ಕೋಟೆನಾಡಿನಿಂದ ಕ್ಯಾಲಿಫೋರ್ನಿಯಾ: 2.6 ಕೋಟಿ ಸಂಬಳಕ್ಕೆ Nvidia ಕೇಂದ್ರ ಕಚೇರಿಯಲ್ಲಿ ಕೆಲಸ ಗಿಟ್ಟಿಸಿದ ಚಿತ್ರದುರ್ಗದ ಹುಡುಗ

Published : Jul 11, 2026, 07:34 PM IST
Prithviraj Nvidia engineer salary

ಸಾರಾಂಶ

ಚಿತ್ರದುರ್ಗದ ಸಣ್ಣ ಹಳ್ಳಿಯ ಯುವ ಇಂಜಿನಿಯರ್ ಪೃಥ್ವಿರಾಜ್, ತಮ್ಮ ನಿರಂತರ ಪರಿಶ್ರಮ ಮತ್ತು ಶ್ರದ್ಧೆಯಿಂದ ಪ್ರಖ್ಯಾತ ಟೆಕ್ ಕಂಪನಿ ‘ಎನ್‌ವಿಡಿಯಾ’ದಲ್ಲಿ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ. ಐಐಟಿ ಪದವಿ ಇಲ್ಲದಿದ್ದರೂ, ಕೌಶಲ್ಯ ಅಭಿವೃದ್ಧಿಯಿಂದಲೇ ವಾರ್ಷಿಕ 2.6 ಕೋಟಿ ರೂ. ವೇತನದ ಉದ್ಯೋಗ ಗಿಟ್ಟಿಸಿದ್ದಾರೆ.

ಬೆಂಗಳೂರು (ಜು.11): 'ಸಾಧನೆಗೆ ಹಿನ್ನೆಲೆ ಮುಖ್ಯವಲ್ಲ, ಶ್ರದ್ಧೆ ಮತ್ತು ನಿರಂತರ ಪರಿಶ್ರಮವಿದ್ದರೆ ಜಗತ್ತಿನ ಯಾವುದೇ ಶಿಖರವನ್ನು ತಲುಪಬಹುದು..' ಅನ್ನೋದಕ್ಕೆ ಕರ್ನಾಟಕದ ಯುವ ಇಂಜಿನಿಯರ್ ಪೃಥ್ವಿರಾಜ್ ಅವರ ಯಶೋಗಾಥೆಯೇ ಅತ್ಯುತ್ತಮ ಉದಾಹರಣೆ. ಪ್ರಸ್ತುತ ಕ್ಯಾಲಿಫೋರ್ನಿಯಾದಲ್ಲಿರುವ ಜಗತ್ತಿನ ಮುಂಚೂಣಿಯ ಟೆಕ್ ಕಂಪನಿ ‘ಎನ್‌ವಿಡಿಯಾ’ (Nvidia) ಪ್ರಧಾನ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೃಥ್ವಿರಾಜ್ ಅವರ ಈ ಯಶಸ್ಸಿನ ಪಯಣದ ಕುರಿತು ಲಿಂಕ್ಡ್‌ಇನ್‌ನಲ್ಲಿ (LinkedIn) ಹಂಚಿಕೊಳ್ಳಲಾದ ಪೋಸ್ಟ್ ಜಾಗತಿಕವಾಗಿ ಭಾರಿ ವೈರಲ್ ಆಗಿದೆ. ಕರ್ನಾಟಕದ ಕೋಟೆನಾಡು ಚಿತ್ರದುರ್ಗದ ಸಣ್ಣ ಹಳ್ಳಿಯೊಂದರಿಂದ ಜಗತ್ತಿನ ಅತ್ಯಂತ ಶ್ರೀಮಂತ ಹಾಗೂ ಪ್ರಭಾವಿ ತಂತ್ರಜ್ಞಾನ ಕಂಪನಿಯವರೆಗೆ ಬೆಳೆದು ನಿಂತ ಪೃಥ್ವಿರಾಜ್ ಅವರ ಈ ರೋಚಕ ಜರ್ನಿಯ ವಿವರ ಇಲ್ಲಿದೆ.

ಎತ್ತಿನ ಬಂಡಿಯ ಹಳ್ಳಿಯಿಂದ ಕ್ಯಾಲಿಫೋರ್ನಿಯಾದವರೆಗೆ

ವೈರಲ್ ಆಗಿರುವ ಲಿಂಕ್ಡ್‌ಇನ್ ಪೋಸ್ಟ್‌ನ ಪ್ರಕಾರ, ಪೃಥ್ವಿರಾಜ್ ಬೆಳೆದದ್ದು ಚಿತ್ರದುರ್ಗದ ಸಮೀಪದ ಒಂದು ಪುಟ್ಟ ಹಳ್ಳಿಯಲ್ಲಿ. ಆ ಗ್ರಾಮದಲ್ಲಿ ಇಂದಿಗೂ ಎತ್ತಿನ ಬಂಡಿಗಳೇ ಸಾರಿಗೆಯ ಪ್ರಮುಖ ಆಧಾರವಾಗಿವೆ. ಇಂತಹ ಗ್ರಾಮೀಣ ಹಾಗೂ ಕೃಷಿ ಹಿನ್ನೆಲೆಯಿಂದ ಬಂದ ಪೃಥ್ವಿರಾಜ್, ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯದಲ್ಲಿ (PES University) ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ ಪಡೆದಿದ್ದರು. ದೇಶದ ಪ್ರತಿಷ್ಠಿತ ಐಐಟಿ (IIT) ಪದವಿಯಾಗಲಿ ಅಥವಾ ಯಾವುದೇ ದೊಡ್ಡ ಶ್ರೀಮಂತ ಕುಟುಂಬದ ಹಿನ್ನೆಲೆಯಾಗಲಿ ಇಲ್ಲದಿದ್ದರೂ, ಅವರು ಕೇವಲ ತಮ್ಮ ಕೌಶಲ್ಯಗಳ ಅಭಿವೃದ್ಧಿಯ ಮೇಲಷ್ಟೇ ಗಮನ ಹರಿಸಿದರು.

ಕ್ಲಾಸ್‌ರೂಮ್ ಕಲಿಕೆಗೆ ಮಾತ್ರ ಸೀಮಿತವಾಗದೆ ನಿರಂತರ ಪ್ರಯತ್ನ, ಇಂಟರ್ನ್‌ಶಿಪ್‌ಗಳು, ಸ್ವಂತ ಪ್ರಾಜೆಕ್ಟ್‌ಗಳು ಹಾಗೂ ಹೊಸ ತಂತ್ರಜ್ಞಾನಗಳ ನಿರಂತರ ಕಲಿಕೆಯ ಮೂಲಕ ತಮ್ಮ ಜ್ಞಾನವನ್ನು ವಿಸ್ತರಿಸಿಕೊಂಡರು. ಅವರ ಈ ಅದ್ಭುತ ಸಮರ್ಪಣಾ ಮನೋಭಾವವೇ ಇಂದು ಅವರನ್ನು ಎನ್‌ವಿಡಿಯಾ ಕಂಪನಿಯಲ್ಲಿ ಉನ್ನತ ಹುದ್ದೆಗೆ ಕಾರಣವಾಗಿದೆ.

ವರ್ಷಕ್ಕೆ ಬರೋಬ್ಬರಿ 2.6 ಕೋಟಿ ರೂ. ವೇತನ!:

ಪೃಥ್ವಿರಾಜ್ ಅವರು ಪ್ರಸ್ತುತ ಎನ್‌ವಿಡಿಯಾ ಕಂಪನಿಯಲ್ಲಿ ವಾರ್ಷಿಕ ಸುಮಾರು 2.6 ಕೋಟಿ ರೂಪಾಯಿಗಳ ಭಾರಿ ಮೊತ್ತದ ಪ್ಯಾಕೇಜ್ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಇಂದು ಜಗತ್ತಿನಾದ್ಯಂತ ಸಂಚಲನ ಮೂಡಿಸುತ್ತಿರುವ ಕೃತಕ ಬುದ್ಧಿಮತ್ತೆ (Artificial Intelligence - AI) ತಂತ್ರಜ್ಞಾನವನ್ನು ನಿಯಂತ್ರಿಸುವ ಹಾಗೂ ಚಾಲನೆ ನೀಡುವ ಅತ್ಯಂತ ಸುಧಾರಿತ ಮತ್ತು ಅತ್ಯಾಧುನಿಕ ಮೈಕ್ರೋಚಿಪ್‌ಗಳ (Advanced Chips) ಅಭಿವೃದ್ಧಿ ಹಾಗೂ ವಿನ್ಯಾಸದ ವಿಭಾಗದಲ್ಲಿ ಅವರು ಪ್ರಮುಖ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಬ್ಬ ವ್ಯಕ್ತಿಯ ಯಶಸ್ಸನ್ನು ಆತ ಎಲ್ಲಿದ ಆರಂಭಿಸುತ್ತಾನೆ ಎಂಬುದು ನಿರ್ಧರಿಸುವುದಿಲ್ಲ, ಬದಲಿಗೆ ಆತನ ಶಿಸ್ತು, ಪರಿಶ್ರಮ ಮತ್ತು ಕಲಿಯುವ ಹಂಬಲ ನಿರ್ಧರಿಸುತ್ತದೆ ಎಂಬುದಕ್ಕೆ ಪೃಥ್ವಿರಾಜ್ ಅವರ ಬದುಕೇ ಸಾಕ್ಷಿ.

ನೆಟ್ಟಿಗರ ಮನಗೆದ್ದ ಯಶೋಗಾಥೆ; ಲಿಂಕ್ಡ್‌ಇನ್‌ನಲ್ಲಿ ಹರಿದುಬಂದ ಕಾಮೆಂಟ್‌ಗಳು

ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಕೇವಲ ಐಐಟಿಯಂತಹ ಪ್ರಮುಖ ಪ್ರೀಮಿಯರ್ ಶಿಕ್ಷಣ ಸಂಸ್ಥೆಗಳ ಪದವೀಧರರು ಮಾತ್ರವೇ ಯಶಸ್ವಿ ವೃತ್ತಿಜೀವನವನ್ನು ನಿರ್ಮಿಸಲು ಸಾಧ್ಯ ಎಂಬ ಭ್ರಮೆಯನ್ನು ಪೃಥ್ವಿರಾಜ್ ಅವರ ಕಥೆ ಸುಳ್ಳಾಗಿಸಿದೆ. ಸೀಮಿತ ಸಂಪನ್ಮೂಲಗಳ ನಡುವೆಯೂ ದೊಡ್ಡ ಕನಸು ಕಾಣುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮತ್ತು ಯುವ ವೃತ್ತಿಪರರಿಗೆ ಇದು ದೊಡ್ಡ ಪ್ರೇರಣೆಯಾಗಿದೆ ಎಂದು ಸಾವಿರಾರು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

"ಇಂದಿಗೂ ಅನೇಕರಿಗೆ ಶಿಕ್ಷಣ ಎನ್ನುವುದು ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಯನ್ನು ಮೀರಿ ಉನ್ನತ ಆರ್ಥಿಕ ಮಟ್ಟಕ್ಕೆ ಬೆಳೆಯಲು ಇರುವ ಏಕೈಕ ಹೆಬ್ಬಾಗಿಲಾಗಿದೆ. ಕೃತಕ ಬುದ್ಧಿಮತ್ತೆಯಿಂದ (AI) ಶಿಕ್ಷಣ ಕ್ಷೇತ್ರಕ್ಕೆ ಏನಾಗಬಹುದು ಎಂದು ನಾವು ಎಷ್ಟು ಚರ್ಚಿಸಿದರೂ, ನೈಜ ಶಿಕ್ಷಣದ ಪ್ರಸ್ತುತತೆ ಮತ್ತು ಪ್ರಭಾವ ಎಂದಿಗೂ ಬದಲಾಗುವುದಿಲ್ಲ." ಎಂದು ಯೂಸರ್‌ ಒಬ್ಬರು ಕಾಮೆಂಟ್‌ ಮಾಡಿದ್ದಾರೆ.

"ನಿಜಕ್ಕೂ ಅತ್ಯಂತ ಸ್ಪೂರ್ತಿದಾಯಕ ಕಥೆ! ಹಿನ್ನೆಲೆಗಿಂತ ಸಮರ್ಪಣೆ, ನಿರಂತರ ಕಲಿಕೆ ಮತ್ತು ಹಠ ಮುಖ್ಯ ಎಂಬುದನ್ನು ಇದು ನಿರೂಪಿಸಿದೆ. ದೊಡ್ಡ ಕನಸು ಕಾಣುವ ಪ್ರತಿಯೊಬ್ಬ ಭಾರತೀಯ ವಿದ್ಯಾರ್ಥಿಗೂ ಇದು ಹೆಮ್ಮೆಯ ಕ್ಷಣ. ಪೃಥ್ವಿರಾಜ್ ಅವರಿಗೆ ಅಭಿನಂದನೆಗಳು ಮತ್ತು ಮುಂದಿನ ಭವಿಷ್ಯಕ್ಕೆ ಶುಭ ಹಾರೈಕೆಗಳು' ಎಂದು ಇನ್ನೊಬ್ಬರು ಬರೆದಿದ್ದಾರೆ.

ಮೂರನೇ ಯೂಸರ್‌ ಕಾಮೆಂಟ್‌ ಮಾಡಿದ್ದು, 'ನಿಮ್ಮ ಹಿನ್ನೆಲೆ ನಿಮ್ಮ ಭವಿಷ್ಯವನ್ನು ನಿರ್ಧರಿಸುವುದಿಲ್ಲ ಎಂಬುದಕ್ಕೆ ಇದೊಂದು ಅದ್ಭುತ ಜ್ಞಾಪನೆ. ಸ್ಥಿರತೆ, ಕಠಿಣ ಪರಿಶ್ರಮ ಮತ್ತು ನಿರಂತರ ಕಲಿಕೆಯು ನಿಮ್ಮನ್ನು ನೀವು ಊಹಿಸಿದ್ದಕ್ಕಿಂತಲೂ ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಬಲ್ಲದು. ನಿಜಕ್ಕೂ ಇದು ಗ್ರೇಟ್ ಮೋಟಿವೇಷನ್!' ಎಂದು ಬರೆದಿದ್ದಾರೆ.

PREV
Read more Articles on
click me!

Recommended Stories

500 ಪ್ಲಸ್ ಕಂಪನಿಗಳಿಗೆ ಅಪ್ಲೈ ಮಾಡಿದ್ರೂ ನೋ ಇಂಟರ್ವ್ಯೂ! ಬೆಂಗಳೂರು ಉದ್ಯೋಗ ಮಾರುಕಟ್ಟೆಯ ಶಾಕಿಂಗ್ ರಿಯಾಲಿಟಿ!
ಕೆಲಸ ಕೊಡುವ ಮುನ್ನವೇ ಭಾರತೀಯ ಇಂಜಿನಿಯರ್‌ಗೆ ಅಮೆರಿಕ ಸಿಇಒ ಹಾಕಿದ ವಿಚಿತ್ರ ಕಂಡೀಷನ್ಸ್ ಏನು?