ಜನದಟ್ಟಣೆ ಬಲು ಅಪಾಯಕಾರಿ, ಎಚ್ಚರದಿಂದ ಅನ್‌ಲಾಕ್‌ ಮಾಡಿ: ಕೇಂದ್ರದ ಸೂಚನೆ!

By Kannadaprabha NewsFirst Published Jun 20, 2021, 7:37 AM IST
Highlights

* ಬಹಳ ಎಚ್ಚರದಿಂದ ಅನ್‌ಲಾಕ್‌ ಮಾಡಿ: ಕೇಂದ್ರದ ಸೂಚನೆ

* ಜನದಟ್ಟಣೆ ಬಲು ಅಪಾಯಕಾರಿ

* ಲಸಿಕೆ ಅಭಿಯಾನ ತೀವ್ರಗೊಳಿಸಿ

ನವದೆಹಲಿ(ಜೂ.20): ಕರ್ನಾಟಕವೂ ಸೇರಿದಂತೆ ದೇಶದ ಅನೇಕ ರಾಜ್ಯಗಳಲ್ಲಿ ಕೊರೋನಾ 2ನೇ ಅಲೆ ತಡೆಯಲು ಜಾರಿಗೊಳಿಸಿದ್ದ ನಿರ್ಬಂಧಗಳನ್ನು ಹಂತಹಂತವಾಗಿ ತೆರವುಗೊಳಿಸುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರವು ‘ಬಹಳ ಎಚ್ಚರಿಕೆಯಿಂದ ಅನ್‌ಲಾಕ್‌ ಮಾಡಿ’ ಎಂದು ಸೂಚನೆ ರವಾನಿಸಿದೆ.

ಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಿಸುವಾಗ ಬಹಳ ಎಚ್ಚರಿಕೆಯಿಂದ ಕ್ರಮಗಳನ್ನು ಜಾರಿಗೊಳಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಕೋವಿಡ್‌ ಸನ್ನಡತೆ, ಟೆಸ್ಟ್‌, ಟ್ರ್ಯಾಕ್‌, ಟ್ರೀಟ್‌ ಮತ್ತು ಲಸಿಕೆ ಎಂಬ ಐದಂಶದ ಸೂತ್ರವನ್ನು ತಪ್ಪದೇ ಪಾಲಿಸಬೇಕು. ಜಿಲ್ಲಾಡಳಿತಗಳು ಸ್ಥಳೀಯ ಪರಿಸ್ಥಿತಿ ನೋಡಿಕೊಂಡು ನಿರ್ಬಂಧಗಳನ್ನು ಸಡಿಲಿಸಬೇಕು ಎಂದು ಸೂಚಿಸಿದೆ.

3ನೇ ಅಲೆಯಲ್ಲಿ ರಾಜ್ಯದ 1-1.5 ಲಕ್ಷ ಮಕ್ಕಳಿಗೆ ಸೋಂಕು: ಡಾ|ದೇವಿಶೆಟ್ಟಿ ಸಮಿತಿ ವರದಿ!

‘ಅನ್‌ಲಾಕ್‌ ಮಾಡುತ್ತಿರುವ ಕೆಲ ರಾಜ್ಯಗಳಲ್ಲಿ ಮಾರುಕಟ್ಟೆಮುಂತಾದ ಪ್ರದೇಶಗಳಲ್ಲಿ ಅಪಾಯಕಾರಿ ರೀತಿಯಲ್ಲಿ ಜನದಟ್ಟಣೆ ಉಂಟಾಗುತ್ತಿರುವ ವರದಿಗಳು ಬರುತ್ತಿವೆ. ಇದು ಬಹಳ ಆತಂಕಕಾರಿ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಬಗ್ಗೆ ಗಮನ ಹರಿಸಬೇಕು’ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಭಲ್ಲಾ ಸುತ್ತೋಲೆ ರವಾನಿಸಿದ್ದಾರೆ.

‘ಸದ್ಯದ ಮಟ್ಟಿಗೆ ಲಸಿಕೆ ನೀಡುವುದೇ ಕೋವಿಡ್‌ ಹರಡುವುದನ್ನು ತಪ್ಪಿಸಲು ಇರುವ ಎಲ್ಲಕ್ಕಿಂತ ಒಳ್ಳೆಯ ಮಾರ್ಗ. ಹೀಗಾಗಿ ರಾಜ್ಯಗಳು ಲಸಿಕೆ ಆಂದೋಲನವನ್ನು ವೇಗಗೊಳಿಸಬೇಕು. ಎಷ್ಟುಸಾಧ್ಯವೋ ಅಷ್ಟುಜನರಿಗೆ ಸಾಧ್ಯವಾದಷ್ಟು ಬೇಗ ಲಸಿಕೆ ನೀಡುವುದು ಎಲ್ಲರ ಗುರಿಯಾಗಬೇಕು’ ಎಂದೂ ಅವರು ಹೇಳಿದ್ದಾರೆ.

ಕೇಂದ್ರದ ಮನವಿಗೆ ಸುಪ್ರೀಂ ಅಸ್ತು, ಆಕ್ಸಿಜನ್ ಪೂರೈಕೆಗಾಗಿ ಟಾಸ್ಕ್​ಫೋರ್ಸ್ ರಚನೆ

ಇದೇ ವೇಳೆ, ‘ಯಾವ ಪ್ರದೇಶದಲ್ಲಾದರೂ ಮತ್ತೆ ಕೊರೋನಾ ಪ್ರಕರಣಗಳ ಹೆಚ್ಚಳವಾದರೆ ಮೈಕ್ರೋ ಕಂಟೈನ್ಮೆಂಟ್‌ ವಲಯ ರಚಿಸಲು ಆಡಳಿತ ಸಜ್ಜಾಗಿರಬೇಕು. ಆ ಪ್ರದೇಶದಿಂದ ಇನ್ನೊಂದು ಕಡೆ ಸೋಂಕು ಹಬ್ಬದಂತಾಗಲು ಈ ಕ್ರಮ ಜರುಗಿಸಬೇಕು’ ಎಂದು ಅವರು ನಿರ್ದೇಶಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!