Pollution in Delhi: ಮಿತಿಮೀರಿದ ಮಾಲಿನ್ಯ, ರೆಡ್‌ ಜೋನ್‌ ಸನಿಹ ದೆಹಲಿ!

Published : Oct 30, 2022, 01:26 PM IST
Pollution in Delhi: ಮಿತಿಮೀರಿದ ಮಾಲಿನ್ಯ, ರೆಡ್‌ ಜೋನ್‌ ಸನಿಹ ದೆಹಲಿ!

ಸಾರಾಂಶ

ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರಿದೆ. ಇಲ್ಲಿಯವರೆಗೂ ರಾತ್ರಿಯ ವೇಳೆ ಕಡಿಮೆ ಇರುತ್ತಿದ್ದ ಮಾಲಿನ್ಯ, ಈಗ ಬದಲಾಗಿದೆ. ರಾತ್ರಿಯಲ್ಲೂ ಮಾಲಿನ್ಯದ ಕಾರಣದಿಂದಾಗಿ ಹೊರಗೆ ತಿರುಗಾಡಲು ಸಾಧ್ಯವಾಗುತ್ತಿಲ್ಲ. ನ.1ರ ವೇಳೆಗ ದೆಹಲಿಯಲ್ಲಿ ವಾಯು ಮಾಲಿನ್ಯದ ಪ್ರಮಾಣ ರೆಡ್‌ ಜೋನ್‌ಗೆ ಏರಬಹುದು ಎನ್ನಲಾಗಿದೆ.  

ನವದೆಹಲಿ(ಅ. 30): ದೆಹಲಿ-ಎನ್‌ಸಿಆರ್‌ನಲ್ಲಿ ಗಾಳಿಯ ಗುಣಮಟ್ಟವು ಶೋಚನೀಯ ಸ್ಥಿತಿಯಲ್ಲಿದೆ. ಭಾನುವಾರ ಬೆಳಿಗ್ಗೆ ದೆಹಲಿಯ ಗಾಳಿಯ ಗುಣಮಟ್ಟವು 'ಅತ್ಯಂತ ಕಳಪೆ' ವಿಭಾಗದಲ್ಲಿ ಉಳಿದಿದೆ, ರಾಜಧಾನಿಯ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) ಬೆಳಿಗ್ಗೆ 350 ಕ್ಕೆ ಇತ್ತು. ದೆಹಲಿ ವಿಶ್ವವಿದ್ಯಾನಿಲಯ ಮತ್ತು ಪುಸಾ ಪ್ರದೇಶದ ಎಕ್ಯೂಐ ಕ್ರಮವಾಗಿ 372 ಮತ್ತು 343 ರಷ್ಟಿದೆ. ಅದೇ ಸಮಯದಲ್ಲಿ, ಶನಿವಾರದಿಂದ ದೆಹಲಿ-ಎನ್‌ಸಿಆರ್‌ನಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಮಟ್ಟವನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣ ಮತ್ತು ನೆಲಸಮ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಕುರಿತು ಏರ್ ಕ್ವಾಲಿಟಿ ಮ್ಯಾನೇಜ್ ಮೆಂಟ್ ಕಮಿಷನ್ (ಸಿಎಕ್ಯೂಎಂ) ಸಭೆ ನಡೆಸಲಾಯಿತು. ಇದರಲ್ಲಿ ಮೂರನೇ ಹಂತದ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (ಗ್ರಾಪ್) ಅನುಷ್ಠಾನಗೊಳಿಸಲಾಯಿತು. ಆದಾಗ್ಯೂ, ಕೆಲವು ವರ್ಗಗಳಿಗೆ ಷರತ್ತುಗಳೊಂದಿಗೆ ವಿನಾಯಿತಿ ನೀಡಲಾಗಿದೆ. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ, ಅಕ್ಟೋಬರ್ 31 ಮತ್ತು ನವೆಂಬರ್ 1 ರ ನಡುವೆ ಮಾಲಿನ್ಯದ ಮಟ್ಟವು ರೆಡ್‌ ಜೋನ್‌ ತಲುಪಬಹುದು ಎಂದು ಅಂದಾಜಿಸಲಾಗಿದೆ. ನೆರೆಯ ಹಾಗೂ ಪಕ್ಕದ ಪಂಜಾಬ್‌ ರಾಜ್ಯದಲ್ಲಿ ಗೋಧಿ ಬೆಳೆಯ ಅವಶೇಷಗಳನ್ನು ಈ ಸಮಯದಲ್ಲಿ ಸುಡಲಾಗುತ್ತದೆ. ಆ ಕಾರಣದಿಂದಾಗಿ ದೆಹಲಿ-ಎನ್‌ಸಿಆರ್‌ನಲ್ಲಿ ಮಾಲಿನ್ಯದ ಮಟ್ಟವು ಅಪಾಯಕಾರಿ ಮಟ್ಟವನ್ನು ತಲುಪಿದೆ. 

ಮಕ್ಕಳು ಮತ್ತು ವೃದ್ಧರು ಬೆಳಗ್ಗೆ ಹೊರಗೆ ಹೋಗದಂತೆ ವೈದ್ಯರು ಸೂಚಿಸಿದ್ದಾರೆ. ಇದರೊಂದಿಗೆ, ಉಸಿರಾಟದ ರೋಗಿಗಳಿಗೆ ವಿಶೇಷವಾಗಿ ಜಾಗರೂಕರಾಗಿರಲು ಎಚ್ಚರಿಕೆ ನೀಡಲಾಗಿದೆ. ದೆಹಲಿಯಲ್ಲಿ ಶನಿವಾರ ಮಾಲಿನ್ಯದ ಮಟ್ಟ 397 ತಲುಪಿದೆ, ಇದು ಈ ಋತುವಿನ ಗರಿಷ್ಠ ಮಟ್ಟವಾಗಿದೆ. ಎನ್‌ಸಿಆರ್‌ನಲ್ಲಿ ಮಾಲಿನ್ಯದ ಮಟ್ಟವು 350 ಮತ್ತು 400 ರ ನಡುವೆ ಇತ್ತು. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ ಮುಂದಿನ ದಿನಗಳಲ್ಲಿಯೂ ಮಾಲಿನ್ಯದಿಂದ ಮುಕ್ತಿ ಸಿಗುವ ಭರವಸೆ ಇಲ್ಲ. ದೆಹಲಿಯಲ್ಲಿನ ಗಾಳಿಯ ಗುಣಮಟ್ಟವು ಭಾನುವಾರದವರೆಗೆ ಅತ್ಯಂತ ತೀವ್ರವಾದ ವಿಭಾಗದಲ್ಲಿ ಉಳಿಯುವ ನಿರೀಕ್ಷೆಯಿದೆ. ಇದೇ ವೇಳೆ ಇನ್ನೆರಡು ದಿನಗಳಲ್ಲಿ ಮಾಲಿನ್ಯದ ಪ್ರಮಾಣ ಮತ್ತಷ್ಟು ಹೆಚ್ಚಾಗಬಹುದು. ಅಕ್ಟೋಬರ್ 31 ರಿಂದ ನವೆಂಬರ್ 1 ರವರೆಗೆ ದೆಹಲಿಯಲ್ಲಿ ಮಾಲಿನ್ಯದ ಮಟ್ಟವು ರೆಡ್ ಝೋನ್ ತಲುಪುತ್ತದೆ ಎಂದು ನಂಬಲಾಗಿದೆ. 

ವಾಯುಮಾಲಿನ್ಯ ತಡೆಗೆ ಅರಳೀಮರ ಹೆಚ್ಚು ಸಹಕಾರಿ; ಕೋಟಾ ಶ್ರೀನಿವಾಸ ಪೂಜಾರಿ

ಮಂಡಳಿಯ ಪ್ರಕಾರ, ಪಂಜಾಬ್ ಮತ್ತು ಹರಿಯಾಣದಲ್ಲಿ ಕಳೆದ ಎರಡು ದಿನಗಳಲ್ಲಿ ಸ್ಟಬಲ್‌ ಬರ್ನಿಂಗ್‌ ಘಟನೆಗಳು ವೇಗವಾಗಿ ಹೆಚ್ಚುತ್ತಿವೆ, ಇದು ಮಾಲಿನ್ಯದ ಮಟ್ಟವನ್ನು ಹೆಚ್ಚಿಸುತ್ತಿದೆ. ಇದಲ್ಲದೇ ಸ್ಥಳೀಯ ಕಾರಣಗಳಿಂದ ದೆಹಲಿಯಲ್ಲಿ ಮಾಲಿನ್ಯವೂ ಹೆಚ್ಚಾಗುತ್ತಿದೆ. ಮಂಡಳಿಯ ಪ್ರಕಾರ,  ಶನಿವಾರ ಸಂಜೆ 7 ಗಂಟೆಗೆ ಆನಂದ್ ವಿಹಾರದಲ್ಲಿ ಮಾಲಿನ್ಯದ ಮಟ್ಟ 457 ದಾಖಲಾಗಿದೆ. ಮತ್ತೊಂದೆಡೆ, ಅಶೋಕ್ ವಿಹಾರ್‌ನಲ್ಲಿ 419, ಜಹಾಂಗೀರ್‌ಪುರಿಯಲ್ಲಿ 426, ಐಟಿಒದಲ್ಲಿ 400, ಬವಾನಾದಲ್ಲಿ 406, ರೋಹಿಣಿಯಲ್ಲಿ 410, ವಜೀರ್‌ಪುರಿಯಲ್ಲಿ 431, ಪತ್ಪರ್‌ಗಂಜ್‌ನಲ್ಲಿ 408. ಇವುಗಳಲ್ಲದೆ, ದೆಹಲಿಯ ಇತರ ಪ್ರದೇಶಗಳಲ್ಲಿ ಮಾಲಿನ್ಯದ ಮಟ್ಟವು ಗಮನಾರ್ಹವಾಗಿ ಹೆಚ್ಚಾಗಿದೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಶನಿವಾರ ದೆಹಲಿಯಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಒಂದು ಡಿಗ್ರಿ ಹೆಚ್ಚು ದಾಖಲಾಗಿದೆ. ಹಗಲಿನಲ್ಲಿ ಬಿಸಿಲಿನ ಝಳದಿಂದಾಗಿ ತಾಪಮಾನದಲ್ಲಿ ಸ್ವಲ್ಪ ಹೆಚ್ಚಳ ದಾಖಲಾಗಿದೆ. ಆದರೆ, ಭಾನುವಾರ ಬೆಳಗ್ಗೆ ಮೋಡ ಕವಿದ ವಾತಾವರಣ ದಾಖಲಾಗಿದೆ.

ಜಗತ್ತಿನ ಟಾಪ್‌ 10 ಕಲುಷಿತ ನಗರಗಳಲ್ಲಿ ದೆಹಲಿ, ಕೋಲ್ಕತ್ತಗೆ ಸ್ಥಾನ

ಮೂರನೇ ಹಂತದ ಅನುಷ್ಠಾನದ ಕೆಲವು ಬದಲಾವಣೆಗಳು: ಗ್ರಾಪ್‌ ಪ್ರಕಾರ, ರಸ್ತೆಗಳ ಶುಚಿಗೊಳಿಸುವಿಕೆಯನ್ನು ಯಂತ್ರದಿಂದ ಮಾತ್ರ ಮಾಡಲಾಗುತ್ತದೆ, ಧೂಳಿನ ಪ್ರದೇಶಗಳು, ರಸ್ತೆಗಳು ಮತ್ತು ಇತರ ಸ್ಥಳಗಳಲ್ಲಿ ನಿಯಮಿತವಾಗಿ ನೀರು ಚಿಮುಕಿಸಲಾಗುತ್ತದೆ. ಸಾರ್ವಜನಿಕ ಸಾರಿಗೆಯ ಬಳಕೆಯನ್ನು ಹೆಚ್ಚಿಸುವ ಸಲುವಾಗಿ, ನಾನ್-ಪೀಕ್ ಅವರ್‌ಗಳಲ್ಲಿ ದರಗಳನ್ನು ಪರಿಷ್ಕರಿಸಲು ಸೂಚಿಸಲಾಗಿದೆ. ನಿರ್ಮಾಣ ಮತ್ತು ನೆಲಸಮ     ಚಟುವಟಿಕೆಗಳನ್ನು ಸಹ ನಿಷೇಧಿಸಲಾಗಿದೆ. ಆದಾಗ್ಯೂ, ಇದು ರೈಲ್ವೆ ಸೇವೆಗಳು, ರೈಲು ನಿಲ್ದಾಣಗಳು, ಮೆಟ್ರೋ ರೈಲು ಸೇವೆಗಳು, ವಿಮಾನ ನಿಲ್ದಾಣಗಳು ಮತ್ತು ಅಂತರ-ರಾಜ್ಯ ಬಸ್ ಟರ್ಮಿನಲ್‌ಗಳು, ರಾಷ್ಟ್ರೀಯ ಭದ್ರತೆ, ರಕ್ಷಣಾ ಚಟುವಟಿಕೆಗಳು, ರಾಷ್ಟ್ರೀಯ ಯೋಜನೆಗಳು, ಆಸ್ಪತ್ರೆಗಳು, ಆರೋಗ್ಯ ರಕ್ಷಣಾ ಸೌಲಭ್ಯಗಳು, ಹೆದ್ದಾರಿಗಳು, ರಸ್ತೆಗಳು, ಫ್ಲೈಓವರ್‌ಗಳು, ಮೇಲ್ಸೇತುವೆಗಳು, ವಿದ್ಯುತ್ ಪ್ರಸರಣ, ಪೈಪ್‌ಲೈನ್‌ಗಳನ್ನು ಒಳಗೊಂಡಿದೆ. ಸರ್ಕಾರಿ ಯೋಜನೆಗಳು, ಒಳಚರಂಡಿ ಸಂಸ್ಕರಣಾ ಘಟಕಗಳು, ನೀರು ಸರಬರಾಜು ಯೋಜನೆಗಳು ಮತ್ತು ಇತರ ಯೋಜನೆಗಳಿಗೆ ವಿನಾಯಿತಿ ನೀಡಲಾಗಿದೆ. ಆದಾಗ್ಯೂ, ಧೂಳಿನ ಮಾಲಿನ್ಯದ ಮಟ್ಟವನ್ನು ತಡೆಯಲು ಅವರು ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಹೇಳಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಭಾರತ-ಆಫ್ರಿಕಾ ಫೈನಲ್ ಫೈಟ್ - ಟೆಸ್ಟ್ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌