MLC Election ಜೆಡಿಎಸ್‌ ಅತಂತ್ರ - ಕಾದು ನೋಡುವ ತಂತ್ರ! ಅಚ್ಚರಿಯ ಅಭ್ಯರ್ಥಿಗಾಗಿ ಕಸರತ್ತು

By Kannadaprabha NewsFirst Published Nov 20, 2021, 1:36 PM IST
Highlights
  • ಮೈಸೂರು- ಚಾಮರಾಜನಗರ ಸ್ಥಳೀಯ ಸಂಸ್ಥೆಗಳ ದ್ವಿಸದಸ್ಯ ಕ್ಷೇತ್ರದಿಂದ  ಸತತ ಜಯಗಳಿಸಿರುವ ಜನತಾ ಪರಿವಾರ
  • ಜನತಾ ಪರಿವಾರದ ಪ್ರಾತಿನಿಧಿಕ ಸ್ವರೂಪ ಜೆಡಿಎಸ್‌ ಈ ಬಾರಿ ಅತಂತ್ರ ಸ್ಥಿತಿ

ವರದಿ :  ಅಂಶಿ ಪ್ರಸನ್ನಕುಮಾರ್‌

 ಮೈಸೂರು (ನ.20):  ಮೈಸೂರು - ಚಾಮರಾಜನಗರ (Mysuru - Chamarajanagar) ಸ್ಥಳೀಯ ಸಂಸ್ಥೆಗಳ ದ್ವಿ ಸದಸ್ಯ ಕ್ಷೇತ್ರದಿಂದ 1988 ರಿಂದ ಈವರೆಗೆ ನಡೆದಿರುವ ಎಲ್ಲ ಐದು ಸಾರ್ವತ್ರಿಕ ಚುನಾವಣೆಗಳಲ್ಲೂ (Election) ತಲಾ ಒಂದು ಸ್ಥಾನದಲ್ಲಿ ಜಯಗಳಿಸಿರುವ ಜನತಾ ಪರಿವಾರದ (janatha parivar) ಪ್ರಾತಿನಿಧಿಕ ಸ್ವರೂಪ ಜೆಡಿಎಸ್‌ (JDS) ಈ ಬಾರಿ ಅತಂತ್ರ ಸ್ಥಿತಿ ಎದುರಿಸುತ್ತಿದ್ದು, ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಜಿಲ್ಲೆಯ ಮಟ್ಟಿಗೆ ಅತ್ಯಂತ ಪ್ರಭಾವಿ ನಾಯಕರೆನಿಸಿಕೊಂಡಿರುವ ಚಾಮುಂಡೇಶ್ವರಿ (Chamundeshwari) ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು (GT Devegowda) ಸಮ್ಮಿಶ್ರ ಸರ್ಕಾರ ಪತನಾನಂತರ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿರುವುದು ಪಕ್ಷದ ಅತಂತ್ರ ಪರಿಸ್ಥಿತಿಗೆ ಕಾರಣವಾಗಿದೆ. ಒಂದು ವೇಳೆ ಅವರು ಪಕ್ಷದಲ್ಲಿ ಸಕ್ರಿಯವಾಗಿದ್ದಲ್ಲಿ ಜೆಡಿಎಸ್‌ ಟಿಕೆಟ್‌ಗೆ (JDS ticket) ಭಾರೀ ಬೇಡಿಕೆ ಇರುತ್ತಿತ್ತು.

ಇದಲ್ಲದೆ ಕಳೆದ ಎರಡು ಚುನಾವಣಗಳಲ್ಲಿ ಸತತವಾಗಿ ಆಯ್ಕೆಯಾಗಿದ್ದ ಹಾಲಿ ಸದಸ್ಯ ಸಂದೇಶ್‌ ನಾಗರಾಜ್‌ (Sandesh Nagaraj) ಕಳೆದ ಕೆಲ ವರ್ಷಗಳಿಂದಲೂ ಪಕ್ಷದ ಚಟುವಟಿಕೆಗಳಿಂದ ದೂರ ಇದ್ದರು. ಇದೀಗ ಜ.5ಕ್ಕೆ ಅವಧಿ ಮುಕ್ತಾಯವಾಗುತ್ತಿದ್ದು, ಜೆಡಿಎಸ್‌ (JDS) ತೊರೆದು ಬಿಜೆಪಿ (BJP) ಸೇರುವುದಾಗಿ ಘೋಷಿಸಿದ್ದಾರೆ. ಅಲ್ಲದೇ, ಬಿಜೆಪಿ ಟಿಕೆಟ್‌ನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಜೆಡಿಎಸ್‌ ಟಿಕೆಟ್‌ಗೆ ಜಿಲ್ಲಾಧ್ಯಕ್ಷರಾದ ನಂಜನಗೂಡು (Nanjanagudu) ಪುರಸಭೆಯ ಮಾಜಿ ಅಧ್ಯಕ್ಷ ಎನ್‌.ನರಸಿಂಹಸ್ವಾಮಿ, ಕೆ.ಆರ್‌. ನಗರದ (KR Nagar) ಮಾಜಿ ಸಚಿವ ಎಸ್‌. ನಂಜಪ್ಪ (S Nanjappa) ಅವರ ಪುತ್ರ ಕೆ.ಎನ್‌. ಬಸಂತ್‌, ಕಳೆದ ವಿಧಾನಸಭಾ ಚುನಾವಣೆಯಲ್ಲಿ (Assembly Election) ವರುಣ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿದ್ದ ಅಭಿಷೇಕ್‌, ಸಮ್ಮಿಶ್ರ ಸರ್ಕಾರದಲ್ಲಿ ಅಲ್ಪಕಾಲ ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆಯ ಅಧ್ಯಕ್ಷರಾಗಿದ್ದ ವಿವೇಕಾನಂದ ಮತ್ತು ಇತ್ತೀಚೆಗೆ ಪಕ್ಷಕ್ಕೆ ಸೇರಿರುವ ಎಚ್‌.ಡಿ. ಕೋಟೆಯ ಕೃಷ್ಣ ನಾಯಕ- ಈ ಐವರ ಹೆಸರುಗಳ ಪ್ರಸ್ತಾಪವಾಗಿವೆ. ಟಿಕೆಟ್‌ ಆಕಾಂಕ್ಷಿಯಾಗಿದ್ದ ಮತ್ತೊರ್ವರಾದ ಜಿಪಂ ಮಾಜಿ ಸದಸ್ಯ ಎಚ್‌.ಎನ್‌. ವಿಜಯ್‌ ಅವರು ಜಿ.ಟಿ.ದೇವೇಗೌಡರೊಂದಿಗೆ ಗುರುತಿಸಿಕೊಂಡಿದ್ದಾರೆ.

ಜಿಟಿಡಿ ಕುಟುಂಬದವರ ಮನವೊಲಿಕೆಗೆ ಯತ್ನ

ಜಿ.ಟಿ.ದೇವೇಗೌಡರ ಕುಟುಂಬದವರೇ ಅಚ್ಚರಿಯ ಅಭ್ಯರ್ಥಿಯಾಗಬಹುದು ಎಂದು ಕೆ.ಆರ್‌.ನಗರ ಶಾಸಕರೂ ಆದ ಮಾಜಿ ಸಚಿವ ಸಾ.ರಾ. ಮಹೇಶ್‌ (Sa Ra Mahesh) ಹೇಳಿಕೆ ನೀಡಿದ್ದರು. ಇದನ್ನು ಸಾರಾ ಸಗಟಾಗಿ ತಿರಸ್ಕರಿಸಿದ ಜಿ.ಟಿ. ದೇವೇಗೌಡರು, ಇದು ಮುಗಿದ ಅಧ್ಯಾಯ, ನಮ್ಮ ಕುಟುಂಬದಿಂದ ಯಾರೊಬ್ಬರು ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಆದರೂ ಜಿ.ಟಿ. ದೇವೇಗೌಡರು ಪಕ್ಷ ತೊರೆದಲ್ಲಿ ಜಿಲ್ಲೆಯ ಮಟ್ಟಿಗೆ ಅಪಾರ ಹಾನಿಯಾಗುತ್ತದೆ ಎಂದು ಭಾವಿಸಿರುವ ಮುಖಂಡರು ಅವರ ಮನವೊಲಿಸುವ ಯತ್ನ ನಡೆಸುತ್ತಲೇ ಇದ್ದಾರೆ.

ಇದೇ ಕಾರಣಕ್ಕಾಗಿ ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ (Anitha Kumaraswamy) ಹಾಗೂ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ (Nikhil kumaraswamy) ಅವರು ಜಿ.ಟಿ. ದೇವೇಗೌಡರ ಪತ್ನಿ ಕೆ.ಲಲಿತಾ ಹಾಗೂ ಪುತ್ರ ಜಿ.ಡಿ. ಹರೀಶ್‌ಗೌಡ ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ದಿದ್ದಾರೆ ಎಂದು ಗೊತ್ತಾಗಿದೆ.

ಕಾಂಗ್ರೆಸ್‌ (Congress) ಸೇರುವ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ವೇದಿಕೆ ಹಂಚಿಕೊಂಡಿರುವ ಜಿ.ಟಿ. ದೇವೇಗೌಡರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮಗೆ ಹಾಗೂ ತಮ್ಮ ಮಗನಿಗೆ ಟಿಕೆಟ್‌ ಕೇಳಿದ್ದಾರೆ. ಇದಕ್ಕೆ ಸಮ್ಮತಿಸಿದಲ್ಲಿ ಕಾಂಗ್ರೆಸ್‌ ಸೇರುವ ಸಾಧ್ಯತೆಯೇ ಹೆಚ್ಚು.

ಇದನ್ನು ತಡೆಯುವ ಸಲುವಾಗಿ ಜೆಡಿಎಸ್‌ ಚಾಮಂಡೇಶ್ವರಿಯಲ್ಲಿ ಜಿ.ಟಿ.ದೇವೇಗೌಡ, ಹುಣಸೂರಿನಲ್ಲಿ ಜಿ.ಡಿ. ಹರೀಶ್‌ಗೌಡ ಅವರಿಗೆ ಟಿಕೆಟ್‌ ನೀಡುವುದಲ್ಲದೇ ಈಗ ಮೇಲ್ಮನೆ ಚುನಾವಣೆಯಲ್ಲಿ ಕೆ.ಲಲಿತಾ ದೇವೇಗೌಡರನ್ನು ಅಭ್ಯರ್ಥಿ ಮಾಡುವುದಾಗಿ ಒತ್ತಡ ಹಾಕುತ್ತಿದೆ. ಜಿ.ಟಿ. ದೇವೇಗೌಡರು ಒಪ್ಪಲು ತಯಾರಿಲ್ಲ. ಇದರಿಂದ ಅನಿತಾ ಹಾಗೂ ನಿಖಿಲ್‌ ಅವರ ಮೂಲಕ ಕುಟುಂಬದರ ಮೇಲೆ ಒತ್ತಡ ಹಾಕಿ, ಮನವೊಲಿಸುವ ಯತ್ನ ನಡೆಸಿದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ನ.23 ರವರೆಗೆ ಇದು ಚಾಲ್ತಿಯಲ್ಲಿರುತ್ತದೆ. ಮಣಿಯದಿದ್ದಲ್ಲಿ ಐವರ ಪೈಕಿ ಯಾರಾದರೂ ಒಬ್ಬರಿಗೆ ಟಿಕೆಟ್‌ ನೀಡುವ ಸಾಧ್ಯತೆ ಹೆಚ್ಚಿದೆ.

click me!