ಉತ್ತರ ಪ್ರದೇಶದ ಲಖನೌ ಕಂಟೋನ್ಮೆಂಟ್‌ನ ಸದರ್ ಬಜಾರ್‌ನಲ್ಲಿ ತೇಜೇಶ್ ಅವರ ತಂದೆ ಅಶೋಕ್ ಕುಮಾರ್ ವೈಶ್ ‘ಗಾಯತ್ರಿ ಮಿಷ್ಟಾನ್ ಭಂಡಾರ್’ ಎಂಬ ಸಣ್ಣ ಸಿಹಿ ತಿಂಡಿ ಅಂಗಡಿ ನಡೆಸುತ್ತಿದ್ದಾರೆ. ತೇಜೇಶ್ 5 ರಿಂದ 9ನೇ ತರಗತಿಯವರೆಗೆ ಪ್ರತಿದಿನ ತಂದೆಗೆ ಸಮೋಸ, ಜಿಲೇಬಿ ಹಾಗೂ ಇತರೆ ಸ್ವೀಟ್ಸ್ ತಯಾರಿಸಲು ನೆರವಾಗುತ್ತಿದ್ದರು. ಕುಟುಂಬದಲ್ಲಿ ಹಣಕಾಸಿನ ಮುಗ್ಗಟ್ಟು ಇದ್ದರೂ, ತೇಜೇಶ್ ಗಣಿತದಲ್ಲಿ ಅಪಾರ ಆಸಕ್ತಿ ಹೊಂದಿದ್ದರು.
ಆರಂಭಿಕ ದಿನಗಳಲ್ಲಿ ಓದಿನಲ್ಲಿ ಸಾಧಾರಣವಾಗಿದ್ದ ಅವರು 5ನೇ ತರಗತಿಯಲ್ಲಿ ಕೇವಲ 48% ಅಂಕ ಗಳಿಸಿದ್ದರು. ಆದರೆ, ಗಣಿತದ ಮೇಲಿನ ಆಸಕ್ತಿಯಿಂದಾಗಿ 10ನೇ ತರಗತಿಯಲ್ಲಿ 94% ಹಾಗೂ 12ನೇ ತರಗತಿಯಲ್ಲಿ 95% ಅಂಕ ಗಳಿಸಿ ಎಲ್ಲರ ಹುಬ್ಬೇರಿಸಿದರು.
12ನೇ ತರಗತಿ ನಂತರ ಒಂದು ವರ್ಷ ಬಿಡುವು (ಡ್ರಾಪ್ ಇಯರ್) ಪಡೆದುಕೊಂಡ ತೇಜೇಶ್, ಕೋಚಿಂಗ್ ಸೆಂಟರ್‌ನಲ್ಲಿ ದಿನಕ್ಕೆ ಬರೋಬ್ಬರಿ 18 ಗಂಟೆಗಳ ಕಾಲ ಕಠಿಣ ಅಭ್ಯಾಸ ಮಾಡಿದರು. ಮಗನ ಪರಿಶ್ರಮಕ್ಕೆ ತಂದೆಯೂ ಸಾಥ್ ನೀಡಿದ್ದು, ದಿನಕ್ಕೆ ಎರಡು ಊಟದ ಡಬ್ಬಿ ತಂದುಕೊಡುತ್ತಿದ್ದರು. ಈ ಪರಿಶ್ರಮದ ಫಲವಾಗಿ, 2019ರ ಯುಪಿ ಎಂಟ್ರನ್ಸ್ ಎಕ್ಸಾಮ್‌ನಲ್ಲಿ 9ನೇ ರ‍್ಯಾಂಕ್ (ಲಖನೌಗೆ ಪ್ರಥಮ) ಹಾಗೂ ಜೆಇಇ ಪರೀಕ್ಷೆಯಲ್ಲಿ 99.9 ಸ್ಕೋರ್ ಮಾಡಿ ಐಐಟಿ ಕಾನ್ಪುರದಲ್ಲಿ ಕಂಪ್ಯೂಟರ್ ಸೈನ್ಸ್ ಸೀಟ್ ಪಡೆದರು. ಐಐಟಿಯಲ್ಲೂ ಅಸಾಧಾರಣ ಪ್ರತಿಭೆ ಮೆರೆದ ಅವರು, 9.14 ಸಿಪಿಐ (CPI) ನೊಂದಿಗೆ ‘ಅಕಾಡೆಮಿಕ್ ಎಕ್ಸಲೆನ್ಸ್ ಅವಾರ್ಡ್’ ಮುಡಿಗೇರಿಸಿಕೊಂಡರು.
ಐಐಟಿ ಶಿಕ್ಷಣದ ನಂತರ ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್ ಹಾಗೂ ಸ್ಕ್ವೇರ್‌ಪಾಯಿಂಟ್ ಕ್ಯಾಪಿಟಲ್‌ನಲ್ಲಿ ಉದ್ಯೋಗದ ಆಫರ್ ಪಡೆದ ತೇಜೇಶ್, ಪ್ರಸ್ತುತ ದುಬೈನ ಪ್ರಸಿದ್ಧ ‘Lumian.ai’ ಕಂಪನಿಯಲ್ಲಿ ಲೀಡ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಮೆಜಾನ್ ಬ್ರ್ಯಾಂಡ್‌ಗಳಿಗಾಗಿ ಬೃಹತ್ ಎಐ (AI Agents) ತಂತ್ರಜ್ಞಾನವನ್ನು ರೂಪಿಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ತೇಜೇಶ್ ಅವರ ತಾಯಿ ಮಮತಾ ವೈಶ್ ಕ್ಯಾನ್ಸರ್ ಕಾಯಿಲೆಯಿಂದ ಗುಣಮುಖರಾಗಿದ್ದ ಸಂದರ್ಭದಲ್ಲಿ, ಆ ಕಾಯಿಲೆ ಮರುಕಳಿಸದಂತೆ ನೋಡಿಕೊಳ್ಳಲು ಅವರು ಹೋಮಿಯೋಪತಿ ವೈದ್ಯರನ್ನು ಸಂಪರ್ಕಿಸಿದರು. ಆಗ ಹೋಮಿಯೋಪತಿ ವೈದ್ಯರಿಗೆ ರೋಗಿಗಳ ಮಾಹಿತಿ ದಾಖಲಿಸಲು ಹಾಗೂ ರೆಫರೆನ್ಸ್ ಹುಡುಕಲು ತಂತ್ರಜ್ಞಾನದ ಕೊರತೆ ಇರುವುದು ತಿಳಿಯಿತು. ಇದಕ್ಕಾಗಿ ತೇಜೇಶ್ ಅವರೇ ಖುದ್ದಾಗಿ ‘Homeo AI’ ಎಂಬ ವಿನೂತನ ಎಐ ಪ್ಲಾಟ್‌ಫಾರ್ಮ್ ಅಭಿವೃದ್ಧಿಪಡಿಸಿದ್ದು, ಇದು ವೈದ್ಯರ ಕೆಲಸವನ್ನು ಅತ್ಯಂತ ಸುಲಭಗೊಳಿಸಿದೆ.
ತಾನು ಕಷ್ಟಪಟ್ಟು ಮೇಲೆ ಬಂದ ತೇಜೇಶ್, ಸಮಾಜಕ್ಕೆ ಏನಾದರೂ ಮರಳಿಸಬೇಕೆಂಬ ಉದ್ದೇಶದಿಂದ ಐಐಟಿಯಲ್ಲಿದ್ದಾಗ 3,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ ನೀಡಿದ್ದಾರೆ. ಅಲ್ಲದೆ, ಬಡತನದ ನಡುವೆಯೂ ಅವರಿಗೆ ಸಿಕ್ಕ ‘ಪಿ.ಡಿ. ಮೂರ್ತಿ’ ವಿದ್ಯಾರ್ಥಿವೇತನ ಅವರ ವಿದ್ಯಾಭ್ಯಾಸಕ್ಕೆ ಆಸರೆಯಾಯಿತು. ವಿಶೇಷವೆಂದರೆ, ತೇಜೇಶ್ ಅವರ ಯಶಸ್ಸಿನ ಹಾದಿ ನೋಡಿ ಪ್ರೇರಿತರಾಗಿರುವ ಅವರ ತಂಗಿ ಆಸ್ಥಾ ಕೂಡ ಈಗ ವಿಐಟಿ ಅಮರಾವತಿಯಲ್ಲಿ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದು, ಇಡೀ ಕುಟುಂಬದಲ್ಲೇ ಶಿಕ್ಷಣ ಕ್ರಾಂತಿ ಮೂಡಿದೆ.
ಆರಂಭಿಕ ಪರೀಕ್ಷೆಯ ಕಡಿಮೆ ಅಂಕಗಳು ಎಂದಿಗೂ ನಿಮ್ಮ ಭವಿಷ್ಯವನ್ನು ನಿರ್ಧರಿಸುವುದಿಲ್ಲ. 5ನೇ ತರಗತಿಯಲ್ಲಿ 48% ಪಡೆದಿದ್ದ ನಾನೇ ಐಐಟಿ ಮುಗಿಸಿ ಎಐ ಇಂಜಿನಿಯರ್ ಆಗಲು ಸಾಧ್ಯವಾದರೆ, ಕಠಿಣ ಪರಿಶ್ರಮ ಮತ್ತು ಸರಿಯಾದ ಮಾರ್ಗದರ್ಶನವಿದ್ದರೆ ಯಾರೂ ಬೇಕಾದರೂ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಬಹುದು ಎನ್ನುತ್ತಾರೆ ತೇಜೇಶ್ ವೈಶ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ