ಭಾರತ- ರಷ್ಯಾ ಸಹಕಾರದಲ್ಲಿ ಹೊಸ ಮೈಲುಗಲ್ಲು

Kannadaprabha News   | Kannada Prabha
Published : Dec 05, 2025, 05:57 AM IST
Vladimir Putin with Modi

ಸಾರಾಂಶ

23ನೇ ಭಾರತ-ರಷ್ಯಾ ಶೃಂಗಸಭೆಯಲ್ಲಿ ಭಾಗಿಯಾಗಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಗುರುವಾರ ಭಾರತಕ್ಕೆ ಆಗಮಿಸಿದ್ದು, ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ನವದೆಹಲಿ: 23ನೇ ಭಾರತ-ರಷ್ಯಾ ಶೃಂಗಸಭೆಯಲ್ಲಿ ಭಾಗಿಯಾಗಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಗುರುವಾರ ಭಾರತಕ್ಕೆ ಆಗಮಿಸಿದ್ದು, ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಐದನೇ ತಲೆಮಾರಿನ ಸುಖೋಯ್‌ ಎಸ್‌ಯು-57, ಎಸ್‌-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ, ನಾಗರಿಕ ಅಣು ಸಹಕಾರ, ಸಬ್‌ಮರೀನ್‌, ಹೊಸ ತಲೆಮಾರಿದನ ಬ್ರಹ್ಮೋಸ್‌ ಕ್ಷಿಪಣಿ ಅಭಿವೃದ್ಧಿ ಸೇರಿ ಹಲವು ಮಹತ್ವದ ವಿಚಾರಗಳು ಚರ್ಚೆಗೆ ಬರುವ ನಿರೀಕ್ಷೆ ಇದೆ.

ಮತ್ತಷ್ಟು ಎಸ್‌-400 ಖರೀದಿ, ಎಸ್‌500ಗೂ ಪ್ರಸ್ತಾಪ:

ಆಪರೇಷನ್‌ ಸಿಂದೂರ ಕಾರ್ಯಾಚರಣೆ ವೇಳೆ ಎಸ್‌400ನ ಅಭೂತಪೂರ್ವ ಯಶಸ್ಸಿನಿಂದಾಗಿ ಇದೀಗ ಭಾರತ ಇನ್ನಷ್ಟು ಎಸ್‌400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿಗೆ ಈಗಾಗಲೇ ಆಸಕ್ತಿ ತೋರಿಸಿದೆ. ಈ ಕುರಿತು ವ್ಲಾದಿಮಿರ್‌ ಪುಟಿನ್ ಉಪಸ್ಥಿತಿಯಲ್ಲಿ ಒಪ್ಪಂದಕ್ಕೆ ಸಹಿಬೀಳುವ ನಿರೀಕ್ಷೆ ಇದೆ. ಇದಲ್ಲದೆ, ಅತ್ಯಾಧುನಿಕ ಎಸ್‌500 ಖರೀದಿಗೂ ಭಾರತ ಪ್ರಸ್ತಾಪ ಮುಂದಿಡುವ ನಿರೀಕ್ಷೆ ಇದೆ.

ಎಸ್‌ಯು-57 ಖರೀದಿ ಪ್ರಸ್ತಾಪ:

ಐದನೇ ತಲೆಮಾರಿನ ಯುದ್ಧವಿಮಾನವಾದ ಎಸ್‌ಯು-57 ಅನ್ನು ಭಾರತಕ್ಕೆ ಮಾರಾಟ ಮಾಡಲು ರಷ್ಯಾ ಕೆಲ ವರ್ಷಗಳಿಂದ ಪ್ರಯತ್ನ ನಡೆಸುತ್ತಲೇ ಇದೆ. ಈಗಾಗಲೇ ರಷ್ಯಾ ಸಂಪೂರ್ಣ ತಂತ್ರಜ್ಞಾನ ವರ್ಗಾವಣೆಯೊಂದಿಗೆ ಜಂಟಿಯಾಗಿ ಈ ಯುದ್ಧವಿಮಾನ ಉತ್ಪಾದನೆಯ ಪ್ರಸ್ತಾಪವನ್ನೂ ಇಟ್ಟಿದೆ. ಕನಿಷ್ಠ 40ರಿಂದ 50 ಎಸ್‌57 ಆದರೂ ಮಾರಾಟ ಮಾಡಲು ಪ್ರಯತ್ನ ನಡೆಸುತ್ತಿದೆ. ಎಸ್‌ಯು-57 ಯುದ್ಧ ವಿಮಾನ ವಿಚಾರ ಪುಟಿನ್‌ ಭಾರತ ಭೇಟಿಯ ಪ್ರಮುಖ ಹೈಲೆಟ್‌ ಆಗಿರಲಿದೆ.

ಇದಲ್ಲದೇ 800 ಕಿ.ಮೀ ದೂರಸಾಗಬಲ್ಲ ಬ್ರಹ್ಮೋಸ್‌ ಕ್ಷಿಪಣಿ ಅಭಿವೃದ್ಧಿ, ಸಬ್‌ಮರೀನ್‌ ಖರೀದಿ ಅಥವಾ ಲೀಸ್ ಪಡೆಯುವ, ತೈಲ ಖರೀದಿ, ವ್ಯಾಪಾರ ಸಂಬಂಧ ವೃದ್ಧಿ ಬಗ್ಗೆಯೂ ಉಭಯ ದೇಶಗಳು ಚರ್ಚೆ ನಡೆಸಲಿವೆ ಎನ್ನಲಾಗಿದೆ.

ರುಪೇ-ಮಿರ್‌ ಸಹಕಾರ

ಭಾರತದ ಪೇಮೆಂಟ್‌ ಸಿಸ್ಟಂ(ಪಾವತಿ ವ್ಯವಸ್ಥೆ) ರುಪೇ ಮತ್ತು ರಷ್ಯಾದ ಪೇಮೆಂಟ್‌ ಸಿಸ್ಟಂ ಮಿರ್‌ ಅನ್ನು ಜೋಡಿಸುವ ಕುರಿತೂ ಭಾರತ-ರಷ್ಯಾ ಮಧ್ಯೆ ಮಾತುಕತೆ ನಡೆಯುವ ಅಥವಾ ಒಪ್ಪಂದ ಏರ್ಪಡುವ ನಿರೀಕ್ಷೆ ಇದೆ ಎನ್ನಲಾಗಿದೆ. ಉಕ್ರೇನ್‌ ಯುದ್ಧ ಆರಂಭದ ಬಳಿಕ ರಷ್ಯಾದ ಕೇಂದ್ರ ಬ್ಯಾಂಕ್‌ ವಿಸಾ ಮತ್ತು ಮಾಸ್ಟರ್‌ ಕಾರ್ಡ್‌ಗಳ ಬದಲಾಗಿ ಮಿರ್‌ ಪಾವತಿ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತಂದಿತು. ಇದೀಗ ಮಿರ್‌ ಪಾವತಿ ವ್ಯವಸ್ಥೆ ಭಾರತದಲ್ಲೂ ಸ್ವೀಕೃತವಾಗುವಂತೆ ರಷ್ಯಾ ಮಾತುಕತೆ ನಡೆಸುತ್ತಿದೆ. ಆದರೆ ಅಮೆರಿಕದ ನಿರ್ಬಂಧದ ಭೀತಿಯಿಂದಾಗಿ ಇದು ಇನ್ನೂ ಸಾಧ್ಯವಾಗಿಲ್ಲ. ಆದರೆ, ಈ ಬಗ್ಗೆ ಪುತಿನ್‌-ಮೋದಿ ಮತ್ತೆ ಮಾತುಕತೆ ನಡೆಸುವ ಸಾಧ್ಯತೆ ಇದೆ.

ಕಾರ್ಮಿಕರ ವಿಚಾರ ಚರ್ಚೆ:

ಪುಟಿನ್‌ ಭಾರತ ಭೇಟಿ ವೇಳೆ ಕಾರ್ಮಿಕರ ಕುರಿತು ಮಹತ್ವದ ಒಪ್ಪಂದ ನಡೆಯುವ ನಿರೀಕ್ಷೆ ಇದೆ. ಈ ಒಪ್ಪಂದದಿಂದಾಗಿ ಈಗಾಗಲೇ ರಷ್ಯಾದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಕಾರ್ಮಿಕರಿಗೆ ಕಾನೂನು ರಕ್ಷಣೆ ಮತ್ತು ಅಲ್ಲಿ ಉದ್ಯಮಗಳಲ್ಲಿ ಇನ್ನಷ್ಟು ಮಂದಿ ಭಾರತೀಯರಿಗೆ ಉದ್ಯೋಗಾವಕಾಶ ಸಿಗುವ ಸಾಧ್ಯತೆ ಇದೆ.

ನಾಗರಿಕ ಅಣು ಸಹಕಾರ:

ವಿದ್ಯುತ್‌ ಸಮಸ್ಯೆಗೆ ಪರಿಹಾರವಾಗಿ ಭಾರತವು ನಾಗರಿಕ ಪರಮಾಣು ಸಹಕಾರ ಕುರಿತೂ ರಷ್ಯಾದ ಜತೆಗೆ ಒಪ್ಪಂದ ಮಾಡಿಕೊಳ್ಳುವ ನಿರೀಕ್ಷೆ ಬಲವಾಗಿದೆ. ಈಗಾಗಲೇ ರಷ್ಯಾದ ನೆರವಿನಿಂದ ಭಾರತದಲ್ಲಿ ಅಣುಸ್ಥಾವರಗಳನ್ನು ಸ್ಥಾಪಿಸಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಭವಿಷ್ಯದ ವಿದ್ಯುತ್‌ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಸಣ್ಣ ಸಣ್ಣ ರಿಯಾಕ್ಟರ್‌ಗಳ ಮೂಲಕ ವಿದ್ಯುತ್‌ ಉತ್ಪಾದನೆಗೆ ಸಹಕಾರ ಕುರಿತು ಭಾರತವು ರಷ್ಯಾ ಜತೆಗೆ ಒಪ್ಪಂದಕ್ಕೆ ಸಹಿಹಾಕುವ ನಿರೀಕ್ಷೆ ಇದೆ.

- ಎಸ್‌ಯು-30ಎಂಕೆಐ ಯುದ್ಧವಿಮಾನಗಳನ್ನು ಮೇಲ್ದರ್ಜೆಗೇರಿಸುವುದು ಮತ್ತು ಬ್ರಹ್ಮೋಸ್‌ ಸೂಪರ್‌ಸಾನಿಕ್‌ ಕ್ಷಿಪಣಿಯ ವ್ಯಾಪ್ತಿ ವಿಸ್ತರಿಸುವ ಕುರಿತು ದ್ವಿಪಕ್ಷೀಯ ಒಪ್ಪಂದ

- ಪಾಂಟ್ಸಿರ್‌ ವಾಯು ರಕ್ಷಣಾ ವ್ಯವಸ್ಥೆ ಮಾರಾಟ ಕುರಿತು ಮಾತುಕತೆ

ಇಂದಿನ ಪುಟಿನ್‌ ದಿನಚರಿ

ಶುಕ್ರವಾರ ಬೆಳಗ್ಗೆ ಪುಟಿನ್‌ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಅವರಿಗೆ ಔಪಚಾರಿಕ ಸ್ವಾಗತ ನೀಡಲಾಗುವುದು. ಬಳಿಕ ರಾಜ್‌ಘಾಟ್‌ಗೂ ಭೇಟಿ ನೀಡಿ, ಅವರು ಶೃಂಗದಲ್ಲಿ ಭಾಗವಹಿಸಲಿದ್ದಾರೆ. ಅದಾದ ನಂತರ, ರಷ್ಯಾದ ಸರ್ಕಾರಿ ಸ್ವಾಮ್ಯದ ಪ್ರಸಾರಕರ ಒಡೆತನದ ‘ಆರ್‌ಟಿ’ ಆಂಗ್ಲ ಚಾನಲ್‌ಅನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ ಹೈದರಾಬಾದ್‌ ಹೌಸ್‌ನಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಪುಟಿನ್‌ ಭೋಜನ ಸೇವಿಸಲಿದ್ದಾರೆ. ಸಂಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ಆಯೋಜಿಸುವ ಔತಣದಲ್ಲಿ ಭಾಗಿಯಾಗಿ, ರಾತ್ರಿ 9ರ ಸುಮಾರಿಗೆ ಮರಳಿ ರಷ್ಯಾದತ್ತ ಪ್ರಯಾಣ ಬೆಳೆಸಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಏರ್‌ಪೋರ್ಟಿಗೇ ತೆರಳಿ ಪುಟಿನ್‌ಗೆ ಪ್ರಧಾನಿ ಮೋದಿ ಅಚ್ಚರಿ ಸ್ವಾಗತ
2ನೇ ದಿನವೂ ಇಂಡಿಗೋ ಟ್ರಬಲ್ : 550 ವಿಮಾನಗಳ ಸಂಚಾರ ರದ್ದು