'ಗುಡ್ ಮಾರ್ನಿಂಗ್ ಅಣ್ಣಾ' ಎನ್ನುವವರಿಗೇ ಪಿಂಕ್ ಸ್ಲಿಪ್ ನೀಡಬೇಕಾಯ್ತು; 12 ಉದ್ಯೋಗಿಗಳಿಗಾಗಿ ಕಣ್ಣೀರಿಟ್ಟ ಐಟಿ ಮ್ಯಾನೇಜರ್!

Published : Nov 03, 2026, 01:47 PM IST
chennai it manager emotional story 12 employees layoff

ಸಾರಾಂಶ

ಕಂಪನಿಗಳಲ್ಲಿ ಉದ್ಯೋಗ ಕಡಿತ ಎಂಬುದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯ ಸುದ್ದಿಯಾಗಿದೆ. ಐಟಿ ಕಂಪನಿಯೊಂದರ ಡೆಲಿವರಿ ಮ್ಯಾನೇಜರ್ ಹಂಚಿಕೊಂಡಿರುವ ನೋವಿನ ಕಥೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

ಕಂಪನಿಗಳಲ್ಲಿ ಉದ್ಯೋಗ ಕಡಿತ ಎಂಬುದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯ ಸುದ್ದಿಯಾಗಿದೆ. ವೆಚ್ಚ ಕಡಿತ, ಆರ್ಥಿಕ ಒತ್ತಡ ಸೇರಿದಂತೆ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಐಟಿ ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿವೆ. ಆದರೆ ಈ ನಿರ್ಧಾರವನ್ನು ಜಾರಿಗೆ ತರುವ ಜವಾಬ್ದಾರಿ ಕೆಲವೊಮ್ಮೆ ಉದ್ಯೋಗಿಗಳ ಜೊತೆ ವರ್ಷಗಳಿಂದ ಕೆಲಸ ಮಾಡಿರುವ ಮ್ಯಾನೇಜರ್‌ಗಳ ಹೆಗಲಿಗೆ ಬೀಳುತ್ತದೆ. ಇದೀಗ ಚೆನ್ನೈ ಮೂಲದ ಪ್ರಮುಖ ಐಟಿ ಕಂಪನಿಯೊಂದರ ಡೆಲಿವರಿ ಮ್ಯಾನೇಜರ್ ಹಂಚಿಕೊಂಡಿರುವ ನೋವಿನ ಕಥೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

ಒಂದೇ ತಂಡದಲ್ಲಿ 10 ವರ್ಷಗಳ ಒಡನಾಟ!

ರೆಡ್ಡಿಟ್‌ನಲ್ಲಿ ತಮ್ಮ ಅನುಭವ ಹಂಚಿಕೊಂಡಿರುವ ಡೆಲಿವರಿ ಮ್ಯಾನೇಜರ್, ತಮ್ಮ ತಂಡದ 12 ಉದ್ಯೋಗಿಗಳನ್ನು ಶುಕ್ರವಾರದೊಳಗೆ ಕೆಲಸದಿಂದ ವಜಾಗೊಳಿಸುವಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಹೇಳಿದ್ದಾರೆ. ಹಿರಿಯ ಆಡಳಿತ ಮಂಡಳಿ ನಡೆಸಿದ ರಹಸ್ಯ ಸಭೆಗೆ ತಮ್ಮನ್ನು ಕರೆಸಿಕೊಂಡು, 12 ಉದ್ಯೋಗಿಗಳ ಹೆಸರುಗಳಿರುವ ಎಕ್ಸೆಲ್ ಶೀಟ್ ನೀಡಲಾಗಿದೆ. ಪ್ರತಿಯೊಬ್ಬ ಉದ್ಯೋಗಿಯೊಂದಿಗೂ ಪ್ರತ್ಯೇಕವಾಗಿ 15 ನಿಮಿಷಗಳ ಸಭೆ ನಡೆಸಿ ಕೆಲಸದಿಂದ ತೆಗೆದುಹಾಕುವ ನಿರ್ಧಾರವನ್ನು ತಿಳಿಸುವಂತೆ ಸೂಚಿಸಲಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.

ಆದರೆ ಈ 12 ಮಂದಿ ಅವರಿಗೆ ಕೇವಲ ಸಹೋದ್ಯೋಗಿಗಳಲ್ಲ. 2016ರಿಂದ ಅಂದರೆ ಬರೋಬ್ಬರಿ 10 ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದವರು. ಕಚೇರಿಯ ಕೆಲಸದ ಜೊತೆಗೆ ವೈಯಕ್ತಿಕ ಜೀವನದ ಸುಖ-ದುಃಖಗಳನ್ನೂ ಹಂಚಿಕೊಂಡವರು. ರಾತ್ರಿ ತಡವಾದರೂ ಪ್ರೊಡಕ್ಷನ್ ಸಮಸ್ಯೆಗಳನ್ನು ಪರಿಹರಿಸಲು ಒಟ್ಟಿಗೆ ಕೆಲಸ ಮಾಡಿದ್ದು, ಊಟ ಹಂಚಿಕೊಂಡಿದ್ದು, ಮದುವೆ ಸಮಾರಂಭಗಳಲ್ಲಿ ಭಾಗವಹಿಸಿದ್ದು, ಪರಸ್ಪರರ ಜೀವನದ ಪ್ರಮುಖ ಕ್ಷಣಗಳನ್ನು ಸಂಭ್ರಮಿಸಿದ್ದು ಹೀಗೆ ಹಲವು ನೆನಪುಗಳನ್ನು ಮ್ಯಾನೇಜರ್ ಮೆಲುಕು ಹಾಕಿದ್ದಾರೆ.

ಮ್ಯಾನೇಜರ್‌ಗೆ 'ಅಣ್ಣಾ' ಎಂದು ಕರೆಯುವ ಉದ್ಯೋಗಿಗಳು!

ತಮಿಳಿನಲ್ಲಿ ಹಿರಿಯ ಸಹೋದರನನ್ನು ಪ್ರೀತಿಯಿಂದ 'ಅಣ್ಣಾ' ಎಂದು ಕರೆಯುತ್ತಾರೆ. ಈ ತಂಡದ ಉದ್ಯೋಗಿಗಳು ಕೂಡ ತಮ್ಮ ಮ್ಯಾನೇಜರ್ ಅವರನ್ನು 'ಅಣ್ಣಾ' ಎಂದೇ ಕರೆಯುತ್ತಿದ್ದರಂತೆ. ಹೀಗಾಗಿ, ತಮ್ಮ ಜೊತೆ ಇಷ್ಟು ವರ್ಷ ಆತ್ಮೀಯವಾಗಿ ಬೆರೆತಿದ್ದವರನ್ನೇ ಕೆಲಸದಿಂದ ತೆಗೆದುಹಾಕುವ ಪರಿಸ್ಥಿತಿ ಎದುರಾಗಿರುವುದು ಅವರನ್ನು ಭಾವನಾತ್ಮಕವಾಗಿ ಕುಗ್ಗಿಸಿದೆ.

ಕೆಲವರ ಬದುಕಿನಲ್ಲಿ ದೊಡ್ಡ ಜವಾಬ್ದಾರಿಗಳು

ಉದ್ಯೋಗ ಕಡಿತದ ನಿರ್ಧಾರದಿಂದ ತೊಂದರೆಗೆ ಸಿಲುಕಲಿರುವ ಉದ್ಯೋಗಿಗಳ ವೈಯಕ್ತಿಕ ಪರಿಸ್ಥಿತಿಯೂ ಮ್ಯಾನೇಜರ್ ನೋವನ್ನು ಮತ್ತಷ್ಟು ಹೆಚ್ಚಿಸಿದೆ. ತಂಡದ ಒಬ್ಬ ಡೆವಲಪರ್ ಇತ್ತೀಚೆಗಷ್ಟೇ ಮನೆ ಖರೀದಿಗಾಗಿ ಸಾಲ ಪಡೆದಿದ್ದಾರಂತೆ. ಮತ್ತೊಬ್ಬ ಉದ್ಯೋಗಿಯ ತಾಯಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಕಂಪನಿಯ ಆರೋಗ್ಯ ವಿಮೆಯೇ ಅವರ ಚಿಕಿತ್ಸೆಗೆ ಪ್ರಮುಖ ಆಧಾರವಾಗಿದೆ. ಇನ್ನೊಬ್ಬ ಉದ್ಯೋಗಿಯ ಪತ್ನಿ ಗರ್ಭಿಣಿಯಾಗಿದ್ದು, ಮುಂದಿನ ತಿಂಗಳೇ ಹೆರಿಗೆ ದಿನಾಂಕ ನಿಗದಿಯಾಗಿದೆ ಎಂದು ಮ್ಯಾನೇಜರ್ ತಿಳಿಸಿದ್ದಾರೆ.

ಇಂತಹ ಕಷ್ಟದ ಸಂದರ್ಭಗಳಲ್ಲಿ ಉದ್ಯೋಗ ಕಳೆದುಕೊಂಡರೆ ಅವರ ಕುಟುಂಬಗಳ ಮೇಲೆ ಎಂತಹ ಪರಿಣಾಮ ಬೀರಬಹುದು ಎಂಬ ಆತಂಕ ಅವರನ್ನು ಕಾಡುತ್ತಿದೆ.

ಕೆಲಸಕ್ಕೆ ರಾಜೀನಾಮೆ ನೀಡುವ ಯೋಚನೆ!

12 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಜವಾಬ್ದಾರಿ ವಹಿಸಿಕೊಳ್ಳುವುದಕ್ಕಿಂತ ತಾವೇ ಕೆಲಸಕ್ಕೆ ರಾಜೀನಾಮೆ ನೀಡಬೇಕೇ ಎಂದು ಮ್ಯಾನೇಜರ್ ಯೋಚಿಸಿದ್ದರಂತೆ. ಆದರೆ ಅವರ ಪತ್ನಿ, ನೀವು ಈ ಕೆಲಸ ನಿರಾಕರಿಸಿದರೂ ಬೇರೊಬ್ಬರಿಗೆ ಇದೇ ಜವಾಬ್ದಾರಿ ನೀಡಲಾಗುತ್ತದೆ ಎಂದು ಮನವರಿಕೆ ಮಾಡಿದ್ದಾರಂತೆ. ಹೀಗಾಗಿ, ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬ ಗೊಂದಲದಲ್ಲಿ ಸಿಲುಕಿರುವುದಾಗಿ ಅವರು ಬರೆದುಕೊಂಡಿದ್ದಾರೆ.

ಹಿರಿಯ ಅಧಿಕಾರಿಗಳು ವೆಚ್ಚ ಕಡಿತದ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದರೆ ಉದ್ಯೋಗಿಗಳ ಮುಂದೆ ಕುಳಿತು ಆ ನಿರ್ಧಾರವನ್ನು ತಿಳಿಸುವುದು ಮತ್ತು ಅವರ ನೋವನ್ನು ಎದುರಿಸುವುದು ಮಧ್ಯಮ ಹಂತದ ಮ್ಯಾನೇಜರ್‌ಗಳ ಪಾಲಾಗುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'ಗುಡ್ ಮಾರ್ನಿಂಗ್ ಅಣ್ಣಾ' ಎಂಬ ಮಾತೇ ಈಗ ನೋವು!

ಮ್ಯಾನೇಜರ್ ಹಂಚಿಕೊಂಡಿರುವ ಪೋಸ್ಟ್‌ನಲ್ಲಿನ ಅತ್ಯಂತ ಭಾವನಾತ್ಮಕ ಸಂಗತಿಯೆಂದರೆ, ಮರುದಿನ ಬೆಳಗ್ಗೆ ಕಚೇರಿಗೆ ಬಂದಾಗ ತಮ್ಮ ತಂಡದವರು ಎಂದಿನಂತೆ ನಗುತ್ತಾ 'ಗುಡ್ ಮಾರ್ನಿಂಗ್ ಅಣ್ಣಾ' ಎಂದು ಹೇಳುವುದನ್ನು ಕಲ್ಪಿಸಿಕೊಳ್ಳುವುದೇ ಅವರಿಗೆ ಕಷ್ಟವಾಗಿದೆಯಂತೆ. ಅವರು ತಮ್ಮ ಕುಟುಂಬದ ಬಗ್ಗೆ ವಿಚಾರಿಸುತ್ತಾರೆ. ಎಂದಿನಂತೆ ಆತ್ಮೀಯವಾಗಿ ಮಾತನಾಡುತ್ತಾರೆ. ಆದರೆ ಅದೇ ಜನರಿಗೆ ಕೆಲವೇ ಕ್ಷಣಗಳಲ್ಲಿ ಕೆಲಸ ಕಳೆದುಕೊಂಡಿರುವ ಸುದ್ದಿಯನ್ನು ತಿಳಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ.

ಯಾವುದೇ ಸಂಬಳ ಅಥವಾ ಕಾರ್ಪೊರೇಟ್ ಹುದ್ದೆಯೂ ಇಂತಹ ಮಾನಸಿಕ ನೋವನ್ನು ಅಳಿಸಿಹಾಕಲು ಸಾಧ್ಯವಿಲ್ಲ ಎಂದು ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೇವಾಲಯಗಳಲ್ಲಿ ಅರ್ಚಕರು ಅತ್ಯಾ*ಚಾರ ಮಾಡುತ್ತಾರೆ, ಬ್ರಾಹ್ಮಣ ಮಹಿಳೆಯರು ಸುರಕ್ಷಿತವಾಗಿಲ್ಲ - ನೇಹಾ ಬೋರಾ ವೀಡಿಯೊ ಹಂಚಿಕೊಂಡ ಬಿಜೆಪಿ
ದಿಢೀರ್ 1500% ಜಂಪ್! ಭಾರತಕ್ಕೆ ಹರಿದು ಬರುತ್ತಿದೆಯಾ 'ಕಳ್ಳಚಿನ್ನ'? ಬಂಗಾರದ ಕಳ್ಳಸಾಗಣೆ ದಿಢೀರ್ ಹೆಚ್ಚಾಗಿದ್ದು ಏಕೆ?