ತೂಕ ಇಳಿಸೋಕೆ ನಟಿಯರು ಎಷ್ಟು ನೀರು ಕುಡೀತಾರೆ ?

By Web DeskFirst Published Apr 22, 2019, 10:38 AM IST
Highlights

ತೆಳ್ಳನೆ ಬಳಕುವ ಯಾವ ಸೆಲೆಬ್ರಿಟಿಯಲ್ಲಿ ಬೇಕಾದ್ರೂ ಕೇಳಿ, ನಿಮ್‌ ಡಯೆಟ್‌ ಹೇಗಿರುತ್ತೆ ಅಂತ, ಪ್ರತಿಯೊಬ್ಬರ ಮಾತಲ್ಲೂ ದಿನವಿಡೀ ಲೀಟರ್‌ಗಟ್ಟಲೆ ನೀರು ಕುಡೀತೀನಿ ಅನ್ನೋ ಪಾಯಿಂಟ್‌ ಇದ್ದೇ ಇರುತ್ತೆ. ಅಷ್ಟಕ್ಕೂ ಯಾವ ನೀರು ಕುಡಿದರೆ ಒಳ್ಳೆಯದು, ಎಷ್ಟುನೀರು ಕುಡಿಯಬೇಕು ಅನ್ನೋದರ ಬಗ್ಗೆ ಇಲ್ಲಿದೆ ಮಾಹಿತಿ.

ಮೇಘಾ ಎಂ ಎಸ್‌

ದೇಹದಲ್ಲಿ ನೀರಿನಂಶ ಇರಲೇಬೇಕು ಎಂದು ಡಾಕ್ಟರ್‌ ಹೇಳ್ತಿರ್ತಾರೆ. ಆ ಮಾತನ್ನು ಒಂದು ಕಿವಿಯಲ್ಲಿ ಕೇಳಿ ಇನ್ನೊಂದು ಕಿವಿಯಿಂದ ಬಿಡುವ ನಾವು, ನೀರು ಕುಡಿಯೋದರ ಬಗ್ಗೆ ಕಾಳಜಿ ಮಾಡೋದೇ ಇಲ್ಲ. ಅದರಲ್ಲೂ ಬೇಸಿಗೆಯಲ್ಲಿ ಬೆವರಿನ ಮೂಲಕ ನೀರು ಹೊರಹೋಗುವ ಕಾರಣ ಎಷ್ಟುನೀರು ಕುಡಿದರೂ ಕಡಿಮೆಯೇ. ನೀರು ಕುಡಿಯದಿದ್ದರೂ ನೀರಿನಂಶವಿರುವ ಹಣ್ಣುಗಳು ಬೇಸಿಗೆಯಲ್ಲಿ ಹೇರಳವಾಗಿ ಸಿಗುತ್ತವೆ. ಕರ್ಬೂಜ, ಕಲ್ಲಂಗಡಿ, ಜಂಬುನೇರಳೆ ಹೀಗೆ ಹಲವು ಹಣ್ಣುಗಳನ್ನು ತಿನ್ನಲೇಬೇಕು. ಎಳನೀರು ಕುಡಿಯಬಹುದು. ಇದು ದೇಹದಲ್ಲಿ ನೀರಿನಂಶ ಕಾಯ್ದುಕೊಳ್ಳಲು ಸಹಕಾರಿ.

‘ನಮ್ಮ ದೇಹ ಶೇ.70ರಷ್ಟುಭಾಗ ದ್ರವದಿಂದಲೇ ಕೂಡಿದೆ. ಹಾಗಾಗಿ ಪ್ರತಿ ದಿನ 2 ಲೀಟರ್‌ ನೀರು ಕಂಪಲ್ಸರಿ ಕುಡಿಯಬೇಕು’ ಎನ್ನುತ್ತಾರೆ ವೈದ್ಯರು. ನೀರು ಕುಡಿಯುವುದರಿಂದ ತೂಕ ಕಡಿಮೆ ಆಗುತ್ತದೆ ಎಂದು ಹೇಳುತ್ತಾರೆ. ನಾವು ಯಾವ ರೀತಿಯ ನೀರು ಕುಡಿಯಬೇಕು, ಎಷ್ಟುಕುಡಿಯಬೇಕು, ಹೇಗೆ ಕುಡಿಯಬೇಕು ಎಂಬುದರ ಮಾಹಿತಿ ಇಲ್ಲಿದೆ.

ಕೊಲ್ಲುವ ಕೋಲ್ಡ್‌ ವಾಟರ್‌

ಬೇಸಿಗೆಯಲ್ಲಿ ಹೊರಗೆ ಹೋಗಿ ಬಂದರೆ ಸಾಕು, ಸೀದಾ ಕೈ ಹೋಗುವುದು ಫ್ರಿಡ್ಜ್‌ ಕಡೆ. ಕೆಲವರಂತೂ ಫ್ರಿಡ್ಜಲ್ಲಿಟ್ಟಿದ್ದ ನೀರಿನ ಬಾಟಲಿಯನ್ನು ತೆಗೆದು ಗಟಗಟನೆ ನೀರು ಕುಡಿಯುತ್ತಾರೆ. ಹೆಚ್ಚಿನವರು ಫ್ರಿಡ್ಜ್‌ ನೀರು ಬಿಟ್ಟು ನಾರ್ಮಲ್‌ ನೀರು ಕುಡಿಯೋದು ಕಡಿಮೆ. ಆದರೆ ಫ್ರಿಡ್ಜ್‌ ನೀರು ಕುಡಿಯುವುದು ಒಳ್ಳೆಯದಲ್ಲ. ಕೋಲ್ಡ್‌ವಾಟರ್‌ ಕುಡಿಯುವುದರಿಂದ ಆಗುವ ಯಡವಟ್ಟುಗಳು ಒಂದೆರಡಲ್ಲ.

  • ವಿಪರೀತ ತಣ್ಣನೆ ನೀರನ್ನು ಡೈರೆಕ್ಟ್ ಆಗಿ ಕುಡಿಯುವುದರಿಂದ ನಾಲಿಗೆ ಮರಗಟ್ಟಿದಂತಾಗಿ ಸೆನ್ಸೇಷನ್‌ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಕೋಲ್ಡ್‌ ನೀರು ಕುಡಿಯುತ್ತಾ ಇತರೆ ಪದಾರ್ಥಗಳನ್ನು ಸೇವಿಸಿದಾಗ ಅದರಲ್ಲಿನ ರುಚಿ, ಸತ್ವವೂ ಗೊತ್ತಾಗಲ್ಲ.
  • ಆಹಾರ ಸೇವಿಸುವಾಗ ಮಧ್ಯೆ ಮಧ್ಯೆ ಕೋಲ್ಡ್‌ ವಾಟರ್‌ ಕುಡಿಯುವುದರಿಂದ ಜೀರ್ಣಕ್ರಿಯೆ ಕಷ್ಟವಾಗುತ್ತದೆ. ಫ್ರಿಡ್ಜ್‌ ನೀರು ಕುಡಿಯುವುದರಿಂದ ಮೆದುಳಿಗೆ ತುಂಬಾ ಎಫೆಕ್ಟ್ ಎನ್ನುತ್ತಾರೆ ತಜ್ಞರು. ಕೆಲವು ಬಾರಿ ಮೈಂಡ್‌ ಬ್ಲ್ಯಾಂಕ್‌ ಮಾಡಿ ಇಡುತ್ತದೆ. ಅಂದರೆ ಆಲೋಚನಾ ಕ್ರಮ, ತಲೆ ಓಡುವುದು ಕಡಿಮೆ ಆಗುತ್ತದೆ.
  • ಅತಿಯಾಗಿ ಅಥವಾ ಪ್ರತಿ ನಿತ್ಯ ಈ ತಣ್ಣೀರು ಸೇವಿಸುವುದರಿಂದ ಗಂಟಲು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ತೀರಾ ಅಪಾಯಕಾರಿ ಎಂದು ವೈದ್ಯರು ಹೇಳುತ್ತಾರೆ. ಜೊತೆಗೆ ತೂಕ ಇಳಿಸಲು ಪ್ರಯತ್ನಿಸುತ್ತಿರುವವರು ಈ ತಣ್ಣೀರು ಕುಡಿಯುವುದರಿಂದ ತೂಕ ಜಾಸ್ತಿಯಾಗುತ್ತದೆಯೇ ವಿನಃ ಕಡಿಮೆಯಾಗುವುದಿಲ್ಲ.
  • ಕೋಲ್ಡ್‌ ವಾಟರ್‌ ಕುಡಿಯುವುದರಿಂದ ದೇಹದಲ್ಲಿನ ರೋಗನಿರೋಧಕ ಶಕ್ತಿ ಕುಂಠಿತಗೊಳ್ಳುತ್ತದೆ. ನೆಗಡಿ, ಕೆಮ್ಮು, ವೈರಲ್‌ ಇನ್‌ಫೆಕ್ಷನ್‌ಗೆ ಇದು ಆಹ್ವಾನ. ಇದು ಬೆವರುವುದನ್ನು ತಡೆಯುತ್ತದೆ. ಇದರಿಂದ ಸೈಡ್‌ ಎಫೆಕ್ಟ್ಗಳು ಹೆಚ್ಚು. ಮನುಷ್ಯ ಬೆವರಿದಷ್ಟುಆರೋಗ್ಯವಾಗಿರುತ್ತಾನೆ. ಬೆವರುವುದೇ ಇಲ್ಲವೆಂದರೆ ರೋಗಗಳು ಹೆಚ್ಚು.

ನಾರ್ಮಲ್‌ ವಾಟರ್‌

ನೀವು ಎಲ್ಲಿ ಹೋದರೂ ಪಟ್‌ ಅಂತ ಕೈಗೆ ಸಿಗುವುದು ನಾರ್ಮಲ್‌ ವಾಟರ್‌. ಈ ನೀರು ಕುಡಿಯುವುದರಿಂದ ನಿಮಗೂ ಹಾಗೂ ನಿಮ್ಮ ದೇಹಕ್ಕೂ ಪ್ಲಸ್‌ ಪಾಯಿಂಟ್‌ಗಳೇ ಹೆಚ್ಚು. ನಾರ್ಮಲ್‌ ವಾಟರ್‌ನಲ್ಲಿನ ಪೌಷ್ಠಿಕಾಂಶಗಳು, ಅದರ ರುಚಿ ಹೆಚ್ಚಿರುವುದರಿಂದ ಹಾಯ್‌ ಎನಿಸುವಷ್ಟುಹೊಟ್ಟೆತುಂಬುವವರೆಗೂ ಕುಡಿಯಬಹುದು. ಈ ನೀರು ಕುಡಿಯುವುದರಿಂದ ತೂಕ ಇಳಿಸಬಹುದು ಎಂದು ವೈದ್ಯರು ಹೇಳುತ್ತಾರೆ. ಅಷ್ಟಕ್ಕೂ ಈ ನಾರ್ಮಲ್‌ ವಾಟರ್‌, ಬೆಚ್ಚಗಿನ ನೀರು ಕುಡಿಯುವುದರಿಂದ ದೇಹಕ್ಕೆ ಲಾಭ.

  • ಬೆಚ್ಚಗಿನ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಹಕಾರಿ. ಹಾಗೂ ಜೀರ್ಣಕ್ರಿಯೆಯನ್ನು ವೇಗಗೊಳ್ಳುತ್ತದೆ. ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ಗ್ಯಾಸ್ಟ್ರಿಕ್‌ ಸಮಸ್ಯೆ ನಿವಾರಣೆಯಾಗುತ್ತದೆ.
  • ಬೆಳಗ್ಗೆ ಎದ್ದು ಒಂದು ಲೋಟ ನಾರ್ಮಲ್‌ ವಾಟರ್‌ ಕುಡಿಯುವುದರಿಂದ ದೇಹದಲ್ಲಿನ ಬೇಡದ ವಸ್ತುವನ್ನು ತೆಗೆದು ಹಾಕುತ್ತದೆ.
  • ಅಧ್ಯಯನದ ಪ್ರಕಾರ ನಾರ್ಮಲ್‌ ವಾಟರ್‌ ಕುಡಿಯುವುದು ಮೂಡ್‌ ಚೇಂಜ್‌ ಆಗುವುದನ್ನು ತಪ್ಪಿಸುತ್ತದೆ. ನಿಮ್ಮ ಮೂಡ್‌ ಅನ್ನು ಇನ್ನಷ್ಟುಆ್ಯಕ್ಟಿವ್‌ ಆಗಿ ಇಡಲು ಸಹಕರಿಸುತ್ತದೆ ಎಂದು ಅಧ್ಯಯನದ ವರದಿ ತಿಳಿಸುತ್ತದೆ.
  • ಸರಿಯಾಗಿ ನೀರು ಕುಡಿಯದವರಿಗೆ ಕಾಡುವ ಪ್ರಮುಖ ಸಮಸ್ಯೆ ಮಲಬದ್ಧತೆ. ಪ್ರತಿ ದಿನ ಒಂದು ಲೋಟ ಬೆಚ್ಚಗಿನ ನೀರು, ಸಾಧಾರಣ ನೀರು ಅಥವಾ ಬಿಸಿ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ಅದಕ್ಕೆ ಪೋಷಕರು ಬೆಳಗೆದ್ದು ನೀರು ಕುಡಿ ಎನ್ನುತ್ತಾರೆ.
  • ತೂಕ ಕಡಿಮೆ ಮಾಡಲು ಬಯಸುವವರಿಗೆ ಸಾಧಾರಣ ನೀರು ಕುಡಿಯಬೇಕೋಅಥವಾ ಬಿಸಿ ನೀರು ಕುಡಿಯಬೇಕೋ ಎನ್ನುವುದು ಗೊಂದಲವೇ. ಎರಡೂ ರೀತಿಯ ನೀರು ಕುಡಿಯುವುದು ಸೂಕ್ತ ಎಂದು ತಜ್ಞರು ಹೇಳುತ್ತಾರೆ. ಆದರೆ ನೀವು ಇವೆರಡರಲ್ಲಿ ಯಾವ ನೀರು ಕುಡಿಯುತ್ತೀರೋ ಅದು ಪ್ರತಿ ದಿನ ಕುಡಿಯುವ ನೀರಿನ ಪ್ರಮಾಣಕ್ಕಿಂತ ಎರಡರಷ್ಟಿರಬೇಕು. ಅಂದರೆ ಹೆಚ್ಚು ನೀರು ಕುಡಿದಷ್ಟುತೂಕ ಕಡಿಮೆ ಆಗುತ್ತದೆ. ಪ್ರತಿ ದಿನ 2 ಲೀಟರ್‌ ನೀರು ಕುಡಿದರೆ ತೂಕ ಕಡಿಮೆ ಮಾಡಲು 4 ಲೀಟರ್‌ ದಿನಕ್ಕೆ ಕುಡಿಯಬೇಕು. ಇದಕ್ಕೆ ತಕ್ಕಂತೆ ಹಸಿ ತರಕಾರಿಗಳು, ಡಯೆಟ್‌ ಫುಡ್‌ಗಳನ್ನು ತೆಗೆದುಕೊಳ್ಳಬೇಕು.

ಒಟ್ಟಿನಲ್ಲಿ ನೀವು ಏನೇ ಮಾಡಿ. ಆದರೆ ಈ ಬಿಸಿಲಿಗೆ ಹೆಚ್ಚು ನೀರು ಕುಡಿದು ಆರೋಗ್ಯವಾಗಿರಿ. ದೇಹದಲ್ಲಿ ನೀರಿನಾಂಶ ಇದ್ದಲ್ಲಿ ತಲೆ ಸುತ್ತುವುದು, ಬಾಯಿ ಒಣಗುವುದು, ಸುಸ್ತಾಗುವುದು ಹೀಗೆ ತಪ್ಪುತ್ತದೆ. ನಿಮ್ಮ ಆರೋಗ್ಯ ನಿಮ್ಮ ಕೈನಲ್ಲಿದೆ.

click me!