ಮುಂದಿನ 4 ವರ್ಷಗಳಲ್ಲಿ AI ಬಳಕೆಯಿಂದ 89 ಲಕ್ಷ ಉದ್ಯೋಗ ನಷ್ಟ, ಈ ಮೂರು ಸೆಕ್ಟರ್‌ಗಳಿಗೆ ಹೆಚ್ಚಿನ ಆಘಾತ

Published : Nov 16, 2026, 04:43 PM IST
AI to Eliminate 89 Lakh Jobs by 2030

ಸಾರಾಂಶ

ಗಾರ್ಟ್‌ನರ್ ಬಿಡುಗಡೆ ಮಾಡಿರುವ ಹೊಸ ವರದಿಯ ಪ್ರಕಾರ, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದಿಂದ 2030ರ ವೇಳೆಗೆ 89 ಲಕ್ಷ ಉದ್ಯೋಗಗಳು ನಾಶವಾಗಲಿವೆ. ಆದರೆ, ಇದೇ ಅವಧಿಯಲ್ಲಿ 1.6 ಕೋಟಿ ಹೊಸ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.

ಬೆಂಗಳೂರು (ನ.16): ಜಗತ್ತಿನಾದ್ಯಂತ ಕಂಪನಿಗಳು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೇಲೆ ವೇಗವಾಗಿ ಹೂಡಿಕೆ ಮಾಡುತ್ತಿದ್ದು, ಬಹುತೇಕ ಎಲ್ಲಾ ಕ್ಷೇತ್ರಗಳ ಮೇಲೆ ಎಐ ಪ್ರಭಾವ ಬೀರಿದೆ. ಇದೀಗ ಪ್ರತಿಷ್ಠಿತ ಬಿಸಿನೆಸ್ ಮತ್ತು ಟೆಕ್ನಾಲಜಿ ಇನ್‌ಸೈಟ್ಸ್ ಸಂಸ್ಥೆ 'ಗಾರ್ಟ್‌ನರ್' (Gartner) ಬಿಡುಗಡೆ ಮಾಡಿರುವ ಹೊಸ ವರದಿಯು ಉದ್ಯೋಗ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ: ಮುಂದಿನ 4 ವರ್ಷಗಳಲ್ಲಿ ಅಂದರೆ 2030ರ ವೇಳೆಗೆ ಎಐ ಕಾರಣದಿಂದ ಜಾಗತಿಕವಾಗಿ 89 ಲಕ್ಷ ಉದ್ಯೋಗಗಳು ನಾಶವಾಗಲಿದ್ದು, ಕಂಪನಿಗಳು ಈಗಾಗಲೇ ಇದಕ್ಕೆ ಮುನ್ನುಡಿ ಬರೆದಿವೆ.

ವರದಿಯ ಪ್ರಕಾರ, ಕೇವಲ 2026ರಲ್ಲೇ ಹಲವು ಕಂಪನಿಗಳು ಸುಮಾರು 13 ಲಕ್ಷ ಹುದ್ದೆಗಳ ನೇಮಕಾತಿಯನ್ನು ಮುಂದೂಡಿದ್ದು, 22 ಲಕ್ಷ ಉದ್ಯೋಗಗಳನ್ನು ರದ್ದುಗೊಳಿಸಿವೆ. ವಿಶೇಷವಾಗಿ ಮೂರು ಪ್ರಮುಖ ವಲಯಗಳ ಉದ್ಯೋಗಗಳ ಮೇಲೆ ಎಐ ಅತ್ಯಂತ ತೀವ್ರ ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ಇದೇ ಅವಧಿಯಲ್ಲಿ 1.6 ಕೋಟಿ ಹೊಸ ಉದ್ಯೋಗಗಳು ಸೃಷ್ಟಿಯಾಗುವ ಆಶಾದಾಯಕ ಮುನ್ಸೂಚನೆಯನ್ನೂ ವರದಿ ನೀಡಿದೆ.

4 ವರ್ಷ 11 ತಿಂಗಳಲ್ಲಿ 8.50 ಲಕ್ಷಕ್ಕೂ ಅಧಿಕ ಟೆಕ್ ಉದ್ಯೋಗಿಗಳ ವಜಾ

ಕಳೆದ ಕೆಲವು ವರ್ಷಗಳಿಂದ ಕಾರ್ಪೊರೇಟ್ ಜಗತ್ತಿನಲ್ಲಿ ಉದ್ಯೋಗ ಕಡಿತದ (Layoffs) ಸರಣಿ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. Layoffs.fyi ದತ್ತಾಂಶದ ಪ್ರಕಾರ, ಕಳೆದ 4 ವರ್ಷ 11 ತಿಂಗಳುಗಳಲ್ಲಿ ಕೇವಲ ಟೆಕ್ ಕಂಪನಿಗಳಲ್ಲೇ ಒಟ್ಟು 8,50,628 ಮಂದಿ ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಈ ಅವಧಿಯಲ್ಲಿ ಅತಿ ಹೆಚ್ಚು ಅಂದರೆ 2024ರಲ್ಲಿ 2,65,660 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದರು.

2030ರ ವೇಳೆಗೆ 50 ಲಕ್ಷ ಮಂದಿಗೆ ನೇಮಕಾತಿ ವಿಳಂಬದ ಬಿಸಿ

ಗಾರ್ಟ್‌ನರ್ ವರದಿಯ ಪ್ರಮುಖ ಅಂಶಗಳನ್ನು ನೋಡುವುದಾದರೆ, 2030ರ ವೇಳೆಗೆ ವಿಶ್ವದಾದ್ಯಂತ ಶೇ. 0.4 ರಿಂದ ಶೇ. 1.8 ರಷ್ಟು ಉದ್ಯೋಗಿಗಳು ಎಐ ಕಾರಣದಿಂದ ತಮ್ಮ ಕೆಲಸ ಕಳೆದುಕೊಳ್ಳುವ ಸಾಧ್ಯತೆಯಿದೆ. ಬಿಸಿನೆಸ್ ಮತ್ತು ಐಟಿ ಕಾರ್ಯನಿರ್ವಾಹಕರು ಹೊಸ ಹುದ್ದೆಗಳ ಸೃಷ್ಟಿಯನ್ನು ಮುಂದೂಡುತ್ತಿರುವುದರಿಂದ, 2030ರ ವೇಳೆಗೆ ಸುಮಾರು 5 ಮಿಲಿಯನ್ (50 ಲಕ್ಷ) ಜನರು ನೇಮಕಾತಿ ಪ್ರಕ್ರಿಯೆಯಲ್ಲಿ ವಿಳಂಬವನ್ನು ಎದುರಿಸಬೇಕಾಗುತ್ತದೆ.

89 ಲಕ್ಷ ಉದ್ಯೋಗ ನಾಶದ ಜೊತೆಗೆ 1.6 ಕೋಟಿ ಹೊಸ ಉದ್ಯೋಗಗಳ ಸೃಷ್ಟಿ!

ಒಂದೆಡೆ 89 ಲಕ್ಷ ಉದ್ಯೋಗಗಳು ಕಣ್ಮರೆಯಾದರೆ, ಮತ್ತೊಂದೆಡೆ 2030ರ ವೇಳೆಗೆ 1.6 ಕೋಟಿ ಹೊಸ ಬಗೆಯ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಗಾರ್ಟ್‌ನರ್ ತಿಳಿಸಿದೆ. 'ಎಐ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಗಳು, ಇದನ್ನು ಮಾನವ ಶ್ರಮದ ಬದಲಿ ವ್ಯವಸ್ಥೆಯಾಗಿ (Replacement) ನೋಡುತ್ತಿಲ್ಲ. ಬದಲಾಗಿ, ಕೆಲಸದ ವಿಧಾನಗಳನ್ನು ಮರುರೂಪಿಸಲು ಮತ್ತು ಬದಲಾಗುತ್ತಿರುವ ಮಾರುಕಟ್ಟೆ ಪರಿಸ್ಥಿತಿಗಳಲ್ಲಿ ಸ್ಪರ್ಧಿಸಲು ಉದ್ಯೋಗಿಗಳು ಹಾಗೂ ತಂತ್ರಜ್ಞಾನದ ಸಾಮರ್ಥ್ಯಗಳ ನಡುವೆ ಸಮತೋಲನ ಸಾಧಿಸುವ ಸಾಧನವಾಗಿ ಬಳಸಿಕೊಳ್ಳುತ್ತಿವೆ. ಎಐನ ಆರ್ಥಿಕ ಮೌಲ್ಯವು ಕೇವಲ ಮಾನವ ಶ್ರಮವನ್ನು ಬದಲಾಯಿಸುವುದಕ್ಕಿಂತ ಮಿಗಿಲಾದುದು ಎಂಬುದನ್ನು ಅವು ಖಚಿತಪಡಿಸುತ್ತಿವೆ' ಎಂದು ಗಾರ್ಟ್‌ನರ್ ಸಂಸ್ಥೆಯ ವಿಪಿ ಅನಲಿಸ್ಟ್ ಹೆಲೆನ್ ಪೊಯಿಟ್ವಿನ್ (Helen Poitevin) ತಿಳಿಸಿದ್ದಾರೆ.

ಈ 3 ವಲಯಗಳ ಮೇಲೆ ಎಐನ ಅತಿ ದೊಡ್ಡ ಪರಿಣಾಮ

ಜಗತ್ತಿನ ಸುಮಾರು 43.55 ಕೋಟಿ ಉದ್ಯೋಗಿಗಳು (ಒಟ್ಟು ಕಾರ್ಯಪಡೆಯ ಶೇ. 20ಕ್ಕಿಂತ ಹೆಚ್ಚು) ಬದಲಾಗುತ್ತಿರುವ ಅಗತ್ಯಗಳು, ಜವಾಬ್ದಾರಿಗಳು ಮತ್ತು ಕೆಲಸದ ಶೈಲಿಗೆ ತಕ್ಕಂತೆ ತಮ್ಮನ್ನು ತಾವು ಬದಲಾಯಿಸಿಕೊಳ್ಳಬೇಕಾಗುತ್ತದೆ. 2030ರ ವೇಳೆಗೆ ಎಐ ಪ್ರಭಾವವು ಎಲ್ಲಾ ಉದ್ಯಮಗಳ ಮೇಲೆ ಒಂದೇ ರೀತಿ ಇರುವುದಿಲ್ಲ.

ತಂತ್ರಜ್ಞಾನ ವಲಯ (Technology Sector)

ಈ ವಲಯದ ಸುಮಾರು ಶೇ. 70 ರಷ್ಟು ಕಾರ್ಯಪಡೆಯ ಮೇಲೆ ಎಐ ನೇರ ಪರಿಣಾಮ ಬೀರಲಿದೆ. ಆದರೂ, ಇದು ಅತ್ಯಂತ ವೇಗವಾಗಿ ಬೆಳೆಯುವ ಕ್ಷೇತ್ರವಾಗಿ ಮುಂದುವರಿಯಲಿದೆ. ಇಲ್ಲಿ 4 ಲಕ್ಷ ಹಳೆಯ ಉದ್ಯೋಗಗಳು ನಾಶವಾದರೆ, 19 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಅಂದರೆ ಒಟ್ಟಾರೆ 15 ಲಕ್ಷ ಉದ್ಯೋಗಗಳ ನಿವ್ವಳ ಲಾಭ (Net gain) ಆಗಲಿದೆ.

ಆಸ್ತಿ-ಆಧಾರಿತ ಉದ್ಯಮಗಳು (Asset-Intensive Industries)

ತಯಾರಿಕೆ (Manufacturing), ಇಂಧನ (Energy) ಮತ್ತು ಭೌತಿಕ ಮೂಲಸೌಕರ್ಯಕ್ಕೆ (Physical Infrastructure) ಸಂಬಂಧಿಸಿದ ಈ ಕ್ಷೇತ್ರಗಳಲ್ಲಿ ಅತಿ ದೊಡ್ಡ ಮಂಥನ ನಡೆಯಲಿದೆ. ಇಲ್ಲಿ 60 ಲಕ್ಷ ಹಳೆಯ ಉದ್ಯೋಗಗಳು ಕೊನೆಗೊಂಡರೆ, ಬರೋಬ್ಬರಿ 64 ಲಕ್ಷ ಹೊಸ ಉದ್ಯೋಗಗಳು ಹುಟ್ಟಿಕೊಳ್ಳಲಿವೆ.

ಸಾರ್ವಜನಿಕ / ಸರ್ಕಾರಿ ವಲಯ (Public / Government Sector)

ಉದ್ಯೋಗ ಲಾಭಕ್ಕಿಂತ ನಷ್ಟವನ್ನೇ ಅನುಭವಿಸುವ ಏಕೈಕ ವಲಯ ಇದಾಗಿದೆ. ಸರ್ಕಾರಗಳು ಆದಾಯ ಹೆಚ್ಚಳಕ್ಕಿಂತ ಹೆಚ್ಚಾಗಿ ಕಾರ್ಯಕ್ಷಮತೆ ಹೆಚ್ಚಿಸಲು ಮತ್ತು ವೆಚ್ಚ ಕಡಿತಗೊಳಿಸಲು ಆದ್ಯತೆ ನೀಡಲಿವೆ. ಇದರಿಂದ ಈ ವಲಯದಲ್ಲಿ 9 ಲಕ್ಷ ಉದ್ಯೋಗಗಳು ಕಡಿಮೆಯಾಗಲಿದ್ದು, ಕೇವಲ 4 ಲಕ್ಷ ಹೊಸ ಉದ್ಯೋಗಗಳು ಮಾತ್ರ ಸೃಷ್ಟಿಯಾಗಲಿವೆ.

PREV
Read more Articles on
click me!

Recommended Stories

BSF ನಲ್ಲಿ ಒಂದು ಸಾವಿರಕ್ಕೂ ಅಧಿಕ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ನೇಮಕಾತಿ, 1 ಲಕ್ಷದವರೆಗೂ ವೇತನ!
ʻಡೆಸ್ಕ್‌ ಮೇಲೆ ಮಲಗ್ತಾರೆ, ಅತೀ ಸೋಮಾರಿʼ ಅಂತ ಕೆಲ್ಸದಿಂದ ತೆಗೆದು ಹಾಕಿದ್ದ ಕಂಪನಿ, ಕೋರ್ಟ್ ನಲ್ಲಿ ಕೇಸ್ ಗೆದ್ದ ಮಹಿಳೆ