
ನವದೆಹಲಿ(ಮಾ.03) ಕಾಂಗ್ರೆಸ್ ನಾಯಕಿ ಟ್ವೀಟ್‌ನಿಂದ ಇದೀಗ ಪಕ್ಷಕ್ಕೆ ತೀವ್ರ ಮುಜುಗರ ಎದುರಾಗಿದೆ. ಕಾಂಗ್ರೆಸ್ ನಾಯಕಿ ಶಾಮಾ ಮೊಹಮ್ಮದ್ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕುರಿತು ಮಾಡಿದ ಟ್ವೀಟ್ ಕೊನೆಗೂ ಡಿಲೀಟ್ ಮಾಡಿದರೂ ಟೀಕೆಗಳು ನಿಂತಿಲ್ಲ. ಈ ಒಂದು ಟ್ವೀಟ್‌ನಿಂದ ಸುಮ್ಮನೆ ಇರಲಾರದೆ ಇರುವೆ ಬಿಟ್ಟುಕೊಂಡಂತಾಗಿದೆ ಕಾಂಗ್ರೆಸ್ ಸ್ಥಿತಿ. ರೋಹಿತ್ ಶರ್ಮಾ ತುಂಬಾ ದಪ್ಪಗಿದ್ದಾರೆ, ಕ್ರೀಡೆಗೆ ಲಾಯಕ್ಕಿಲ್ಲ. ಇಷ್ಟೇ ಅಲ್ಲ ಭಾರತ ತಂಡ ಕಂಡ ಕೆಟ್ಟ ನಾಯಕ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ಗೆ ಹೊತ್ತಿಕೊಂಡ ಬೆಂಕಿ ಇನ್ನೂ ಆರಿಲ್ಲ. ಇದರ ನಡುವೆ ಬಿಜೆಪಿಯ ಗೂಗ್ಲಿಗೆ ಕಾಂಗ್ರೆಸ್ ಪೇಚಿಗೆ ಸಿಲುಕಿದೆ.
ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಲೋಕಸಭೆ, ವಿಧಾನಸಭೆ, ಕೌನ್ಸಿಲ್, ಸ್ಥಳೀಯ ಚುನಾವಣೆ ಸೇರಿದಂತೆ ಒಟ್ಟು 90 ಚುನಾವಣೆಗಳಲ್ಲಿ ಸೋಲು ಕಂಡಿದೆ. ಈ ನಾಯಕತ್ವ ಹೇಗಿದೆ ಎಂದು ಬಿಜೆಪಿ ಪ್ರಶ್ನಿಸಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್ ರೀತಿಯ ಟ್ವೀಟ್ ಮಾಡುತ್ತಿದೆ. ಈ ಮೂಲಕ ಮಹತ್ವದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಆತ್ಮವಿಶ್ವಾಸಕ್ಕೆ ಧಕ್ಕೆ ತರುತ್ತಿದೆ. ಅವರ ಪಾರ್ಟಿಯ ನಾಯಕತ್ವವನ್ನು ಮೊದಲು ನೋಡಿಕೊಳ್ಳಲಿ ಎಂದು ಬಿಜೆಪಿ ನಾಯಕ ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದಾರೆ.
ರೋಹಿತ್ ಶರ್ಮಾ ದಪ್ಪ, ಕ್ರಿಕೆಟ್‌ಗೆ ಫಿಟ್ ಅಲ್ಲವೆಂದು ವಿವಾದದಲ್ಲಿರುವ ಶಮಾಗೂ ಮಂಗಳೂರಿಗೂ ನಂಟೇನು?
2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾದಷ್ಟು ಉತ್ತಮ ಪ್ರದರ್ಶನ ನೀಡಿದ ತಂಡ ಮತ್ತೊಂದಿಲ್ಲ. ಕಾರಣ 3 ಲೀಗ್ ಪಂದ್ಯದಲ್ಲಿ 3ರಲ್ಲೂ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ. ಇದೀಗ ಆಸ್ಟ್ರೇಲಿಯಾ ವಿರುದ್ದಧ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಆತ್ಮವಿಶ್ವಾಸ ಕುಗ್ಗಿಸುವ ಕೆಲಸವನ್ನು ಕಾಂಗ್ರಸ್ ನಾಯಕಿ ಮಾಡಿದ್ದಾರೆ. ರೋಹಿತ್ ಶರ್ಮಾ ಕ್ರೀಡೆ ಅನ್‌ಫಿಟ್, ಕಾರಣ ತುಂಬಾ ದಪ್ಪಗಿದ್ದಾರೆ. ಟೀಂ ಇಂಡಿಯಾ ಕಂಡ ಅತ್ಯಂತ ಕಳಪೆ ನಾಯಕ ಎಂದು ಶಾಮ ಮೊಹಮ್ಮದ್ ಹೇಳಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಲೀಗ್ ಹಂತದಲ್ಲಿ ಮೂರು ಪಂದ್ಯ ಗೆದ್ದು ಎ ಗುಂಪಿನ ಅಗ್ರ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಇತ್ತ ಬಿ ಗುಂಪಿನ ಅಗ್ರ ತಂಡ ಆಸ್ಟ್ರೇಲಿಯಾ ಗೆದ್ದಿರುವುದು ಒಂದು ಪಂದ್ಯ, ಇನ್ನೆರಡು ಪಂದ್ಯ ಮಳೆಯಿಂದ ರದ್ದಾಗಿ ಒಂದೊಂದು ಅಂಕ ಪಡೆದು ಸೆಮಿಫೈನಲ್ ಪ್ರವೇಶಿಸಿದೆ. 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ನಾಯಕತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿದೆ. ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 5 ಬಾರಿ ಚಾಂಪಿಯನ್ ಮಾಡಿದ್ದಾರೆ. ತನ್ನದಲ್ಲದ ಕ್ಷೇತ್ರದಲ್ಲಿ ಹುಳ ಬಿಟ್ಟ ಕಾಂಗ್ರೆಸ್ ಇದೀಗ ಇರಿಸುಮುರಿಸು ಅನುಭವಿಸಿದೆ.
ಎಲ್ಲಾ ಪಕ್ಷಗಳು ಶಾಮಾ ಮೊಹಮ್ಮದ್ ಹೇಳಿಕೆಯನ್ನು ಖಂಡಿಸಿದೆ. ಆದರೆ ಮಮತಾ ಬ್ಯಾನರ್ಜಿ ನಾಯಕತ್ವದ ಟಿಎಂಸಿ ಪಕ್ಷದ ಸಂಸದ ಸೌಗತ್ ರಾಯ್ ಬೆಂಬಲ ನೀಡಿದ್ದಾರೆ. ಶಾಮಾ ಮೊಹಮ್ಮದ್ ಏನೂ ತಪ್ಪು ಹೇಳಿಲ್ಲ. ರೋಹಿತ್ ಶರ್ಮಾ ಕಳಪೆ ಪ್ರದರ್ಶನ ನೀಡಿದ್ದಾರೆ. ಅವರು ಒಂದು ಶತಕವನ್ನು ಗಳಿಸಿದ್ದಾರೆ, ಆದರೆ ಉಳಿದ ಸಂದರ್ಭಗಳಲ್ಲಿ 2, 3, 4 ಅಥವಾ 5 ರನ್ ಗಳಿಸಿ ಔಟ್ ಆಗುತ್ತಾರೆ. ಭಾರತೀಯ ತಂಡದ ಇತರ ಆಟಗಾರರು ಚೆನ್ನಾಗಿ ಆಡುತ್ತಾರೆ ಆದರೆ ನಾಯಕನ ಕೊಡುಗೆ ಇರುವುದಿಲ್ಲ ಎಂದಿದ್ದಾರೆ.
ರೋಹಿತ್ ಶರ್ಮಾ ಕಳಪೆ ನಾಯಕ, ದೇಹ ದಪ್ಪ, ಫಿಟ್‌ನೆಸ್ ಟೀಕಿಸಿದ ಕಾಂಗ್ರೆಸ್ ನಾಯಕಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ