ರಾಮಮಂದಿರ ಹೋರಾಟ ಶುರುವಾಗಿದ್ದು ಹೇಗೆ?: ಇಲ್ಲಿದೆ ರೋಚಕ ಮಾಹಿತಿ

By Kannadaprabha News  |  First Published Jul 31, 2020, 4:37 PM IST

ರಥಯಾತ್ರೆ ವೇಳೆ ಪೂರ್ತಿ ದಿನ ರಥದ ಮೇಲೆ ನಿಲ್ಲುತ್ತಿದ್ದ ಅಡ್ವಾಣಿ ರಥದ ಒಳಗಡೆ ಶೌಚಾಲಯ ಇರದ ಕಾರಣ ಕಡಿಮೆ ನೀರು ಕುಡಿಯುತ್ತಿದ್ದರು. ಹೋದಲ್ಲೆಲ್ಲ ಸ್ಥಳೀಯ ತಿಂಡಿ ತಿನಿಸು ತರಿಸುತ್ತಿದ್ದ ವಾಜಪೇಯಿಗೆ ವ್ಯತಿರಿಕ್ತವಾಗಿ ಅಡ್ವಾಣಿ ಬೆಳಿಗ್ಗೆ 2 ಬ್ರೆಡ್‌ ತಿಂದರೆ, ಮಧ್ಯಾಹ್ನ ಒಂದು ಚಪಾತಿ ತಿನ್ನುತ್ತಿದ್ದರಂತೆ.


ನವದೆಹಹಲಿ(ಜು.31):  ಭಾರತದ ರಾಜಕಾರಣದಲ್ಲಿ ಸ್ವಾತಂತ್ರ್ಯ ಹೋರಾಟ ಕಾಂಗ್ರೆಸ್‌ ಪಕ್ಷವನ್ನು ರೂಪಿಸಿತು. ಹಾಗೆಯೇ ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟ ಕಾಂಗ್ರೆಸ್‌ ವಿರೋಧಿ ರಾಜಕಾರಣಕ್ಕೆ ಮುನ್ನುಡಿ ಬರೆಯಿತಾದರೂ, ಕಾಂಗ್ರೆಸ್ಸಿನ ಇನ್ನೊಂದು ಧ್ರುವವಾಗುವ ಅವಕಾಶ ಬಿಜೆಪಿಗೆ ದೊರೆತಿದ್ದು ರಾಮಮಂದಿರ ಆಂದೋಲನದ ಕಾರಣದಿಂದ. ಹಾಗೆ ನೋಡಿದರೆ, 1984ರ ಬಿಜೆಪಿ ಪ್ರಣಾಳಿಕೆಯಲ್ಲಿ ಅಯೋಧ್ಯೆಯ ಉಲ್ಲೇಖವೇ ಇರಲಿಲ್ಲ. ಆದರೆ ಇದಕ್ಕೆಲ್ಲ ಮುನ್ನುಡಿ ಬರೆದದ್ದು ಶಾಬಾನೋ ಪ್ರಕರಣ. ಯಾವಾಗ ರಾಜೀವ್‌ ಗಾಂಧಿ ಶಾಬಾನೋ ಬಗ್ಗೆ ಸುಪ್ರೀಂಕೋರ್ಟ್‌ನ ತೀರ್ಪಿಗೆ ಪ್ರತಿಯಾಗಿ ಸಂಸತ್ತಿನ ಗೊತ್ತುವಳಿ ತಂದರೋ ಬಹುಸಂಖ್ಯಾತ ಹಿಂದುಗಳಲ್ಲಿ ಆಕ್ರೋಶ ಶುರುವಾಗಿತ್ತು. ಆಗ ಅಶೋಕ್‌ ಸಿಂಘಾಲರ ವಿಶ್ವ ಹಿಂದು ಪರಿಷತ್‌ ಹೋರಾಟ ಕೈಗೆತ್ತಿಕೊಂಡಿತೇ ಹೊರತು ಬಿಜೆಪಿ ಅಲ್ಲ. ಆದರೆ ಹಿಂದುಗಳನ್ನು ಓಲೈಸಲು ಹೊರಟ ರಾಜೀವ್‌ ಗಾಂಧಿ ಅಯೋಧ್ಯೆಯಲ್ಲಿ ಮಂದಿರದ ಬಾಗಿಲು ತೆಗೆಸಿದರು. ಬಿಜೆಪಿಯ ಅಧ್ಯಕ್ಷರಾಗಿ ಪಕ್ಷಕ್ಕೆ ಒಂದು ಅವಕಾಶ ಪಡೆಯಲು ಕಾಯುತ್ತಿದ್ದ ಅಡ್ವಾಣಿ ಆಗಿನ ಆರ್‌ಎಸ್‌ಎಸ್‌ ಸರಸಂಘ ಚಾಲಕ ಬಾಳಾ ಸಾಹೇಬ ದೇವರಸ್‌ ಅವರ ಆದೇಶದಂತೆ ಬಿಜೆಪಿಯನ್ನು ಅಯೋಧ್ಯೆ ಹೋರಾಟಕ್ಕೆ ಎಳೆದು ತಂದರು. ಮುಂದೆ ನಡೆದದ್ದು ಈಗ ಇತಿಹಾಸ. ಅಂದಹಾಗೆ, ಆಗ ಹೊಸದಾಗಿ ಶುರುವಾಗಿದ್ದ ದೂರದರ್ಶನದ ರಾಮಾಯಣ, ಮಹಾಭಾರತ ಧಾರಾವಾಹಿಗಳೂ ಸಹ ಹಿಂದುತ್ವದ ಭಾವನೆ ಬೆಳೆಯಲು ಕಾರಣವಾಗಿದ್ದವು.

ರಾಮಂದಿರ ಭೂಮಿಪೂಜೆ ನೇರಪ್ರಸಾರಕ್ಕೆ ಬಿಜೆಪಿ ಮಾಸ್ಟರ್ ಪ್ಲಾನ್

Tap to resize

Latest Videos

ಕೇವಲ ರಾಮಮಂದಿರ ಹೋರಾಟ ಅಲ್ಲ

ರಾಜೀವ್‌ ಗಾಂಧಿ ಸರ್ಕಾರದ ವಿರುದ್ಧ ಬಂಡೆದ್ದು ಹೋರಾಟ ಮಾಡಿದ ವಿಶ್ವನಾಥ್‌ ಪ್ರತಾಪ್‌ ಸಿಂಗ್‌ರಿಗೆ ಬಾಹ್ಯ ಬೆಂಬಲ ಕೊಟ್ಟು ಪ್ರಧಾನಿ ಮಾಡಿದ್ದು ಬಿಜೆಪಿ. ಆದರೆ ವಿ.ಪಿ.ಸಿಂಗ್‌ ಪ್ರಧಾನಿ ಆದ ನಂತರ ಮೊದಲು ಚಂದ್ರಶೇಖರ್‌ ಮುನಿಸಿಕೊಂಡು ಹೋದರೆ, ನಂತರ ಪ್ರಧಾನಿ ಹುದ್ದೆಗೆ ಹೆಸರು ಸೂಚಿಸಿದ್ದ ದೇವಿಲಾಲ್‌ ಜೊತೆ ತಿಕ್ಕಾಟಗಳು ಆರಂಭಗೊಂಡಿದ್ದವು. ಇನ್ನೊಂದು ಕಡೆ ಬೆಂಬಲ ನೀಡಿದ್ದ ಬಿಜೆಪಿ ಹಿಂದುತ್ವದ ಕಡೆ ಹೆಚ್ಚು ವಾಲತೊಡಗಿದಾಗ ಬಂಡಾ ರಾಜಮನೆತನದ ವಿ.ಪಿ.ಸಿಂಗ್‌ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡುವ ಮಂಡಲ್‌ ವರದಿಗೆ ಹೊಸ ಜೀವ ತುಂಬಿದರು. ಸಂಘ ನಾಯಕರು ಹೇಳುವ ಪ್ರಕಾರ, ಮಂಡಲ್‌ ವರದಿ ಜಾರಿಯಿಂದ ಹಿಂದುಳಿದ ವರ್ಗಗಳು ಮತ್ತು ಮೇಲ್ಜಾತಿಗಳ ನಡುವೆ ಬಹಿರಂಗ ತಿಕ್ಕಾಟ ಆರಂಭವಾದಾಗ ಆಗಿನ ಸರಸಂಘ ಚಾಲಕ ಬಾಳಾ ಸಾಹೇಬ ದೇವರಸ್‌ ಅವರು ಅಡ್ವಾಣಿ ಮತ್ತು ಗೋವಿಂದಾಚಾರ್ಯರನ್ನು ಕರೆದು ಹಿಂದು ಸಮಾಜವನ್ನು ಒಟ್ಟುಗೂಡಿಸಲು ಬಿಜೆಪಿಯೇ ರಾಮಮಂದಿರ ಹೋರಾಟದಲ್ಲಿ ಧುಮುಕುವಂತೆ ಮಾಡಿದರು. ಕೆಲವರು ಹೇಳುವಂತೆ ಅಟಲ್‌ ಬಿಹಾರಿ ವಾಜಪೇಯಿಗೆ ಬಿಜೆಪಿ ನೇರವಾಗಿ ರಾಮಮಂದಿರ ಆಂದೋಲನದಲ್ಲಿ ಭಾಗವಹಿಸಿ ರಥಯಾತ್ರೆ ಮಾಡುವುದು ಇಷ್ಟವಿರಲಿಲ್ಲ. ಆದರೆ ಅಟಲ್‌ಜಿ ಎಲ್ಲಿಯೂ ಇದನ್ನು ಬಹಿರಂಗವಾಗಿ ಹೇಳಿದ ದಾಖಲೆಗಳಿಲ್ಲ.

ರಾಮ ಮಂದಿರ ಶಂಕುಸ್ಥಾಪನೆ ದಿನ ದಾಳಿಗೆ ತಾಲಿಬಾನ್‌ ಸಂಚು?

ಜೀಪ್‌ ಹೋಗಿ ರಥ ಬಂತು

1989ರಲ್ಲಿ ಸಂಘ ಪರಿವಾರದ ವಿಎಚ್‌ಪಿ ಜೊತೆಗೆ ಬಿಜೆಪಿ ಕೂಡ ಅಯೋಧ್ಯೆ ಆಂದೋಲನದಲ್ಲಿ ಧುಮುಕಬೇಕು ಎಂದು ನಿರ್ಧಾರವಾದಾಗ, ಬಿಜೆಪಿ ಅಧ್ಯಕ್ಷರಾಗಿದ್ದ ಅಡ್ವಾಣಿ ನಡೆದುಕೊಂಡೇ ಯಾತ್ರೆ ನಡೆಸಬೇಕು ಎಂದುಕೊಂಡಿದ್ದರು. ಆದರೆ ಪ್ರಮೋದ್‌ ಮಹಾಜನ್‌ ವಾಹನ ಉಪಯೋಗಿಸೋಣ ಎಂದರು. ಅಡ್ವಾಣಿ ಕೂಡಲೇ ‘ಜೀಪ್‌ ಆಗಬಹುದೇ’ ಎಂದಾಗ ಪ್ರಮೋದ್‌, ‘ಮುಂಬೈನಲ್ಲಿ ಒಂದು ರಥ ಮಾಡಿಸುತ್ತೇನೆ. ‘ರಾಮನ ರಥ’ ಎಂದು ಹೊರಟರೆ ಜನ ಅಭೂತಪೂರ್ವ ಬೆಂಬಲ ನೀಡಿಯಾರು’ ಎಂದು ಟೊಯೊಟಾ ವಾಹನವನ್ನು ರಥವನ್ನಾಗಿ ಪರಿವರ್ತಿಸಿದರು. 1000 ಕಿ.ಮೀ. ಪಾದಯಾತ್ರೆ ಮಾಡಬೇಕು ಎಂದಿದ್ದ ಅಡ್ವಾಣಿ, ರಥಯಾತ್ರೆಯಿಂದ 10,000 ಕಿ.ಮೀ. ಯಾತ್ರೆ ಘೋಷಣೆ ಮಾಡಿದರು.

ರಥಯಾತ್ರೆಯಲ್ಲಿ ಮೋದಿ ಕರಾಮತ್ತು

1990ರಲ್ಲಿ ಸೋಮನಾಥದಿಂದ ರಥಯಾತ್ರೆ ಶುರು ಮಾಡುವಾಗ ನರೇಂದ್ರ ಮೋದಿ ಗುಜರಾತ್‌ ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿದ್ದರು. ಯಾತ್ರೆ ಹೊರಡುವುದಕ್ಕಿಂತ ಮುಂಚೆ ಸೌರಾಷ್ಟ್ರದ ವೇರಾವಲ್‌ನ ಸರ್ಕಾರಿ ಅತಿಥಿ ಗೃಹದಲ್ಲಿ 8 ದಿನ ಉಳಿದು ತಯಾರಿ ಮಾಡಿದ್ದರಂತೆ. ಮೋದಿಯ ಸಂಘಟನಾ ಕೌಶಲ್ಯವನ್ನು ಅಡ್ವಾಣಿ ಗುರುತಿಸಿದ್ದೇ ಸೋಮನಾಥದಲ್ಲಿ. ಯಾತ್ರೆ ಯಶಸ್ವಿ ಆಗುತ್ತೋ ಇಲ್ಲವೋ ಎಂದು ಅನುಮಾನ ಹೊಂದಿದ್ದ ಅಡ್ವಾಣಿ, ಸಂಸತ್ತಿನ ಕಾರಿಡಾರ್‌ನಲ್ಲಿ ಸಿಕ್ಕ ಶಂಕರ ಸಿಂಗ್‌ ವNೕಲಾರನ್ನು ಪಕ್ಕಕ್ಕೆ ಕರೆದು, ‘ಯಾತ್ರೆಗೆ ಜನ ಸ್ಪಂದನೆ ಕೊಡುತ್ತಾರೆಯೇ, ಗುಜರಾತ್‌ನಲ್ಲಿ ಒಂದೊಂದು ಊರಿನಲ್ಲಿ ಕನಿಷ್ಠ 5 ಸಾವಿರ ಜನ ಸೇರಬಹುದೇ’ ಎಂದೆಲ್ಲಾ ಕೇಳಿದ್ದರಂತೆ. ಆದರೆ ಜುನಾಗಢದಲ್ಲೇ 50 ಸಾವಿರ ಜನ ಸೇರಿ, ಅಲ್ಲಿನ ರಾಮಭಕ್ತರು ‘ಮಂದಿರಕ್ಕೆ ರಕ್ತ ಕೊಟ್ಟೇವು’ ಎಂದು ಕುಂಭ ತಂದುಕೊಟ್ಟಾಗ ಅಡ್ವಾಣಿಗೆ ತುಂಬಾ ಇರಿಸುಮುರುಸು ಆಯಿತಂತೆ. ಪ್ರತಿ ಊರಿನಲ್ಲಿ ತ್ರಿಶೂಲ ಪ್ರದರ್ಶನ ವಾಡಿಕೆ ಆದಾಗ ಪತ್ರಕರ್ತರು ಅಡ್ವಾಣಿ ಅವರಿಗೆ ಪ್ರಶ್ನೆ ಕೇಳತೊಡಗಿದರು. ‘ಅಯ್ಯೋ ಎಕೆ-47 ಎದುರು ಇದು ಯಾವ ಲೆಕ್ಕ’ ಎಂದು ಅಡ್ವಾಣಿ ಸಾಗಹಾಕಿದ್ದರಂತೆ.

'ಮನೆಯಲ್ಲೇ ದೀಪ ಬೆಳಗಿ, ಅಯೋಧ್ಯೆಗೆ ಬರಬೇಡಿ'

2 ಬ್ರೆಡ್‌, 1 ಚಪಾತಿಯಲ್ಲೇ ಯಾತ್ರೆ

ಕರ್ನಾಟಕದಲ್ಲಿ ಬಿಜೆಪಿಯ ಯಡಿಯೂರಪ್ಪ- ಅನಂತಕುಮಾರ್‌ ಜೋಡಿಗೆ ಅಡ್ವಾಣಿ ರಥಯಾತ್ರೆ ಒಂದು ರಾಜಕೀಯ ಅವಕಾಶ ಕೊಟ್ಟಿತ್ತು. ಅನಂತಕುಮಾರ್‌ ಹೇಳುತ್ತಿದ್ದ ಪ್ರಕಾರ, ಪೂರ್ತಿ ದಿನ ರಥದ ಮೇಲೆ ನಿಲ್ಲುತ್ತಿದ್ದ ಅಡ್ವಾಣಿ, ರಥದ ಒಳಗಡೆ ಶೌಚಾಲಯ ಇರದೇ ಇದ್ದುದರಿಂದ ತುಂಬಾ ಕಡಿಮೆ ನೀರು ಕುಡಿಯುತ್ತಿದ್ದರು. ಹೋದಲ್ಲೆಲ್ಲ ಸ್ಥಳೀಯ ತಿಂಡಿ ತಿನಿಸು ತರಿಸುತ್ತಿದ್ದ ವಾಜಪೇಯಿಗೆ ವ್ಯತಿರಿಕ್ತವಾಗಿ ಅಡ್ವಾಣಿ ಬೆಳಿಗ್ಗೆ 2 ಬ್ರೆಡ್‌ ತಿಂದರೆ, ಮಧ್ಯಾಹ್ನ ಒಂದು ಚಪಾತಿ ತಿನ್ನುತ್ತಿದ್ದರಂತೆ. ಆ ಯಾತ್ರೆಯಲ್ಲಿ ರಾಜ್ಯದಲ್ಲಿ ಅಡ್ವಾಣಿ ಜೊತೆಗಿದ್ದ ರಾಜೇಂದ್ರ ಗೋಖಲೆ ಪ್ರಕಾರ, ಹುಬ್ಬಳ್ಳಿಗೆ ಬಂದಾಗ ರಾತ್ರಿ ಅಡ್ವಾಣಿ ಅವರಿಗೆ ತುರ್ತಾಗಿ ಫ್ಯಾಕ್ಸ್‌ ಮಾಡಬೇಕಾಯಿತಂತೆ. ಕೊನೆಗೆ ಎಲ್ಲೆಲ್ಲೋ ಹುಡುಕಾಡಿ ನಾನಾಭಾಯಿ ಕವಾರ್‌ ಮನೆಯಿಂದ ಮಷಿನ್‌ ತಂದುಕೊಡಲಾಯಿತು. 62ರಲ್ಲೂ ಉತ್ಸಾಹಿ ಆಗಿದ್ದ ಅಡ್ವಾಣಿ ಬೆಳಿಗ್ಗೆ ಹೇಳಿದ ಸಮಯಕ್ಕೆ ಸರಿಯಾಗಿ ತಯಾರಾಗಿ ಬಂದು ಕೂರುತ್ತಿದ್ದರಂತೆ. ರಥದ ಡೀಸೆಲ್‌, ಕಾರುಗಳು, ಊಟ ವಸತಿಯ ಮೇಲ್ವಿಚಾರಣೆ ಪ್ರಮೋದ ಮಹಾಜನ್‌ರದ್ದು. ಅಂದಹಾಗೆ ಆಗ ರಥಯಾತ್ರೆಯಲ್ಲಿ ಕರ್ನಾಟಕ ಬಿಜೆಪಿ ಬಳಿ ಯಡಿಯೂರಪ್ಪನವರದ್ದೂ ಸೇರಿದಂತೆ 4 ಅಂಬಾಸಿಡರ್‌ ಕಾರುಗಳಿದ್ದವಂತೆ.

ಅಡ್ವಾಣಿ ಬಂ​ಧನ, ಪ್ರಧಾನಿ ಪದಚ್ಯುತ

ಅಡ್ವಾಣಿ ಯಾತ್ರೆ ಹೊರಡುತ್ತೇನೆ ಎಂದಾಗ ದೆಹಲಿಗೆ ಹೋದ ಬಿಹಾರ ಮುಖ್ಯಮಂತ್ರಿ ಲಾಲು, ‘ಭಾಗಲಪುರ ಗಲಭೆಯಿಂದ ಈಗಷ್ಟೇ ಹೊರಗೆ ಬರುತ್ತಿರುವ ಬಿಹಾರಕ್ಕೆ ಬರಬೇಡಿ’ ಎಂದು ಅಡ್ವಾಣಿಗೆ ಹೇಳಿದರಂತೆ. ಲಾಲು ಹೇಳುವ ಪ್ರಕಾರ ಅಡ್ವಾಣಿ ‘ಯಾವ ಹಾಲು ಕುಡಿಯುವವ ನನ್ನನ್ನು ಬಂಧಿ​ಸುತ್ತಾನೆ ನೋಡುತ್ತೇನೆ ’ಎಂದರಂತೆ. ಆಗ ಲಾಲು, ‘ನಾನು ತಾಯಿ ಮತ್ತು ಎಮ್ಮೆ ಎರಡರ ಹಾಲೂ ಕುಡಿದವನು. ಬನ್ನಿ ಬಿಹಾರಕ್ಕೆ ತೋರಿಸುತ್ತೇನೆ’ ಎಂದರಂತೆ. ಯಾವಾಗ ಅಡ್ವಾಣಿ ಯಾತ್ರೆ ಬಿಹಾರದ ಸಾಸಾರಾಂಗೆ ಕಾಲಿಟ್ಟಿತೋ ಅವತ್ತೇ ಅಡ್ವಾಣಿಯನ್ನು ಬಂ​ಧಿಸಲು ಜಿಲ್ಲಾಧಿ​ಕಾರಿಗೆ ಲಾಲು ಆದೇಶ ಕೊಟ್ಟಿದ್ದರಂತೆ. ಆದರೆ ಜಿಲ್ಲಾಧಿ​ಕಾರಿಯೇ ಅಡ್ವಾಣಿಗೆ ಸುದ್ದಿ ಮುಟ್ಟಿಸಿದ್ದರಿಂದ ಅಡ್ವಾಣಿ ಯಾತ್ರೆಯ ರಸ್ತೆ ಬದಲಾಯಿಸಿದರಂತೆ. ನಂತರ ಧನಬಾದ್‌ಗೆ ಅಡ್ವಾಣಿ ಬಂದಾಗ ಅಲ್ಲಿನ ಪೊಲೀಸ್‌ ಅಧಿ​ಕಾರಿ ಬಂಧನಕ್ಕೆ ಒಪ್ಪಲಿಲ್ಲವಂತೆ. ಕೊನೆಗೆ ಮರು ದಿನ ಸ್ಪೆಷಲ್‌ ಆರ್ಡರ್‌ ಹೊರಡಿಸಿ, ಈಗಿನ ಮೋದಿ ಸಂಪುಟದಲ್ಲಿ ಸಚಿವರಾಗಿರುವ ಐಎಎಸ್‌ ಅಧಿಕಾರಿ ಆರ್‌.ಕೆ.ಸಿಂಗ್‌ರನ್ನು ಹೆಲಿಕಾಪ್ಟರ್‌ ಮೂಲಕ ಕಳುಹಿಸಿ, ಸಮಷ್ಟಿಪುರದಲ್ಲಿ ಅಡ್ವಾಣಿಯನ್ನು ಬಂಧಿ​ಸಲಾಯಿತು. ಲಾಲು ಹೇಳಿಕೊಂಡಿರುವ ಪ್ರಕಾರ, ಅವತ್ತು ಸುದ್ದಿ ಲೀಕ್‌ ಆಗಬಾರದು ಎಂದು ಮುಖ್ಯ ಕಾರ್ಯದರ್ಶಿ ಹಾಗೂ ಗೃಹ ಕಾರ್ಯದರ್ಶಿಯನ್ನು ತನ್ನ ಮನೆಯಲ್ಲೇ ಇಟ್ಟುಕೊಂಡು ಫೋನ್‌ ಕೂಡ ತೆಗೆಸಿಹಾಕಿದ್ದರಂತೆ. ಬೆಳಿಗ್ಗೆ 4 ಗಂಟೆಗೆ ಸಮಷ್ಟಿಪುರದ ಐಬಿಗೆ ಫೋನ್‌ ಮಾಡಿದ ಲಾಲು ತಾನು ಪತ್ರಕರ್ತ ಎಂದು ಹೇಳಿಕೊಂಡು ಅಡುಗೆಯವನ ಬಳಿ ‘ಅಡ್ವಾಣಿ ಏನು ಮಾಡುತ್ತಿದ್ದಾರೆ, ಒಬ್ಬರೇ ಮಲಗಿದ್ದಾರಾ’ ಎಂದೆಲ್ಲ ಕೇಳಿದ್ದರಂತೆ. ಅಷ್ಟೇ ಅಲ್ಲ, ಆರ್‌.ಕೆ.ಸಿಂಗ್‌ ಬೆಳಗಿನ ಜಾವ 5:30ಕ್ಕೆ ಅಡ್ವಾಣಿ ಅವರನ್ನು ಕರೆದುಕೊಂಡು ಬಂಗಾಳ-ಬಿಹಾರ ಗಡಿಯ ಅತಿಥಿ ಗೃಹಕ್ಕೆ ತಲುಪಿದಾಗ, ತಾನೇ ಪಾಟ್ನಾದ ಪಿಟಿಐ ವರದಿಗಾರನಿಗೆ ಫೋನ್‌ ಮಾಡಿ ಸುದ್ದಿ ಕೊಟ್ಟಿದ್ದರಂತೆ. ಲಾಲು ಇಷ್ಟೆಲ್ಲ ಮಾಡಿದರೂ ಪ್ರಧಾನಿ ವಿ.ಪಿ.ಸಿಂಗ್‌ಗೆ ಅಡ್ವಾಣಿ ಬಂಧನದ ಸುಳಿವು ಕೂಡ ಇರಲಿಲ್ಲ. ಹೀಗಾಗಿ ಬಿಹಾರದಲ್ಲಿ ಅಡ್ವಾಣಿ ಬಂಧನ ಆಗುತ್ತಿದ್ದಂತೆಯೇ ದಿಲ್ಲಿಯಲ್ಲಿ ವಿ.ಪಿ.ಸಿಂಗ್‌ಗೆ ನೀಡಿದ್ದ ಬೆಂಬಲವನ್ನು ಬಿಜೆಪಿ ಹಿಂದೆ ತೆಗೆದುಕೊಂಡಿತು.

"ರಾಮನ ಅಸ್ತಿತ್ವವೇ ಇಲ್ಲ ಎಂದಿದ್ದ ಕಾಂಗ್ರೆಸ್", ಇದೀಗ ಭಕ್ತರಾಗಿದ್ದು ಹೇಗೆ? ಬಿಜೆಪಿ ತಿರುಗೇಟು!

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

click me!