ಕೆಲಸ ಅರಸಿ ಗಲ್ಫ್‌ಗೆ ತೆರಳಿದ ಮಹಿಳೆಗೆ ಗಲ್ಲು: ಮಗಳ ಕ್ಷೇಮಕ್ಕಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ತಂದೆಗೆ ಶಾಕ್

Published : Mar 03, 2025, 06:57 PM ISTUpdated : Mar 04, 2025, 11:04 AM IST
ಕೆಲಸ ಅರಸಿ ಗಲ್ಫ್‌ಗೆ ತೆರಳಿದ ಮಹಿಳೆಗೆ ಗಲ್ಲು: ಮಗಳ ಕ್ಷೇಮಕ್ಕಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ತಂದೆಗೆ ಶಾಕ್

ಸಾರಾಂಶ

4 ತಿಂಗಳ ಮಗುವಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಬ್ ರಾಷ್ಟ್ರ ಯುಎಇಯಲ್ಲಿ ಗಲ್ಲು ಶಿಕ್ಷೆಗೊಳಗಾಗಿದ್ದ ಭಾರತೀಯ ಮಹಿಳೆಯನ್ನು ಗಲ್ಲಿಗೇರಿಸಲಾಗಿದೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಸೋಮವಾರ ದೆಹಲಿ ಹೈಕೋರ್ಟ್‌ಗೆ ಮಾಹಿತಿ ನೀಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.

ನವದೆಹಲಿ: ಸೌದಿ ರಾಷ್ಟ್ರಗಳಲ್ಲಿ ಅನೇಕ ಭಾರತೀಯ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಕೆಲವರು ಉನ್ನತ ವ್ಯಾಸಂಗದ ನಂತರ ಅಲ್ಲಿಗೆ ಹೋಗಿ ಒಳ್ಳೆಯ ಉದ್ಯೋಗಕ್ಕೆ ಸೇರಿದ್ದರೆ, ಮತ್ತೆ ಕೆಲವರು ಶಿಕ್ಷಣವಿಲ್ಲದೇ ಕೇವಲ ಹೊಟ್ಟೆ ಪಾಡಿಗಾಗಿ ಅಲ್ಲಿನ ಕೂಲಿಯಾಳುಗಳು, ಮನೆಕೆಲಸದಾಳುಗಳಾಗಿ ಕೆಲಸ ಮಾಡುತ್ತಾರೆ. ಭಾರತದ ರೂಪಾಯಿಗೆ ಹೋಲಿಸಿದರೆ ಅಲ್ಲಿನ ಕರೆನ್ಸಿ ಮೌಲ್ಯ ಹೆಚ್ಚು ಇರುವುದರಿಂದ ತನ್ನ ಕುಟುಂಬವನ್ನು ಪೊರೆಯುವುದಕ್ಕಾಗಿ ಅನೇಕರು ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಹೀಗೆ ಕೆಲಸಕ್ಕೆ ಹೋದ ಉತ್ತರ ಪ್ರದೇಶದ ಮಹಿಳೆಯೊಬ್ಬಳು ದುರಂತವಾಗಿ ಸಾವನ್ನಪ್ಪಿದ್ದಾಳೆ. 4 ತಿಂಗಳ ಮಗುವಿನ ಕೊಲೆ ಆರೋಪ ಹೊರಿಸಿ ಆಕೆಯನ್ನು ಅಲ್ಲಿ ಗಲ್ಲಿಗೇರಿಸಲಾಗಿದ್ದು, ಸಣ್ಣಪುಟ್ಟ ಕೆಲಸ ಅರಸಿ ಅರಬ್ ರಾಷ್ಟ್ರಗಳಿಗೆ ಹೋಗುವವರಿಗೆ ಇದೊಂದು ಕರೆಗಂಟೆಯಾಗಿದೆ. 

4 ತಿಂಗಳ ಮಗುವಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಬ್ ರಾಷ್ಟ್ರ ಯುಎಇಯಲ್ಲಿ ಗಲ್ಲು ಶಿಕ್ಷೆಗೊಳಗಾಗಿದ್ದ ಭಾರತೀಯ ಮಹಿಳೆಯನ್ನು ಗಲ್ಲಿಗೇರಿಸಲಾಗಿದೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಸೋಮವಾರ ದೆಹಲಿ ಹೈಕೋರ್ಟ್‌ಗೆ ಮಾಹಿತಿ ನೀಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಬಂಡಾ ಜಿಲ್ಲೆಯ 33 ವರ್ಷದ ಮಹಿಳೆ ಅಬುಧಾಬಿಯಲ್ಲಿ 4 ತಿಂಗಳ ಮಗುವಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದು. ಆಕೆಯನ್ನು ಕಳೆದ ತಿಂಗಳು ಅಂದರೆ ಫೆಬ್ರವರಿ 15ರಂದು ಗಲ್ಲಿಗೇರಿಸಲಾಗಿದೆ. ಶೆಹ್ಜಾದ್ ಖಾನ್ ಎಂಬ ಮಹಿಳೆಯೇ ಅಬುಧಾಬಿಯಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದ ಭಾರತೀಯ ಮಹಿಳೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. 

ನರ್ಸ್ ನಿಮಿಷಪ್ರಿಯ ಬಿಡುಗಡೆಗೆ ನೆರವು: 40,000 ಡಾಲರ್ ಬ್ಲಡ್‌ ಮನಿ ವರ್ಗಾವಣೆ: ಕೇಂದ್ರ ಸರ್ಕಾರ

ಯುಎಇಯ ಕಾನೂನು ಮತ್ತು ನಿಯಮಗಳಿಗೆ ಅನುಸಾರವಾಗಿ ಫೆಬ್ರವರಿ 15, 2025 ರಂದು ಶೆಹಜಾದಿ ಖಾನ್ ಅವರನ್ನು ಅಲ್ಲಿ ಗಲ್ಲಿಗೇರಿಸಲಾಯಿತು ಎಂದು ವಿದೇಶಾಂಗ ಸಚಿವಾಲಯವು ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.  ಶೆಹಜಾದಿ ಖಾನ್ ಅವರಿಗೆ ಮರಣದಂಡನೆ ವಿಧಿಸಿದ್ದರ ಕುರಿತು ಫೆಬ್ರವರಿ 28 ರಂದು ಅಬುಧಾಬಿ ಸರ್ಕಾರದಿಂದ ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಅಧಿಕೃತ ಮಾಹಿತಿ ಬಂದಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಚೇತನ್ ಶರ್ಮಾ ಕೋರ್ಟ್‌ಗೆ ಹೇಳಿದ್ದಾರೆ.

ಮಗಳ ಯೋಗಕ್ಷೇಮ ಅರಸಿ ಅರ್ಜಿ ಸಲ್ಲಿಸಿದ್ದ ತಂದೆ

ಆಕೆಯ ವಿಚಾರದಲ್ಲಿ ಅಲ್ಲಿನ ರಾಯಭಾರ ಕಚೇರಿ ಅಧಿಕಾರಿಗಳು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದ್ದಾರೆ ಮತ್ತು ಅವರ ಅಂತ್ಯಕ್ರಿಯೆಯನ್ನು ಮಾರ್ಚ್ 5, 2025 ರಂದು ನಿಗದಿಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಶೆಹಜಾದಿ  ಖಾನ್ ಅವರ ತಂದೆ ಶಬ್ಬೀರ್ ಖಾನ್ ಅವರು ತಮ್ಮ ಮಗಳು ಭಾಗಿಯಾಗಿರುವ ಪ್ರಕರಣದ ಪ್ರಸ್ತುತ ಕಾನೂನು ಸ್ಥಿತಿ ಮತ್ತು ಯೋಗಕ್ಷೇಮದ ಬಗ್ಗೆ ಮಾಹಿತಿ ಪಡೆಯಲು ನ್ಯಾಯಾಲಯದ ಮೊರೆ ಹೋದ ನಂತರ ವಿದೇಶಾಂಗ ಸಚಿವಾಲಯ ನ್ಯಾಯಾಲಯಕ್ಕೆ ಈ ಮಾಹಿತಿ ನೀಡಿದೆ. 

ದುಃಖಕರ ದುರಾದೃಷ್ಟಕರ ಎಂದ ಹೈಕೋರ್ಟ್‌

ವಿದೇಶಾಂಗ ಸಚಿವಾಲಯದ ಸಲ್ಲಿಸಿದ ಮಾಹಿತಿಯ ನಂತರ ನ್ಯಾಯಾಲಯವು ಶೆಹಜಾದಿ  ಖಾನ್ ಅವರ ತಂದೆ ಶಬ್ಬೀರ್ ಖಾನ್ ಸಲ್ಲಿಸಿದ್ದ ಅರ್ಜಿಯನ್ನು 'ದುಃಖಕರ ಮತ್ತು ದುರದೃಷ್ಟಕರ ಘಟನೆ ಎಂದು ಕರೆದು ವಿಲೇವಾರಿ ಮಾಡಿದೆ.   ಶಹಜಾದಿ ಖಾನ್ ಅವರ ಆರೈಕೆಯಲ್ಲಿದ್ದ ಮಗು ಸಾವನ್ನಪ್ಪಿದ ಕಾರಣಕ್ಕೆ ಶಹಜಾದಿ ಖಾನ್ ಅವರನ್ನು ಬಂಧಿಸಿ ಅಬುಧಾಬಿಯ ಅಲ್ ವತ್ಬಾ ಜೈಲಿನಲ್ಲಿ ಇರಿಸಲಾಗಿತ್ತು. ನಂತರ ಮರಣದಂಡನೆ ವಿಧಿಸಲಾಗಿತ್ತು. ಶಬ್ಬೀರ್ ಖಾನ್ ಅವರ ಅರ್ಜಿಯ ಪ್ರಕಾರ, ಅವರ ಮಗಳು ಶೆಹಜಾದಿ ಕಾನೂನುಬದ್ಧ ವೀಸಾ ಪಡೆದ ನಂತರ  2021 ರ ಡಿಸೆಂಬರ್‌ನಲ್ಲಿ ಉದ್ಯೋಗಕ್ಕಾಗಿ ಅಬುಧಾಬಿಗೆ ತೆರಳಿದ್ದರು. 

ಲಸಿಕೆಯ ನಂತರ ಮಗು ಸಾವು

ಆಗಸ್ಟ್‌ 2022ರಲ್ಲಿ ಶೆಹಜಾದಿ ಕೆಲಸಕ್ಕಿದ್ದ ಮನೆಯ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಶೆಹಜಾದಿ ಆ ಮಗುವಿನ ಆರೈಕೆ ಮಾಡುವ ಕೆಲಸ ಮಾಡುತ್ತಿದ್ದರು. ಆದರೆ ದುರಾದೃಷ್ಟವಶಾತ್‌ 2022ರ ಡಿಸೆಂಬರ್‌ 7 ರಂದು ನಿಗದಿತ ಲಸಿಕೆಗಳನ್ನು ಪಡೆದ ನಂತರ ಮಗು ಸಾವನ್ನಪ್ಪಿತ್ತು.  ಇತ್ತ ಶೆಹಜಾದಿ ತಂದೆ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಡಿಸೆಂಬರ್ 2023 ರಲ್ಲಿ ಶಿಶುವಿನ ಕೊಲೆಗೆ ಸಂಬಂಧಿಸಿದಂತೆ ಖಾನ್ ತಪ್ಪೊಪ್ಪಿಕೊಂಡಿದ್ದಾಳೆಂದು ಹೇಳಲಾದ ವೀಡಿಯೊ ರೆಕಾರ್ಡಿಂಗ್ ಅನ್ನು ಸಹ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. 

ಕುವೈತ್‌: ಗಲ್ಫ್‌ನ ಬ್ಯಾಂಕ್‌ಗಳಿಗೆ ಕೇರಳ ನರ್ಸ್‌ಗಳ ಮಹಾ ಮೋಸ: ವಂಚಿಸಿದ್ದೆಷ್ಟು ಕೋಟಿ?

ಚಿತ್ರಹಿಂಸೆ ನೀಡಿ ತಪ್ಪೊಪ್ಪಿಗೆ ಪಡೆದ ಆರೋಪ
ಆದರೆ ಆಕೆಗೆ ಉದ್ಯೋಗ ನೀಡಿದವರು ಹಾಗೂ ಆತನ ಕುಟುಂಬದವರು ಆಕೆಗೆ ಚಿತ್ರಹಿಂಸೆ ಮತ್ತು ನಿಂದನೆ ಮಾಡುವ ಮೂಲಕ ತಪ್ಪೊಪ್ಪಿಗೆಯನ್ನು ಪಡೆದಿದ್ದಾರೆ ಎಂಬ ಆರೋಪವೂ ಇತ್ತು. ಮಗುವಿನ ಪೋಷಕರು ಮಗುವಿನ ಮರಣೋತ್ತರ ಪರೀಕ್ಷೆಗೆ ಒಪ್ಪಿಗೆ ನಿರಾಕರಿಸಿದರು ಮತ್ತು ಸಾವಿನ ಕುರಿತು ಹೆಚ್ಚಿನ ತನಿಖೆಯನ್ನು ಕೈಬಿಡುವ ಒಪ್ಪಂದಕ್ಕೆ ಕೂಡ ಸಹಿ ಹಾಕಿದ್ದರು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. 

ಇತ್ತ ಭಾರತೀಯ ರಾಯಭಾರ ಕಚೇರಿಯು ತನ್ನ ಮಗಳಿಗೆ ಕಾನೂನು ಸಲಹೆ ನೀಡಿದ್ದರೂ, ಕೊಲೆಯನ್ನು ಒಪ್ಪಿಕೊಳ್ಳುವಂತೆ ಒತ್ತಡ ಹೇರಲಾಯಿತು ಮತ್ತು ಅವಳಿಗೆ ಅಗತ್ಯ ಪ್ರಾತಿನಿಧ್ಯವನ್ನು ನಿರಾಕರಿಸಲಾಯಿತು ಎಂದು ಆ ವ್ಯಕ್ತಿ ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾನ್ 2023ರ ಸೆಪ್ಟೆಂಬರ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಲಾಗಿತ್ತು ಹಾಗೂ ಫೆಬ್ರವರಿ 2024ರಲ್ಲಿ ಆಕೆಗೆ ಮರಣದಂಡನೆಯನ್ನು ಎತ್ತಿ ಹಿಡಿಯಲಾಗಿತ್ತು. 

ಫೆಬ್ರವರಿ 14ರಂದು ಕೊನೆಯ ಕರೆ
ಇದಾದ ನಂತರ ಶಬ್ಬೀರ್ ಖಾನ್ ಅವರು,  2024ರ ಮೇ ತಿಂಗಳಲ್ಲಿ ಮತ್ತೆ ಹೊಸ ಕ್ಷಮಾ  ಅರ್ಜಿಯನ್ನು ಸಲ್ಲಿಸಿದ್ದರು. ಆದರೆ 2025ರ ಫೆಬ್ರವರಿ 14ರಂದು  ಸೆರೆವಾಸಕ್ಕೊಳಗಾದ ಮಗಳಿಂದ ಅವರು ಕರೆ ಸ್ವೀಕರಿಸಿದ್ದರು. ಇದು  ಮರಣದಂಡನೆ ಸನ್ನಿಹಿತವಾಗಿರುವುದನ್ನು ಸೂಚಿಸಿತ್ತು. ಇದಾದ ನಂತರ ಅವರು ಫೆಬ್ರವರಿ 25ರಂದು ವಿದೇಶಾಂಗ ಸಚಿವಾಲಯಕ್ಕೆ ಆಕೆಯ ಸ್ಥಿತಿ ಮತ್ತು ಯೋಗಕ್ಷೇಮದ ಬಗ್ಗೆ ವಿಚಾರಣೆ ಕೋರಿ ಔಪಚಾರಿಕ ವಿನಂತಿಯನ್ನು ಸಲ್ಲಿಸಿದರು, ಆದರೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಆದರೆ ಈಗ ಅವರು ಗಲ್ಲಿಗೇರಿಸಲ್ಪಟ್ಟಿರುವುದು ಖಚಿತವಾಗಿದ್ದು, ಮಗಳ ಪ್ರಸ್ತುತ ಸ್ಥಿತಿ ಬಗ್ಗೆ ಕೇಳಿದ ತಂದೆಗೆ ಆಘಾತ ಆಗಿದೆ. 

ನಾವಿಲ್ಲಿ ಕೇರಳದ ನರ್ಸ್ ನಿಮಿಷಪ್ರಿಯಾ ಪ್ರಕರಣವನ್ನು ನೆನೆಯಬಹುದು. ಒಟ್ಟಿನಲ್ಲಿ ಸರಿಯಾದ ಶಿಕ್ಷಣದ ಹಿನ್ನೆಲೆ ಇಲ್ಲದೇ ಗಲ್ಫ್‌ ರಾಷ್ಟ್ರಗಳಿಗೆ ಹೋಗಿ ಸಿಲುಕಿಕೊಂಡರೆ ಎಂತಹ ಅನಾಹುತವಾಗುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..