ಅವಳು ಐಶ್ವರ್ಯಾ ರೈ ಆಗಿರಬಹುದು, ಆದರೆ ಮಗಳಿಗೆ ಅಮ್ಮನೇ. ಇಂಥ ಐದು ಮಂದಿ ಬಾಲಿವುಡ್ ಅಮ್ಮಂದಿರ ಪೇರೆಂಟಿಂಗ್ ಡೀಟೈಲ್ಸ್ ಇಲ್ಲಿದೆ.
ಮಗಳ ನಗೆಯಲ್ಲಿ ನನ್ನ ಖುಷಿ ಇದೆ: ಐಶ್ವರ್ಯಾ ರೈ
undefined
ಹುಡುಗಿಯ ಸೌಂದರ್ಯದ ಮಾತು ಬಂದಾಗಲೆಲ್ಲ ಇಂದಿಗೂ ಜನಸಾಮಾನ್ಯರ ಬಾಯಲ್ಲಿ ಬರುವ ಮಾತು - ‘ಅವಳೇನು ಐಶ್ವರ‌್ಯಾ ರೈಯಾ..’ ನಲುವತ್ತೈದರ ಹರೆಯದ ಈ ಚೆಲುವೆ ಜನರ ಕಣ್ಣಲ್ಲಿ ಇಂದಿಗೂ ಬ್ಯೂಟಿ ಐಕಾನ್. ಅದೇ ಮಗಳ ದೃಷ್ಟಿಯಲ್ಲಿ..ಮುದ್ದಿನ ಅಮ್ಮ. ಶೂಟಿಂಗ್, ಇವೆಂಟ್ ಅಂತ ದೇಶ, ವಿದೇಶ ಸುತ್ತುವ ಐಶ್ವರ್ಯಾಗೆ ಜರ್ನಿಯಲ್ಲೆಲ್ಲ ಬೆಸ್ಟ್ ಕಂಪೆನಿ ಮಗಳು ಆರಾಧ್ಯ. ಒಮ್ಮೆ ಪತ್ರಕರ್ತರೊಬ್ಬರು ಪೂರ್ವಾಗ್ರಹದಲ್ಲಿ ಎಲ್ಲಿರಿಗೂ ಕೇಳುವ ಒಂದು ಪ್ರಶ್ನೆಯನ್ನು
ಐಶ್ವರ್ಯಾಗೂ ಕೇಳಿದರು,‘ವೃತ್ತಿ ಹಾಗೂ ಪೇರೆಂಟಿಂಗ್ ಎರಡನ್ನೂ ನಿಭಾಯಿಸೋದು ಒತ್ತಡ ಅನಿಸಲ್ವಾ?’ ಅದಕ್ಕೆ ಐಶ್ವರ್ಯಾ ಕೊಟ್ಟ ಉತ್ತರ ಆಕೆಯ ಪೇರೆಂಟಿಂಗ್‌ಗೆ ಕನ್ನಡಿ ಹಿಡಿದ ಹಾಗಿತ್ತು.‘ಮಗಳು ನನಗ್ಯಾವತ್ತೂ ಹೊರೆ ಅಲ್ಲ.
ಅವಳನ್ನು ರೂಲ್ ಬುಕ್‌ನಂತೆ ನಾನು ನೋಡಿಕೊಳ್ಳುತ್ತಲೂ ಇಲ್ಲ. ಅವಳಿಂದಾಗಿಯೇ ನನಗೆ ಪ್ರತಿಯೊಂದು ದಿನವೂ ಹೊಸ ದಿನವಾಗುತ್ತದೆ.’
ಮಗುವಿನ ಜೊತೆ ನಾವೂ ಮಗುವಾಗ್ಬೇಕು: ಕಾಜೊಲ್
‘ಈಕೆ ಕಣ್ಹೊಡೆದು ನಕ್ಕರೆ ಥೇಟ್ ಪುಟ್ಟ ಮಗುವಿನ ಹಾಗೇ..’ ಕಾಜೊಲ್ ಬಗ್ಗೆ ಬಾಲಿವುಡ್‌ನ ದಿಗ್ಗಜರೊಬ್ಬರು ಆಡಿದ ಮಾತು. ಟೀನೇಜ್ ತಲುಪಿರುವ ಇಬ್ಬರು ಮಕ್ಕಳ ಅಮ್ಮ ಕಾಜೊಲ್. ಟೆಲಿಗ್ರಾಫ್ ಪತ್ರಿಕೆಗೆ ಅವರು ನೀಡಿರುವ ಸಂದರ್ಶನದಲ್ಲಿ ‘ಈ ಪೇರೆಂಟಿಂಗ್ ಅನ್ನೋದು ಒಂಥರ ಮಗುವಿನ ಜೊತೆಗೆ ಇಂಟೆನ್ಶಿಪ್ ಮಾಡಿದ ಹಾಗೆ. ಹಗಲು ರಾತ್ರಿಗಳ ಕಲಿಯುವಿಕೆ. ಈ ಕಲಿಕೆ ಮುಕ್ತಾಯವಾಗುವುದು ಅಂತಿಲ್ಲ. ಮಕ್ಕಳು ಅವರೇನಾಗಿದ್ದರೋ ಅದನ್ನೇ
ಒಪ್ಪಿಕೊಂಡು ಬೆಳೆಸುವುದರಲ್ಲಿ ಹೆತ್ತವರ ಟ್ಯಾಲೆಂಟ್ ಅಡಗಿದೆ. ಈ ಹಂತದಲ್ಲಿ ಅಪ್ಪ ಅಮ್ಮ ಹಾಗೂ ಮಕ್ಕಳು ಇಬ್ಬರಿಂದಲೂ ತಪ್ಪಾಗುತ್ತೆ. ಆ ತಪ್ಪನ್ನು ಹೆತ್ತವರು ಹೇಗೆ ಟ್ರೀಟ್ ಮಾಡ್ತಾರೆ ಅನ್ನೋದನ್ನು ಮಗು ಸೂಕ್ಷ್ಮವಾಗಿ ಗಮನಿಸುತ್ತೆ. ಮುಂದಿನ ದಿನಗಳಲ್ಲಿ ಅದರ ವರ್ತನೆಯಲ್ಲೂ ಇದು ಪುನರಾವರ್ತನೆಯಾಗುತ್ತೆ, ವ್ಯಕ್ತಿತ್ವದ ಭಾಗವಾಗುತ್ತದೆ’ ಅಂತಾರೆ.
ಬರೀ ಮಗುವಿನ ಜೊತೆಗೆ ಒಂದರ್ಧ ಗಂಟೆಯಾದರೂ ಕಳೆಯುವುದು ಸಾಧ್ಯವಾಗಲಿ: ಕರೀನಾ ಕಪೂರ್
ಕರೀನಾ ಕಪೂರ್ ಬಳಿ ಅತೀ ಹೆಚ್ಚು ಕೇಳುವ ಪ್ರಶ್ನೆ ಮಗ ತೈಮೂರ್ ಬಗ್ಗೆ. ಇದನ್ನು ಕೇಳಿ ಕೇಳಿ ಸುಸ್ತಾದ ಆಕೆ, ‘ಅರೆ ನನ್ ಬಗ್ಗೆಯೂ ಒಂಚೂರು ಕೇಳ್ರಪ್ಪಾ..’ ಅಂತ ಕಾಲೆಳೆದದ್ದೂ ಆಯ್ತು. ಕರೀನಾ ಪ್ರಕಾರ ದಿನದಲ್ಲಿ ಕನಿಷ್ಟ ಅರ್ಧಗಂಟೆಯಷ್ಟಾದರೂ ಹೊತ್ತು ಮಗುವಿಗೆ ನೀಡುವಂತಾದರೆ ಈ ಕಾಲದಲ್ಲಿ ಅದುವೇ ಗ್ರೇಟ್. ‘ಬರೀ ಅರ್ಧ ಗಂಟೆನಾ ಅಂದ್ಕೊಳ್ಳಬೇಡಿ. ಆ ಹೊತ್ತು ಸಂಪೂರ್ಣ ಮಗುವಿಗೇ ಮೀಸಲಾಗಿರಬೇಕು. ಮೊಬೈಲ್, ಟಿ.ವಿ, ಅವರಿವರ ಮಾತು, ಯೋಚನೆಗಳು.. ಊಹೂಂ ಏನೂ ಇರಬಾರದು. ಕೇವಲ ನೀವು ಮತ್ತು ಮಗು ಮಾತ್ರ ಅಲ್ಲಿರಬೇಕು. ನಿಮ್ಮಿಬ್ಬರ ಜಗತ್ತಷ್ಟೇ ಅಲ್ಲಿರಬೇಕು.’ ಎನ್ನುವ ಕರೀನಾ, ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿದ್ದಾರೆ. ಮಗನಿಗೆ ಅಮ್ಮ ಹೇಳೋ ಹಾಡುಗಳಿಷ್ಟ. ದಿನದಲ್ಲಿ ಒಂದು ಗಂಟೆ ಹೊತ್ತು ಅಮ್ಮ ಮಗ ಇಬ್ಬರೂ ಬಾಗಿಲು ಹಾಕ್ಕೊಂಡು ಹಾಡು ಹಾಡ್ತಾರೆ, ಡ್ಯಾನ್ಸ್ ಮಾಡ್ತಾರೆ, ಕತೆ ಹೇಳ್ಕೊಳ್ತಾರೆ.
ಮಗಳ ಮಾತು ನನ್ನ ಶಿಸ್ತನ್ನು ನಿಲ್ಲಿಸಿತು : ಸುಶ್ಮಿತಾ ಸೇನ್
ಇಬ್ಬರು ಮಕ್ಕಳನ್ನು ದತ್ತು ತೆಗೆದುಕೊಂಡು ಅಮ್ಮನ ಪಾತ್ರ ನಿರ್ವಹಿಸುತ್ತಿರುವ ಬಾಲಿವುಡ್ ನಟಿ ಸುಶ್ಮಿತಾ ಸೇನ್‌ಗೆ ಮಕ್ಕಳನ್ನು ಸ್ಟ್ರಿಕ್ಟ್ ಆಗಿ ಬೆಳೆಸಬೇಕು ಅಂತಿತ್ತು. ‘ಮೊದಲ ಮಗು ರೆನೆಯನ್ನು ಶಿಸ್ತಿನಿಂದ ಬೆಳೆಸಿದೆ. ನನಗೆ ಬೇರೆ ಆಯ್ಕೆಯೇ ಇರಲಿಲ್ಲ. ಇದನ್ನು ಬಹಳ ಮಂದಿ ಟೀಕಿಸಿದರು. ಆದರೆ ಮಗಳು ಬಹಳ ಬೇಗ ತನ್ನ ಕೆಲಸವನ್ನು ತಾನೇ ಮಾಡಲು ಕಲಿತಳು. ಸ್ವತಂತ್ರ ಹುಡುಗಿಯಾಗಿ ಬೆಳೆದಳು. ಟೀಕೆಗಳಿಗೆ ಸರಿಯಾದ ಉತ್ತರ ಕೊಟ್ಟಳು. ಆದರೆ ಎರಡನೇ
ಮಗಳು ನನಗೇ ಬುದ್ಧಿ ಹೇಳುವಷ್ಟು ಜಾಣೆ. ಅವಳ ಮಾತೇ ನನ್ನ ಶಿಸ್ತನ್ನೆಲ್ಲ ನಿಲ್ಲಿಸಿತು.’ ಎನ್ನುವ ಸುಶ್ಮಿತಾ ಮಕ್ಕಳ ಬಗ್ಗೆ ಗಮನ ತಪ್ಪಿಸಿದವರಲ್ಲ. ‘ ಮಕ್ಕಳ ಬಗ್ಗೆ ಗಮನ ನೀಡದಿದ್ದರೆ ಅವರು ನೆಗೆಟಿವ್ ರೀತಿಯಿಂದ ನಮ್ಮ ಗಮನ ಸೆಳೆಯಲು ಯತ್ನಿಸುತ್ತಾರೆ.’ ಎನ್ನುವುದು ಅನುಭವದಿಂದ ಕಲಿತ ಪಾಠ. ಮಕ್ಕಳಿಗೆ ಹೊರ ಜಗತ್ತಿನ ಸೂಕ್ಷ್ಮವನ್ನು ಪ್ರಾಕ್ಟಿಕಲ್ ಆಗಿ ತಿಳಿಸುವುದೂ ಮುಖ್ಯ ಎನ್ನುತ್ತಾರೆ ಸುಶ್.
ಮಕ್ಕಳಿಗೆ ಗ್ಯಾಜೆಟ್ಸ್ ಬೇಡ, ಹೆತ್ತವರು ಬೇಕು : ಶಿಲ್ಪಾ ಶೆಟ್ಟಿ
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಇಂದಿನ ಮಕ್ಕಳು ಗ್ಯಾಜೆಟ್ಸ್‌ನಲ್ಲಿ ಕಳೆದುಹೋಗುತ್ತಿರುವ ಬಗ್ಗೆ ಬೇಸರವಿದೆ. ಟಿ.ವಿ, ಮೊಬೈಲ್, ವೀಡಿಯೋಗೇಮ್‌ಗಳನ್ನು ಹೆಚ್ಚೆಚ್ಚು ನೋಡುತ್ತಾ ಹೋದರೆ ಮಕ್ಕಳಲ್ಲಿ ಕೆಟ್ಟ ಹಠ, ಉದ್ವಿಗ್ನತೆ ಬೆಳೆಯುತ್ತದೆ ಎಂಬುದನ್ನು ಅನುಭವದಿಂದ ಕಂಡುಕೊಂಡಿದ್ದಾರೆ. ‘ಮಗ ವಿಯಾನ್‌ಗೆ ಮೊದ ಮೊದಲಿಗೆ ಟಿ.ವಿ ಕ್ರೇಜ್ ಇತ್ತು. ಅದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಯಿತು. ಬಹಳ ಕಷ್ಟಪಟ್ಟು ಅವನನ್ನು ಟಿ.ವಿಯಿಂದ ಆಚೆ ತಂದಿದ್ದೇನೆ.’ ಎನ್ನುವ ಶಿಲ್ಪಾ, ತಮ್ಮ ಪುಟ್ಟ ಪೋರನಿಗೆ ಈಗಲೇ ಯೋಗ ಕಲಿಸುತ್ತಿದ್ದಾರೆ. ವಿಯಾನ್‌ಗೆ ಜಿಮ್ನಾಸ್ಟಿಕ್‌ನಲ್ಲಿ ಆಸಕ್ತಿ ಇರುವುದನ್ನು ಕಂಡು ಅದಕ್ಕೆ ನೀರೆರೆಯುವ ಕೆಲಸ ಮಾಡಿದ್ದಾರೆ. ‘ಮಕ್ಕಳಿಗೆ ಎಳವೆಯಲ್ಲೇ ಒಂದಿಷ್ಟು ಜವಾಬ್ದಾರಿಗಳನ್ನು ಕಲಿಸಬೇಕು. ಹಾಗಿದ್ದರೆ ಮಕ್ಕಳ ಮಾನಸಿಕ ವಿಕಾಸವೂ ಆಗುತ್ತದೆ.’ ಎನ್ನುತ್ತಾರೆ ಶಿಲ್ಪಾ. ಅವರ ಗಾರ್ಡನ್‌ನಲ್ಲಿ ವಿಯಾನ್ ಕೆಲವು ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾನೆ.