
ನೋಯ್ಡಾ: ಗಂಡನಿದ್ದರೂ ಅನೈತಿಕ ಸಂಬಂಧದ ಹಾದಿ ಹಿಡಿದ ಮಹಿಳೆಯೊಬ್ಬಳ ಇಬ್ಬರೂ ಮಕ್ಕಳನ್ನು ಆಕೆಯ ಪ್ರಿಯಕರನೇ ಮೋರಿಗೆಸೆದಂತಹ ಆಘಾತಕಾರಿ ಘಟನೆ ನೋಯ್ಡಾದ ಸೆಕ್ಟರ್ 142 ರ ಬಳಿ ನಡೆದಿದೆ. ಅಲ್ಲಿಗೆ ಡೆಲಿವರಿ ನೀಡುವುದಕ್ಕೆ ಬಂದಿದ್ದ ಝೆಪ್ಟೊ ಡೆಲಿವರಿ ಬಾಯ್ ಒಬ್ಬರು ಮಕ್ಕಳ ಕೂಗಾಟ ಕೇಳಿ ಮೋರಿಯ ಬಳಿ ಹೋಗಿ ನೋಡಿದಾಗ ಮಕ್ಕಳು ಮೋರಿಯಲ್ಲಿರುವುದು ಕಂಡು ಬಂದಿದೆ. ನಂತರ ಆ ಡೆಲಿವರಿ ಬಾಯ್ ಮೋರಿಗಿಳಿದು ಮಕ್ಕಳ ರಕ್ಷಣೆ ಮಾಡಿ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. ಡೆಲಿವರಿ ಬಾಯ್ ಪೊಲೀಸರಿಗೆ ದೂರು ನೀಡಿದ ನಂತರವೇ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಮಕ್ಕಳ ತಾಯಿ ನೀಲಂ ಹಾಗೂ ಆಕೆಯ ಪ್ರಿಯಕರ 22 ವರ್ಷದ ಅಶಿಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಬುಧವಾರ, 25 ವರ್ಷದ ಝೆಪ್ಟೋ ಡೆಲಿವರಿ ಬಾಯ್ ಓಂದೀಪ್ ಪಾರ್ಸೆಲ್ ತಲುಪಿಸಲು ಹೋಗುತ್ತಿದ್ದಾಗ ಮಕ್ಕಳ ಕಿರುಚಾಟ ಕೇಳಿದೆ. ಈ ಕೂಗಾಟ ಹಿಂಬಾಲಿಸಿ ಹೋದ ಅವರು ನೋಯ್ಡಾದ ಸೆಕ್ಟರ್ 142 ರಲ್ಲಿರುವ ಹತ್ತಿರದ ಚರಂಡಿ ಬಳಿ ತಲುಪಿದ್ದಾರೆ. ಅಲ್ಲಿ ಅವರಿಗೆ 4 ವರ್ಷದ ಹುಡುಗ ಮತ್ತು 3 ವರ್ಷದ ಹುಡುಗಿ ಇಬ್ಬರು ಮಕ್ಕಳನ್ನು ನೋಡಿದ್ದಾರೆ. ಸಹಾಯಕ್ಕಾಗಿ ಸುತ್ತಲೂ ನೋಡಿದ ನಂತರ ಓಂದೀಪ್ ಅವರೇ ಸ್ವತಃ ಇಬ್ಬರೂ ಮಕ್ಕಳನ್ನು ರಕ್ಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಝೆಪ್ಟೋ ಡೆಲಿವರಿ ಬಾಯ್‌ನಿಂದ ಮಕ್ಕಳ ರಕ್ಷಣೆ:
ನಂತರ ಗುರುವಾರ ಮಕ್ಕಳ ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಮಕ್ಕಳ ತಾಯಿ ಹಾಗೂ ಆಕೆಯ ಸಂಗಾತಿ ಇಬ್ಬರನ್ನು ಈಗ ನೋಯ್ಡಾ ಸೆಕ್ಟರ್ 142 ಮೆಟ್ರೋ ನಿಲ್ದಾಣ ಬಳಿ ಪೊಲೀಸರು ಬಂಧಿಸಿದ್ದಾರೆ. ನೋಯ್ಡಾದ ಸೆಕ್ಟರ್ 142 ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (SHO) ವಿನೋದ್ ಕುಮಾರ್ ಮಿಶ್ರಾ ಘಟನೆಗೆ ಸಂಬಂಧಿಸಿದಂತೆ ಮಾತನಾಡುತ್ತಾ ಓಂದೀಪ್ ಮಕ್ಕಳು ಚರಂಡಿಯೊಳಗೆ ಇದ್ದಾಗ ಅವರನ್ನು ನೋಡಿದರು ಎಂದು ಹೇಳಿದರು. ಓಂದೀಪ್ ಅವರು ಸೆಕ್ಟರ್ 142 ಪೊಲೀಸ್ ಠಾಣೆಯಲ್ಲಿ ಘಟನೆಯ ಬಗ್ಗೆ ದೂರು ನೀಡಿದ ನಂತರ ಈ ವಿಷಯ ಬೆಳಕಿಗೆ ಬಂದಿತು. ಮಕ್ಕಳ ತಾಯಿನೀಲಂ ಅವರ ಗೆಳೆಯ ಆಶಿಶ್ (22) ಮಕ್ಕಳನ್ನು ತನ್ನೊಂದಿಗೆ ಇಟ್ಟುಕೊಳ್ಳಲು ಇಷ್ಟಪಡದ ಕಾರಣ, ಅವರನ್ನು ಕೊಲ್ಲುವ ಉದ್ದೇಶದಿಂದ ಚರಂಡಿಗೆ ಎಸೆದಿದ್ದಾನೆ ಎಂದು ನಮಗೆ ತಿಳಿದುಬಂದಿದೆ ಎಂದು ಎಸ್‌ಎಚ್‌ಒ ಹೇಳಿದ್ದಾರೆ.
ಇದನ್ನೂ ಓದಿ: 19ರ ತರುಣನ ಜೊತೆ ಮಗಳ ಮದುವೆಗೆ ನಿರಾಕರಿಸಿದ ಪ್ರೇಯಸಿ ಮನೆಯವರು: ಕರೆಂಟ್ ಟವರ್ ಏರಿ ಪ್ರಿಯಕರನ ಹೈಡ್ರಾಮಾ
ಆರೋಪಿ ಆಶಿಶ್ ಮತ್ತು ಮಕ್ಕಳ ತಾಯಿ ನೀಲಂ ಮೂಲತಃ ಕಾನ್ಪುರದ ಒಂದೇ ಗ್ರಾಮದವರಾಗಿದ್ದು, ಅನೈತಿಕ ಸಂಬಂಧ ಹೊಂದಿದ್ದರು ಎಂದು ನೋಯ್ಡಾದ ಎಸ್‌ಎಚ್‌ಒ ಮಿಶ್ರಾ ಹೇಳಿದ್ದಾರೆ. ನೀಲಂಗೆ ಆಶಿಶ್‌ನ ಸೋದರ ಸಂಬಂಧಿಯ ಜೊತೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದರು. ಆದರೆ ನಂತರದಲ್ಲಿ ನೀಲಂ ಹಾಗೂ ಅಶಿಶ್ ನಡುವೆ ಸ್ನೇಹ ಬೆಳೆದು ನಂತರ ಈ ಸ್ನೇಹ ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಈ ವಿಚಾರ ನೀಲಂ ಪತಿಗೆ ತಿಳಿದ ನಂತರ ಆರೋಪಿ ಆಶಿಶ್, ನೀಲಂ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ಕರೆದುಕೊಂಡು ಕಾನ್ಪುರದಿಂದ ನೋಯ್ಡಾಗೆ ಬಂದು ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದ. ಹಾಗೂ ಉದ್ಯೋಗಕ್ಕಾಗಿ ಭದ್ರತಾ ಸಿಬ್ಬಂದಿಯಾಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಮಕ್ಕಳ ಸಹಿತ ನೀಲಂನನ್ನು ಆತ ನೋಯ್ಡಾಗೆ ಕರೆತಂದಿದ್ದರೂ ಕೂಡ ಆತ ಮಕ್ಕಳನ್ನು ಇಟ್ಟುಕೊಳ್ಳುವುದಕ್ಕೆ ಇಷ್ಟಪಡಲಿಲ್ಲ, ಅವನು ಮಕ್ಕಳನ್ನು ದ್ವೇಷಿಸುತ್ತಿದ್ದನ್ನು ಎಂದು ಎಸ್‌ಹೆಚ್‌ಒ ಮಿಶ್ರಾ ಹೇಳಿದ್ದಾರೆ.
ಘಟನೆ ನಡೆದಿದ್ದು ಹೇಗೆ?
ಮಂಗಳವಾರ, ಆರೋಪಿ ಆಶಿಶ್, ನೀಲಂಳನ್ನು ಮಾರುಕಟ್ಟೆಗೆ ಕರೆದೊಯ್ದು ಆಕೆ ಮನೆಗೆ ಬೇಕಾದ ಸರಕುಗಳನ್ನು ತೆಗೆದುಕೊಂಡಯ ಮನೆಗೆ ಹಿಂದಿರುಗುವ ಮೊದಲು ಅಲ್ಲಿಯೇ ಆಕೆಯನ್ನು ಬಿಟ್ಟು ಹೋಗಿದ್ದ. ನಂತರ ಒಬ್ಬನೇ ಮನೆಗೆ ಹೋದ ಆತ ಮಕ್ಕಳನ್ನು ಕರೆದುಕೊಂಡು ಹೋಗಿ ನೋಯ್ಡಾದ ಸೆಕ್ಟರ್ 137 ರ ಪರಾಸ್ ತೇರಾ ಸೊಸೈಟಿಯ ಮುಂಭಾಗದಲ್ಲಿರುವ 10 ಅಡಿ ಆಳದ ಚರಂಡಿಗೆ ಎಸೆದು ಪರಾರಿಯಾಗಿದ್ದ. ಪ್ರಸ್ತುತ ಮಕ್ಕಳನ್ನು ರಕ್ಷಿಸಲಾಗಿದ್ದು, ಇಬ್ಬರೂ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಮಿಶ್ರಾ ಹೇಳಿದ್ದಾರೆ.
ಇದನ್ನೂ ಓದಿ: 25ಕ್ಕೆ ಗಂಡನ ಸಾವು: 30ಕ್ಕೆ ಯುವಕನೊಂದಿಗೆ ಪ್ರೇಮ: ಇಬ್ಬರಿಗೂ ಬೆಂಕಿ ಹಚ್ಚಿ ಕೊಂದ ಗಂಡನ ಮನೆಯವರು
ಘಟನೆಗೆ ಸಂಬಂಧಿಸಿದಂತೆ ನೋಯ್ಡಾ ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 109(1) (ಕೊಲೆ ಯತ್ನ) ಮತ್ತು 93 (ಪೋಷಕರು ಅಥವಾ ಆರೈಕೆದಾರರಿಂದ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವನ್ನು ತ್ಯಜಿಸುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಕೆ.ಸಿ. ವೀರಮಣಿ ಮಾತನಾಡಿ, ಇಬ್ಬರು ಮಕ್ಕಳು ಆರೋಗ್ಯವಾಗಿದ್ದು, ಪ್ರಸ್ತುತ ನೋಯ್ಡಾದ ಡೇ-ಕೇರ್ ಕೇಂದ್ರದಲ್ಲಿ ವಾಸಿಸುತ್ತಿದ್ದಾರೆ. ಮಕ್ಕಳನ್ನು ಶುಕ್ರವಾರ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು ಘಟನೆಯ ಬಗ್ಗೆ ನಮಗೆ ತಿಳಿಸಲಾಗಿದೆ ಮತ್ತು ವಿಚಾರ ಪ್ರಸ್ತುತಪಡಿಸಿದ ನಂತರ ನಾವು ಅದನ್ನು ಪರಿಶೀಲಿಸುತ್ತೇವೆ ಎಂದು ಅವರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ