
ದಕ್ಷಿಣ ಭಾರತದ ರಾಜ್ಯಗಳು, ಅದರಲ್ಲೂ ವಿಶೇಷವಾಗಿ ಕರ್ನಾಟಕ ಕೇಂದ್ರಕ್ಕೆ ಪಾವತಿಸುವ ತೆರಿಗೆ ಹಣದ ಮರುಹಂಚಿಕೆ ಕುರಿತಂತೆ ದೇಶಾದ್ಯಂತ ಈಗಾಗಲೇ ತೀವ್ರ ವಾದ-ವಿವಾದಗಳು ನಡೆಯುತ್ತಿವೆ. ಈ ಬೆನ್ನಲ್ಲೇ ದೇಶದ ಪ್ರಮುಖ ಆನ್‌ಲೈನ್ ಬ್ರೋಕರೇಜ್ ಸಂಸ್ಥೆ ‘ಝೆರೋಧಾ’ (Zerodha) ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರು ನೀಡಿರುವ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ. ಭಾರತ ಹಾಗೂ ಚೀನಾದ ತೆರಿಗೆ ಹಂಚಿಕೆ ಮಾದರಿಯನ್ನು ಹೋಲಿಸಿ ಮಾತನಾಡಿರುವ ಅವರು, ಹೊಸದೊಂದು ಆರ್ಥಿಕ ಚರ್ಚೆಗೆ ಮುನ್ನುಡಿ ಬರೆದಿದ್ದಾರೆ.
ಭಾರತದಲ್ಲಿ ರಾಜ್ಯಗಳು ತಾವು ಗಳಿಸುವ ತೆರಿಗೆ ಆದಾಯವನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅಭಿಪ್ರಾಯಪಟ್ಟಿರುವ ನಿಖಿಲ್ ಕಾಮತ್, 'ಚೀನಾದಲ್ಲಿರುವ ಪರಿಸ್ಥಿತಿ ಭಾರತಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ಚೀನಾದಲ್ಲಿ ಒಂದು ಪ್ರಾಂತ (ರಾಜ್ಯ) ಆದಾಯ ಗಳಿಸಿದರೆ, ಆ ಹಣವನ್ನು ಇತರ ಹಿಂದುಳಿದ ಪ್ರಾಂತ್ಯಗಳ ಮೇಲೆ ವಿನಿಯೋಗಿಸುವುದಿಲ್ಲ. ಆಯಾ ಪ್ರಾಂತ ತನ್ನ ಆದಾಯದ ಕ್ರೆಡಿಟ್ ಅನ್ನು ತಾನೇ ಉಳಿಸಿಕೊಳ್ಳುತ್ತದೆ. ಆದರೆ ಭಾರತದಲ್ಲಿ ಕರ್ನಾಟಕದಂತಹ ರಾಜ್ಯಗಳು ಭಾರಿ ಮೊತ್ತದ ಆದಾಯ ಗಳಿಸಿದರೆ, ಆ ಹಣವನ್ನು ಉತ್ತರ ಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳಲ್ಲಿ ಖರ್ಚು ಮಾಡಲಾಗುತ್ತದೆ' ಎಂದಿದ್ದಾರೆ. ಅಲ್ಲದೆ, ಚೀನಾದ ಪ್ರಾಂತ್ಯಗಳಿಗೆ ಬಂಡವಾಳಶಾಹಿ ಆರ್ಥಿಕ ನೀತಿಗಳನ್ನು ಜಾರಿಗೊಳಿಸಲು ಹೆಚ್ಚಿನ ಸ್ವಾತಂತ್ರ್ಯವಿದೆ ಎಂದು ಉಲ್ಲೇಖಿಸಿದ್ದಾರೆ.
What’s wrong with this?
@nikhilkamathcio is rightly pointing out the loot of progressive states like Karnataka by the central government (Congress and BJP). https://t.co/tgLyKBtDrk
— ಸಂಪತ್ ಕುಮಾರ್ (@SampathKannada) November 2, 2026
ನಿಖಿಲ್ ಕಾಮತ್ ಅವರ ಈ ಹೇಳಿಕೆ ಹೊರಬರುತ್ತಿದ್ದಂತೆ 'ಎಕ್ಸ್' (ಟ್ವಿಟರ್) ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಎರಡು ಬಣಗಳಾಗಿ ತೀವ್ರ ಚರ್ಚೆ ಆರಂಭಿಸಿದ್ದಾರೆ.
ಕಾಮತ್ ವಾದಕ್ಕೆ ಬೆಂಬಲ: 'ಕರ್ನಾಟಕ ಮತ್ತು ಮಹಾರಾಷ್ಟ್ರ ದೇಶದಲ್ಲೇ ಅತಿ ಹೆಚ್ಚು ಜಿಎಸ್‌ಟಿ ಕೊಡುಗೆ ನೀಡುತ್ತವೆ. ಆದರೆ ಮುಂಬೈ, ಬೆಂಗಳೂರಿನಂತಹ ನಗರಗಳಿಗೆ ಸಮರ್ಪಕ ಮೆಟ್ರೋ, ಹೆದ್ದಾರಿ ಮತ್ತು ಮೂಲಸೌಕರ್ಯಗಳು ಸಿಗುತ್ತಿಲ್ಲ. ನಾವು ದುಡಿದು ಕಟ್ಟುವ ತೆರಿಗೆ ಹಣ ಎಲ್ಲಿಗೆ ಹೋಗುತ್ತಿದೆ?' ಎಂದು ಹಲವರು ಕಾಮತ್ ಮಾತನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಕಾಮತ್ ವಾದಕ್ಕೆ ವಿರೋಧ: ಮತ್ತೊಂದೆಡೆ ಹಲವು ನೆಟ್ಟಿಗರು ಕಾಮತ್ ಅವರ ಹೇಳಿಕೆ ಪ್ರಶ್ನಿಸಿದ್ದಾರೆ. 'ಚೀನಾದಲ್ಲೂ ದೊಡ್ಡ ಮಟ್ಟದಲ್ಲಿ ಸಂಪನ್ಮೂಲಗಳ ಮರುಹಂಚಿಕೆ (Redistribution) ನಡೆಯುತ್ತದೆ. ಒಕ್ಕೂಟ ವ್ಯವಸ್ಥೆಯಲ್ಲಿ ಬಲಿಷ್ಠ ರಾಜ್ಯಗಳು ದುರ್ಬಲ ರಾಜ್ಯಗಳನ್ನು ಕೈಹಿಡಿಯುವುದು ಸಹಜ. ಕರ್ನಾಟಕದ ವಿಚಾರವನ್ನೇ ತೆಗೆದುಕೊಂಡರೆ, ಬೆಂಗಳೂರಿನಿಂದ ಬರುವ ಆದಾಯವನ್ನು ಉತ್ತರ ಕರ್ನಾಟಕದ ಕಲಬುರಗಿ, ಬೀದರ್‌ನಂತಹ ಭಾಗಗಳಿಗೆ ಹಂಚಲಾಗುತ್ತಿಲ್ಲವೇ? ಹಾಗಾದರೆ ಬೆಂಗಳೂರನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ಮಾಡಿಬಿಡಬೇಕಾ?' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದಕ್ಷಿಣದ ರಾಜ್ಯಗಳ ತೆರಿಗೆ ಪಾಲು ಮತ್ತು ಒಕ್ಕೂಟ ವ್ಯವಸ್ಥೆಯ (Fiscal Federalism) ಮೇಲಿನ ಹಕ್ಕೊತ್ತಾಯ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿರುವ ಹೊತ್ತಿನಲ್ಲೇ, ಕಾಮತ್ ಅವರ ಈ ಚೀನಾ ಹೋಲಿಕೆ ಚರ್ಚೆಗೆ ಮತ್ತಷ್ಟು ತುಪ್ಪ ಸುರಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ