ಸಿಎಂ ಬೊಮ್ಮಾಯಿ ಬಜೆಟ್‌ನತ್ತ ಬೆಟ್ಟದಷ್ಟುನಿರೀಕ್ಷೆ: ಸಿಗುವುದೇ ಧಾರವಾಡಕ್ಕೆ ವಿಶೇಷ ಅನುದಾನ?

By Kannadaprabha News  |  First Published Feb 16, 2023, 6:25 AM IST

 ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರದ್ದು ಇದು ಎರಡನೆಯ ಬಜೆಟ್‌. ಶಿಗ್ಗಾಂವಿ ಸವಣೂರು ಕ್ಷೇತ್ರದ ಶಾಸಕರಾದರೂ ಊರು ಧಾರವಾಡ ಜಿಲ್ಲೆಯ ಹುಬ್ಬಳ್ಳಿ. ಹೀಗಾಗಿ ಹುಬ್ಬಳ್ಳಿ-ಧಾರವಾಡ ಬೊಮ್ಮಾಯಿ ತವರೂರು. ಸಿಎಂ ಬೊಮ್ಮಾಯಿ  ತವರೂರಿಗೆ ಏನೇನು ಕೊಡುಗೆ ನೀಡಲಿದ್ದಾರೆ ಎಂಬುದೇ ಕುತೂಹಲ.


ಶಿವಾನಂದ ಗೊಂಬಿ

 ಹುಬ್ಬಳ್ಳಿ (ಫೆ.16) : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಅವರದ್ದು ಇದು ಎರಡನೆಯ ಬಜೆಟ್‌. ಶಿಗ್ಗಾಂವಿ ಸವಣೂರು ಕ್ಷೇತ್ರದ ಶಾಸಕರಾದರೂ ಊರು ಧಾರವಾಡ ಜಿಲ್ಲೆಯ ಹುಬ್ಬಳ್ಳಿ. ಹೀಗಾಗಿ ಹುಬ್ಬಳ್ಳಿ-ಧಾರವಾಡ ಬೊಮ್ಮಾಯಿ ತವರೂರು. ಫೆ. 17ರಂದು ಮಂಡಿಸಲಿರುವ ಬಜೆಟ್‌ನಲ್ಲಿ ಬೊಮ್ಮಾಯಿ ತವರೂರಿಗೆ ಏನೇನು ಕೊಡುಗೆ ನೀಡಲಿದ್ದಾರೆ? ವಿಶೇಷ ಪ್ಯಾಕೇಜ್‌ ಘೋಷಿಸುವವರೇ? ಇಲ್ಲಿನ ಜನತೆ ಇಂಥ ಅಪಾರ ನಿರೀಕ್ಷೆ ಹೊಂದಿದೆ. ಹಳೆ ಯೋಜನೆಗಳನ್ನು ಅನುಷ್ಠಾನಗೊಳಿಸುವ ಜತೆಗೆ ಹೊಸ ಯೋಜನೆಗಳನ್ನು ಘೋಷಿಸಬೇಕಿದೆ.

Tap to resize

Latest Videos

ಹೊಸ ಕೈಗಾರಿಕಾ ವಸಾಹತು:

ಹುಬ್ಬಳ್ಳಿಯಲ್ಲೇ 2020ರಲ್ಲಿ ‘ಇನ್ವೆಸ್ಟ್‌ ಕರ್ನಾಟಕ-ಹುಬ್ಬಳ್ಳಿ ಸಮಾವೇಶ’ ನಡೆಸಲಾಗಿದೆ. ಆಗ ಬರೋಬ್ಬರಿ . 82 ಸಾವಿರ ಕೋಟಿ ಬಂಡವಾಳ ಹೂಡಿಕೆಯ ವಾಗ್ದಾನವಾಗಿತ್ತು. ಇದರಲ್ಲಿ ಕೆಲವೊಂದಿಷ್ಟುಕೈಗಾರಿಕೆಗಳ ಚಾಲನೆಗೆ ಮೊದಲ ಹೆಜ್ಜೆಯನ್ನು ಸರ್ಕಾರ ಇಟ್ಟಿವೆಯಾದರೂ ಕೊರೋನಾದಿಂದಾಗಿ ಉದ್ಯಮಿಗಳು ಈ ವರೆಗೂ ಕೈಗಾರಿಕೆಗಳ ಆರಂಭಕ್ಕೆ ಕ್ರಮ ಕೈಗೊಂಡಿಲ್ಲ. ಇದೀಗ ಅವುಗಳಿಗೆ ಮರು ಚಾಲನೆ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಹೊಸ ಕೈಗಾರಿಕಾ ವಸಾಹತು ಸ್ಥಾಪನೆಯತ್ತ ಸರ್ಕಾರ ಗಮನ ಹರಿಸಬೇಕು. ಜಿಲ್ಲೆಯಲ್ಲಿ ಈಗಿರುವ ಕೈಗಾರಿಕಾ ಪ್ರದೇಶ ಹೊರತುಪಡಿಸಿ ಧಾರವಾಡ-ಕಿತ್ತೂರು, ಹುಬ್ಬಳ್ಳಿ-ಶಿಗ್ಗಾಂವಿ, ಹುಬ್ಬಳ್ಳಿ-ಗದಗ, ಹುಬ್ಬಳ್ಳಿ- ಕಾರವಾರ ಹೆದ್ದಾರಿ ಮಾರ್ಗಗಳಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆ ಆಗಬೇಕಿದೆ.

Karnataka Budget 2023 LIVE updates

ಕಳೆದ ಬಜೆಟ್‌ನಲ್ಲಿ ಘೋಷಿಸಿದ್ದ ಎಫ್‌ಎಂಸಿಜಿ ಕ್ಲಸ್ಟರ್‌ ಸ್ಥಾಪನೆ(Establishment of FMCG cluster)ಗೆ ಸರ್ಕಾರ ಶ್ರೀಕಾರ ಬರೆದು ಒಪ್ಪಂದ ಮಾಡಿಕೊಂಡಿದೆ. ಆದರೆ ಪ್ರಾರಂಭಕ್ಕೆ ಬೇಕಾದ ಪೂರಕ ಕೆಲಸ ಪ್ರಾರಂಭವಾಗಿಲ್ಲ. ಆ ಕೆಲಸ ಬೇಗನೆ ಶುರುವಾಗುವಂತೆ ಮಾಡಬೇಕು. ಇದೇ ವರ್ಷ ಕಾರ್ಯಾರಂಭ ಮಾಡುವಂತಹ ಕೆಲಸವಾಗಬೇಕು. ಇನ್ನು ಮುಂಬೈ-ಚೈನ್ನೈ ಕೈಗಾರಿಕಾ ಕಾರಿಡಾರ್‌ನ ವ್ಯಾಪ್ತಿಯಲ್ಲಿ ಹುಬ್ಬಳ್ಳಿ-ಧಾರವಾಡ ಬರುವುದರಿಂದ ಕೈಗಾರಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುವಂತಹ ಕೆಲಸ ಆಗಬೇಕಿದೆ. ಎಸ್‌ಐಆರ್‌ ಮಾಡುತ್ತೇವೆ ಎಂದು ಹೇಳಿ ಆಗಿದೆ. ಆದರೆ ಎಸ್‌ಐಆರ್‌ ತ್ವರಿತಗತಿಯಲ್ಲಿ ಆಗುವಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಇದಕ್ಕೆ ಅನುದಾನ ಮೀಸಲಿಡಬೇಕು.

Karnataka Budget Session 2023: ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣ

ಕೌಶಲ್ಯಾಭಿವೃದ್ಧಿ ಕೇಂದ್ರ:

ಕೈಗಾರಿಕಾ ಕಾರಿಡಾರ್‌, ಎಫ್‌ಎಂಸಿಜಿ ಕ್ಲಸ್ಟರ್‌ಗಳು ಬರುವುದರಿಂದ ಯುವ ನೌಕರರು ಬೇಕಾಗುತ್ತದೆ. ಅದಕ್ಕಾಗಿ ಈ ಭಾಗದ ಯುವಕರನ್ನು ಸಿದ್ಧಪಡಿಸಲು ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ಪ್ರಾರಂಭಿಸಬೇಕು. ಇದಕ್ಕಾಗಿ ಪ್ರತ್ಯೇಕ ಅನುದಾನ ನೀಡಬೇಕು.

ಜವಳಿ ಪಾರ್ಕ್:

ನವಲಗುಂದ(Navalagunda)ದಲ್ಲಿ ಜವಳಿ ಪಾರ್ಕ್(Textile Park) ಸ್ಥಾಪಿಸಲಾಗುವುದು ಎಂದು ಸರ್ಕಾರ ಹೇಳಿದೆಯೇ ಹೊರತು ಈವರೆಗೂ ಕೆಲಸವಾಗಿಲ್ಲ. ಈ ಹಿನ್ನೆಲೆಯಲ್ಲಿ ನವಲಗುಂದದಲ್ಲಿ ಜವಳಿ ಪಾರ್ಕ್ ಸ್ಥಾಪಿಸುವ ಜತೆ ಜತೆಗೆ ಧಾರವಾಡದಲ್ಲೊಂದು ಬೃಹತ್‌ ಜವಳಿ ಪಾರ್ಕ್ ಸ್ಥಾಪಿಸಬೇಕು. ಹುಬ್ಬಳ್ಳಿಯಲ್ಲಿ ಸ್ಟಾರ್ಟಪ್ ಘಟಕಗಳ ಸ್ಥಾಪನೆಗೆ ಉತ್ತೇಜನ ನೀಡುವಂತಹ ಕೆಲಸ ಈ ಬಜೆಟ್‌ನಲ್ಲಿ ಆಗಬೇಕು. ಮಾಹಿತಿ ತಂತ್ರಜ್ಞಾನ ಪಾರ್ಕ್ಗಳ ಮಾದರಿಯಲ್ಲೇ ಈ ಭಾಗದಲ್ಲಿ ಸಣ್ಣ ಸಣ್ಣ ಉತ್ಪಾದನಾ ಘಟಕಗಳಿಗೆ ಬಹುಉಪಯೋಗಿ ಬಳಕೆದಾರರ ಮಳಿಗೆಗಳ ಕಟ್ಟಡ ನಿರ್ಮಿಸಬೇಕು. ಈ ಮಳಿಗೆಗಳಿಗೆ ಸ್ಟಾರ್ಚ್‌ಅಪ್‌ ಪ್ರಾರಂಭಿಸುವವರಿಗೆ ಬಾಡಿಗೆ ಅಥವಾ ಲೀಸ್‌ ಮೂಲಕ ನೀಡಬೇಕಿದೆ.

ಘನ ತ್ಯಾಜ್ಯನಿರ್ವಹಣೆ:

ಹುಬ್ಬಳ್ಳಿ-ಧಾರವಾಡ(Hubballi-dharwad) ರಾಜ್ಯದ ಎರಡನೆಯ ದೊಡ್ಡ ನಗರ. ಆದರೆ ಇಲ್ಲಿನ ಘನತ್ಯಾಜ್ಯ ನಿರ್ವಹಣೆ ಮಾತ್ರ ಅತ್ಯಂತ ಕಳಪೆ ಮಟ್ಟದ್ದಾಗಿದೆ. ಪ್ರತಿದಿನ 400-500 ಟನ್‌ ಉತ್ಪನ್ನವಾಗುವ ತ್ಯಾಜ್ಯವನ್ನು ಡಂಪಿಂಗ್‌ ಯಾರ್ಡ್‌ನಲ್ಲಿ ಬಿಸಾಡಿ ಬರಲಾಗುತ್ತಿದೆ. ನಿತ್ಯ ಅದಕ್ಕೆ ಬೆಂಕಿ ಹಚ್ಚುವ ಮೂಲಕ ಪರಿಸರ ಮಾಲಿನ್ಯವನ್ನು ಪಾಲಿಕೆಯೇ ಮಾಡುತ್ತಿದೆ. ಅದಕ್ಕಾಗಿ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಂತಹ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಬಜೆಟ್‌ನಲ್ಲಿಯೇ ವಿಶೇಷ ಯೋಜನೆ ಘೋಷಿಸಿ ಅನುಷ್ಠಾನಗೊಳಿಸಬೇಕು.

ಇದರೊಂದಿಗೆ ಇಲ್ಲಿನ ರಸ್ತೆ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಸಾರಿಗೆ ಸೌಲಭ್ಯ ಹೆಚ್ಚಿಸುವಂತೆ ಕ್ರಮವಾಗಬೇಕು. ಹುಬ್ಬಳ್ಳಿ-ಧಾರವಾಡ ಉತ್ತರ ಕರ್ನಾಟಕದ ಹೆಬ್ಬಾಗಿಲು. ಆದರಿಂದ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಅನುದಾನ ಘೋಷಿಸಲಿ ಎಂಬ ನಿರೀಕ್ಷೆ ಜನರದ್ದು.

ಹೀಗೆಯೇ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತವರೂರಿಗೆ ಹೆಚ್ಚಿನ ಕೊಡುಗೆ ನೀಡಬೇಕು ಎನ್ನುವ ಬೇಡಿಕೆಯು ಶ್ರೀಸಾಮಾನ್ಯರದ್ದು. ಸ್ಥಳೀಯ ಯಾವ್ಯಾವ ಬೇಡಿಕೆಗಳನ್ನು ಈಡೇರಿಸುತ್ತಾರೆಯೋ ಎನ್ನುವುದನ್ನು ಕಾಯ್ದು ನೋಡಬೇಕಷ್ಟೇ!

ಮಹದಾಯಿ ಇನ್ನಷ್ಟುಅನುದಾನ ನೀಡಲಿ

ಇನ್ನು ಈ ಭಾಗದ ಪ್ರಮುಖ ಬೇಡಿಕೆಯಾಗಿರುವ ಮಹದಾಯಿ ಯೋಜನೆ(Mahadayi project)ಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರವೂ ಪರಿಷ್ಕೃತ ಡಿಪಿಆರ್‌ ಒಪ್ಪಿಗೆ ನೀಡಿಯಾಗಿದೆ. ಆದರೆ ಅರಣ್ಯ, ಪರಿಸರ ಇಲಾಖೆಗಳ ಅನುಮತಿ ಪಡೆಯುವುದು ಬಾಕಿಯುಳಿದಿದೆ. ಆ ಕೆಲಸವನ್ನು ಮಾಡಬೇಕು. ಜತೆ ಜತೆಗೆ ಮಹದಾಯಿಗಾಗಿ ಸದ್ಯ. 1677 ಕೋಟಿ ಸರ್ಕಾರ ಕಳೆದ ಎರಡು ವರ್ಷದ ಬಜೆಟ್‌ನಲ್ಲಿ ಮೀಸಲಿಟ್ಟಿದೆ. ಇದೀಗ .1000 ಕೋಟಿ ಮೀಸಲಿಟ್ಟು ಕೆಲಸ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು.

 

ನಾಳೆಯಿಂದ ಈ ಸರ್ಕಾರದ ಕೊನೆಯ ಅಧಿವೇಶನ: ಜಂಟಿ ಅಧಿವೇಶನ ಉದ್ದೇಶಿಸಿ ಮೊದಲ ದಿನ ಗೌರ್ನರ್‌ ಭಾಷಣ; ಫೆ.17ಕ್ಕೆ ಬಜೆಟ್‌

ಬೆಣ್ಣಿಹಳ್ಳ

ಇನ್ನೂ ಬೆಣ್ಣಿಹಳ್ಳ ಹಾಗೂ ತುಪರಿಹಳ್ಳಗಳೆರಡು ಮಳೆಗಾಲದಲ್ಲಿ ಜನರ ಜೀವ ಹಿಂಡುತ್ತವೆ. ಅದಕ್ಕಾಗಿ ತುಪರಿಹಳ್ಳಕ್ಕೆ .312 ಕೋಟಿ ಯೋಜನೆಗೆ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿದೆ. ಇದಕ್ಕೆ ಅನುದಾನ ಮೀಸಲಿಟ್ಟು ಕೆಲಸ ಪ್ರಾರಂಭಿಸಬೇಕು. ಜತೆಗೆ ಬೆಣ್ಣಿಹಳ್ಳದ ಯೋಜನೆಗೆ ವಿಶೇಷ ಅನುದಾನ ಘೋಷಿಸಿ ಆ ಯೋಜನೆಗೂ ಹಸಿರು ನಿಶಾನೆ ತೋರಿಸುವ ಕೆಲಸ ಈ ಬಜೆಟ್‌ನಲ್ಲಾಗಲಿ ಎಂಬ ಬೇಡಿಕೆ ರೈತರದ್ದು.

click me!