
ರತು (ಜಾರ್ಖಂಡ್): ಹಣ ನೋಡಿದರೆ ಹೆಣವೂ ಬಾಯಿಬಿಡುತ್ತದೆ ಎನ್ನುವುದು ಶತಮಾನಗಳಿಂದಲೂ ಬಂದಿರುವ ಮಾತು. ದುಡ್ಡಿದ್ದವನೇ ದೊಡ್ಡಪ್ಪ. ದುಡ್ಡು ಇಲ್ಲದಿದ್ದವರಿಗೆ ಮರ್ಯಾದೆನೂ ಇರಲ್ಲ, ಅವರಲ್ಲಿ ಇರುವ ಅಗಾಧ ಟ್ಯಾಲೆಂಟ್ ಗುರುತಿಸುವ ಮನಸ್ಥಿತಿಯೂ ದುಡ್ಡಿನ ಮದದಲ್ಲಿ ತೇಲಾಡುತ್ತಿರುವವರಿಗೆ ಇರುವುದೇ ಇಲ್ಲ. ತಲೆಯಲ್ಲಿ ಮೂರುಕಾಸಿನ ಜ್ಞಾನ ಇಲ್ಲದಿದ್ದವನೂ ದುಡ್ಡಿದ್ದರೆ ದೊಡ್ಡ ವ್ಯಕ್ತಿಯಾಗುತ್ತಾನೆ, ಎಲ್ಲರನ್ನೂ ಆಳುತ್ತಾನೆ, ಅದೇ ಬಡವನಾದವನಿಗೆ ಎಷ್ಟೇ ಟ್ಯಾಲೆಂಟ್ ಇದ್ದರೂ ಕೆಲವೊಮ್ಮೆ ತೀರಾ ಹತ್ತಿರ ಸಂಬಂಧಿಕರೇ ಅಷ್ಟೇ ಏಕೆ ಸ್ವಂತ ಮಕ್ಕಳೇ ದೂರ ಇಡುವುದು ಪ್ರತಿನಿತ್ಯ ನಡೆದೇ ಇದೆ. ಆದರೆ, ಬಡತನ ಒಂದೇಕಾರಣಕ್ಕೆ ಹತ್ತಿರ ಸೇರಿಸಿಕೊಳ್ಳದವರೇ ಈಗ ತನ್ನನ್ನು ನೋಡಲು ಕ್ಯೂ ನಿಲ್ಲುವಂತೆ ಮಾಡಿದ್ದಾನೆ 23ರ ಯುವಕ. ಈತನ ಯಶೋಗಾಥೆ ಈಗ ಅದೆಷ್ಟೋ ಯುವ ಮನಸ್ಸುಗಳಿಗೆ ದಾರಿದೀಪವೂ ಆಗಿದೆ.
ಇದು ಜಾರ್ಖಂಡ್ನ ರತುವಿನಲ್ಲಿ ಬಡ ಕುಟುಂಬದಲ್ಲಿ ಬೆಳೆದ ಅಂಕಿತ್ ಆಶಿಷ್ ಮಿಶ್ರಾ ರೋಚಕ ಕಥನ.ತಾಯಿ ಉಷಾ ದೇವಿ ಮತ್ತು ತಂದೆ ಪ್ರೇಮ್ ಪ್ರಕಾಶ್ ಮಿಶ್ರಾ ಕುಟುಂಬವನ್ನು ಪೋಷಿಸಲು ಸಣ್ಣ ಚಹಾ ಗಾಡಿಯಿಂದ ಜೀವನ ಸಾಗಿಸುತ್ತಿದ್ದರು. ಆರಂಭದಿಂದಲೂ ಬಡತನವನ್ನೇ ನೋಡಿದ ಅಂಕಿತ್ ಏನಾದರೂ ಸಾಧನೆ ಮಾಡಬೇಕು ಎನ್ನುವ ಹಂಬಲ. ಆದರೆ ದುಡ್ಡು ಬೇಕಲ್ಲ? ಮಗನಲ್ಲಿ ಇರುವ ಅಗಾಧ ಪ್ರತಿಭೆಯನ್ನು ಕಂಡ ಅಪ್ಪ-ಅಮ್ಮ ಹೇಗೋ ಹಣವನ್ನು ಹೊಂದಿಸಿಕೊಂಡು ಓದಿಸುತ್ತಲೇ ಹೋದರು. ಅಂಕಿತ್ ಕೂಡ ಓದುತ್ತಲಿದ್ದ.
ಆದರೆ 10ನೇ ತರಗತಿಯಲ್ಲಿ ನಡೆದ ಒಂದು ಘಟನೆ ಆತನನ್ನು ಕುಗ್ಗಿಸಿಬಿಟ್ಟಿತು. 10ನೇ ತರಗತಿಯಲ್ಲಿ ತಮ್ಮ ಜಿಲ್ಲೆಗೇ ಟಾಪರ್ ಆಗಿ ಹೊರಹೊಮ್ಮಿದ್ದರೂ ಅಂಕಿತ್ ಜೀವನದಲ್ಲಿ ಒಂದು ಕಹಿ ಘಟನೆ ನಡೆಯಿತು. ಅವರ ಸಂಬಂಧಿಕರೊಬ್ಬರು ಅಂಕಿತ್ ಅಪ್ಪ-ಅಮ್ಮನನ್ನು ಮದುವೆ ಸಮಾರಂಭದಿಂದ ದೂರವಿಟ್ಟರಂತೆ. ಕಾರಣ ಅವರ ಬಳಿ ವಧು-ವರರಿಗೆ ಉಡುಗೊರೆ ನೀಡಲು ಹಣ ಇಲ್ಲ ಎನ್ನುವ ಕಾರಣಕ್ಕೆ! ಇದು ಅಂಕಿತ್ ಮನಸ್ಸಿನ ಮೇಲೆ ತುಂಬಾ ಗಂಭೀರ ಪರಿಣಾಮ ಬೀರಿತ್ತು. ಬೇರೆಯವರಾಗಿದ್ದರೆ ಸಂಬಂಧಿಕರ ವಿರುದ್ಧ ಕುದಿಯುತ್ತಾ, ಅವರ ಮೇಲೆ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದರೋ ಏನೋ. ಆದರೆ ಅಂಕಿತ್ಗೆ ಆ ಕ್ಷಣದಲ್ಲಿ ಎನ್ನಿಸಿದ್ದು, ತನ್ನಲ್ಲಿರುವ ವಿದ್ಯೆಯಿಂದಲೇ ಇವರ ಈ ಅವಮಾನಕ್ಕೆ ತಕ್ಕ ಪಾಠ ಕಲಿಸಬೇಕು ಎನ್ನುವುದು.
ಇದರ ಪರಿಣಾಮವಾಗಿಯೇ ಕೇವಲ 23 ನೇ ವಯಸ್ಸಿನಲ್ಲಿ, ಅಂಕಿತ್ ಈಗ ಯುಪಿಎಸ್ಸಿ ಸಿಎಪಿಎಫ್ (ಎಸಿ) ಪರೀಕ್ಷೆ 2025 ರಲ್ಲಿ ಅಖಿಲ ಭಾರತ ರ್ಯಾಂಕ್ 236 ಪಡೆದ ನಂತರ ಸಹಾಯಕ ಕಮಾಂಡೆಂಟ್ ಆಗಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ತಯಾರಿ ನಡೆಸಿದರು. ಅವರ ಪ್ರಯಾಣವು ಕೇವಲ ಪರೀಕ್ಷೆಯಲ್ಲಿ ಉತ್ತೀರ್ಣನಾಗುವುದಲ್ಲ, ಅದು ವರ್ಷಗಳ ತ್ಯಾಗವನ್ನು ಅರ್ಥಪೂರ್ಣವಾಗಿ ಪರಿವರ್ತಿಸುವ ಬಗ್ಗೆಯಾಗಿತ್ತು. ಅಂಕಿತ್ ಅವರ ಆರಂಭಿಕ ಶಿಕ್ಷಣವು ಸರಸ್ವತಿ ಶಿಶು ಮಂದಿರದಲ್ಲಿ ಪ್ರಾರಂಭವಾಯಿತು, ನಂತರ ಸೇಂಟ್ ಕ್ಸೇವಿಯರ್ಸ್ ಕಾಲೇಜಿನಲ್ಲಿ ಪ್ರಾರಂಭವಾಯಿತು. ನಂತರ ಅವರು ಶ್ಯಾಮ ಪ್ರಸಾದ್ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರದಲ್ಲಿ ಬಿ.ಎಸ್ಸಿ. ಪಡೆದರು. ಹಣಕಾಸಿನ ಸಮಸ್ಯೆಯ ನಡುವೆಯೂ ಮಗನ ಶಿಕ್ಷಣಕ್ಕೆ ಅಪ್ಪ-ಅಮ್ಮ ಹಣವನ್ನು ಹೊಂದಿಸಲು ಏನೆಲ್ಲಾ ಸಾಧ್ಯವೋ ಅಷ್ಟನ್ನೂ ಮಾಡಿದರು.
2024-25 ರಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗಂಭೀರವಾಗಿ ತಯಾರಿ ನಡೆಸಲು ಅಂಕಿತ್ ದೆಹಲಿಗೆ ತೆರಳಿದರು. ಆದರೆ ಮೊದಲ ಪ್ರಯತ್ನವು ನಿರೀಕ್ಷಿಸಿದ ಫಲಿತಾಂಶ ಸಿಗಲಿಲ್ಲ. ಕೇವಲ 7 ಅಂಕಗಳ ಅಂತರದಿಂದ ಪರೀಕ್ಷೆಯಲ್ಲಿ ವಿಫಲರಾದರು. ಆದರೆ ಅಂಕಿತ್ ಅಷ್ಟಕ್ಕೇ ಸುಮ್ಮನಾಗಲಿಲ್ಲ. ಬಿಟ್ಟುಕೊಡುವ ಬದಲು, ಹೆಚ್ಚು ಸ್ಪಷ್ಟತೆ ಮತ್ತು ದೃಢನಿಶ್ಚಯದಿಂದ ತಯಾರಿ ನಡೆಸಿದರು. ತನ್ನ ಗುರಿಯತ್ತ ಇನ್ನಷ್ಟು ಗಮನಹರಿಸಿದಾಗ ಎರಡನೇ ಪ್ರಯತ್ನದಲ್ಲಿಯೆ ಎಲ್ಲವೂ ಬದಲಾಯಿತು. ಅಂಕಿತ್ UPSC CAPF (AC) 2025 ರಲ್ಲಿ AIR 236 ಅನ್ನು ಪಡೆದುಕೊಂಡರು. ಈಗ ಗೆಜೆಟೆಡ್ ಆಫೀಸರ್ ಆಗಿ ಮಿಂಚುತ್ತಿದ್ದಾರೆ. ಬಡವನೆಂದು ದೂರವಿಟ್ಟವರೇ ಈಗ ಕೆಲಸ ಮಾಡಿಸಿಕೊಳ್ಳಲು ಕ್ಯೂ ನಿಲ್ಲುವ ಹಾಗೆ ಮಾಡಿದ್ದಾನೆ ಈ ಯುವಕ!