
ಅಡುಗೆಮನೆಯಲ್ಲಿ ಹಾಲು, ಚಹಾ ಅಥವಾ ಇತರ ಆಹಾರ ಪದಾರ್ಥಗಳನ್ನು ಬಿಸಿ ಮಾಡುವಾಗ ತಳ ಹಿಡಿದು ಪಾತ್ರೆಗಳು ಕಪ್ಪಾಗುವುದು ಸಾಮಾನ್ಯ ಸಮಸ್ಯೆ. ಇಂತಹ ಮೊಂಡು ಕಲೆ ತೊಳೆಯಲು ಗಟ್ಟಿಯಾಗಿ ಸ್ಕ್ರಬ್ ಮಾಡುವುದರಿಂದ ಕೈಗಳು ನೋಯುವುದಲ್ಲದೆ, ಪಾತ್ರೆಗಳ ಮೇಲ್ಮೈಯ ಮೇಲೆಯೂ ಗೀರುಗಳು ಮೂಡುತ್ತವೆ. ಈ ಕಲೆ ತೆಗೆಯಲು ದೀಪಾವಳಿಗೆ ಬಳಸಿದ ಹಳೆಯ ಮಣ್ಣಿನ ದೀಪ ಬಳಸುವ ಸಲಹೆ ಕೇಳಿಬರುತ್ತವೆಯಾದರೂ, ಈ ವಿಧಾನವು ಎಲ್ಲಾ ರೀತಿಯ ಪಾತ್ರೆಗಳಿಗೆ ಸೂಕ್ತವಲ್ಲ, ಹಾಗಾದರೆ ಸ್ವಚ್ಛಗೊಳಿಸುವುದೇಗೆ? ಇಲ್ಲಿದೆ ಸಂಪೂರ್ಣ ವಿವರ.
ಹಳೆ ಮಣ್ಣಿನ ದೀಪ, ಅಡಿಗೆ ಸೋಡಾ, ನಿಂಬೆ ರಸ ಹಾಗೂ ಶಾಂಪೂ ಬಳಸಿ ಪಾತ್ರೆ ಸ್ವಚ್ಛಗೊಳಿಸುವ ವಿಧಾನಗಳು ಪ್ರಚಲಿತದಲ್ಲಿವೆ. ಆದರೆ, ಒಣಗಿದ ಜೇಡಿಮಣ್ಣಿನ ದೀಪದಿಂದ ಪಾತ್ರೆಗಳನ್ನು ಉಜ್ಜಿದಾಗ ಅದರ ಒರಟಾದ ಕಣಗಳು ಪಾತ್ರೆಗಳ ಮೇಲ್ಮೈಯನ್ನು ಗೀಚುತ್ತವೆ. ವಿಶೇಷವಾಗಿ ನಾನ್-ಸ್ಟಿಕ್ ಲೇಪನ ಇರುವ ಪಾತ್ರೆಗಳಿಗೆ ಈ ವಿಧಾನ ತೀವ್ರ ಹಾನಿ ಉಂಟುಮಾಡುತ್ತದೆ. ಜೊತೆಗೆ, ಮಣ್ಣಿನ ದೀಪ ಒಣಗಿಸುವಾಗ ಏಳುವ ಧೂಳು ಮತ್ತು ಸಣ್ಣ ಕಣಗಳು ಕಣ್ಣು ಅಥವಾ ಉಸಿರಾಟದ ತೊಂದರೆಗೆ ಕಾರಣವಾಗಬಹುದು.
ಮಣ್ಣಿನ ಪುಡಿಗಿಂತ ಅಡಿಗೆ ಸೋಡಾ ಬಳಸುವುದು ಅತ್ಯಂತ ಸುರಕ್ಷಿತ ಹಾಗೂ ಪರಿಣಾಮಕಾರಿ ಆಗಿದೆ. ಮೊದಲು ಪಾತ್ರೆಯಲ್ಲಿ ಉಳಿದಿರುವ ಆಹಾರದ ಭಾಗವನ್ನು ತೆಗೆದು, ಬೆಚ್ಚಗಿನ ನೀರಿನಿಂದ ತೊಳೆಯಿರಿ. ತದನಂತರ ಅಡಿಗೆ ಸೋಡಾ ಮತ್ತು ಸ್ವಲ್ಪ ನೀರು ಸೇರಿಸಿ ಮಾಡಿದ ಪೇಸ್ಟ್ ಅನ್ನು ಕಲೆ ಇರುವ ಜಾಗಕ್ಕೆ ಹಚ್ಚಿ, ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಡಿ. ಇದಾದ ನಂತರ ಮೃದುವಾದ ಸ್ಪಂಜಿನಿಂದ ನಿಧಾನವಾಗಿ ಉಜ್ಜಿ ಸ್ವಚ್ಛಗೊಳಿಸಿ. ಕಲೆಗಳು ತೀವ್ರವಾಗಿದ್ದರೆ, ಪಾತ್ರೆಗೆ ನೀರು ಸುರಿದು ಸ್ವಲ್ಪ ಸಮಯ ಬಿಸಿ ಮಾಡಿ, ನಂತರ ತಣ್ಣಗಾದ ಮೇಲೆ ತೊಳೆಯಿರಿ. ಕಲೆ ಸಂಪೂರ್ಣವಾಗಿ ಹೋಗದಿದ್ದರೆ ಬಲವಾಗಿ ಉಜ್ಜದೆ ಪಾತ್ರೆಯ ಮಾದರಿಗೆ ಸೂಕ್ತವಾದ ಸ್ವಚ್ಛತಾ ವಿಧಾನ ಅನುಸರಿಸಿ.
ಪಾತ್ರೆಯ ಮಾದರಿಗೆ ತಕ್ಕ ಆರೈಕೆ; ನಿಂಬೆ ರಸ, ಅಡಿಗೆ ಸೋಡಾ ಅಥವಾ ಶಾಂಪೂ ಮಿಶ್ರಣವು ಎಲ್ಲ ಪಾತ್ರೆಗಳಿಗೂ ಸಂಪೂರ್ಣ ಸುರಕ್ಷಿತವಲ್ಲ. ಅಲ್ಯೂಮಿನಿಯಂ, ನಾನ್-ಸ್ಟಿಕ್ ಹಾಗೂ ಲೇಪಿತ ಪಾತ್ರೆಗಳಿಗೆ ವಿಶೇಷ ಮುನ್ನೆಚ್ಚರಿಕೆ ಅಗತ್ಯ. ಅಲ್ಲದೇ ಸ್ವಚ್ಛಗೊಳಿಸಿದ ನಂತರ ಪಾತ್ರೆ ಶುದ್ಧ ನೀರಿನಿಂದ ಚೆನ್ನಾಗಿ ತೊಳೆದು ಒಣಗಿಸಬೇಕು. ಅದರಂತೆ ಹಳೆಯ ಮಣ್ಣಿನ ದೀಪಗಳನ್ನು ತಕ್ಷಣ ಎಸೆಯುವ ಅಥವಾ ಪಾತ್ರೆ ತೊಳೆಯಲು ಬಳಸಿ ಹಾಳುಮಾಡುವ ಬದಲು, ಮನೆ ಅಲಂಕಾರ ಅಥವಾ ಇತರ ಸೃಜನಶೀಲ ಕೆಲಸಗಳಿಗೆ ಮರುಬಳಕೆ ಮಾಡುವುದು ಸೂಕ್ತ. ಎಲ್ಲಕ್ಕಿಂತ ಮೊದಲು ಪಾತ್ರೆ ಪ್ರಕಾರವನ್ನು ಅರಿತು ಸರಿಯಾದ ಸ್ವಚ್ಛತಾ ವಿಧಾನವನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಪಾತ್ರೆಗಳಿಗೆ ಹಾನಿಯಾಗದಂತೆ ಅಡುಗೆಮನೆಯನ್ನು ಸುಲಭವಾಗಿ ನಿರ್ವಹಿಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.