ದಕ್ಷಿಣ ಭಾರತದ ಮನೆಮನೆಗಳಲ್ಲಿ ಇಡ್ಲಿ ಅತ್ಯಂತ ಜನಪ್ರಿಯ ಮತ್ತು ಆರೋಗ್ಯಕರ ಉಪಾಹಾರ. ಮಲ್ಲಿಗೆಯಂತಹ ಮೃದುವಾದ ಇಡ್ಲಿ ಸವಿಯಲು ಎಲ್ಲರಿಗೂ ಇಷ್ಟ. ಆದರೆ ಇಡ್ಲಿ ಮಾಡುವಾಗ ಕೆಲವು ಗೃಹಿಣಿಯರಿಗೆ ಎದುರಾಗುವ ಸಮಸ್ಯೆಯೆಂದರೆ ಅದು ಇಡ್ಲಿ ಪ್ಲೇಟ್‌ಗೆ ಅಂಟಿಕೊಳ್ಳುವುದು. ಕೆಲವೊಮ್ಮೆ ಹಿಟ್ಟು ಸರಿಯಾಗಿ ಹುದುಗುವುದಿಲ್ಲ ಎಂಬ ಚಿಂತೆಯಾದರೆ, ಇನ್ನು ಕೆಲವೊಮ್ಮೆ ಹಿಟ್ಟು ಅತಿಯಾಗಿ ಹುಳಿಯಾಯಿತಲ್ಲ ಎಂಬ ಬೇಜಾರು. ಆದರೆ ಹಿಟ್ಟಿನ ಹದ, ರುಚಿ ಎಲ್ಲವೂ ಸರಿಯಾಗಿದ್ದರೂ, ಇಡ್ಲಿ ಬೆಂದ ನಂತರ ಅದನ್ನು ಪ್ಲೇಟ್‌ನಿಂದ ತೆಗೆಯುವಾಗ ಅದು ಕಿತ್ತುಹೋದರೆ ಇಡೀ ಉಪಾಹಾರದ ಅಂದವೇ ಕೆಡುತ್ತದೆ.
ಆದರೆ ಚಿಂತಿಸಬೇಡಿ..ಇಡ್ಲಿ ಪ್ಲೇಟ್‌ಗೆ ಅಂಟದಂತೆ ಬರಲು ಇಲ್ಲಿದೆ ಒಂದು ಅದ್ಭುತವಾದ ಕಿಚನ್ ಟಿಪ್ಸ್.
ಇಡ್ಲಿ ಬೆಂದ ತಕ್ಷಣ ಅದನ್ನು ತೆಗೆಯಲು ಅವಸರ ಮಾಡಬೇಡಿ. ಇಡ್ಲಿ ಪಾತ್ರೆಯಿಂದ ಸ್ಟ್ಯಾಂಡ್ ಅನ್ನು ಹೊರತೆಗೆದ ನಂತರ, ಮೊದಲು ಪ್ಲೇಟ್‌ಗಳನ್ನು ಬೇರ್ಪಡಿಸಿ. ನಂತರ ಇಡ್ಲಿಗಳ ಅಂಚಿನಲ್ಲಿ ಮತ್ತು ಇಡ್ಲಿಯ ಮೇಲೆ ಸ್ವಲ್ಪ ತಣ್ಣೀರನ್ನು ಚಿಮುಕಿಸಿ. ತಟ್ಟೆಯಲ್ಲಿ ಹೆಚ್ಚಾದ ನೀರನ್ನು ಪಕ್ಕಕ್ಕೆ ಬಗ್ಗಿಸಿ ತೆಗೆಯಿರಿ. ಹೀಗೆ ನೀರು ಚಿಮುಕಿಸುವುದರಿಂದ ಇಡ್ಲಿ ಮತ್ತು ತಟ್ಟೆಯ ನಡುವಿನ ಬಿಗಿತ ಸಡಿಲಗೊಳ್ಳುತ್ತದೆ. ಕೇವಲ ಒಂದು ನಿಮಿಷ ಕಾಯ್ದು ನಂತರ ಇಡ್ಲಿ ತೆಗೆದರೆ, ಅದು ಪ್ಲೇಟ್‌ಗೆ ಅಂಟದೆ ಫರ್ಫೆಕ್ಟ್ ಆಗಿ ಹೊರಬರುತ್ತದೆ.
ಚಮಚದ ಬಳಕೆ
ಇಡ್ಲಿ ತೆಗೆಯಲು ನೀವು ಚಮಚವನ್ನು ಬಳಸುವಾಗ, ಚಮಚದ ಹಿಂಭಾಗವನ್ನು ಒಮ್ಮೆ ನೀರಿನಲ್ಲಿ ಅದ್ದಿ. ಒದ್ದೆಯಾದ ಚಮಚವನ್ನು ಇಡ್ಲಿಯ ಅಂಚಿನಿಂದ ನಿಧಾನವಾಗಿ ಒಳಸೇರಿಸಿ ತೆಗೆದರೆ, ಇಡ್ಲಿ ಚೂರು ಆಗುವುದಿಲ್ಲ.
ಮುನ್ನೆಚ್ಚರಿಕಾ ಕ್ರಮಗಳು
ಎಣ್ಣೆ ಸವರಲು ಮರೆಯಬೇಡಿ: ಇಡ್ಲಿ ಹಿಟ್ಟನ್ನು ತಟ್ಟೆಗೆ ಹಾಕುವ ಮೊದಲು, ಪ್ಲೇಟ್‌ಗೆ ಸ್ವಲ್ಪ ಎಣ್ಣೆ ಅಥವಾ ತುಪ್ಪವನ್ನು ಸವರಿ. ಇದು ಇಡ್ಲಿ ಅಂಟದಂತೆ ತಡೆಯಲು ಮೊದಲ ಹಂತವಾಗಿದೆ.
ಬಟ್ಟೆಯ ಬಳಕೆ: ಒಂದು ವೇಳೆ ನೀವು ಇಡ್ಲಿ ಬಟ್ಟೆ ಬಳಸಿ ಇಡ್ಲಿ ಮಾಡುವುದಾದರೆ, ಇಡ್ಲಿ ಬೆಂದ ಮೇಲೆ ಬಟ್ಟೆಯ ಹಿಂಭಾಗಕ್ಕೆ ಸ್ವಲ್ಪ ನೀರು ಚಿಮುಕಿಸಿ ತೆಗೆದರೆ ಇಡ್ಲಿ ಸುಲಭವಾಗಿ ಬರುತ್ತದೆ.
ಸರಿಯಾದ ಉರಿ: ಇಡ್ಲಿಯನ್ನು ಅತಿಯಾಗಿ ಬೇಯಿಸಬೇಡಿ. ಅತಿ ಹೆಚ್ಚು ಹೊತ್ತು ಬೇಯಿಸಿದರೆ ಅದು ಗಟ್ಟಿಯಾಗಿ ತಟ್ಟೆಗೆ ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ.
ಈ ಸಣ್ಣ ಬದಲಾವಣೆಗಳು ಅಥವಾ ಟಿಪ್ಸ್‌ಗಳನ್ನು ನಿಮ್ಮ ಅಡುಗೆ ಮನೆಯಲ್ಲಿ ಅಳವಡಿಸಿಕೊಂಡರೆ, ನಿಮ್ಮ ಮನೆಯ ಇಡ್ಲಿಗಳೂ ಹೋಟೆಲ್ ಶೈಲಿಯಲ್ಲೇ ಸುಂದರವಾಗಿ ಮತ್ತು ಮೃದುವಾಗಿ ಮೂಡಿಬರುತ್ತವೆ.
ಪ್ಲೇಟ್ ಸ್ವಚ್ಛತೆ: ಪ್ರತಿ ಬಾರಿ ಇಡ್ಲಿ ಮಾಡಿದ ನಂತರ ಪ್ಲೇಟ್‌ಗಳನ್ನು ಚೆನ್ನಾಗಿ ಸ್ಕ್ರಬ್ ಮಾಡಿ ತೊಳೆಯಿರಿ. ಹಳೆಯ ಇಡ್ಲಿಯ ಅಂಶ ತಟ್ಟೆಗೆ ಅಂಟಿಕೊಂಡಿದ್ದರೆ, ಮುಂದಿನ ಬಾರಿ ಮಾಡುವಾಗ ಇಡ್ಲಿಗಳು ಅಲ್ಲಿಯೇ ಅಂಟಿಕೊಳ್ಳುತ್ತವೆ.
ನೀರಿನ ಪ್ರಮಾಣ: ಇಡ್ಲಿ ಪಾತ್ರೆಯಲ್ಲಿ ನೀರು ತುಂಬಾ ಕಡಿಮೆ ಇರಬಾರದು. ನೀರು ಕಡಿಮೆಯಾದರೆ ತಳದ ತಟ್ಟೆ ಅತಿಯಾಗಿ ಬಿಸಿಯಾಗಿ ಇಡ್ಲಿ ತಳ ಹಿಡಿಯಬಹುದು ಅಥವಾ ಸೀದ ವಾಸನೆ ಬರಬಹುದು.
ಇಲ್ಲಿದೆ ನೋಡಿ ವಿಡಿಯೋ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.