ಕಳೆದ ಎರಡೂವರೆ ವರ್ಷಗಳಲ್ಲಿ ಪ್ರಧಾನಿ ಮೋದಿ 38 ದೇಶಗಳಿಗೆ ಭೇಟಿ ನೀಡಿದ್ದು, ಒಟ್ಟು 258 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಅಮೆರಿಕ ಪ್ರವಾಸಕ್ಕೆ ಅತಿ ಹೆಚ್ಚು ಹಣ ಖರ್ಚಾಗಿದೆ.
ನವದೆಹಲಿ (ಮಾ.22): ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಎರಡೂವರೆ ವರ್ಷಗಳಲ್ಲಿ 38 ದೇಶಗಳಿಗೆ ಭೇಟಿ ನೀಡಿದ್ದು, ಈ ಅವಧಿಯಲ್ಲಿ ಮೋದಿಯವರ ವಿದೇಶ ಪ್ರವಾಸಕ್ಕೆ 258 ಕೋಟಿ ರು. ವೆಚ್ಚವಾಗಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿದೇಶ ವ್ಯವಹಾರಗಳ ರಾಜ್ಯ ಸಚಿವ ಪಬಿತ್ರಾ ಮಾರ್ಗರಿಟಾ, ‘2022 ರಿಂದ 2024ರ ನಡುವೆ ಪ್ರಧಾನಿ ನರೇಂದ್ರ ಮೋದಿಯವರು 38 ದೇಶಗಳಿಗೆ ಭೇಟಿ ನೀಡಿದ್ದಾರೆ. ಜರ್ಮನಿ, ಕುವೈತ್, ಡೆನ್ಮಾರ್ಕ್, ಫ್ರಾನ್ಸ್, ಯುಎಇ, ಉಜ್ಬೇಕಿಸ್ತಾನ್, ಇಂಡೋನೇಷ್ಯಾ, ಆಸ್ಟ್ರೇಲಿಯಾ, ಈಜಿಪ್ಟ್, ದಕ್ಷಿಣ ಆಫ್ರಿಕಾ, ಗ್ರೀಸ್, ಪೋಲೆಂಡ್, ಉಕ್ರೇನ್, ರಷ್ಯಾ, ಇಟಲಿ, ಬ್ರೆಜಿಲ್ , ಗಯಾನಾ ಹಾಗೂ ಇತರ ದೇಶಗಳಿಗೆ ಭೇಟಿ ನೀಡಿದ್ದು, ಇದಕ್ಕಾಗಿ 258 ಕೋಟಿ ರು. ವೆಚ್ಚವಾಗಿದೆ.’ ಎಂದಿದ್ದಾರೆ.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಯವರೇ ನನಗೊಂದು ಆಧಾರ್ ಕಾರ್ಡ್ ಮಾಡಿಸಿಕೊಡಿ; ಪತ್ರ ಬರೆದ 80 ವರ್ಷದ ಅಜ್ಜಿ!
ಇನ್ನು ಕೇಂದ್ರದ ಅಂಕಿ ಅಂಶಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ 2023ರ ಜೂನ್‌ನಲ್ಲಿ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಈ ಅವಧಿಯಲ್ಲಿ ಅವರು ಒಂದೇ ಭೇಟಿಗೆ ಅತಿ ಹೆಚ್ಚು ಅಂದರೆ ಬರೋಬ್ಬರಿ 22 ಕೋಟಿ ರು.ಗಿಂತ ಹೆಚ್ಚಿನ ಹಣ ಖರ್ಚಾಗಿದೆ. ಉಳಿದಂತೆ ಪೋಲೆಂಡ್ (₹ 10 ಕೋಟಿ), ಉಕ್ರೇನ್ ( ₹ 2.5 ಕೋಟಿ), ರಷ್ಯಾ( ₹5 ಕೋಟಿ) , ಇಟಲಿ( ₹14 ಕೋಟಿ), ಬ್ರೆಜಿಲ್ (₹5.5 ಕೋಟಿ). ಗಯಾನಾ( ₹5 ಕೋಟಿ) ಖರ್ಚಾಗಿದೆ.
2014ಕ್ಕಿಂತ ಮುಂಚೆ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು 2011ರಲ್ಲಿ ಅಮೆರಿಕಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ₹10.7 ಕೋಟಿ ಖರ್ಚು ಮಾಡಲಾಗಿತ್ತು. ಉಳಿದಂತೆ ರಷ್ಯಾ(2013) ಭೇಟಿಗೆ ₹9.9 ಕೋಟಿ, ಫ್ರಾನ್ಸ್(2011) ₹8 ಕೋಟಿ, ಜರ್ಮನಿ(2013) ₹6 ಕೋಟಿ ವೆಚ್ಚವಾಗಿತ್ತು.