
ಮನೆ ಅಂದ್ಮೇಲೆ ಜಿರಳೆ, ಇರುವೆ ಕಾಟ ಇದ್ದೇ ಇರುತ್ತೆ. ಬರೀ ಸಾಮಾನ್ಯ ಜನರ ಮನೆಯಲ್ಲಿ ಮಾತ್ರವಲ್ಲ ಸೆಲೆಬ್ರಿಟಿಗಳ ಮನೆಯಲ್ಲೂ ಇವುಗಳ ಕಾಟ ಕಾಮನ್. ರಾತ್ರಿ ಲೈಟ್ ಆಫ್ ಆದ್ಮೇಲೆ ಜಿರಳೆಗಳ ಓಡಾಟ ಜಾಸ್ತಿಯಾಗುತ್ತೆ. ಅಡುಗೆ ಮನೆಯಲ್ಲಿ ಬಿದ್ದಿರುವ ಆಹಾರ, ನೀರು, ತೇವಾಂಶ, ಕಸ ಇವೆಲ್ಲವೂ ಜಿರಳೆ ಮತ್ತು ಇರುವೆಗಳನ್ನು ಆಕರ್ಷಿಸುತ್ತೆ. ಇವುಗಳಿಂದ ಮುಕ್ತಿ ಪಡೆಯೋದು ಹೇಗೆ ಅಂತ ಬಾಲಿವುಡ್ ನಟಿ ಟ್ವಿಂಕಲ್ ಖನ್ನಾ ಹೇಳಿದ್ದಾರೆ.
ಬಾಲಿವುಡ್ ನಟಿ ಟ್ವಿಂಕಲ್ ಖನ್ನಾ ಟ್ವಿಕ್ ಇಂಡಿಯಾದ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಜಿರಳೆ ಹಾಗೂ ಇರುವೆ ಕಾಟದಿಂದ ತಪ್ಪಿಸಿಕೊಳ್ಳಲು ಯಾವ ಮನೆ ಮದ್ದನ್ನು ಬಳಸಬೇಕು ಎನ್ನುವ ಬಗ್ಗೆ ಸಲಹೆ ನೀಡಿದ್ದಾರೆ. ಜಿರಳೆಗಳನ್ನು ರಾತ್ರಿ ಬರುವ ಅತಿಥಿಗಳು ಅಂತ ಕರೆದಿರುವ ಟ್ವಿಂಕಲ್ ಖನ್ನಾ, ಮನೆಯಲ್ಲೇ ಸ್ಪ್ರೇ ತಯಾರಿಸಿ ಬಳಸುವ ಆರೋಗ್ಯಕರ ಟಿಪ್ಸ್ ನೀಡಿದ್ದಾರೆ.
ನೀವು ಮನೆಯಲ್ಲಿಯೇ ಸಿಗುವ ಸುಲಭ ಪದಾರ್ಥಗಳನ್ನು ಬಳಸಿ ಈ ಸ್ಪ್ರೇ ತಯಾರಿಸಬಹುದು. ಪಲಾವ್ ಎಲೆ, ಲವಂಗ ಮತ್ತು ವಿನೆಗರ್ ಇದಕ್ಕೆ ಅಗತ್ಯವಿರುವ ಪದಾರ್ಥಗಳಾಗಿವೆ. ಈ ಮಿಶ್ರಣವನ್ನು ಅಡುಗೆ ಮನೆಯ ಡ್ರಾಯರ್ಗಳು, ಕ್ಯಾಬಿನೆಟ್ಗಳ ಮೂಲೆಗಳಲ್ಲಿ ಸಿಂಪಡಿಸಿದರೆ ಜಿರಳೆ ಮತ್ತು ಕೆಂಪು ಇರುವೆ ಓಡಿಹೋಗುತ್ತದೆ.
ಸ್ಪ್ರೇ ತಯಾರಿಸೋದು ಹೇಗೆ?
ಮೊದಲು 8–10 ಲವಂಗ ಮತ್ತು 2–3 ಪಲಾವ್ ಎಲೆ ತೆಗೆದುಕೊಂಡು ಸ್ವಲ್ಪ ಜಜ್ಜಿ. ನಂತರ ಒಂದು ಕಪ್ ನೀರು ಮತ್ತು ಒಂದು ಕಪ್ ವಿನೆಗರ್ ತೆಗೆದುಕೊಂಡು, ಅದಕ್ಕೆ ಜಜ್ಜಿದ ಲವಂಗ ಮತ್ತು ಪಲಾವ್ ಎಲೆ ಹಾಕಿ ಕುದಿಸಿ. ಮಿಶ್ರಣ ಕುದಿದ ನಂತರ ಅದನ್ನು ಚೆನ್ನಾಗಿ ಸೋಸಿ, ತಣ್ಣಗಾದ ಮೇಲೆ ಸ್ಪ್ರೇ ಬಾಟಲಿಗೆ ಹಾಕಿ. ಜಿರಳೆ ಮತ್ತು ಇರುವೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ಜಾಗಗಳಲ್ಲಿ ಇದನ್ನು ಸಿಂಪಡಿಸಬಹುದು.
ಈ ಮನೆಮದ್ದು ಜಿರಳೆ ಅಥವಾ ಇರುವೆಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎನ್ನುತ್ತಾರೆ ತಜ್ಞರು. ಇಂತಹ ಮನೆಯಲ್ಲೇ ತಯಾರಿಸುವ ಸ್ಪ್ರೇಗಳ ವಾಸನೆಗೆ ಕೆಲವೊಮ್ಮೆ ಕೀಟಗಳು ದೂರ ಓಡಬಹುದು. ಆದರೆ ಸಮಸ್ಯೆ ಪದೇಪದೇ ಕಾಣಿಸಿಕೊಂಡರೆ ಇದು ಪೆಸ್ಟ್ ಕಂಟ್ರೋಲ್ಗೆ ಪರ್ಯಾಯವಲ್ಲ. ಇನ್ನು ಇಂತಹ ಯಾವುದೇ ಮಿಶ್ರಣವನ್ನು ಆಹಾರ, ಅಡುಗೆ ಪಾತ್ರೆಗಳು ಅಥವಾ ಆಹಾರದ ಸಂಪರ್ಕಕ್ಕೆ ಬರುವ ಜಾಗಗಳಲ್ಲಿ ನೇರವಾಗಿ ಸಿಂಪಡಿಸಬಾರದು.
ಕಿಚನ್ ಕ್ಲೀನ್ ಆಗಿದ್ದರೆ ಕೀಟಗಳ ಕಾಟವೂ ಕಡಿಮೆ
ಜಿರಳೆ, ಇರುವೆ ಸೇರಿದಂತೆ ಹಲವು ಕೀಟಗಳು ಆಹಾರದ ತುಣುಕು, ನೀರು, ತೇವಾಂಶ ಮತ್ತು ಕಸದತ್ತ ಆಕರ್ಷಿತವಾಗುತ್ತವೆ. ಹಾಗಾಗಿ ಕಿಚನ್ ಕೌಂಟರ್ ಮತ್ತು ಅಡುಗೆ ಮಾಡುವ ಜಾಗವನ್ನು ನಿಯಮಿತವಾಗಿ ಸ್ವಚ್ಛವಾಗಿಡಿ. ಬಳಸಿದ ಪಾತ್ರೆಗಳನ್ನು ಚೆನ್ನಾಗಿ ತೊಳೆಯಿರಿ. ಸಿಂಕ್ ಬಳಸಿದ ನಂತರ ಒಣಗಿಸಿಡಿ. ಆಹಾರ ಪದಾರ್ಥಗಳನ್ನು ಯಾವಾಗಲೂ ಮುಚ್ಚಿದ ಡಬ್ಬಿಗಳಲ್ಲೇ ಇಡಿ. ಪ್ರತಿದಿನ ಕಸ ಹೊರಗೆ ಹಾಕಿ. ಕಿಚನ್ನಲ್ಲಿ ಆಹಾರದ ತುಣುಕುಗಳು ಅಥವಾ ನೀರು ಹಾಗೆಯೇ ಉಳಿಯದಂತೆ ನೋಡಿಕೊಳ್ಳಿ. ಸ್ಪಾಂಜ್ ಮತ್ತು ಬಟ್ಟೆಗಳನ್ನು ಆಗಾಗ ಬದಲಾಯಿಸಿ. ಕೀಟಗಳು ಒಳಗೆ ಬರಬಹುದಾದ ಬಿರುಕು ಮತ್ತು ಖಾಲಿ ಜಾಗಗಳಿದ್ದರೆ ಅವುಗಳನ್ನು ಮುಚ್ಚಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.