ಸೇನಾಧಿಕಾರಿಯ ವಾಹನ ಸೀಜ್‌ ಮಾಡಿದ್ದಕ್ಕೆ ಪೊಲೀಸ್‌ ಸ್ಟೇಷನ್‌ ಮೇಲೆ ದಾಳಿ, 40 ಆರ್ಮಿ ಅಧಿಕಾರಿಗಳ ವಿರುದ್ಧ FIR

Published : Jun 25, 2026, 10:27 PM IST
J&K Police Station

ಸಾರಾಂಶ

ಜಮ್ಮು-ಕಾಶ್ಮೀರದ ಕಿಶ್ತ್ವಾಡ್‌ನಲ್ಲಿ, ಟ್ರಾಫಿಕ್ ನಿಯಮ ಉಲ್ಲಂಘನೆಗಾಗಿ ಸೇನಾ ಅಧಿಕಾರಿಯ ವಾಹನ ಜಪ್ತಿ ಮಾಡಿದ್ದಕ್ಕೆ ಪ್ರತಿಯಾಗಿ ಸೇನಾ ಯೋಧರು ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಹಲವು ಪೊಲೀಸರು ಗಾಯಗೊಂಡಿದ್ದಾರೆ.

ಕಿಶ್ತ್ವಾಡ್, ಜಮ್ಮು-ಕಾಶ್ಮೀರ (ಜೂ.25): ಟ್ರಾಫಿಕ್ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಸೇನಾ ಅಧಿಕಾರಿಯೊಬ್ಬರ ಖಾಸಗಿ ವಾಹನವನ್ನು ಜಪ್ತಿ ಮಾಡಿದ್ದಕ್ಕೆ ಪ್ರತಿಯಾಗಿ, ಸೇನಾ ಪಡೆಯ ಯೋಧರೇ ಪೊಲೀಸ್ ಠಾಣೆಯೊಂದರ ಮೇಲೆ ದಾಳಿ ನಡೆಸಿ, ಪೊಲೀಸರನ್ನು ಮನಬಂದಂತೆ ಥಳಿಸಿ, ಸರ್ಕಾರಿ ಆಸ್ತಿಪಾಸ್ತಿ ಧ್ವಂಸಗೊಳಿಸಿರುವ ಅತ್ಯಂತ ಆಘಾತಕಾರಿ ಘಟನೆ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾಡ್ ಜಿಲ್ಲೆಯಲ್ಲಿ ನಡೆದಿದೆ. ಈ ಸಂಬಂಧ ಕಮಾಂಡಿಂಗ್ ಆಫೀಸರ್ ಹಾಗೂ ಮೇಜರ್ ಸೇರಿದಂತೆ ಸುಮಾರು 40 ಸೇನಾ ಸಿಬ್ಬಂದಿಗಳ ವಿರುದ್ಧ ಜಮ್ಮು-ಕಾಶ್ಮೀರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಥೋಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ (FIR) ಪ್ರಕಾರ, ಬುಧವಾರದಂದು ಈ ಘಟನೆ ನಡೆದಿದೆ. ಪೊಲೀಸ್ ಠಾಣೆಯ ಎಸ್‌ಎಚ್‌ಒ (Station House Officer) ಇನ್ಸ್‌ಪೆಕ್ಟರ್ ಅಮೃತ್ ಕೋಟಚ್ ಅವರು ಡೆಪ್ಯುಟಿ ಕಮಿಷನರ್ ಅಧ್ಯಕ್ಷತೆಯಲ್ಲಿ ಪದ್ದರ್ ಬ್ಲಾಕ್ ಅಭಿವೃದ್ಧಿ ಅಧಿಕಾರಿಯ (BDO) ಕಚೇರಿಯಲ್ಲಿ ನಡೆಯುತ್ತಿದ್ದ ಸಭೆಯೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರಿಗೆ ಕರೆ ಬಂದಿದ್ದು, ಪೊಲೀಸ್ ಠಾಣೆಯ ಒಳಗಡೆ ಭಾರಿ ಹಿಂಸಾತ್ಮಕ ದಾಳಿ ಮತ್ತು "ಅಪರಾಧದ ಸಂಚು" ನಡೆಯುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

7 ರಾಷ್ಟ್ರೀಯ ರೈಫಲ್ಸ್ (RR) ಕ್ಯಾಂಪ್‌ನ ಕಮಾಂಡಿಂಗ್ ಆಫೀಸರ್ ಕರ್ನಲ್ ಎನ್. ಅರುಣ್ ಗಾಂಧಿ ಅವರ ನೇರ ಸೂಚನೆಯ ಮೇರೆಗೆ ಈ ದಾಳಿ ನಡೆದಿದೆ ಎಂದು ಎಸ್‌ಎಚ್‌ಒ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಎಫ್‌ಐಆರ್‌ನಲ್ಲಿ ಕರ್ನಲ್ ಗಾಂಧಿ, ಮೇಜರ್ ವಿಕಾಶ್ ಶರ್ಮಾ, ನೈಬ್‌ ಸುಬೇದಾರ್ ಶಂಕರ್ ಗುರ್ಖೆ, ಸಿಪಾಯಿಗಳಾದ ರಾಜ್ ಕುಮಾರ್, ರಾಹುಲ್ ಕುಮಾರ್, ಅನೂಪ್ ಸಿಂಗ್ ಮತ್ತು ಓಂಕಾರ್ ಇಂಗಾಳೆ ಸೇರಿದಂತೆ 17 ಆರ್‌ಆರ್ ಕ್ಯಾಂಪ್‌ನ 30 ರಿಂದ 40 ಅಪರಿಚಿತ ಸೇನಾ ಸಿಬ್ಬಂದಿಗಳನ್ನು ಆರೋಪಿಗಳೆಂದು ಹೆಸರಿಸಲಾಗಿದೆ.

ಮೇಜರ್ ಶರ್ಮಾ ಮತ್ತು ನಾಯಬ್ ಸುಬೇದಾರ್ ಗುರ್ಖೆ ನೇತೃತ್ವದಲ್ಲಿ ಬಂದ ಸೇನಾ ಸಿಬ್ಬಂದಿ, ಲಾಠಿ, ಕಬ್ಬಿಣದ ರಾಡ್‌ಗಳು ಮತ್ತು ತಮ್ಮ ಸರ್ವಿಸ್ ಆಯುಧಗಳನ್ನು ಹಿಡಿದು ಪೊಲೀಸ್ ಠಾಣೆಯ ಮುಖ್ಯ ಗೇಟ್ ಹಾಗೂ ಕಾಂಪೌಂಡ್ ಗೋಡೆಯನ್ನು ಬಲವಂತವಾಗಿ ಹತ್ತಿ ಒಳನುಗ್ಗಿದ್ದಾರೆ. "ಪೂರ್ಣ ಸಿದ್ಧತೆಯೊಂದಿಗೆ ಮಾರಕಾಸ್ತ್ರಗಳನ್ನು ಹಿಡಿದು ಬಂದಿದ್ದ ಈ ಗುಂಪು, ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಪ್ರಾಣಾಪಾಯ ಉಂಟುಮಾಡುವ ಮತ್ತು ಅವರನ್ನು ಕೊಲ್ಲುವ ಸಾಮಾನ್ಯ ಉದ್ದೇಶದಿಂದಲೇ ಅಥೋಲಿ ಪೊಲೀಸ್ ಠಾಣೆಯ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿದೆ" ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ಎಸ್‌ಎಚ್‌ಒ ಯುನಿಫಾರ್ಮ್ ಹರಿದು, ಎಸ್‌ಡಿಪಿಒ ಮೇಲೂ ಹಲ್ಲೆ!

ಠಾಣೆಗೆ ಭಾರಿ ದಾಳಿಯ ಮಾಹಿತಿ ಸಿಗುತ್ತಿದ್ದಂತೆ ಎಸ್‌ಎಚ್‌ಒ ತಕ್ಷಣ ವಾಪಸ್ ಬಂದಿದ್ದಾರೆ. "ನಾನು ಪೊಲೀಸ್ ಠಾಣೆಯ ಆವರಣದೊಳಗೆ ಪ್ರವೇಶಿಸುತ್ತಿದ್ದಂತೆ, ಮೇಜರ್ ವಿಕಾಸ್ ಶರ್ಮಾ ನೇತೃತ್ವದ ಆರ್ಮಿ ಸಿಬ್ಬಂದಿ ಅತ್ಯಂತ ಆಕ್ರಮಣಕಾರಿಯಾಗಿ ನನ್ನ ಮೇಲೆ ದೈಹಿಕ ಹಲ್ಲೆ ನಡೆಸಿದರು. ಈ ಕೈಕೈ ಮಿಲಾಯಿಸುವಿಕೆಯಲ್ಲಿ ನನ್ನ ಯುನಿಫಾರ್ಮ್ ಶರ್ಟ್ ಅನ್ನು ಹರಿದು ಹಾಕಿದ್ದಲ್ಲದೆ, ಅಲ್ಲಿಯೇ ಇದ್ದ ಅಥೋಲಿ ಎಸ್‌ಡಿಪಿಒ (SDPO) ವಿಜಯ್ ಕುಮಾರ್ ಭಗತ್ ಅವರ ಮೇಲೂ ದೈಹಿಕ ದಾಳಿ ನಡೆಸಿದರು" ಎಂದು ಎಸ್‌ಎಚ್‌ಒ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಭೀಕರ ದಾಳಿಯಲ್ಲಿ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ವಿಜಯ್ ಕುಮಾರ್ ಭಗತ್, ಕಿಶ್ತ್ವಾಡ್‌ನ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ (ARTO), ಅವರ ವೈಯಕ್ತಿಕ ಭದ್ರತಾ ಸಿಬ್ಬಂದಿ (PSO) ಹಾಗೂ ಠಾಣೆಯಲ್ಲಿದ್ದ ಹಲವು ಪೊಲೀಸರ ಮೇಲೆ ಹಲ್ಲೆ ನಡೆಸಲಾಗಿದೆ. ಇದರಲ್ಲಿ ವಿಶೇಷ ಪೊಲೀಸ್ ಅಧಿಕಾರಿ (SPO) ಸುರೇಶ್ ಕುಮಾರ್ ಅವರ ಕುತ್ತಿಗೆಗೆ ಆರ್ಮಿ ಸರ್ವಿಸ್ ರೈಫಲ್‌ನ ಹಿಂಭಾಗದಿಂದ ಬಲವಾಗಿ ಹೊಡೆದಿದ್ದರಿಂದ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ಇವರ ಜೊತೆಗೆ ಹಲವು ಪೊಲೀಸರು ಗಾಯಾಳುಗಳಾಗಿದ್ದಾರೆ.

ಸಾರಿಗೆ ಅಧಿಕಾರಿ (ARTO) ಅವರು ಟ್ರಾಫಿಕ್ ನಿಯಮ ಉಲ್ಲಂಘನೆಗಾಗಿ ಆರ್ಮಿ ಅಧಿಕಾರಿಯೊಬ್ಬರ ಖಾಸಗಿ ವಾಹನವನ್ನು ಸೀಜ್ ಮಾಡಿದ್ದೇ ಈ ಇಡೀ ದಾಳಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಇದು ಮುಂಚಿತವಾಗಿಯೇ ಯೋಜಿಸಲಾದ (Pre-planned) ದಾಳಿಯಾಗಿದ್ದು, ಆರೋಪಿಗಳು ಎಆರ್‌ಟಿಒ ಅವರ ಅಧಿಕೃತ ಸರ್ಕಾರಿ ವಾಹನ, ಎಸ್‌ಎಚ್‌ಒ ಮತ್ತು ಎಸ್‌ಡಿಪಿಒ ಅವರಿಗೆ ಸೇರಿದ ಖಾಸಗಿ ವಾಹನಗಳು ಹಾಗೂ ಪೊಲೀಸ್ ಠಾಣೆಯ ಮುಖ್ಯ ಗೇಟ್ ಅನ್ನು ಧ್ವಂಸಗೊಳಿಸಿ ಸಾರ್ವಜನಿಕ ಆಸ್ತಿಗೆ ನಷ್ಟ ಉಂಟುಮಾಡಿದ್ದಾರೆ.

ಕೊಲೆ ಯತ್ನ ಸೇರಿದಂತೆ ಭಾರಿ ಸೆಕ್ಷನ್‌ಗಳಡಿ ಕೇಸ್ ದಾಖಲು!

ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಅಡಿಯಲ್ಲಿ ಕಾನೂನುಬಾಹಿರ ಕೂಟ, ದಂಗೆ ಏಳುವುದು, ಕ್ರಿಮಿನಲ್ ಅತಿಕ್ರಮಣ, ಉದ್ದೇಶಪೂರ್ವಕವಾಗಿ ಗಾಯ ಮತ್ತು ಗಂಭೀರ ಗಾಯ ಉಂಟುಮಾಡುವುದು, ಕರ್ತವ್ಯದಲ್ಲಿದ್ದ ಸಾರ್ವಜನಿಕ ಸೇವಕರ ಮೇಲೆ ಹಲ್ಲೆ, ಕೊಲೆ ಯತ್ನ (Attempt to murder), ಕ್ರಿಮಿನಲ್ ಬೆದರಿಕೆ ಹಾಗೂ ಸರ್ಕಾರಿ ಆಸ್ತಿಗೆ ಹಾನಿ ಮಾಡಿದ್ದಕ್ಕಾಗಿ ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆಯ ವಿವಿಧ ಕಠಿಣ ನಿಬಂಧನೆಗಳ ಅಡಿಯಲ್ಲಿ ಮೊಕದ್ದಮೆ ಹೂಡಿದ್ದಾರೆ.

ಭಾರತೀಯ ಸೇನೆಯ ಪ್ರತಿಕ್ರಿಯೆ

ಈ ಘಟನೆಯ ಕುರಿತು ಜಮ್ಮು ಮೂಲದ ಸೇನಾ ವಕ್ತಾರರು ಪ್ರತಿಕ್ರಿಯಿಸಿದ್ದು, "ಅಥೋಲಿ ಪೊಲೀಸರು ದಾಖಲಿಸಿರುವ ಎಫ್‌ಐಆರ್ ವಿಷಯ ನಮ್ಮ ಗಮನಕ್ಕೆ ಬಂದಿದೆ. ಈ ವಿಷಯವನ್ನು ಸೂಕ್ತ ಸಾಂಸ್ಥಿಕ ಕಾರ್ಯವಿಧಾನಗಳ ಮೂಲಕ ಪರಿಶೀಲಿಸಲಾಗುತ್ತಿದೆ. ಭಾರತೀಯ ಸೇನೆಯು ಕಾನೂನು ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡಲಿದೆ. ಜಂಟಿ ತನಿಖೆಯ ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸದ್ಯ ತನಿಖೆ ಪ್ರಗತಿಯಲ್ಲಿರುವುದರಿಂದ ಈ ಹಂತದಲ್ಲಿ ಹೆಚ್ಚಿನ ಪ್ರತಿಕ್ರಿಯೆ ನೀಡುವುದು ಅಕಾಲಿಕವಾಗುತ್ತದೆ" ಎಂದು ತಿಳಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

500 ಮುಖಬೆಲೆ ನೋಟಿನ 1 ಕೋಟಿ ರೂಪಾಯಿ ಎಷ್ಟು ಕೆಜಿ ತೂಕವಿರುತ್ತದೆ? ಒಂದು ನೋಟು ತೂಕ ಎಷ್ಟು?
ಒಂದು ಫ್ಲೋರ್​ ಇಳಿಯಲು ಸೋಮಾರಿಯಾಗಿ ಪ್ರಾಣಕ್ಕೇ ಕುತ್ತು ತಂದುಕೊಂಡ! ಶಾಕಿಂಗ್​ ವಿಡಿಯೋ ವೈರಲ್​