. ಇದರಿಂದ ಒಂದು ಗಂಟೆಯಾದರೂ ಬೆಣ್ಣೆಯಂತೆ ಮೃದುವಾಗಿರುತ್ತದೆ.
ರೆಸ್ಟೋರೆಂಟ್ ಸ್ಟೈಲ್ಗಳಲ್ಲಿ ಕೆಲವೊಂದು ದಪ್ಪ ಗ್ರೇವಿ ನೋಡಬಹುದು. ಅದು ದಪ್ಪ ಮಾತ್ರವಲ್ಲದೇ ಸಕತ್ ಟೇಸ್ಟ್ ಕೂಡ ಆಗಿರುತ್ತದೆ. ಸಾಮಾನ್ಯವಾಗಿ ಹೀಗೆ ಮಾಡುವುದಿದ್ದರೆ ಗೋಡಂಬಿಯನ್ನು ರುಬ್ಬಿ ಅದರ ಪೇಸ್ಟ್ ಹಾಕಲಾಗುತ್ತದೆ. ಆದರೆ ಪ್ರತಿಯೊಬ್ಬರೂ, ಅದರಲ್ಲಿ ಗೋಡಂಬಿ ಹಾಕುತ್ತಾರೆ, ಇದರಿಂದ ಟೇಸ್ಟ್ ಬರುತ್ತದೆ ಎಂದೇ ಹಲವರು ಅಂದುಕೊಂಡಿದ್ದಾರೆ. ಆದರೆ ಅದು ತಪ್ಪು. ಇಷ್ಟು ದುಬಾರಿ ಗೋಡಂಬಿ ಹಾಕಿದರೆ ಅಷ್ಟೇ ಕಥೆ. ಅದಕ್ಕಾಗಿ ದೊಡ್ಡ ದೊಡ್ಡ ರೆಸ್ಟೋರೆಂಟ್ಗಳಲ್ಲಿ, ಈರುಳ್ಳಿಯನ್ನು ಮಸಾಲೆ ಜೊತೆ ಸೇರಿಸಿ ಮಿಕ್ಸಿಯಲ್ಲಿ ಹಾಕಿ ರುಬ್ಬಿ ಆ ಪೇಸ್ಟ್ ಅನ್ನು ಗ್ರೇವಿಗೆ ಹಾಕುತ್ತಾರೆ. ಆಗ ಬೆಣ್ಣೆಯಂಥ ಥಿಕ್ನೆಸ್ ಗ್ರೇವಿಗೆ ಬರುವುದು ಮಾತ್ರವಲ್ಲದೇ ಟೇಸ್ಟ್ ಕೂಡ ಬರುತ್ತದೆ ಎಂದಿದ್ದಾರೆ ಷೆಫ್
ಸಾಮಾನ್ಯವಾಗಿ ಮನೆಯಲ್ಲಿ ಪಕೋಡ ಮಾಡುವಾಗ ಹೆಚ್ಚು ಎಣ್ಣೆ ಹೀರಿಕೊಳ್ಳುತ್ತದೆ. ಅದಕ್ಕೂ ಸುಲಭದ ಟಿಪ್ಸ್ ಇದೆ. ಹೋಟೆಲ್ಗಳಲ್ಲಿ ನೀವು ಪಕೋಡ ತಿನ್ನುವಾಗ ಹೊರಗಡೆಯಿಂದ ಕ್ರಿಸ್ಪಿ ಇದ್ದರೂ ಎಣ್ಣೆ ಹೀರಿಕೊಳ್ಳದೇ ಇರುವುದನ್ನು ನೋಡಬಹುದು. ಹೀಗೆ ಬೇಕಾದರೆ ಕಡ್ಲೆಹಿಟ್ಟು ಕಲಸುವಾಗ ಬಿಸಿಯಾಗಿರುವ ಎಣ್ಣೆಯನ್ನು ಹಾಕಬೇಕು. ಇದರಿಂದ ಪಕೋಡಾ ಎಣ್ಣೆ ಹೀರಿಕೊಳ್ಳುವುದೇ ಇಲ್ಲ.
ಹಸಿ ಮೆಣಸು ರುಬ್ಬಿದ ಬಳಿಕ ಕಪ್ಪಾಗುವುದು ಏಕೆ, ಆದರೆ ಹೋಟೆಲ್ನಲ್ಲಿ ಎಷ್ಟು ಹೊತ್ತು ಇಟ್ಟರೂ ಹಸಿರಾಗಿಯೇ ಇರುತ್ತದೆ. ಅದಕ್ಕೂ ಸಲಹೆ ಕೊಟ್ಟಿರುವ ಷೆಫ್, ಹಸಿಮೆಣಸನ್ನು ರುಬ್ಬುವಾಗ ಕೆಲವು ತುಂಡುಗಳ ಬರ್ಫ್ ಜೊತೆ 2-3 ಹನಿ ನಿಂಬೆ ರಸ ಹಾಕುವಂತೆ ತಿಳಿಸಿದ್ದಾರೆ.
ಟೊಮ್ಯಾಟೋ ಗ್ರೇವಿ ತುಂಬಾ ಹುಳಿಯಾಗಿದ್ದರೆ, ಅದಕ್ಕೆ ಉಪ್ಪು ಹಾಕಬೇಡಿ, ಬದಲಿಗೆ ಒಂದು ಚಿಟಿಕೆ ಅಡುಗೆ ಸೋಡಾ ಹಾಕಿ. ಅಡುಗೆ ಸೋಡಾ ಐದೇ ಸೆಕೆಂಡ್ನಲ್ಲಿ ಎಲ್ಲಾ ಹುಳಿ ಹೀರಿಕೊಳ್ಳುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.