
ನವದೆಹಲಿ: ಬೆಂಕಿಯ ಜೊತೆ ಆಟ ಬೇಡ ಎಂಬ ಮಾತಿದೆ. ಆದರೂ ಬೆಂಕಿಯೊಂದಿಗೆ ಸ್ಟಂಟ್ ಮಾಡಲು ಹೋಗಿ ವ್ಯಕ್ತಿಯೊಬ್ಬ ಮೈ ಮೇಲೆ ಅಪಾಯವನ್ನು ಎಳೆದುಕೊಂಡಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಪಾಯಕಾರಿ ದೃಶ್ಯ ನೋಡಿ ಜನ ಗಾಬರಿಗೊಳಗಾಗಿದ್ದಾರೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ವರದಿ ಆಗಿಲ್ಲ. ಪೂಜಾ ಪೆಂಡಾಲ್ ಅಥವಾ ಜಾತ್ರೆಯ ಮೇಳದಲ್ಲಿ ನಡೆಸಲಾದ ಸಾಹಸ ದೃಶ್ಯ ಪ್ರದರ್ಶನದ ವೇಳೆ ಈ ಎಡವಟ್ಟು ನಡೆದಿದೆ.
ವ್ಯಕ್ತಿಯೊಬ್ಬ ಕೈಯಲ್ಲಿ ಬೆಂಕಿಯ ಪಂಜನ್ನು ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ಪೆಟ್ರೋಲ್ ಅಥವಾ ಡಿಸೇಲ್ ಬಾಯಿಯಲ್ಲಿ ತುಂಬಿಸಿಕೊಂಡು ಬೆಂಕಿಯಿದ್ದ ಪಂಜಿನತ್ತ ಉಗುಳಿದ್ದಾನೆ. ಈ ವೇಳೆ ಪೆಟ್ರೋಲ್ ಆತನ ಗಡ್ಡಕ್ಕೆ ಬಿದ್ದು, ಗಡ್ಡಕ್ಕೆ ಬೆಂಕಿ ಹತ್ತಿಕೊಂಡಿದ್ದು, ಮುಖಕ್ಕೂ ಬೆಂಕಿ ವ್ಯಾಪಿಸಿದೆ. ಕೂಡಲೇ ಸಮೀಪದಲ್ಲಿ ಇರುವ ಇತರ ಯುವಕರು ಆತನ ಬಳಿ ಧಾವಿಸಿ ಬಂದು ಬೆಂಕಿ ನಂದಿಸಿದ್ದಾರೆ.
ಈ ವಿಡಿಯೋವನ್ನು ರವಿ ಪಾಟಿದಾರ್ ಎಂಬುವವರು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, 12 ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಆದರೆ ಈ ಅನಾಹುತ ನಡೆದಿದ್ದೆಲ್ಲಿ ಎಂಬ ಬಗ್ಗೆ ವರದಿ ಆಗಿಲ್ಲ. ಇನ್ನು ವಿಡಿಯೋ ನೋಡಿದ ಅನೇಕರು ಕಾಮೆಂಟ್ ಮಾಡಿದ್ದಾರೆ. ಅನೇಕರು ಹೀಗೆ ಬೆಂಕಿಯೊಂದಿಗೆ ಸಾಹಸ ಮಾಡಿದ ವ್ಯಕ್ತಿ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದರೆ ಮತ್ತೆ ಕೆಲವರು ಜೀವಕ್ಕೆ ಹಾನಿ ಮಾಡಬಾರದು ಬೆಂಕಿ ಜೊತೆ ಸಾಹಸ ಏಕೆ ಎಂದು ಟೀಕೆ ಮಾಡಿದ್ದಾರೆ. ಬೆಂಕಿ ಜೊತೆ ಆಟವಾಡಬೇಡಿ ಸುಟ್ಟು ಹೋಗುತ್ತೀರಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದೊಂದು ಬಹಳ ಕಷ್ಟಕರವಾದ ಸಾಹಸ ಎಲ್ಲರೂ ಇದನ್ನು ಮಾಡಲು ಹೋಗಬಾರದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಚಲಿಸುತ್ತಿದ್ದ ಕಾರಿನ ಮೇಲೆ ಪಟಾಕಿ ಹಾರಿಸುತ್ತಿದ್ದವನ ಬಂಧನ: ವಿಡಿಯೋ ವೈರಲ್
ಕೆಲ ದಿನಗಳ ಹಿಂದೆ ಪೈರ್ ಹೇರ್ ಕಟ್ಟಿಂಗ್ ವೇಳೆ ಎಡವಟ್ಟು ನಡೆದು 18 ವರ್ಷದ ಯುವಕನ ತಲೆಗೆ ಬೆಂಕಿ ಹತ್ತಿಕೊಂಡಿತ್ತು. ಗುಜರಾತ್‌ನ ವಲ್ಸದ್ (Valsad) ಜಿಲ್ಲೆಯ ವಾಪಿಯಲ್ಲಿ(Vapi) ಈ ಅನಾಹುತ ನಡೆದಿತ್ತು. ಈ ಫೈರ್ ಹೇರ್ ಕಟ್ಟಿಂಗ್ (fire haircut) ಇತ್ತೀಚೆಗೆ ಸಾಕಷ್ಟು ಜನಪ್ರಿಯತೆ ಗಳಿಸಿದ್ದು, ಯುವಕರಲ್ಲಿ ಈ ಹೇರ್‌ಕಟ್ ಬಗ್ಗೆ ಕ್ರೇಜ್ ಇದೆ. ಹೀಗೆ ಈ ರೀತಿ ಹೇರ್ ಕಟ್ ಮಾಡಿಸಲು ಸಲೂನ್‌ಗೆ ಹೋದ 18 ವರ್ಷದ ಯುವಕನ ತಲೆಗೆ ಬೆಂಕಿ ಹತ್ತಿಕೊಂಡು ಆತ ಗಂಭೀರ ಗಾಯಗೊಂಡಿದ್ದ. ಆತನ ಕುತ್ತಿಗೆ ಎದೆಯ ಭಾಗಕ್ಕೆ ಬೆಂಕಿ ಹತ್ತಿಕೊಂಡಿತ್ತು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಾಥಮಿಕ ಮಾಹಿತಿಯ ಪ್ರಕಾರ, ಪೊಲೀಸರು ಹೇಳಿವಂತೆ ಆತ ದೇಹದ ಮೇಲ್ಭಾಗಕ್ಕೆ ತೀವ್ರ ಸುಟ್ಟ ಗಾಯಗಳಿಂದ ಹಾನಿಯಾಗಿತ್ತು. ಫೈರ್ ಹೇರ್ ಕಟ್ ಸಲುವಾಗಿ ಕೂದಲಿಗೆ ಹಾಕಿದ್ದ ಕೆಲ ರಾಸಾಯನಿಕಗಳಿಂದ ಈ ಅನಾಹುತ ಸಂಭವಿಸಿತ್ತು.
ಯುವತಿಯ ಚುಡಾಯಿಸಿದ್ದಕ್ಕೆ ಕಪಾಳ ಮೋಕ್ಷ, ಸೇಡು ತೀರಿಸಲು ಬೈಕ್‌ಗೆ ಬೆಂಕಿ ಹಚ್ಚಿ ರಂಪಾಟ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ