ಚಿತ್ರದುರ್ಗ: ಜಡ್ಜ್‌ಗಳ ಮನೆ ಮಾರ್ಗದಲ್ಲೇ ಗುಂಡಿಬಿದ್ದ ರಸ್ತೆ!

By Kannadaprabha News  |  First Published Feb 16, 2023, 5:51 AM IST

ಚಿತ್ರದುರ್ಗದ ತುಂಬಾ ಸಿಸಿ ರಸ್ತೆಗಳಾಗಿವೆ. ಖಾಸಗಿ ಲೇಔಟ್‌ಗೆ ಹೋಗುವ ಮಾರ್ಗಗಳೆಲ್ಲ ಸರ್ಕಾರಿ ದುಡ್ಡಿನಲ್ಲಿ ಸಿಸಿ ರಸ್ತೆಗಳ ಕಂಡಿವೆ. ಜೈಲು ಹಾದಿ ಕೂಡಾ ಡಬಲ್‌ ಸಿಸಿ ರಸ್ತೆಯಾಗಿ ಮಧ್ಯದಲ್ಲಿ ಆಳೆತ್ತರದ ಡಿವೈಡರ್‌ ಕಂಡಿದೆ. ಆದರೆ ನ್ಯಾಯಾಧೀಶರುಗಳು ನಿತ್ಯಸಂಚರಿಸುವ ರಸ್ತೆ ಮಾತ್ರ ತಗ್ಗು ಗುಂಡಿಗಳಿಂದ ಸಂಚಾರಿಸಲಾಗದಷ್ಟು ರಸ್ತೆ ಹದಗೆಟ್ಟಿದೆ.


ಚಿಕ್ಕಪ್ಪನಹಳ್ಳಿ ಷಣ್ಮುಖ

ಚಿತ್ರದುರ್ಗ (ಫೆ.16) : ಚಿತ್ರದುರ್ಗದ ತುಂಬಾ ಸಿಸಿ ರಸ್ತೆಗಳಾಗಿವೆ. ಖಾಸಗಿ ಲೇಔಟ್‌ಗೆ ಹೋಗುವ ಮಾರ್ಗಗಳೆಲ್ಲ ಸರ್ಕಾರಿ ದುಡ್ಡಿನಲ್ಲಿ ಸಿಸಿ ರಸ್ತೆಗಳ ಕಂಡಿವೆ. ಜೈಲು ಹಾದಿ ಕೂಡಾ ಡಬಲ್‌ ಸಿಸಿ ರಸ್ತೆಯಾಗಿ ಮಧ್ಯದಲ್ಲಿ ಆಳೆತ್ತರದ ಡಿವೈಡರ್‌ ಕಂಡಿದೆ. ಆದರೆ ನ್ಯಾಯಾಧೀಶರುಗಳು ನಿತ್ಯಸಂಚರಿಸುವ ರಸ್ತೆ ಮಾತ್ರ ತಗ್ಗು ಗುಂಡಿಗಳಿಂದ ಕೂಡಿದ್ದು, ಈ ರಸ್ತೆಗೇಕೆ ಅಭಿವೃದ್ಧಿ ಭಾಗ್ಯವಿಲ್ಲವೆಂಬುದು ಮಿಲಿಯನ್‌ ಡಾಲ್‌ ಪ್ರಶ್ನೆಯಾಗಿದೆ. ಅಧಿಕಾರಿಗಳು, ಜನ ಪ್ರತಿನಿಧಿಗಳು ಏನಾದ್ರೂ ನ್ಯಾಯಾಧೀಶರುಗಳ ಮೇಲೆ ಅಪರಿಮಿತ ಸಿಟ್ಟು ಇಟ್ಟುಕೊಂಡಿದ್ದಾರಾ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿವೆ.

Tap to resize

Latest Videos

ಚಿತ್ರದುರ್ಗ(Chitradurga)ದ ಬಿಡಿ ರಸ್ತೆಯಿಂದ ಅಂದರೆ ಪಂಚಾಚಾರ್ಯ ಕಲ್ಯಾಣ ಮಂಟಪದ ಎದುರಿಗೆ ಸರ್ಕಾರಿ ವಿಜ್ಞಾನ ಕಾಲೇಜು ಹಾಗೂ ಸರ್ಕಾರಿ ಕಲಾ ಕಾಲೇಜನ್ನು ಸೀಳಿ ರಸ್ತೆಯೊಂದು ಹಾದು ಹೋಗುತ್ತದೆ. ಅಮೃತ ಆಯುರ್ವೇದ ಕಾಲೇಜು(Amrita Ayurveda College) ದಾಟಿ ಹೋಗುವ ಈ ರಸ್ತೆ ಸರಿ ಸುಮಾರು ಒಂದು ಕಿಮೀ ಹೆಚ್ಚು ಉದ್ದವಿದೆ. ಸರ್ಕಾರಿ ಕಲಾ ಕಾಲೇಜು, ಮಕ್ಕಳ ಬಾಲ ನ್ಯಾಯ ಮಂದಿರ, ಬಾಬೂ ಜಗಜೀವನರಾಂ ಸಮುದಾಯ ಭವನ, ಐಡಿಯಲ್‌ ಜ್ಯೂನಿಯರ್‌ ಕಾಲೇಜು, ನ್ಯಾಯಧೀಶರ ವಸತಿ ಸಮುಚ್ಚಯ, ಸ್ಮಶಾನ, ಮಹಿಳೆಯರ ಐಟಿಐ ಕಾಲೇಜು, ಅಮೃತ ಆಯುರ್ವೇದ ಕಾಲೇಜು ಈ ರಸ್ತೆಯನ್ನು ಸ್ಪರ್ಶಿಸುತ್ತವೆ. ಇದಲ್ಲದೇ ಟೀಚರ್ಸ್‌ ಕಾಲೋನಿ, ಸೇರಿದಂತೆ ಹಲವು ಬಡಾವಣೆಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ನಿತ್ಯ ಸಾವಿರಾರು ವಿದ್ಯಾರ್ಥಿಗಳು, ಜನರು ಈ ರಸ್ತೆ ಬಳಸುತ್ತಾರೆ. ಇಷ್ಟೊಂದು ಸಂಚಾರವಿರುವ ರಸ್ತೆ ಏಕೆ ಅಭಿವೃದ್ಧಿ ಭಾಗ್ಯ ಕಂಡಿಲ್ಲವೆಂಬುದಕ್ಕೆ ಉತ್ತರಗಳು ಸಿಗುತ್ತಿಲ್ಲ.

Chitradurga: ಅಭಿವೃದ್ಧಿ ನೆಪದಲ್ಲಿ ಕಿರಿದಾದ ರಸ್ತೆ ನಿರ್ಮಾಣ, ಡಿವೈಡರ್‌ನಿಂದ ಹೆಚ್ಚಿದ ಅಪಘಾತ!

ಪಂಚಾಚಾರ್ಯ ಕಲ್ಯಾಣ ಮಂಟಪದಿಂದ ಬಾಬು ಜಗಜೀವನರಾಂ ಸಮುದಾಯ ಭವನದವರೆಗೆ ಸಿಸಿ ರಸ್ತೆ ಇದೆ. ಅಲ್ಲಿಂದ ಮುಂದಕ್ಕೆ ಕಚ್ಚಾ ರಸ್ತೆ, ತರುವಾಯ ಕಿತ್ತು ಹೋದ, ಗುಂಡಿ ಬಿದ್ದ ಹಳೆಯ ಕಾಲದ ಡಾಂಬರು ರಸ್ತೆ ಎದುರಾಗುತ್ತದೆ. ಗುಂಡಿ ಬಿದ್ದ ಈ ರಸ್ತೆಯಲ್ಲಿ ದ್ವಿಚಕ್ರ ವಾಹನ ಚಾಲಕರು ಸರ್ಕಸ್‌ ಮಾಡಿಕೊಂಡು ಹೋಗಬೇಕಾಗಿದೆ. ಕೆಲವು ಕಡೆ ಡಾಂಬರು ರಸ್ತೆ ತುದಿ ಕಿತ್ತು ಹೋಗಿದ್ದು ದ್ವಿಚಕ್ರ ವಾಹನದ ಚಕ್ರವೇನಾದರೂ ಕತ್ತಲಲ್ಲಿ ಸಿಲುಕಿದರೆ ಕೈ, ಕಾಲು ಮುರಿಯುವುದರಲ್ಲಿ ಸಂದೇಹಗಳಿಲ್ಲ.

ಮನವಿಗೂ ಓಗೊಟ್ಟಿಲ್ಲ:

ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಸ್ಥಳೀಯರು, ವಿದ್ಯಾಸಂಸ್ಥೆ ಮುಖ್ಯಸ್ಥರುಗಳು ನಗರಸಭೆಗೆ ಎಡತಾಕಿ ಮನವಿ ಮಾಡಿದ್ದಾರೆ. ನಗರಾಭಿವೃದ್ಧಿ ಪ್ರಾಧಿಕಾರದ ಗಮನಕ್ಕೂ ತಂದಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರಿ ಅನುದಾನವೆಂಬುದು ಚಿತ್ರದುರ್ಗದ ಮಟ್ಟಿಗೆ ಹಟ್ಟಿತಿಪ್ಪೇಶನ ತೇರಿನ ಮೇಲೆ ತೂರುವ ಚೂರು ಬೆಲ್ಲ ಮೆಣಸಾಗಿದೆ. ಕಿರಿದಾದ ರಸ್ತೆಗೆ ಡಿವೈಡರ್‌, ಅದರೊಳಗೆ ಮಣ್ಣು ತಂಬಿ ಡ್ರಿಪ್‌ ಅಳವಡಿಸಿ ಅಲಂಕಾರಿಕ ಗಿಡಗಳ ಸಾಕುವ ಘನಂದಾರಿ ಕೆಲಸಗಳು ನಡೆದಿರುವುದರ ನಡುವೆಯೇ ಅಮೃತ ಆಯುರ್ವೇದ ಕಾಲೇಜಿಗೆ ಹೋಗುವ ಈ ರಸ್ತೆ ಅಭಿವೃದ್ಧಿ ಹಾದಿಯಿಂದ ಅದ್ಹೇಗೆ ನುಸುಳಿ ಹೋಯಿತೆಂಬುದಕ್ಕೆ ಕಾರಣಗಳು ತಿಳಿಯುತ್ತಿಲ್ಲ.

Chitradurga: ಕೋಟೆನಾಡಿನಲ್ಲಿ ಆಸ್ತಿಗಾಗಿ ಮಾರಕಾಸ್ತ್ರಗಳಿಂದ ಬಡಿದಾಡಿಕೊಂಡ ದಾಯಾದಿಗಳು

ಅಮೃತ ಆಯುರ್ವೇದ ಕಾಲೇಜಿಗೆ ಹೋಗುವ ಈ ರಸ್ತೆ ತುಂಬಾ ಹಳೆಯದು. ಅಖಿಲ ಭಾರತ 75 ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ಈ ರಸ್ತೆ ಡಾಂಬರೀಕರಣ ಕೈಗೊಳ್ಳಲಾಗಿತ್ತು. ಅಲ್ಲಿಂದ ಈಚೆಗೆ ಏನೂ ಆಗಿಲ್ಲ. ಬರೀ ಗುಂಡಿಗಳಿವೆ. ನ್ಯಾಯಾಧೀಶರ ವಸತಿ ಗೃಹಗಳು ಇದೇ ದಾರಿಯಲ್ಲಿ ಬರುತ್ತವೆ. ಅತ್ಯಂತ ದಟ್ಟಜನ ಸಂಚಾರದ ಇಂತಹ ರಸ್ತೆಯ ಅಭಿವೃದ್ಧಿ ಪಡಿಸದಿದ್ದರೆ ಸರ್ಕಾರಗಳು, ಅಡಳಿತ ಯಂತ್ರ ಜೀವಂತವಾಗಿಯೇ ಎಂಬ ಅನುಮಾನಗಳು ಮೂಡುತ್ತವೆ.

- ಕೆ.ಶಿವುಯಾದವ್‌, ಅಧ್ಯಕ್ಷರು ವಕೀಲರ ಸಂಘ, ಚಿತ್ರದುರ್ಗ

click me!