
ನೀವು ಟ್ರಾವೆಲ್ ಫ್ರೀಕ್ ಆಗಿದ್ದಲ್ಲಿ ಮೊದಲು ಈ ಐದು ಸ್ಥಳಗಳಿಗೆ ಪ್ರವಾಸ ಪ್ಲ್ಯಾನ್ ಮಾಡಿ. ತಡಮಾಡಿದರೆ, ಈ ಪ್ರದೇಶಗಳನ್ನು ಮುಂದೆಂದೂ ನೋಡುವುದು ಸಾಧ್ಯವಾಗದೆ ಹೋಗಬಹುದು. ಏಕೆಂದರೆ, ಮಾಲಿನ್ಯ, ಹವಾಮಾನ ಬದಲಾವಣೆ ಹಾಗೂ ಅಭಿವೃದ್ಧಿ ಕಾರಣಗಳಿಂದ ಅಪಾಯದಂಚಿನಲ್ಲಿರುವ ಸುಂದರ ಪ್ರಾಕೃತಿಕತಾಣಗಳಿವು.
ಮಾಲ್ಡೀವ್ಸ್
1190 ಹವಳ ದ್ವೀಪಗಳ ಸಮೂಹ ಮಾಲ್ಡೀವ್ಸ್, ಮನಮೋಹಕ ಬೀಚ್‌ಗಳು ಹಾಗೂ ಸ್ಕೂಬಾ ಡೈವಿಂಗ್‌ಗೆ ಹೆಸರುವಾಸಿ. ಆದರೆ, ಭೂಮಿ ಮೇಲೆ ಅತಿ ಕೆಳಗಿರುವ ದೇಶ ಇದಾಗಿದೆ. ಅಂದರೆ ಸಮುದ್ರ ಮಟ್ಟಕ್ಕಿಂತ ಕೆಲ ಅಡಿಗಳಷ್ಟೇ ಎತ್ತರದಲ್ಲಿ ದ್ವೀಪವಿದೆ. ಹೀಗಾಗಿ ಹವಾಮಾನ ದಲಾವಣೆಯಿಂದ ಏರುತ್ತಿರುವ ಸಮುದ್ರಮಟ್ಟಕ್ಕೆ ಮಾಲ್ಡೀವ್ಸ್ ಬಲಿಯಾಗುವ ಆತಂಕವಿದೆ.
ಮಜುಲಿ ದ್ವೀಪ
ಅಸ್ಸಾಂನ ಬ್ರಹ್ಮಪುತ್ರ ನದಿಯ ನಡುವೆ ಇರುವ ಈ ದ್ವೀಪ ಹಸಿರು ಸೌಂದರ್ಯದಿಂದ ಕಂಗೊಳಿಸುತ್ತದೆ. ಪ್ರತಿ ಚಳಿಗಾಲದಲ್ಲಿ ಸಾವಿರಾರು ವಲಸೆ ಪಕ್ಷಿಗಳು ಇಲ್ಲಿಗೆ ಬಂದು ದ್ವೀಪದ ಸೌಂದರ್ಯ ಇಮ್ಮಡಿಗೊಳಿಸುತ್ತವೆ. ಆದರೆ, ಮಣ್ಣಿನ ಸವಕಳಿಯಿಂದಾಗಿ ಪ್ರತಿ ವರ್ಷ ಮಜುಲಿ ಕಿರಿದಾಗುತ್ತಲೇ ಹೋಗುತ್ತಿದೆ.
ಡೆಡ್ ಸೀ
ಭೂಮಿ ಮೇಲೆ ನಿಮಗೆ ಈಜು ಬರದಿದ್ದರೂ ಭಯವಿಲ್ಲದೆ ನೀರಿಗೆ ಹಾರಿ ತೇಲಬಹುದಾಗಿದ್ದರೆ, ಅದು ಈ ಡೆಡ್ ಸೀಯಲ್ಲಿ ಮಾತ್ರ. ಸಮುದ್ರದ ನೀರಿಗಿಂತ 10 ಪಟ್ಟು ಹೆಚ್ಚು ಲವಣಾಂಶ ಹೊಂದಿರುವ ಈ ನೀರಿನಲ್ಲಿರುವ ಮಿನರಲ್ಸ್‌ನಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಜೋರ್ಡಾನ್ ಹಾಗೂ ಇಸ್ರೇಲ್ ನಡುವಿರುವ ಡೆಡ್ ಸೀ, ಕಳೆದ 40 ವರ್ಷಗಳಲ್ಲಿ ಮೂರರ 1 ಭಾಗದಷ್ಟು ಕಳೆದುಕೊಂಡು ಕಿರಿದಾಗಿದೆ. ಜೋರ್ಡಾನ್ ನದಿ ವಿಭಜನೆ ಯೋಜನೆಯಿಂದಾಗಿ 80 ಅಡಿ ನೀರು ಇಳಿದಿದೆ.
ಕಿಲಿಮಂಜಾರೋ ಪರ್ವತ
ಆಫ್ರಿಕಾದ ಅತಿ ಎತ್ತರದ ಈ ಪರ್ವತದ ಮೇಲೆ ಟೋಪಿಯಂತಿರುವ ಹಿಮರಾಶಿ ಕಳೆದ ಶತಮಾನದಲ್ಲಿ ಶೇ.80ರಷ್ಟು ಭಾಗ ಕರಗಿ ಹೋಗಿದ್ದು, ಮುಂದಿನ ಕೆಲವು ದಶಕಗಳಲ್ಲಿ ಪೂರ್ತಿ ಕಣ್ಮರೆಯಾಗುವುದೆಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಇದೊಂದು ಪ್ರಖ್ಯಾತ ಟ್ರೆಕಿಂಗ್ ಸ್ಪಾಟ್ ಆಗಿದ್ದು, ನೀವು ಹೋಗುವುದು ತಡ ಮಾಡಿದಲ್ಲಿ ಬೋಳುಗುಡ್ಡ ನೋಡಿ ಹಿಂತಿರುಗಬೇಕಾದೀತು.
ಆರ್ಕ್‌ಟಿಕ್
ಉತ್ತರ ಧ್ರುವವು ಹಿಮಗುಡ್ಡೆಗಳು, ಪೆಂಗ್ವಿನ್‌ಗಳು ಹಾಗೂ ಹಿಮಕರಡಿಗಳಿಗೆ ಖ್ಯಾತವಾಗಿದ್ದು ಎತ್ತಣದಿಂದೆತ್ತ ತಿರುಗಿದರೂ ಹಿಮವನ್ನೇ ಹಾಸಿ ಹೊದ್ದು ತ್ತೊಂದು ಲೋಕದಂತೆ ಭಾಸವಾಗುತ್ತದೆ. ಆದರೆ, ಹೆಚ್ಚುತ್ತಿರುವ ಜಾಗತಿಕತಾಪಮಾನದಿಂದಾಗಿ ಹಿಮಗುಡ್ಡೆಗಳು ಕರಗುತ್ತಿದ್ದು, ಪರಿಸರ ವ್ಯವಸ್ಥೆ ಮೇಲೆ ಬೃಹತ್ ಪರಿಣಾಮ ಬೀರುತ್ತಿದೆ. ಇದು ಇಲ್ಲಿನ ಜೀವರಾಶಿಯನ್ನೂ ಅಪಾಯದಂಚಿಗೆ ಕರೆದೊಯ್ದಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.