Mysuru: ವಾರಾಂತ್ಯದ ಅನ್ನ ದಾಸೋಹಕ್ಕೆ ಶಾಸಕ ಸಾ.ರಾ.ಮಹೇಶ್‌ ಚಾಲನೆ

By Govindaraj SFirst Published Aug 28, 2022, 1:26 PM IST
Highlights

ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಶ್ರೀರಾಮ ದೇವಾಲಯದಲ್ಲಿ ನಿರಂತರ ಅನ್ನ ದಾಸೋಹ ಆರಂಭಿಸಲು ಸರ್ಕಾರದೊಂದಿಗೆ ಮಾತುಕತೆ ನಡೆಸಿ ಯೋಜನೆ ಅನುಷ್ಠಾನ ಮಾಡುವುದಾಗಿ ಶಾಸಕ ಸಾ.ರಾ. ಮಹೇಶ್‌ ಹೇಳಿದರು.

ಕೆ.ಆರ್‌.ನಗರ (ಆ.28): ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಶ್ರೀರಾಮ ದೇವಾಲಯದಲ್ಲಿ ನಿರಂತರ ಅನ್ನ ದಾಸೋಹ ಆರಂಭಿಸಲು ಸರ್ಕಾರದೊಂದಿಗೆ ಮಾತುಕತೆ ನಡೆಸಿ ಯೋಜನೆ ಅನುಷ್ಠಾನ ಮಾಡುವುದಾಗಿ ಶಾಸಕ ಸಾ.ರಾ. ಮಹೇಶ್‌ ಹೇಳಿದರು. ದೇವಾಲಯದ ಆವರಣದಲ್ಲಿ ವಾರಾಂತ್ಯದ ಎರಡು ದಿನಗಳಲ್ಲಿ ನೀಡುವ ಅನ್ನ ದಾಸೋಹ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಕ್ಷೇತ್ರವನ್ನು ರಾಜ್ಯದಲ್ಲಿಯೇ ಪ್ರಸಿದ್ಧ ಯಾತ್ರಾ ಸ್ಥಳವನ್ನಾಗಿ ಮಾಡುವುದಾಗಿ ತಿಳಿಸಿದರು.

ಈಗಾಗಲೆ 10 ಕೋಟಿ ರು. ಗಳ ವೆಚ್ಚದಲ್ಲಿ ಚುಂಚನಕಟ್ಟೆದೇವಾಲಯ ಮತ್ತು ಸುತ್ತಮುತ್ತಲಿನ ಆವರಣವನ್ನು ಅಭಿವೃದ್ಧಿ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಘೋಷಿಸಿದ ಅವರು, ಇಲ್ಲಿಗೆ ಬರುವ ಭಕ್ತರು ಮತ್ತು ಯಾತ್ರಾರ್ಥಿಗಳಿಗೆ ಮೂಲಭೂತ ಸವಲತ್ತು ಕಲ್ಪಿಸಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಇತಿಹಾಸ ಪ್ರಸಿದ್ಧ ಚುಂಚನಕಟ್ಟೆಶ್ರೀರಾಮ ದೇವಾಲಯ ರಾಜ್ಯದಲ್ಲಿಯೇ ಮನೆ ಮಾತಾಗಿದ್ದು, ಕಳೆದ ಮೂರು ತಿಂಗಳ ಹಿಂದೆ ದೇವಸ್ಥಾನದ ಮುಂದೆ ಆಂಜನೇಯ ಸ್ವಾಮಿಯ ಏಕಶಿಲಾ ವಿಗ್ರಹ ಪ್ರತಿಷ್ಠಾಪಿಸಲಾಗಿದ್ದು, ಪ್ರಸ್ತುತ ನಿತ್ಯ ಸಾವಿರಾರು ಮಂದಿ ಭಕ್ತ ಸಮೂಹ ಇಲ್ಲಿಗೆ ಆಗಮಿಸುತ್ತಿದ್ದು, ಇದರಿಂದ ಸ್ಥಳೀಯವಾಗಿ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತಿದೆ ಎಂದರು.

ಸರ್ಕಾರಿ ಟೆಂಡರ್‌ ಬಾಯ್ಕಟ್‌ ಮಾಡಿ: ಗುತ್ತಿಗೆದಾರರಿಗೆ ಎಚ್ಡಿಕೆ ಕರೆ

ಕೊರೋನಾ ಸೋಂಕಿನ ಹಿನ್ನೆಲೆ ಕಳೆದ ಎರಡು ವರ್ಷಗಳಿಂದ ಸ್ಥಗಿತವಾಗಿದ್ದ ಜಲಪಾತೋತ್ಸವ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿದ್ದು, ಶೀಘ್ರದಲ್ಲಿಯೇ ಕಾರ್ಯಕ್ರಮದ ದಿನಾಂಕ ಪ್ರಕಟಿಸುವುದಾಗಿ ತಿಳಿಸಿ, ಭಕ್ತರು ಇಲ್ಲಿ ಸ್ವಚ್ಛತೆ ಕಾಪಾಡಬೇಕೆಂದು ಮನವಿ ಮಾಡಿದರು. ಈ ಭಾಗದ ಜನತೆಯ ದಶಕಗಳ ಕನಸಾಗಿದ್ದ ದೇವಾಲಯ ಅಭಿವೃದ್ಧಿಯನ್ನು ನನಸಾಗಿಸಲು ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದು, ಭವಿಷ್ಯದಲ್ಲಿ ಆಧುನಿಕ ಸ್ಪರ್ಶ ನೀಡಿ ರಾಜ್ಯದಲ್ಲಿಯೇ ಅತ್ಯುತ್ತಮ ಪ್ರವಾಸಿ ತಾಣ ಮಾಡುವ ಗುರಿ ಹೊಂದಿರುವುದಾಗಿ ತಮ್ಮ ಮನದಾಳದ ಇಂಗಿತ ವ್ಯಕ್ತಪಡಿಸಿದರು.

ಕಡೆಯ ಶ್ರಾವಣ ಶನಿವಾರದ ಅಂಗವಾಗಿ ದೇವಾಲಯದ ಆವರಣದಲ್ಲಿ ನೆರೆದಿದ್ದ ಸಾವಿರಾರು ಮಂದಿ ಭಕ್ತರು ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕೊಂಡಾಡಿದರಲ್ಲದೆ, ಮತ್ತಷ್ಟುಕೆಲಸ ಮಾಡಲು ಶ್ರೀರಾಮ ಹೆಚ್ಚು ಶಕ್ತಿ ನೀಡಲಿ ಎಂದು ಸಾಮೂಹಿಕವಾಗಿ ಪ್ರಾರ್ಥಿಸಿ ಜಯಕಾರದ ಘೋಷಣೆಗಳನ್ನು ಮೊಳಗಿಸಿದರು.  ಶಾಸಕರು ದೇವಾಲಯದ ಪ್ರಾಂಗಣದಲ್ಲಿ ನೆರೆದಿದ್ದ ಭಕ್ತರಿಗೆ ಪ್ರಸಾದ ವಿತರಣೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಿ, ಮುಂದಿನ ದಿನಗಳಲ್ಲಿ ದೇವಾಲಯ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಲಿ ಎಂದು ಹಾರೈಸಿದರು.

ಗಂಭೀರ ಆರೋಪ ಬಂದಾಗ ಭಂಡತನ ಬೇಡ: ಸಿದ್ದರಾಮಯ್ಯ

ಕುಪ್ಪೆ ಗ್ರಾಪಂ ಅಧ್ಯಕ್ಷೆ ಗೌರಮ್ಮ, ಹಳಿಯೂರು ಗ್ರಾಪಂ ಅಧ್ಯಕ್ಷ ಎಚ್‌.ಆರ್‌. ದಿನೇಶ್‌, ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್‌, ಜಿಪಂ ಮಾಜಿ ಉಪಾಧ್ಯಕ್ಷ ಎ.ಎಸ್‌. ಚನ್ನಬಸಪ್ಪ, ಟಿಎಪಿಸಿಎಂಎಸ್‌ ನಿರ್ದೇಶಕ ಎಸ್‌.ಟಿ. ಕೀರ್ತಿ, ಗ್ರಾಪಂ ಸದಸ್ಯರಾದ ಬಾಲಾಜಿ ಗಣೇಶ್‌, ಸುನಿಲ, ವಕೀಲ ಡಿ.ಆರ್‌. ರಮೇಶ್‌, ಜೆಡಿಎಸ್‌ ಮುಖಂಡರಾದ ಎಚ್‌.ಎಸ್‌. ಜಗದೀಶ್‌, ಹನಸೋಗೆ ನಾಗರಾಜು, ಬಿ. ರಮೇಶ್‌, ಎಚ್‌.ಕೆ. ಕೀರ್ತಿ, ಎಚ್‌.ಆರ್‌. ಕೃಷ್ಣಮೂರ್ತಿ ಇದ್ದರು.

click me!