ಐಪಿಎಲ್‌ನಲ್ಲಿ ಮಿಂಚಿದರಷ್ಟೇ ಧೋನಿ ಆಯ್ಕೆ!

By Kannadaprabha NewsFirst Published Mar 10, 2020, 1:55 PM IST
Highlights

ಧೋನಿ ಮುಂದಿನ ಕ್ರಿಕೆಟ್ ಭವಿಷ್ಯ ಏನು ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಮುಂಬರುವ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ತೋರಿದರಷ್ಟೇ 2020ರ ಟಿ20 ವಿಶ್ವಕಪ್‌ಗೆ ಧೋನಿಯನ್ನು ಪರಿಗಣಿಸಲಾಗುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ರಾಜ್‌ಕೋಟ್‌(ಮಾ.10): ಭಾರತ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ ಕ್ರಿಕೆಟ್‌ ಭವಿಷ್ಯದ ಬಗ್ಗೆ ಕುತೂಹಲ ಹೆಚ್ಚಾಗಿದೆ. 2019ರ ಏಕದಿನ ವಿಶ್ವಕಪ್‌ ಸೆಮಿಫೈನಲ್‌ ಬಳಿಕ ಕ್ರಿಕೆಟ್‌ನಿಂದ ದೂರ ಉಳಿದಿರುವ ಧೋನಿ ಈ ಸರಣಿಯಲ್ಲಿ ಆಡಬಹುದು, ಆ ಸರಣಿಯಲ್ಲಿ ಆಡಬಹುದು ಎನ್ನುವ ಕುತೂಹಲವಿತ್ತು. ಆದರೆ ಬಿಸಿಸಿಐ ಮಾತ್ರ ಧೋನಿಯನ್ನು ಆಯ್ಕೆ ಮಾಡಲಿಲ್ಲ. 

ಇದೀಗ ಆಯ್ಕೆ ಸಮಿತಿಗೆ ಹೊಸದಾಗಿ ಸೇರ್ಪಡೆಗೊಂಡ ಇಬ್ಬರು ಸದಸ್ಯರು ಸಹ ಸ್ಪಷ್ಟನಿಲುವು ಹೊಂದಿದ್ದಾರೆ. ಮುಂಬರುವ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ತೋರಿದರಷ್ಟೇ 2020ರ ಟಿ20 ವಿಶ್ವಕಪ್‌ಗೆ ಧೋನಿಯನ್ನು ಪರಿಗಣಿಸಲಾಗುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಧೋನಿ ಆಯ್ಕೆ ಕುರಿತು ನೂತನ ಆಯ್ಕೆ ಸಮಿತಿ ನಿರ್ಧಾರ ಬಹಿರಂಗ!

ನೂತನ ಆಯ್ಕೆಗಾರರಾದ ಸುನಿಲ್‌ ಜೋಶಿ ಹಾಗೂ ಹರ್ವಿಂದರ್‌ ಸಿಂಗ್‌ಗೆ ಸಂದರ್ಶನದ ವೇಳೆ ಮದನ್‌ ಲಾಲ್‌ ನೇತೃತ್ವದ ಕ್ರಿಕೆಟ್‌ ಸಲಹಾ ಸಮಿತಿ (ಸಿಎಸಿ), ಧೋನಿ ಕ್ರಿಕೆಟ್‌ ಭವಿಷ್ಯದ ಬಗ್ಗೆ ನಿಮ್ಮ ನಿಲುವೇನು ಎಂದು ಪ್ರಶ್ನಿಸಿತ್ತು. ಈ ಇಬ್ಬರು ಸ್ಪಷ್ಟನಿಲುವು ಹೊಂದಿದ್ದಾರೆ ಎನ್ನುವ ಕಾರಣಕ್ಕೆ ಅವರನ್ನು ನೇಮಕ ಮಾಡಲಾಯಿತು ಎಂದು ಲಾಲ್‌ ತಿಳಿಸಿದ್ದರು.

‘ಐಪಿಎಲ್‌ನಲ್ಲಿ ಧೋನಿ ಹೇಗೆ ಆಡುತ್ತಾರೆ ಎನ್ನುವುದರ ಮೇಲೆ ಅವರನ್ನು ಆಯ್ಕೆಗೆ ಪರಿಗಣಿಸುವ ಬಗ್ಗೆ ನಿರ್ಧರಿಸಲಾಗುತ್ತದೆ. ಅವರಷ್ಟೇ ಏಕೆ, ಐಪಿಎಲ್‌ನಲ್ಲಿ ಹಲವು ಹಿರಿಯ ಹಾಗೂ ಯುವ ಆಟಗಾರರು ಆಡಲಿದ್ದಾರೆ. ಎಲ್ಲರ ಪ್ರದರ್ಶನದ ಮೇಲೆ ಕಣ್ಣಿಡಲಿದ್ದೇವೆ. ಯಾರು ಉತ್ತಮವಾಗಿ ಆಡುತ್ತಾರೋ, ಅವರನ್ನು ಪರಿಗಣಿಸಲಾಗುತ್ತದೆ. ಕೆಲ ಅಚ್ಚರಿಯ ಆಯ್ಕೆಗಳನ್ನು ನೋಡಬಹುದು’ ಎಂದು ಬಿಸಿಸಿಐ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

6,6,6,6,6 ಧೋನಿ ಸುನಾಮಿ, CSK ಅಭ್ಯಾಸದ MSD ಸಿಕ್ಸರ್ ಸುರಿಮಳೆ!

ಧೋನಿ ಬಗ್ಗೆ ಚರ್ಚೆ ಇಲ್ಲ: ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಭಾನುವಾರ ಸುನಿಲ್‌ ಜೋಶಿ ನೇತೃತ್ವದಲ್ಲಿ ಆಯ್ಕೆ ಸಮಿತಿ ಸಭೆ ನಡೆಯಿತು. ಆದರೆ ಸಭೆಯಲ್ಲಿ ಧೋನಿ ಆಯ್ಕೆ ಬಗ್ಗೆ ಯಾವುದೇ ಚರ್ಚೆ ನಡೆಯಲಿಲ್ಲ ಎಂದು ಬಿಸಿಸಿಐ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಧೋನಿಯ ಉತ್ತರಾಧಿಕಾರಿ ಎಂದೇ ಕರೆಸಿಕೊಳ್ಳುತ್ತಿದ್ದ ರಿಷಭ್‌ ಪಂತ್‌ ಮೇಲೆ ಭಾರತ ತಂಡ ನಂಬಿಕೆ ಕಳೆದುಕೊಳ್ಳುತ್ತಿದೆ. ಅದೇ ಕಾರಣಕ್ಕೆ ಕೆ.ಎಲ್‌.ರಾಹುಲ್‌ರನ್ನು ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಆಗಿ ಬೆಳಸಲಾಗುತ್ತಿದೆ. ಹೀಗಾಗಿ ಧೋನಿ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ತೋರಿದರೆ ಖಂಡಿತವಾಗಿಯೂ ಟಿ20 ವಿಶ್ವಕಪ್‌ಗೆ ಅವರನ್ನು ಆಯ್ಕೆ ಮಾಡಲಾಗುತ್ತದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಮಾ.29ರಂದು ಐಪಿಎಲ್‌ 13ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ.

 ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

click me!