ಕುಡಿತವೊಂದು ರೋಗ, ತಕ್ಷಣವೇ ಚಿಕಿತ್ಸೆ ಕೊಡಿಸಿದರೆ ಗುಣವಾಗೋದು ಗ್ಯಾರಂಟಿ

By Suvarna News  |  First Published Jun 28, 2018, 6:24 PM IST

ವ್ಯಕ್ತಿಯನ್ನು ಖಿನ್ನತೆಗೆ ತಳ್ಳಬಲ್ಲದು ಕುಡಿತದಂಥ ದುಶ್ಚಟಗಳು. ಸಮಾಜದಲ್ಲಿ ನಡೆಯುತ್ತಿರುವ ಅನೇಕ ಅಪರಾಧ ಕೃತ್ಯಗಳಿಗೆ ಇಂಥ ವ್ಯಸನಗಳೇ ಪ್ರಮುಖ ಕಾರಣ. ಮದ್ಯಪಾನ ಹಾಗೂ ಮಾದಕ ದ್ರವ್ಯಗಳಿಗೆ ದಾಸನಾಗಿಬಿಟ್ಟರಂತೂ ಸಮಾಜದ ಸ್ವಾಸ್ಥ್ಯಕ್ಕೂ ವ್ಯಸನಿ ಮಾರಕವಾಗುತ್ತಾನೆ. ಇಂಥ ದುಶ್ಚಟಗಳ ದಾಸನಾದವನು ಸೂಕ್ತ ಚಿಕಿತ್ಸೆ ಪಡೆದು, ಗುಣ ಮುಖನಾಗಬಹುದು. ಏನಂತಾರೆ ಮನಃಶಾಸ್ತ್ರಜ್ಞರು?


ಮೋಜಿಗಾಗಿ ಕಲಿತ ದುಶ್ಚಟಗಳು ಕಾಲ ಕ್ರಮೇಣ ನಮಗರಿವಿಲ್ಲದೇ ನಮ್ಮನ್ನು ದಾಸರಾಗಿಸುತ್ತವೆ. ಯಾವಾಗ ವ್ಯಕ್ತಿ ವ್ಯಸನಿಗಳಿಂದ ಮುಕ್ತವಾಗಲು ಸ್ವತಃ ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲವೋ ಅಂತಹ ಸ್ಥಿತಿ ತಲುಪಿರುವ ವ್ಯಕ್ತಿಗೆ ಮಾನಸಿಕತಜ್ಞರ ಸೂಕ್ತ ಚಿಕಿತ್ಸೆ ನೀಡಿದರೆ ಖಂಡಿತ ವ್ಯಸನಗಳಿಂದ ಮುಕ್ತಿ ಪಡೆಯಬಹುದಾಗಿದೆ.

ಸಾಮಾನ್ಯವಾಗಿ ಕುಟುಂಬದ ಸದಸ್ಯನೊಬ್ಬ ಯಾವುದೋ ದುಶ್ಚಟಕ್ಕೆ ಬಲಿಯಾಗುತ್ತಿದ್ದಾನೆಂದರೆ ಈ ವಿಷಯ ಮನೆಯ ಹಿರಿಯ ಸದಸ್ಯನ ಅರಿವಿಗೆ ಬರುವುದೇ ತಡವಾಗಿರುತ್ತದೆ. ಅಕಸ್ಮಾತ್ ವಿವಿಧ ಮೂಲಗಳಿಂದ ಬಂದಲೂ ಪ್ರತಿಷ್ಠೆಗೆ ಅಂಜಿ ಮುಚ್ಚಿಡಲು ಪ್ರಯತ್ನಿಸುತ್ತಾರೆ. ಇದೇ ಕಾರಣದಿಂದ ಮನುಷ್ಯನ ಚಟ ಮತ್ತಷ್ಟು ತೀವ್ರವಾಗಿ, ಮಾರಕವಾಗಿ ಬದಲಾಗುತ್ತವೆ. ಬೇಗ ಗುರುತಿಸಿ ಚಿಕಿತ್ಸೆ ಕೊಡಿಸಿ: ಮನೆಯ ಸದಸ್ಯನ್ನೊಬ್ಬ ಚಟಕ್ಕೆ ಬಲಿಯಾಗುತ್ತಿದ್ದಾನೆ ಎಂಬ ಅರಿವಿಗೆ ಬಂದ ಕೂಡಲೇ ಆಪ್ತ ಸಲಹೆಗಾರರ ಬಳಿ ಕರೆದುಕೊಂಡು ಹೋಗಿ ಸೂಕ್ತ ಚಿಕಿತ್ಸೆ ಕೊಡಿಸಬೇಕು.

Tap to resize

Latest Videos

ಗಟ ಗಟ ಅಂತ ಎಣ್ಣೆ ಕುಡಿತೀರಾ? ಯುವಕರೇ ಹುಷಾರ್!

‘ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೇ?’ಎನ್ನುವಂತೆ ಆರಂಭದಲ್ಲಿಯೇ ಬದುಕು ಸರಿ ಪಡಿಸಿಕೊಂಡರೆ ಒಳಿತು. ಇಲ್ಲವಾದರೆ ಇಂಥ ವ್ಯಸನಿಗಳಿಂದಲೇ ಸಮಾಜದಲ್ಲಿ ದಿನೆ
ದಿನೇ ಕೊಲೆ, ಸುಲಿಗೆ, ಅತ್ಯಾಚಾರದಂಥ ಪ್ರಕರಣಗಳು ಹೆಚ್ಚುತ್ತಿರುವುದು. ಮನುಷ್ಯ ತಾತ್ಕಾಲಿಕ ಸುಖವನ್ನು ಅನುಭವಿಸುವ ದೃಷ್ಟಿಯಿಂದ ಮಾದಕ ದ್ರವ್ಯಗಳ ದಾಸನಾಗಿ, ಅನಾರೋಗ್ಯ ಸಮಾಜವನ್ನೇ ಸೃಷ್ಟಿಸುತ್ತಾನೆ.

ಯಾವಾಗ ಚಿಕಿತ್ಸೆಗೆ ಕರೆದೊಯ್ಯಬೇಕು: 

ವ್ಯಸನಿ ಮತ್ತಿನಲ್ಲಿದ್ದಾಗ, ಚಿಕಿತ್ಸಾ ಕೇಂದ್ರಗಳಿಗೆ ಕರೆದುಕೊಂಡ ಹೋದಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡುವುದು ಕಷ್ಟ. ಬದಲಾಗಿ ಅವರ ಮನವೊಲಿಸಿಯೇ ಕೇಂದ್ರಗಳಿಗೆ ಕರೆದುಕೊಂಡು ಬಂದಲ್ಲಿ, ಆಪ್ತ ಸಲಹೆ ಮೂಲಕ ಅವರ ಮನಸ್ಸನ್ನು ಸಂಪೂರ್ಣ ಬದಲಿಸಿ, ಚಿಕಿತ್ಸೆಗೆ ನೆರವಾಗುವಂತೆ ಮಾಡುವ ಜಾಣ್ಮೆ ಮನಃ ಶಾಸ್ತ್ರಜ್ಞರಿಗಿರುತ್ತದೆ. ಮನಸ್ಸಿನ ಮರ್ಮವನ್ನು ಅರಿತು, ಕಾರ್ಯಪ್ರವೃತ್ತರಾಗಬೇಕಾದ್ದರಿಂದ ಒತ್ತಡಕ್ಕೆ ಮಣಿದು ಚಿಕಿತ್ಸೆ ನೀಡಿದರೆ, ವ್ಯಕ್ತಿ ವ್ಯಸನ ಮುಕ್ತನಾದರೂ ಕುಟುಂಬದ ಸದಸ್ಯರೊಂದಿಗಿನ ಸಂಬಂಧವನ್ನು ಸುಧಾರಿಸಿಕೊಳ್ಳುವಲ್ಲಿ ವಿಫಲನಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ, ಒಬ್ಬ ವ್ಯಕ್ತಿಗೆ ಈ ಸಂಬಂಧವಾಗಿ ಚಿಕಿತ್ಸೆ ಕೊಡಿಸುವಾಗ ಪ್ರಸ್ತುತ ಹಾಗೂ ಭವಿಷ್ಯದ ಪರಿಣಾಮವನ್ನು ಮನದಲ್ಲಿಟ್ಟುಕೊಂಡು ಮುಂದಡಿ ಇಡಬೇಕು.

ಮಾಹಿತಿ ಪಡೆಯಿರಿ: 
ದುಶ್ಚಟ ನಿವಾರಣಾ ಕೇಂದ್ರಗಳಲ್ಲಿಯೂ ಸೂಕ್ತ ಮನಃಶಾಸ್ತ್ರಜ್ಞರು, ವೈದ್ಯರು ಹಾಗೂ ಮನೋವೈದ್ಯರು ಇದ್ದಾರೆಯೇ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಸೂಕ್ತ ಔಷಧೋಪಚಾರಗಳೊಂದಿಗೆ, ರೋಗಿಯ ದೈಹಿಕ ಆರೋಗ್ಯಕ್ಕೆ ಯಾವುದೇ ರೀತಿಯಲ್ಲಿಯೂ ತೊಂದರೆಯಾಗದಂಥ ಆಹಾರವನ್ನು ನೀಡುತ್ತಾರೆಯೇ ಎಂಬುದನ್ನು ಅರಿತುಕೊಳ್ಳ ಬೇಕು. ಆ ಕೇಂದ್ರ ಸಂಬಂಧಿಸಿದ ಇಲಾಖೆಯಡಿಯಲ್ಲಿ ನೋಂದಣಿಯಾಗಿದೆಯೇ, ಇಲ್ಲವೇ ಎಂಬುವುದನ್ನೂ ಅರಿತುಕೊಳ್ಳುವುದು ಒಳಿತು.ಸುಖಾಸುಮ್ಮನೆ ವ್ಯಸನಿಯನ್ನು ಮೂರು-ಆರು ತಿಂಗಳು ಕೂಡಿ ಹಾಕಿ, ಹೊಡೆದು ಬಡಿದು ಅವೈಜ್ಞಾನಿಕ ಚಿಕಿತ್ಸೆ ನೀಡುವಂಥ ಕೇಂದ್ರಗಳು ಇದೀಗ ಎಲ್ಲೆಡೆ ಹುಟ್ಟಿಕೊಂಡಿದ್ದು, ಇಂಥ ಚಿಕಿತ್ಸೆಗಳು ರೋಗಿಯನ್ನು ಮತ್ತಷ್ಟು ಜರ್ಜರಿತವಾಗಿಸುವುದರಲ್ಲಿ ಅನುಮಾನವೇ ಇಲ್ಲ.

ಚಿಕಿತ್ಸೆ ಪಡೆಯೋದು ಹೇಗೆ?:
ಸಾಮಾನ್ಯವಾಗಿ ಚಟದಿಂದ ಮನುಷ್ಯನ ನಾನಾ ಅಂಗಗಳು ತನ್ನ ಕಾರ್ಯಚಟುವಟಿಕೆಯ ವಿಧಾನವನ್ನೇ ಬದಲಿಸಿಕೊಂಡಿರುತ್ತದೆ. ಆದ್ದರಿಂದ ಆತನ ನಿದ್ರೆ, ಹಸಿವು ಹಾಗೂ ಪಚನ ಕ್ರಿಯೆ ಮದ್ಯವಿಲ್ಲದೆಯೂ ಸಹಜ ಸ್ಥಿತಿಗೆ ಮರಳುವಂತೆಯೇ ಔಷಧಗಳನ್ನು ಮೊದಲು ನೀಡಲಾಗುತ್ತದೆ. ಅದಕ್ಕೆ ಕೇಂದ್ರಗಳಲ್ಲಿಯೇ ತಂಗುವ ಅಗತ್ಯವಿದೆ. ಈ ಎಲ್ಲ ಚಿಕಿತ್ಸೆಗಳನ್ನು ವ್ಯವಸ್ಥಿತವಾಗಿಯೇ ನೀಡಬೇಕಾಗಿದ್ದು, ತುಸು ಸಮಯ ತೆಗೆದುಕೊಳ್ಳುವುದರಿಂದ ಕೆಲವು ವಾರಗಳ ಕಾಲವಾದರೂ, ವ್ಯಸನಿ ಆಸ್ಪತ್ರೆಯಲ್ಲಿರ ಬೇಕು. ರೋಗಿ ಗುಣಮುಖನಾಗಲು ಕುಟುಂಬದ ಸದಸ್ಯರ ಸಹಕಾರವೂ ಅತ್ಯಗತ್ಯ.

ಇದೆಂಥಾ ಪ್ರೀತಿ, ಪ್ರಿಯಕರನಿಗೆ ರಕ್ತ ಹೀರಲು ಬಿಡ್ತಾಳಂತೆ ಇವಳು!?

ಇದರಿಂದ ಒಮ್ಮೆ ಚಿಕಿತ್ಸೆ ಪಡೆದುಕೊಂಡವರು ಸಮಾಜ ಹಾಗೂ ಕುಟುಂಬಕ್ಕೆ ಮಾರಕವಾಗುವಂಥ ವ್ಯಸನಿಗಳಾಗುವ ಸಾಧ್ಯತೆ ಕಡಿಮೆ. ಈ ಕಾರಣಕ್ಕಾಗಿಯೇ ವ್ಯಸನ ಮುಕ್ತರಾಗಲು ಅಗತ್ಯ ಚಿಕಿತ್ಸೆ ಕೊಡಿಸಬೇಕು. ಆಗ ಮಾತ್ರ ಸ್ವಸ್ಥ ಕುಟುಂಬ ಹಾಗೂ ಸಮಾಜವನ್ನು ಸೃಷ್ಟಿಸಬಹುದು.

- ಡಾ.ಸದಾನಂದ್ ಕೆ.ಸಿ. ಮನಃಶಾಸ್ತ್ರಜ್ಞರು 
9880441703

click me!