
ಇಂದು ಭಾನುವಾರ. ಸಾಮಾನ್ಯವಾಗಿ ಎಲ್ಲ ಕೆಲಸಗಳಿಗೆ ರಜೆ, ಮನೆಯಲ್ಲಿ ಕುಟುಂಬ ಸದಸ್ಯರೆಲ್ಲ ಸೇರಿ ಒಟ್ಟಿಗೆ ಕಳೆಯುವುದು ಸಾಮಾನ್ಯ. ಭಾನುವಾರದ ಅಡುಗೆಯೂ ಎಂದಿನ ದಿನಕ್ಕಿಂತ ವಿಶೇಷವಾಗಿರುತ್ತದೆ. ದಿನನಿತ್ಯ ಆಫೀಸ್, ಕೆಲಸದ ಒತ್ತಡದಲ್ಲಿ ಗಡಿಬಿಡಿಯಲ್ಲಿ ಅಡುಗೆ ಮಾಡಲಾಗುತ್ತೆ. ಆದರೆ ಭಾನುವಾರ ರಜೆ ಇರುವುದರಿಂದ ಮನೆಯಲ್ಲಿ ಮಕ್ಕಳಿಗೆ ವಿಶೇಷವಾಗಿ ಏನಾದರೂ ತಿಂಡಿ ಮಾಡಬೇಕು ಅನಿಸುತ್ತೆ. ನಿಮಗೂ ಹಾಗೆ ಅನಿಸಿದರೆ ಇಂದೇ ಬಾಯಲ್ಲಿಟ್ಟರೆ ಕರಗುವಂತಹ ಪಡ್ಡು ತಯಾರಿಸಿ, ಪಡ್ಡು ತಯಾರಿಸುವ ವಿಧಾನ ಸ್ಟೆಪ್ ಬೈ ಸ್ಟೆಪ್ ಕೆಳಗೆ ತಿಳಿಸಲಾಗಿದೆ.
ಮನೆಯಲ್ಲೇ ಮೊಸರು ಇದ್ರೆ ಸಾಕು ರುಚಿಯಾದ ಪಡ್ಡು ತಯಾರಿಸಬಹುದು. ಇದಕ್ಕೆ ಹೆಚ್ಚಿನ ಅಡುಗೆ ಸಾಮಗ್ರಿಗಳು ಬೇಕಾಗಿಲ್ಲ, ಇದನ್ನ ತಯಾರಿಸಲು ಹೆಚ್ಚು ಸಮಯನೂ ಬೇಕಿಲ್ಲ. ಮನೆಯಲ್ಲಿ ರವೆ, ಮೊಸರು ಕಲೆಸಿ ತಯಾರಿಸಿದ ಹಿಟ್ಟಿಗೆ ನಿಮಗೆ ಇಷ್ಟವಾಗುವ ತರಕಾರಿ, ಸೊಪ್ಪು, ಮಸಾಲೆ ಪದಾರ್ಥ ಸೇರಿಸಿದರೆ ಸಾಕು ರುಚಿಕರವಾಗಿ, ಬಾಯಲ್ಲಿ ಕರಗುವಷ್ಟು ಮೃದುವಾಗಿರುವ ಪಡ್ಡು ರೆಡಿಯಾಗುತ್ತೆ.
ಕಡಿಮೆ ಎಣ್ಣೆ ಬಳಸಿ ಬೇಯಿಸುವುದರಿಂದ ಪಡ್ಡು ಹೊರಭಾಗದಲ್ಲಿ ಗರಿಗರಿಯಾಗಿದ್ರೆ ಒಳಭಾಗದಲ್ಲಿ ಮೃದುವಾಗಿರುತ್ತದೆ. ಮನೆಯಲ್ಲೇ ಸುಲಭವಾಗಿ ಈ ರುಚಿ ರುಚಿಯಾದ ಪಡ್ಡು ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯೋಣ.
ತಯಾರಿಸುವ ವಿಧಾನ:
ಮೊದಲು ಒಂದು ದೊಡ್ಡ ಬಟ್ಟಲಿಗೆ ಒಂದು ಕಪ್ ರವೆ, ಅರ್ಧ ಕಪ್ ಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತಾ ದಪ್ಪವಾದ, ಮೃದು ಆಗುವವರೆಗೆ ಹಿಟ್ಟನ್ನು ಕಲೆಸಿಕೊಳ್ಳಿ. ಆದರೆ ಹಿಟ್ಟು ತುಂಬಾ ತೆಳುವಾಗದಂತೆ ನೋಡಿಕೊಳ್ಳಿ. ಸರಿಯಾದ ಹದದಲ್ಲಿದ್ದರೆ ಮಾತ್ರ ಪಡ್ಡು ಚೆನ್ನಾಗಿ ಆಕಾರದಲ್ಲಿ ಬರುತ್ತದೆ.
ರವೆ ಮೊಸರು ನೀರಿನೊಂದಿಗೆ ಚೆನ್ನಾಗಿ ಕಲೆಸಿದ ಚೆನ್ನಾಗಿ ಹೀರಿಕೊಳ್ಳಲು ಹಿಟ್ಟನ್ನ ಸ್ವಲ್ಪ ಸಮಯ ಹಾಗೆ ಬಿಡಿ. ಸ್ವಲ್ಪ ಹೊತ್ತಿನ ಬಳಿಕ. ಹಿಟ್ಟು ತುಂಬಾ ಗಟ್ಟಿಯಾಗಿದ್ದರೆ, ಬೇಕಾಗುವಷ್ಟು ನೀರು ಸೇರಿಸಿ ಹದ ಮಾಡಿಕೊಳ್ಳಿ.
ಈಗ ಹದವಾದ ಹಿಟ್ಟಿಗೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಕ್ಯಾರೆಟ್, ಕ್ಯಾಪ್ಸಿಕಂ ಮತ್ತು ಟೊಮೆಟೊ ಸೇರಿಸಿ. ಮನೆಯಲ್ಲಿರುವ ಯಾವುದೇ ತರಕಾರಿ ಸೊಪ್ಪು ಸೇರಿಸಿದರೂ ಅಡ್ಡಿಯಿಲ್ಲ. ನಿಮಗೆ ಇಷ್ಟವಾದ ತರಕಾರಿ ಸೇರಿಸಬಹುದು. ಬಳಿಕ ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಎಲ್ಲವನ್ನೂ ಚೆನ್ನಾಗಿ ಕಲೆಸಿ ಅಥವಾ ಮಿಕ್ಸ್ ಮಾಡಿ ತರಕಾರಿಗಳನ್ನು ಸೇರಿಸುವುದರಿಂದ ಪಡ್ಡು ನೋಡಲು ಬಣ್ಣದಿಂದ, ಆಕರ್ಷಕವಾಗಿ ಕಾಣುವುದರ ಜೊತೆಗೆ ರುಚಿಯೂ ಹೆಚ್ಚುತ್ತದೆ. ಮಕ್ಕಳು ಬಿಳಿ ಬಣ್ಣದ ಪಡ್ಡು ತಿನ್ನುವುದಕ್ಕಿಂತ, ತರಕಾರಿ, ಸೊಪ್ಪು ಬೆರೆಸಿದ ಪಡ್ಡು ಹಸಿರಾಗಿ ಬಣ್ಣದಲ್ಲಿ ಕಾಣುವುದರಿಂದ ತಿನ್ನಲು ಇಷ್ಟಪಡ್ತಾರೆ. ಅದರಲ್ಲೂ ಮಕ್ಕಳಿಗಾಗಿ ಪಡ್ಡು ತಯಾರಿಸಿದರೆ ಹಸಿಮೆಣಸಿನಕಾಯಿ ಕಡಿಮೆ ಬಳಸಿ.
ಈಗ ಪಡ್ಡು ರುಚಿ, ಸುವಾಸನೆ ಪರಿಮಳೆ ಹೆಚ್ಚಿಸಲು ಒಗ್ಗರಣೆ ಹಾಕಬೇಕು. ಇದಕ್ಕಾಗಿ ಸಣ್ಣ ಬಾಣಲೆಯಲ್ಲಿ ಸ್ವಲ್ಪ ಸಾಸಿವೆ ಎಣ್ಣೆ ಹಾಕಿ ಬಿಸಿಮಾಡಿ. ನಂತರ ಅದಕ್ಕೆ ಚಿಟಿಕೆ ಇಂಗು, ಕರಿಬೇವು ಹಾಕಿ.
ಸಾಸಿವೆ ಸಿಡಿಯಲು ಆರಂಭಿಸಿದಾಗ ಅಥವಾ ಕರಿಬೇವಿನ ಪರಿಮಳ ಬಂದ ಕೂಡಲೇ ಗ್ಯಾಸ್ ಆಫ್ ಮಾಡಿ. ಈ ಒಗ್ಗರಣೆಯನ್ನು ಸಿದ್ಧಪಡಿಸಿದ ಹಿಟ್ಟಿಗೆ ಹಾಕಿ ಚೆನ್ನಾಗಿ ಕಲೆಸಿ. ಇದರಿಂದ ರವೆ ಪಡ್ಡು ವಿಶೇಷವಾಗಿ ದಕ್ಷಿಣ ಭಾರತೀಯ ರುಚಿ ಸಿಗುತ್ತದೆ.
ಪಡ್ಡು ಮಾಡುವ ಸ್ವಲ್ಪ ಮುನ್ನ ಹಿಟ್ಟಿಗೆ ಒಂದು ಟೀಸ್ಪೂನ್ ಫ್ರೂಟ್ ಸಾಲ್ಟ್ ಹಾಕಿ ಅದರ ಮೇಲೆ ಸ್ವಲ್ಪ ನೀರು ಹಾಕಿ ನಿಧಾನವಾಗಿ ಕಲೆಸಿ. ಫ್ರೂಟ್ ಸಾಲ್ಟ್ ಹಾಕಿದ ಬಳಿಕ ಹಿಟ್ಟನ್ನು ಹೆಚ್ಚು ಸಮಯ ಹಾಗೆಯೇ ಇಡಬಾರದು. ಕೂಡಲೇ ಪಡ್ಡು ಮಾಡಬೇಕು. ಇದರಿಂದ ಪಡ್ಡು ಹಗುರವಾಗಿ ಮತ್ತು ಸ್ಪಂಜಿನಂತೆ ಮೃದುವಾಗಿ ಬರುತ್ತದೆ. ಹಿಟ್ಟನ್ನು ಹೆಚ್ಚು ಬಲವಾಗಿ ಅಥವಾ ವೇಗವಾಗಿ ಕಲಸುವ ಅಗತ್ಯವಿಲ್ಲ.
ಪಡ್ಡಿನ ಬಾಣಲೆಯನ್ನು ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ಪ್ರತಿಯೊಂದು ಗುಳಿಗೂ ಸ್ವಲ್ಪ ಎಣ್ಣೆ ಸವರಿ, ಚಮಚದ ಸಹಾಯದಿಂದ ಸಿದ್ಧಪಡಿಸಿದ ಹಿಟ್ಟನ್ನು ಹಾಕಿ. ಗುಳಿಯನ್ನು ಸಂಪೂರ್ಣ ಮೇಲ್ಭಾಗದವರೆಗೆ ತುಂಬಬೇಡಿ. ಬೇಯುವಾಗ ಹಿಟ್ಟು ಉಬ್ಬುವುದರಿಂದ ಹೊರಗೆ ಬರುವ ಸಾಧ್ಯತೆ ಇರುತ್ತದೆ.
ಬಾಣಲೆಯನ್ನು ಮುಚ್ಚಿ ಕಡಿಮೆ ಅಥವಾ ಮಧ್ಯಮ ಉರಿಯಲ್ಲಿ ಸುಮಾರು 7ರಿಂದ 8 ನಿಮಿಷ ಬೇಯಿಸಿ. ಕೆಳಭಾಗ ಹೊಂಬಣ್ಣಕ್ಕೆ ತಿರುಗಿ ಅಂಚುಗಳು ಸುಲಭವಾಗಿ ಬಿಡಲು ಆರಂಭಿಸಿದಾಗ ಪಡ್ಡನ್ನು ನಿಧಾನವಾಗಿ ತಿರುಗಿಸಿ. ಮತ್ತೊಂದು ಬದಿಯನ್ನೂ ಕೆಲವು ನಿಮಿಷ ಬೇಯಿಸಿ. ಹೀಗೆ ಎರಡೂ ಬದಿಗಳು ತಿಳಿ ಹೊಂಬಣ್ಣಕ್ಕೆ ಬಂದು ಚೆನ್ನಾಗಿ ಬೆಂದ ಬಳಿಕ ಪಡ್ಡನ್ನು ತಟ್ಟೆಗೆ ತೆಗೆದುಕೊಳ್ಳಿ.
ಈಗ ಗರಿಗರಿ ಪಡ್ಡು ರೆಡಿ. ಪಡ್ಡು ಬಿಸಿಬಿಸಿಯಾಗಿದ್ದಾಗಲೇ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಹಸಿರು ಚಟ್ನಿ, ತೆಂಗಿನಕಾಯಿ ಚಟ್ನಿ ಅಥವಾ ಟೊಮೆಟೊ ಕೆಚಪ್‌ನೊಂದಿಗೆ ಸವಿಯಬಹುದು. ಬೆಳಗಿನ ಉಪಾಹಾರಕ್ಕೆ ಮಾತ್ರವಲ್ಲದೆ, ಸಂಜೆ ಚಹಾದೊಂದಿಗೆ ತಿನ್ನಲು ಕೂಡ ಈ ಪಡ್ಡು ಉತ್ತಮ ತಿಂಡಿಯಾಗಿದೆ. ಅತ್ಯಂತ ಕಡಿಮೆ ಪದಾರ್ಥ ಬಳಸಿ ಸುಲಭವಾಗಿ ತಯಾರಿಸಬಹುದಾದ ಈ ಮೃದುವಾದ ಪಡ್ಡನ್ನು ಇಂದೇ ಮಾಡಿ ನೋಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.