
ಪುಣೆ: ಕೇತನ್ ಅಗರ್ವಾಲ್ ಹತ್ಯೆ ಆರೋಪಿಗಳಾದ ಸಿಯಾ ಗೋಯಲ್ ಹಾಗೂ ಆಕೆಯ ಪ್ರಿಯಕರ ಚೇತನ್ ಚೌಧರಿ ಇದೀಗ ವಿಚಾರಣೆಯ ವೇಳೆ ಪರಸ್ಪರರ ಮೇಲೆಯೇ ದೋಷಾರೋಪಣೆ ಮಾಡುತ್ತಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ವಿಚಾರಣೆ ನಡೆಸುವಾಗ, ಇಬ್ಬರೂ ಪ್ರೇಮಿಗಳು ತಮ್ಮ ತಪ್ಪನ್ನು ಕಡಿಮೆ ಮಾಡಲು ಯತ್ನಿಸುತ್ತಿದ್ದಾರೆ. ಇಬ್ಬರೂ ತದ್ವಿರುದ್ಧವಾದ ಹೇಳಿಕೆ ನೀಡುತ್ತಿದ್ದಾರೆ. ‘ಸಿಯಾಳೊಂದಿಗೆ ಓಡಿಹೋಗುವ ಮೂಲಕ ಹೊಸ ಜೀವನ ಆರಂಭಿಸಲು ಬಯಸಿದ್ದೆ. ಆದರೆ ಕೇತನ್‌ನನ್ನು ಕೊಲ್ಲಲು ಅವಳೇ ಒತ್ತಾಯಿಸಿದಳು’ ಎಂದು ಚೇತನ್ ಹೇಳಿಕೊಂಡಿದ್ದಾನೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ, ‘ಕೊಲೆಯ ಪಿತೂರಿಯನ್ನು ಚೇತನ್ ರೂಪಿಸಿದ್ದ. ಜೂ.14ರಂದು ಕೇತನ್ ಕೊಲೆ ಯತ್ನ ವಿಫಲವಾದ ನಂತರ ಚೇತನ್ ಅಳುತ್ತಿದ್ದ’ ಎಂದು ಸಿಯಾ ತನಿಖಾಧಿಕಾರಿಗಳಿಗೆ ತಿಳಿಸಿದ್ದಾಳೆ. ಹತ್ಯೆ ನಡೆಸುವಾಗ ಒಗ್ಗಟ್ಟಾಗಿದ್ದ ಪ್ರೇಮಿಗಳು, ಇದೀಗ ಪರಸ್ಪರ ದೂಷಣೆ ಮಾಡುತ್ತಿರುವುದು ಅಧಿಕಾರಿಗಳಿಗೆ ತಲೆಬಿಸಿ ತಂದಿದೆ.
ಬೆಟ್ಟದ ಮೇಲಿಂದ ತನ್ನಿಂದ ಕೆಳಗೆ ತಳ್ಳಲ್ಪಟ್ಟ ಕೇತನ್, ಕೆಳಗೆ ಬಿದ್ದರೂ ಬದುಕಿದ್ದಾನೆ ಎಂಬ ಸುದ್ದಿ ಕೇಳಿ ಸಿಯಾ ಆತಂಕಗೊಂಡಿದ್ದಳು ಎಂಬ ವಿಷಯ ಬೆಳಕಿಗೆ ಬಂದಿದೆ.
ಲೋಹಗಡ ಕೋಟೆಯಿಂದ ಕೇತನ್‌ನನ್ನುಕಂದಕಕ್ಕೆ ತಳ್ಳಿದ ಬಳಿಕ ಸಿಯಾ ಜೋರಾಗಿ ಕೂಗಿಕೊಂಡಿದ್ದಾಳೆ. ಇದನ್ನು ಕೇಳಿಸಿಕೊಂಡ ಕೋಟೆಯ ಸಿಬ್ಬಂದಿ ಅಲ್ಲಿಗೆ ಧಾವಿಸಿದ್ದಾರೆ. ಕೇತನ್ ಪ್ರಪಾತಕ್ಕೆ ಬಿದ್ದಿದ್ದಾನೆ ಎಂದಿದ್ದಕ್ಕೆ ಅವರೆಲ್ಲರೂ ಕೆಳಕ್ಕೆ ಹೋಗಿ ಹುಡುಕಾಡಿದ್ದಾರೆ. ಈ ವೇಳೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಕೇತನ್ ನೋಡಿದ್ದ ಸಿಬ್ಬಂದಿ ಆಗಲೇ ಸತ್ತಿದ್ದರೂ ಸಿಯಾಗೆ ಆಘಾತವಾಗಬಹುದು ಎಂದು ಬದುಕಿದ್ದಾನೆ ಎಂದು ಹೇಳಿದ್ದಾರೆ. ಇದಕ್ಕೆ ಸಿಯಾ ಖುಷಿ ಪಡುವ ಬದಲು ಭಯಗೊಂಡಿದ್ದಳು ಎಂದು ಕೋಟೆಯ ಸಿಬ್ಬಂದಿ ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.
ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ಪುಣೆಯ ಕೇತನ್ ಅಗರ್ವಾಲ್ ಹತ್ಯೆ ಆರೋಪಿಗಳಾದ ಆತನ ಭಾವಿ ಪತ್ನಿ ಸಿಯಾ ಗೋಯಲ್ ಹಾಗೂ ಆಕೆಯ ಪ್ರಿಯಕರ ಚೇತನ್ ಚೌಧರಿ ಕಳೆದ 6 ತಿಂಗಳಿನಿಂದ ನಿರಂತರ ಸಂಪರ್ಕದಲ್ಲಿದ್ದರು. ಈ ಅವಧಿಯಲ್ಲಿ 2004 ಕರೆ ವಿನಿಮಯ ಮಾಡಿಕೊಂಡಿದ್ದು, 238 ಗಂಟೆಗಳ ಕಾಲ ಮಾತುಕತೆ ನಡೆಸಿದ್ದರು ಎಂಬ ಮಾಹಿತಿಯನ್ನು ಪೊಲೀಸರು ಹೊರಗೆಡವಿದ್ದಾರೆ.
ಬೇರೊಬ್ಬನ ಜತೆ ಪ್ರೇಮದಲ್ಲಿದ್ದ ಸಿಯಾ ಜೂ.18ರಂದು ತನ್ನ ಭಾವಿ ಪತಿಯನ್ನು ಲೋಹಗಡ ಕೋಟೆಗೆ ಕರೆದೊಯ್ದು, ಅಲ್ಲಿಂದ ಪ್ರಪಾತಕ್ಕೆ ನೂಕಿ ಹತ್ಯೆಗೈದಿದ್ದಳು. ಈ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಹಲವು ಆಘಾತಕಾರಿ ಅಂಶಗಳನ್ನು ಪತ್ತೆ ಹಚ್ಚಿದ್ದಾರೆ.
‘ಘಟನೆ ನಡೆದ ದಿನ, ಗೋಯಲ್ ಮತ್ತು ಚೌಧರಿ ಕೆಫೆಯೊಂದರಲ್ಲಿ ಭೇಟಿಯಾಗಿ ಕೇತನ್‌ನನ್ನು ಕೊಲ್ಲುವ ಯೋಜನೆಯ ಬಗ್ಗೆ ಚರ್ಚಿಸಿದ್ದರು. ಕಳೆದ 6 ತಿಂಗಳಲ್ಲಿ 2,004 ಫೋನ್ ಕರೆ ವಿನಿಮಯ ಮಾಡಿಕೊಂಡಿದ್ದು, ಸುಮಾರು 238 ಗಂಟೆಗಳ ಕಾಲ ಪರಸ್ಪರ ಮಾತನಾಡಿದ್ದರು. ಕೆಲವು ಕರೆಗಳು 2-3 ಗಂಟೆಗೂ ದೀರ್ಘವಾಗಿದ್ದವು’ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ