ವಿದೇಶ ಪ್ರವಾಸಕ್ಕೆ ಸೂಟ್‌ಕೇಸ್ ಪ್ಯಾಕ್ ಮಾಡುವ ಮುನ್ನ ಈ ಲಿಸ್ಟನ್ನೊಮ್ಮೆ ಓದಿ ಬಿಡಿ. ಯಾವುದನ್ನು ಎಲ್ಲಿ ತೊಡಬಾರದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಪ್ಯಾಕ್ ಮಾಡಿಕೊಳ್ಳಲು ಇದು ನಿಮಗೆ ಹೆಲ್ಪ್ ಆಗಬಹುದು.
ಎಲ್ಲಿಯೇ ಪ್ರವಾಸ ಕೈಗೊಳ್ಳಿ, ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಬೇಕು. ಅದಕ್ಕೆ ಸರಿಯಾಗಿ ನಮ್ಮ ವೇಷಭೂಷಣಗಳಿರಬೇಕು. ಕೆಲವು ದೇಶಗಳಲ್ಲಿ ಕೆಲವೊಂದು ವೇಷಭೂಷಣಗಳಿಗೆ ನಿಷೇಧವಿದ್ದರೆ, ಮತ್ತೆ ಕೆಲವೆಡೆ ನಿಶ್ಚಿತ ಸಂದರ್ಭವೊಂದಕ್ಕೆ ಮಾತ್ರ ಕೆಲವು ಉಡುಗೆಗಳನ್ನು ಧರಿಸಲಾಗುತ್ತದೆ. ಹೀಗಾಗಿ, ಎಲ್ಲಿಯೇ ಪ್ರವಾಸ ಕೈಗೊಂಡರೂ ಏನನ್ನು ತೊಡಬಾರದು ಎಂಬ ವಿಷಯ ಗಮನದಲ್ಲಿದ್ದರೆ, ಏನನ್ನು ತೊಡಬೇಕು ಎಂಬುದು ತನ್ನಿಂತಾನೇ ತಿಳಿಯುತ್ತದೆ.
undefined
ಧಾರ್ಮಿಕ ನಂಬಿಕೆಗಳನ್ನು ನಿರೋಧಿಸುವ ಬಟ್ಟೆಗಳು
ಅತಿಯಾದ ಧಾರ್ಮಿಕ ನಂಬಿಕೆಗಳಿರುವ ದೇಶಗಳಿಗೆ ಭೇಟಿ ನೀಡುವಾಗ ಆದಷ್ಟು ಮೈ ಮುಚ್ಚುವ ಸಭ್ಯ ಬಟ್ಟೆಗಳನ್ನಷ್ಟೇ ಧರಿಸುವುದು ಬುದ್ಧಿವಂತಿಕೆಯ ಲಕ್ಷಣ. ಮಿಡಲ್ ಈಸ್ಟ್ ದೇಶಗಳಿಗೆ ಭೇಟಿ ನೀಡುವಾಗ ಮಿನಿ ಸ್ಕರ್ಟ್‌ಗಳು, ಟ್ಯಾಂಕ್ ಟಾಪ್ಸ್, ಸ್ಲೀವ್‌ಲೆಸ್ ಟಾಪ್ಸ್, ಶಾರ್ಟ್ಸ್, ಕ್ಯಾಪ್ರಿ ಪ್ಯಾಂಟ್‌ಗಳನ್ನು ಅವಾಯ್ಡ್ ಮಾಡಿ. ಮೈ ತೋರಿಸುವ ಬಟ್ಟೆಗಳು ಬೇಡವೇ ಬೇಡ. ಪುರುಷರೂ ಅಷ್ಟೇ ಶಾರ್ಟ್ಸ್ ಹಾಗೂ ಸ್ಲೀವ್‌ಲೆಸ್ ಶರ್ಟ್‌ಗಳನ್ನು ಧರಿಸುವುದು ಸರಿಯಲ್ಲ. ಇಂಥಲ್ಲಿಗೆ ಭೇಟಿ ನೀಡುವಾಗ ಪ್ಯಾಂಟ್‌ಗಳು ಹಾಗೂ ಲಾಂಗ್ ಸ್ಕರ್ಟ್‌ಗಳು ಬೆಸ್ಟ್. ಬ್ಯಾಗ್‌ನಲ್ಲಿ ಶಾಲ್ ಅಥವಾ ದುಪ್ಪಟ್ಟಾವೊಂದು ಎಕ್ಟ್ರಾ ಇರಲಿ. ಇನ್ನು ದೇವಸ್ಥಾನ, ಚರ್ಚ್‌ಗಳಿಗೆ ಭೇಟಿ ನೀಡುವಾಗಲೂ ಪ್ರವಾಸಿಗರು ತೋಳು ಹಾಗೂ ಕಾಲುಗಂಟನ್ನು ಮುಚ್ಚುವಂಥ ಬಟ್ಟೆ ತೊಡಬೇಕು.
ಕಣ್ಣು ಕುಕ್ಕುವ ಆಭರಣಗಳು
ನಿಮ್ಮ ವಜ್ರದೋಲೆಗಳು, ಬಂಗಾರದ ಸರ, ಉಂಗುರ ಮತ್ತೊಬ್ಬರ ಕಲೆಕ್ಷನ್‌ಗೆ ಸೇರಬೇಕೆಂಬ ಉದಾರ ಆಸೆಯಿದ್ದಲ್ಲಿ ಮಾತ್ರ ಪ್ರವಾಸಕ್ಕೆ ಈ ಕಾಸ್ಟ್ಲಿ ಒಡವೆ ತೊಟ್ಟು ಹೋಗುವ ಬುದ್ಧಿವಂತಿಕೆ ತೋರಿ. ಪ್ರವಾಸದ ಸಂದರ್ಭದಲ್ಲಿ ನಿಮ್ಮ ಶ್ರೀಮಂತಿಕೆ ಪ್ರದರ್ಶನ ಮಾಡಿ ಯಾರನ್ನೂ ಇಂಪ್ರೆಸ್ ಮಾಡಬೇಕಿಲ್ಲ ಎಂಬುದು ಗಮನಕ್ಕಿರಲಿ. ಬದಲಿಗೆ ಬಟ್ಟೆಗೆ ಮ್ಯಾಚ್ ಆಗುವ ಆರ್ಟಿಫಿಷಿಯಲ್ ಫಂಕಿ ಜುವೆಲ್ಲರಿ ಧರಿಸಬಹುದು.
ಸ್ನೀಕರ್ಸ್ ಹಾಗೂ ಓಪನ್ ಟೋ ಶೂಗಳು
ಜಗತ್ತಿನ ಹಲವು ದೇಶಗಳಲ್ಲಿ ಸ್ನೀಕರ್ಸನ್ನು ಕೇವಲ ಕ್ರೀಡೆಗಾಗಿ ಬಳಸುತ್ತಾರೆ. ಬಿಳಿಯ ಟೆನಿಸ್ ಶೂಸ್ ಧರಿಸಿ ಇಟಲಿಯೋ, ಸ್ಪೇನ್‌ಗೋ ಹೋದರೆ ಜನ ಹುಬ್ಬು ಗಂಟಿಕ್ಕಿ ನಿಮ್ಮತ್ತ ನೋಡುತ್ತಾರೆ. ಬದಲಿಗೆ ನಡೆಯಲು ಕಂಫರ್ಟ್ ಎನಿಸುವ ಲೆದರ್ ವಾಕಿಂಗ್ ಶೂಸ್ ಬಳಸಿ. ಬೀಚ್‌ನ ಹೊರತಾಗಿ ಎಲ್ಲಿಗೇ ಹೋದರೂ ಓಪನ್ ಟೋ ಶೂಗಳು ಬೇಡ.
ಶಾರ್ಟ್ಸ್
ನಿಮ್ಮ ಶಾರ್ಟ್ಸ್‌ಗಳನ್ನು ಬೀಚ್, ಪಾರ್ಕ್, ಟೆನಿಸ್ ಕ್ಲಬ್ ಹಾಗೂ ಹೈಕಿಂಗ್‌ಗೆ ಸೀಮಿತವಾಗಿಸಿ. ಎಷ್ಟೇ ಬೇಸಿಗೆಯಾದರೂ ಇಂಡೋನೇಷಿಯಾ, ವಿಯೆಟ್ನಾಂಗಳಂಥ ದೇಶಗಳಲ್ಲಿ ಶಾರ್ಟ್ಸ್ ಧರಿಸಿದರೆ ನಿಮ್ಮನ್ನು ವಿಚಿತ್ರ ಜೀವಿಯಂತೆ ಕಂಡಾರು.
ಧಾರ್ಮಿಕ ಚಿಹ್ನೆಗಳು, ರಾಷ್ಟ್ರಧ್ವಜಗಳು
ನಿಮ್ಮ ಶರ್ಟ್ ಅಥವಾ ಡಾಲರ್‌ನಲ್ಲಿ ಧಾರ್ಮಿಕ ಚಿಹ್ನೆಗಳು, ನಿಮ್ಮ ರಾಷ್ಟ್ರ ಹಾಗೂ ಧರ್ಮದ ಬಗೆಗಿನ ಕೋಟ್‌ಗಳು, ಇಲ್ಲವೇ ರಾಷ್ಟ್ರಧ್ವಜದ ಚಿತ್ರವಿದ್ದಲ್ಲಿ ಅದನ್ನು ಧರಿಸಲೇಬೇಡಿ. ಉದ್ದೇಶವೇ ಇಲ್ಲದೇ ವೃಥಾ ಯಾರನ್ನಾದರೂ ಕಾಲು ಕೆರೆದು ಜಗಳಕ್ಕೆ ಕರೆಯುವುದರಲ್ಲಿ ಅರ್ಥವಿಲ್ಲ.
ಅನುಚಿತ ಬಣ್ಣದ ಬಟ್ಟೆಗಳು
ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಯಾರದಾದರೂ ಸಾವಿಗೆ ದುಃಖ ವ್ಯಕ್ತಪಡಿಸಲು ಪಕ್ಕು ಬಟ್ಟೆಗಳನ್ನು ಧರಿಸಿದರೆ ಏಷ್ಯಾದ ಕೆಲ ರಾಷ್ಟ್ರಗಳಲ್ಲಿ ಬಿಳಿ ಶೋಕದ ಸಂಕೇತ. ಮಧ್ಯ ಆಫ್ರಿಕಾ ರಾಷ್ಟ್ರಗಳಲ್ಲಿ ಬಿಳಿ ಅಥವಾ ನೀಲಿ ಬಣ್ಣಗಳು ಕಚ್ಚುವ ಕೀಟವೊಂದನ್ನು ಸುಲಭವಾಗಿ ಆಕರ್ಷಿಸುತ್ತವೆ. ಹೀಗಾಗಿ, ಈ ದೇಶಗಳಲ್ಲಿ ಕಪ್ಪು, ಬಿಳಿ, ನೀಲಿಗಳನ್ನು ದೂರವಿಡಿ.
ಮಳೆಗಾಲದಲ್ಲಿ ಸ್ಟೈಲ್ ಹೆಚ್ಚಿಸುತ್ತೆ ಈ ಫ್ಯಾಷನ್ ಐಟಂಗಳು!
ರಿಪ್ಪ್ಡ್ ಜೀನ್ಸ್
ಹರಿದ ಫ್ಯಾಷನ್‌ನ ಜೀನ್ಸ್ ಬಟ್ಟೆಗಳು ವೃಥಾ ಎಲ್ಲರ ಗಮನ ಸೆಳೆಯುವುದಲ್ಲದೆ, ಧಾರ್ಮಿಕ ಸ್ಥಳಗಳಿಗೆ ತೊಟ್ಟಾಗ ಅಗೌರವ ತೋರಿಸಿದಂತಾಗುತ್ತದೆ. ಇನ್ನು ಮಳೆಗಾಲದಲ್ಲಿ ಜೀನ್ಸ್ ಬಟ್ಟೆಗಳು ಒದ್ದೆಯಾದರೆ ಒಣಗಲು ಬಹಳ ಸಮಯ ಬೇಡುತ್ತವೆ. ಇಂಥ ಸಂದರ್ಭಗಳಲ್ಲಿ ಜೀನ್ಸ್ ಬಟ್ಟೆಗಳನ್ನು ಅವಾಯ್ಡ್ ಮಾಡಿ.
ದೊಡ್ಡ ಕ್ಯಾಮೆರಾ
ಸದಾ ಕಾಲ ಕ್ಯಾಮೆರಾವನ್ನು ಕುತ್ತಿಗೆಗೆ ನೇತು ಬಡಿದುಕೊಂಡು ತಿರುಗುವುದು ನಾನು ಟೂರಿಸ್ಟ್ ಎಂದು ಕೂಗಿ ಹೇಳುವಂತಿರುತ್ತದೆ. ಕಳ್ಳರನ್ನು ಅದು ಸುಲಭವಾಗಿ ಆಕರ್ಷಿಸಬಹುದು.