
ಅಡುಗೆ ಮಾಡುವಾಗ ಕೆಲವೊಮ್ಮೆ ಸಾರು, ಸಾಂಬಾರ್ ಅಥವಾ ಗ್ರೇವಿ ನಿರೀಕ್ಷೆಗಿಂತ ಹೆಚ್ಚು ನೀರಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಹೆಚ್ಚಿನವರು ಏನು ಮಾಡಬೇಕು ಎಂದು ಗೊಂದಲಕ್ಕೀಡಾಗುತ್ತಾರೆ. ಆದರೆ ಕೆಲವು ಸರಳ ಕಿಚನ್ ಟ್ರಿಕ್ಸ್ ಬಳಸಿದರೆ ಗ್ರೇವಿಯನ್ನು ರುಚಿ ಹಾಳಾಗದಂತೆ ಸುಲಭವಾಗಿ ದಪ್ಪಗೊಳಿಸಬಹುದು. ಮನೆಯಲ್ಲೇ ಇರುವ ಸಾಮಾನ್ಯ ಪದಾರ್ಥಗಳನ್ನು ಬಳಸಿ ಹೋಟೆಲ್ ಶೈಲಿಯ ಗ್ರೇವಿ ತಯಾರಿಸಬಹುದು. ಇಲ್ಲಿವೆ ಗ್ರೇವಿಯನ್ನು ದಪ್ಪಗೊಳಿಸುವ ಕೆಲವು ಪರಿಣಾಮಕಾರಿ ಉಪಾಯಗಳು.
ಕಡಲೆ ಹಿಟ್ಟು ಅಥವಾ ಕಾರ್ನ್‌ಫ್ಲೋರ್ ಸೇರಿಸುವುದು ಸುಲಭ ಮತ್ತು ತ್ವರಿತ ವಿಧಾನವಾಗಿದೆ. ಇದನ್ನು ಮಾಡಲು, ಒಂದು ಸಣ್ಣ ಬಟ್ಟಲಿನಲ್ಲಿ ಎರಡು ಚಮಚ ಕಡಲೆ ಹಿಟ್ಟು ಅಥವಾ ಕಾರ್ನ್‌ಫ್ಲೋರ್ ತೆಗೆದುಕೊಂಡು, ಸ್ವಲ್ಪ ನೀರು ಸೇರಿಸಿ, ಮತ್ತು ಉಂಡೆಗಳಾಗದಂತೆ ಚೆನ್ನಾಗಿ ಬೆರೆಸಿ. ನಿಧಾನವಾಗಿ ಈ ಬ್ಯಾಟರ್ ಅನ್ನು ಕುದಿಯುತ್ತಿರುವ ಗ್ರೇವಿಗೆ ಸುರಿಯಿರಿ, ಮಿಕ್ಸ್ ಮಾಡಿ. ಗ್ರೇವಿ ಕೆಲವು ನಿಮಿಷಗಳಲ್ಲಿ ದಪ್ಪವಾಗುತ್ತದೆ.
ಗೋಡಂಬಿ ಪೇಸ್ಟ್
ನೆನೆಸಿದ ಗೋಡಂಬಿಯನ್ನು ರುಬ್ಬಿ ಗ್ರೇವಿಗೆ ಸೇರಿಸಿದರೆ ಕ್ರೀಮಿ ಟೆಕ್ಸ್ಚರ್ ಮತ್ತು ದಪ್ಪದ ಗ್ರೇವಿ ರೆಡಿಯಾಗುತ್ತದೆ. ರುಚಿಯೂ ಚೆನ್ನಾಗಿರುತ್ತದೆ. ಇದಲ್ಲದೇ ನೀವು ಕಸ್ ಕಸ್ ಪೇಸ್ಟ್ ಕೂಡ ಹಾಕಬಹುದು. ಇದರಿಂದಲೂ ಗ್ರೇವಿ ದಪ್ಪ ಆಗುತ್ತದೆ.
ತಾಜಾ ಕ್ರೀಮ್ ಅಥವಾ ಹಾಲಿನ ಕೆನೆ
ರೆಸ್ಟೋರೆಂಟ್ ಶೈಲಿಯ ಗ್ರೇವಿಗಾಗಿ ತಾಜಾ ಕ್ರೀಮ್ ಅಥವಾ ಹಾಲಿನ ಕೆನೆಯನ್ನು ಕೊನೆಯಲ್ಲಿ ಸೇರಿಸಿ. ಇದರ ರುಚಿಯೂ ಚೆನ್ನಾಗಿರುತ್ತದೆ. ಜೊತೆಗೆ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಆದರೆ, ನೀವು ಯಾವ ಅಡುಗೆ ಮಾಡುತ್ತೀರಿ ಎನ್ನುವುದು ಮುಖ್ಯ. ಯಾಕಂದ್ರೆ, ಇದು ಎಲ್ಲಾ ಅಡುಗೆಗೆ ಹೊಂದಿಕೊಳ್ಳುವುದಿಲ್ಲ ನೆನಪಿರಲಿ.
ಬೇಯಿಸಿದ ಆಲೂಗಡ್ಡೆ
ಬೇಯಿಸಿದ ಆಲೂಗಡ್ಡೆಯನ್ನು ಮ್ಯಾಶ್ ಮಾಡಿ ಸೇರಿಸಿದರೆ ಗ್ರೇವಿ ದಪ್ಪವಾಗುತ್ತದೆ ಮತ್ತು ರುಚಿಯೂ ಉತ್ತಮವಾಗುತ್ತದೆ. ಇದಲ್ಲದೇ ನೀವು ಯಾವುದೇ ತರಕಾರಿ ಮಾಡುತ್ತಿದ್ದರೂ, ಅದನ್ನು ಸ್ವಲ್ಪ ಮ್ಯಾಶ್ ಮಾಡಿದರೆ, ಗ್ರೇವಿ ಬೇಗನೆ ದಪ್ಪವಾಗುತ್ತದೆ.
ಈರುಳ್ಳಿ ಅಥವಾ ಟೊಮೆಟೊ ಪೇಸ್ಟ್
ಈರುಳ್ಳಿ ಅಥವಾ ಟೊಮೆಟೊವನ್ನು ಚೆನ್ನಾಗಿ ರುಬ್ಬಿ ಸೇರಿಸಿದರೆ ಸಹಜವಾಗಿ ಗ್ರೇವಿ ದಪ್ಪವಾಗುತ್ತದೆ. ಆದರೆ ಇದಕ್ಕೆ ಈರುಳ್ಳಿ ಅಥವಾ ಟೊಮೆಟೊ ಪೇಸ್ಟ್ ಹಸಿ ವಾಸನೆ ಹೋಗುವವರೆಗೂ ಚೆನ್ನಾಗಿ ಬಿಸಿ ಮಾಡುವುದು, ಕುದಿಸುವುದು ತುಂಬಾ ಮುಖ್ಯ. ಇಲ್ಲವಾದರೆ, ಗ್ರೇವಿ ಟೇಸ್ಟ್ ಚೆನ್ನಾಗಿರೋದಿಲ್ಲ.
ಸ್ವಲ್ಪ ಹೆಚ್ಚು ಸಮಯ ಕುದಿಸಿ
ಗ್ರೇವಿಯನ್ನು ಮುಚ್ಚದೆ ಕೆಲವು ನಿಮಿಷ ಹೆಚ್ಚಾಗಿ ಕುದಿಸಿದರೆ ಹೆಚ್ಚುವರಿ ನೀರು ಆವಿಯಾಗಿ, ಸಾರು ಸ್ವಾಭಾವಿಕವಾಗಿ ದಪ್ಪವಾಗುತ್ತದೆ. ಇದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ, ಆದರೆ ರುಚಿಯಾದ ಗ್ರೇವಿ ರೆಡಿಯಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.