ಟ್ರಾವೆಲ್‌ ಬ್ಯಾಗ್‌ನಲ್ಲಿ ಇರಲೇ ಬೇಕಾದ 7 ವಸ್ತುಗಳು!

By Web Desk  |  First Published Jul 3, 2019, 10:41 AM IST

ಟ್ರಾವೆಲ್ ಮಾಡುವವರಲ್ಲಿ ಈ ವಸ್ತುಗಳಿರಲೇಬೇಕೆಂದು ಹಲವು ಕಂಪನಿಗಳು ಮಾರ್ಕೆಟಿಂಗ್ ಮಾಡುತ್ತವೆ. ಆದರೆ, ನೀವು ಹವ್ಯಾಸಿ ಟ್ರಾವೆಲರ್ ಆಗಿದ್ದಲ್ಲಿ ಏನು ಬೇಕು, ಏನು ಬೇಡವೆಂಬುದು ಈಗಾಗಲೇ ನಿಮ್ಮ ಅರಿವಿಗೆ ಬಂದಿರುತ್ತದೆ. 


ಟ್ರಾವೆಲ್ ಕಂಫರ್ಟ್ ಆಗಿರಬೇಕೆಂದರೆ ಜೊತೆಗೆ ಲಗೇಜ್ ಕಡಿಮೆ ಇರಬೇಕು. ಆದರೂ ಕೆಲ ವಸ್ತುಗಳು ಬೇಕೇ ಬೇಕಾಗುತ್ತವೆ. ಅವೇನೂ ಭಾರವಾಗುವುದಿಲ್ಲ. ಬದಲಿಗೆ ನಿಮ್ಮ ಟ್ರಾವೆಲನ್ನು ಹೆಚ್ಚು ಆರಾಮಗೊಳಿಸುತ್ತವೆ. ಕನಿಷ್ಠ ಲಗೇಜ್‌ನೊಂದಿಗೆ ಗರಿಷ್ಠ ಕಂಫರ್ಟ್‌ನೊಂದಿಗೆ ಟ್ರಾವೆಲ್ ಮಾಡಲು ನಿಮ್ಮ ಬ್ಯಾಗ್‌ನಲ್ಲಿ ಈ ವಸ್ತುಗಳನ್ನು ಪ್ಯಾಕ್ ಮಾಡಿಕೊಳ್ಳಿ.

1. ದೊಡ್ಡ ಸ್ಕಾರ್ಫ್

Latest Videos

undefined

ಸ್ಕಾರ್ಫ್ ಹೇಗಿರಬೇಕೆಂದರೆ ಬ್ಯಾಗ್‌ಗೆ ಭಾರವಾಗಬಾರದು. ಆದರೆ, ಬಿಚ್ಚಿದರೆ ಬ್ಲಾಂಕೆಟ್ ಆಗಬೇಕು, ಹೊದ್ದರೆ ಶಾಲಾಗಬೇಕು, ಕುತ್ತಿಗೆಗೆ ಸುತ್ತಿಕೊಂಡರೆ ಸ್ಕಾರ್ಫ್ ಆಗಬೇಕು. ಎಲ್ಲ ಬಟ್ಟೆಗೂ ಸೂಟ್ ಆಗಬೇಕು. ಇಂಥ ದೊಡ್ಡ ಸ್ಕಾರ್ಫ್‌ಗಳು ಟ್ರಾವೆಲಿಂಗ್‌ನಲ್ಲಿ ಬಹುಪಯೋಗಿಯಾಗುತ್ತವೆ. ಮಲಗುವಾಗ ಹೊದೆಯಲು, ತಿರುಗಾಡುವಾಗ ಬಿಸಿಲಿನಿಂದ ರಕ್ಷಿಸಲು ಹಾಗೂ ಸ್ಟೈಲ್ ಹೆಚ್ಚಿಸಲು, ಧೂಳು, ಬಿಸಿಲಿನಿಂದ ಕೂದಲು ಹಾಗೂ ಚರ್ಮದ ರಕ್ಷಣೆಗೆ ಆಗುವಂತಿರಬೇಕು. 

2. ಎಸ್ಸೆನ್ಶಿಯಲ್ ಆಯಿಲ್ಸ್

ಟ್ರಾವೆಲಿಂಗ್‌ನಲ್ಲಿ ನಿದ್ದೆ ಸರಿಯಾಗಲಿಲ್ಲವೆಂದರೆ ಯಾವುದನ್ನೂ ಎಂಜಾಯ್ ಮಾಡಲು ಸಾಧ್ಯವಿಲ್ಲ. ಹೀಗಾಗಿ, ತಲೆಗೆ ಎಣ್ಣೆ ಹಿಡಿದುಕೊಳ್ಳಿ. ಇದರಿಂದ ತಲೆನೋವು ದೂರವಿರುತ್ತದಲ್ಲದೆ, ನಿದ್ರೆಯೂ ಚೆನ್ನಾಗಿ ಬರುತ್ತದೆ. ಇದರೊಂದಿಗೆ ಮುಖಕ್ಕೆ ಕೂಡಾ ಮಲಗುವಾಗ ಎಣ್ಣೆ ಮಸಾಜ್ ಮಾಡಿಕೊಂಡರೆ ಸುಸ್ತು ಕಡಿಮೆಯಾಗುವುದಲ್ಲದೆ, ಅಲ್ಲಿ ಇಲ್ಲಿ ಸುತ್ತಾಡುವಾಗ ಕುಳಿತ ಕೊಳೆಯೂ ಹೋಗುತ್ತದೆ. 

ನಟಿ ಶಾನ್ವಿ ಬ್ಯಾಗ್‌ ಸೀಕ್ರೆಟ್ ರಿವೀಲ್ ಮಾಡಿದ ಆ್ಯಂಕರ್ ಅನುಶ್ರೀ!

3. ಐ ಮಾಸ್ಕ್

ಟ್ರಾವೆಲಿಂಗ್‌ನಲ್ಲಿ ರಾತ್ರಿಯೇ ನಿದ್ದೆ ಮಾಡುತ್ತೀರೆಂಬ ನಿಯಮವಿಟ್ಟುಕೊಳ್ಳಲಾಗುವುದಿಲ್ಲ. ಸಮಯ ಸಿಕ್ಕಾಗ ನಿದ್ರಿಸುವುದು ಜಾಣತನ. ಇನ್ನು ರೈಲು, ವಿಮಾನ, ಬಸ್ಸುಗಳಲ್ಲಿ ಹಗಲಾಗಲೀ, ರಾತ್ರಿಯಾಗಲೀ ನಿದ್ರಿಸಲು ಬೆಳಕು, ಗಲಾಟೆ ಎಂದು ಅಡೆತಡೆಗಳಿರುತ್ತವೆ. ರಾತ್ರಿ ಹೊತ್ತೂ ಹತ್ತು ಹಲವು ದೀಪಗಳುರಿದು ಕಣ್ಣು ಕುಕ್ಕುತ್ತವೆ. ಕೋಣೆಯಲ್ಲೇ ಮಲಗಿದರೂ, ನಿಮ್ಮ ಸಂಗಾತಿಗೆ ಓಧಿ ಮಲಗುವ ಅಭ್ಯಾಸವಿರುವುದರಿಂದ ಅವರು ಲೈಟ್ ಆರಿಸಲು ತಡ ಮಾಡಬಹುದು. ಈ ಎಲ್ಲ ಸಂದರ್ಭಕ್ಕೂ ಒಂದೇ ಮದ್ದು ಐ ಮಾಸ್ಕ್. ನಿಮಗೆ ಕಂಫರ್ಟ್ ಎನಿಸುವ ಐ ಮಾಸ್ಕ್ ಕೊಂಡುಕೊಳ್ಳಿ. ತೆಳುವಾದ ಮಾಸ್ಕ್‌ಗಳು ಸರಿಯಾಗಿ ಅವುಗಳ ಕೆಲಸ ನಿಭಾಯಿಸುತ್ತಿಲ್ಲವೆಂದಲ್ಲಿ, ದಪ್ಪಗಿನ ತ್ರಿಡಿ ಪ್ಯಾಡೆಡ್ ಐ ಮಾಸ್ಕ್ ಕೂಡಾ ಲಭ್ಯವಿವೆ.

4. ಟ್ರಾವೆಲ್ ವ್ಯಾಲೆಟ್

ಟ್ರಾವೆಲ್ ವ್ಯಾಲೆಟ್ ಕೆಲಸವನ್ನು ಸುಲಭಗೊಳಿಸುತ್ತದೆ. ಐಡಿ ಕಾರ್ಡ್ಸ್, ಹೋಟೆಲ್ ಬುಕಿಂಗ್ ಡಾಕ್ಯುಮೆಂಟ್ಸ್, ಪಾಸ್ಪೋರ್ಟ್, ಕಾರ್ ಇನ್ಶೂರೆನ್ಸ್ ವಿವರ,  ಇನ್ನಿತರೆ ಡಾಕ್ಯುಮೆಂಟ್‌ಗಳನ್ನಿಟ್ಟುಕೊಳ್ಳಲು ಟ್ರಾವೆಲ್ ವ್ಯಾಲೆಟ್ ಖರೀದಿಸಿ. ಇದರಿಂದ ಅಗತ್ಯ ಬಿದ್ದಲೆಲ್ಲ ಬ್ಯಾಗ್ ತುಂಬಾ ತಡಕಾಡಿ, ಸೆಕ್ಯೂರಿಟಿಗೆ ಕಾಯಿಸಿ, ಬ್ಯಾಗ್‌ನಲ್ಲಿ ಜೋಡಿಸಿಟ್ಟಿದ್ದನ್ನೂ ಹರಡಿಕೊಳ್ಳುವ ತಾಪತ್ರಯ ತಪ್ಪುತ್ತದೆ. ಜೊತೆಗೆ, ಈ ವ್ಯಾಲೆಟ್‌ನಲ್ಲಿ ಎರಡು ಪೆನ್ ಇಟ್ಟುಕೊಳ್ಳುವ ಶಿಸ್ತು ರೂಢಿಸಿಕೊಂಡರೆ ಬಹಳಷ್ಟು ಕೆಲಸ ಸುಲಭಗೊಳಿಸಿಕೊಂಡಂತಾಗುತ್ತದೆ. 

5. ಫೋನ್‌ಗೆ ಡಬಲ್ ಕೇಸ್

ಫೋನ್‌ಗಳು ಕೈನಲ್ಲಿದ್ದಾಗಲೂ ಜಾರುತ್ತವೆ, ಜೇಬಿನಿಂದ ತೆಗೆಯುವಾಗಲೂ ಜಾರುತ್ತವೆ, ಬ್ಯಾಗ್‌ನಲ್ಲಿ ತಡಕಾಡುವಾಗಲೂ ಅದು ಹೇಗೋ ನೆಲಕ್ಕೆ ಬಿದ್ದು ಹೋಗುತ್ತವೆ. ಕರೆ ಮಾಡುವುದಕ್ಕಿಂತಲೂ ಬೀಳುವುದೇ ತಮ್ಮ ಕೆಲಸ ಅಂದುಕೊಂಡಿವೆಯೋ ಏನೋ ಅನಿಸದಿರದು. ಹೀಗಾಗಿ, ಟ್ರಾವೆಲ್ ಮಾಡುವ ಮುನ್ನ ಫೋನ್‌ಗೆ ಡಬಲ್ ಕೇಸ್ ಹಾಕಿಸಿ ರೆಡಿ ಮಾಡಿಟ್ಟುಕೊಳ್ಳಿ. ಬೀಳಿಸಿ ಹೊಸ ಸ್ಕ್ರೀನ್‌ಗೆ ಖರ್ಚು ಮಾಡುವುದಕ್ಕಿಂತ ಕೇಸ್ ಬಹಳ ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ.

ಬ್ಯಾಗಲ್ಲಿ ಏನಿದೆ ಎಂದು ರಹಸ್ಯ ಬಿಚ್ಚಿಟ್ಟ ದೀಪಿಕಾ ಪಡುಕೋಣೆ!

6. ನಾಯ್ಸ್ ಕ್ಯಾನ್ಸಲಿಂಗ್ ಹೆಡ್‌ಫೋನ್ಸ್

ದೂರದ ಪ್ರಯಾಣ ಕಾರು, ಬಸ್ಸು, ವಿಮಾನ, ರೈಲು ಯಾವುದರಲ್ಲೇ ಆಗಲಿ, ಸಾರ್ವಜನಿಕ ಸ್ಥಳಗಳಲ್ಲಿ ಸುತ್ತಲಿನ ಗಲಾಟೆ ಎಲ್ಲ ಮರೆತು ನಿಮ್ಮ ಇಷ್ಟದ ಹಾಡು ಕೇಳಲು, ಮೂವಿ ನೋಡಲು, ಫೋನ್‌ನಲ್ಲಿ ಮಾತನಾಡಲು ಹೀಗೆ ಯಾವುದಕ್ಕೂ ಅಡಚಣೆ ಇರಬಾರದೆಂದರೆ ನಾಯ್ಸ್ ಕ್ಯಾನ್ಸಲಿಂಗ್ ಹೆಡ್‌ಫೋನ್ಸ್ ಅತ್ಯಗತ್ಯ. ಅಲ್ಲದೆ, ವೆಹಿಕಲ್‌ನ ನಿರಂತರ ಗುಯ್‌ಗುಡುವಿಕೆಯಿಂದಲೂ ತಪ್ಪಿಸಿಕೊಳ್ಳಬಹುದು. 

7. ಫ್ಲಿಪ್ ಬೆಲ್ಟ್

ಹೈಕಿಂಗ್, ವಾಟರ್ ಪಾರ್ಕ್ಸ್ ಅಥವಾ ಹೀಗೇ ಸಿಟಿ ಸುತ್ತಲು ಹೋಗುವಾಗ ಬ್ಯಾಗ್  ನೇತು ಹಾಕಿಕೊಂಡು ಹೋಗುವುದಕ್ಕಿಂತಾ, ಫ್ಲಿಪ್ ಬೆಲ್ಟ್‌ಗೆ ತೀರಾ ಅಗತ್ಯವಾದ ವ್ಯಾಲೆಟ್, ಫೋನ್, ಕೀಗಳು, ಕ್ಯಾಮೆರಾ ಹಾಗೂ ಪಾಸ್ಪೋರ್ಟ್ ನೇತು ಹಾಕಿಕೊಂಡು ಹೋಗುವುದು ನಿಮ್ಮನ್ನು ಹೆಚ್ಚು ಕಂಫರ್ಟ್ ಆಗಿರಿಸುತ್ತದೆ. ಅಲ್ಲದೆ, ಈಗೀಗ ವಾಟರ್ ಬಾಟಲ್ ಇಡುವ ಸಾಕೆಟ್ ಕೂಡಾ ಫ್ಲಿಪ್ ಬೆಲ್ಟ್‌ನಲ್ಲಿ ಲಭ್ಯವಿವೆ.

click me!