
ನವದೆಹಲಿ: ಇಸ್ರೇಲ್‌ನ ಭಾರತದ ರಾಯಭಾರಿ ರುವೆನ್ ಅಜರ್ ಅವರು ಮಂಗಳವಾರ ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು 2023ರ ಆಕ್ಟೋಬರ್‌ನಲ್ಲಿ ಇಸ್ರೇಲ್‌ನಲ್ಲಿ ನಡೆದ ಹಮಾಸ್ ದಾಳಿಗೆ ಹೋಲಿಸಿದ್ದಾರೆ. ಜೊತೆಗೆ ಅವರು ಪಾಕಿಸ್ತಾನಕ್ಕೆ ಹಮಾಸ್ ಜೊತೆ ಇರುವ ಲಿಂಕ್ ಬಗ್ಗೆಯೂ ಮಾತನಾಡಿದ್ದಾರೆ. ದೇಶದ ಸೇನೆಯ ಜೊತೆ ನೇರವಾಗಿ ಯುದ್ಧ ಮಾಡುವುದನ್ನು ಬಿಟ್ಟು ನಾಗರಿಕರ ಮೇಲೆ ದಾಳಿ ಮಾಡುವ ಜಾಗತಿಕ ಭಯೋತ್ಪಾದಕ ಗುಂಪುಗಳ ನಡುವೆ ಇರುವ ಸಮನ್ವಯತೆಯ ಬಗ್ಗೆ ಅವರು ಎಚ್ಚರಿಕೆ ನೀಡಿದ್ದಾರೆ. 2023ರ ಆಕ್ಟೋಬರ್‌ನಲ್ಲಿ ಇಸ್ರೇಲ್‌ನಲ್ಲಿ ನಡೆದ ದಾಳಿಯೂ ಕೂಡ ನಾಗರಿಕರನ್ನು ಗುರಿಯಾಗಿಸಿ ನಡೆದ ದಾಳಿಯಾಗಿತ್ತು. ಈ ದಾಳಿಗೆ ಪ್ರತೀಕಾರ ತೆಗೆದುಕೊಂಡ ಇಸ್ರೇಲ್ ನಂತರ ಇಡೀ ಗಾಜಾವನ್ನೇ ಸ್ಮಶಾನವಾಗಿಸಿದ್ದು, ಈಗ ಇತಿಹಾಸ...
ಅವರು ಭಯೋತ್ಪಾದಕರು ಎಲ್ಲಾ ಹಂತಗಳಲ್ಲಿಯೂ ಪರಸ್ಪರ ಸಹಕರಿಸುತ್ತಿದ್ದಾರೆ ಮತ್ತು ಪರಸ್ಪರ ಕೃತ್ಯಗಳನ್ನು ಅವರು ನಕಲು ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಪ್ರಪಂಚದ ಗುಪ್ತಚರ ಸಂಸ್ಥೆಗಳು ಅವರನ್ನು ಸೋಲಿಸಲು ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ನನಗೆ ವಿಶ್ವಾಸವಿದೆ ಎಂದು ರುವೆನ್ ಅಜರ್ ಹೇಳಿದ್ದಾರೆ.
ಇದನ್ನೂ ಓದಿ:ಪಹಲ್ಗಾಮ್ ದಾಳಿ: ಅಟ್ಟಾರಿ ಗಡಿ ಬಂದ್ ಮಾಡುವ ಮೂಲಕ ಪಾಕ್ ಸೊಂಟದ ಮುರಿದ ಭಾರತ
ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು 26 ಪ್ರವಾಸಿಗರನ್ನು ಕೊಂದಿದ್ದನ್ನು ಉಲ್ಲೇಖಿಸಿದ ಅವರು, ಈ ಘಟನೆಯನ್ನು ಇಸ್ರೇಲ್‌ನಲ್ಲಿ 1,400 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಹಮಾಸ್ ಪಡೆಯ ದಾಳಿಗೆ ಹೋಲಿಸಿದರು. ಈ ಭಯೋತ್ಪಾದಕ ಗುಂಪುಗಳು ಪರಸ್ಪರ ಸ್ಫೂರ್ತಿ ನೀಡುತ್ತಿವೆ ದುರದೃಷ್ಟವಶಾತ್, ನಾವು ಇದನ್ನು ಒಪ್ಪಿಕೊಳ್ಳಲೇಬೇಕು ಪಹಲ್ಗಾಮ್ ದಾಳಿ ಮತ್ತು ಅಕ್ಟೋಬರ್ 7, 2023ರಂದು ಇಸ್ರೇಲ್‌ನಲ್ಲಿ ನಡೆದ ಘಟನೆಗಳ ನಡುವೆ ಹೋಲಿಕೆಗಳಿವೆ. ಪಹಲ್ಗಾಮ್‌ನಲ್ಲಿ ಮುಗ್ಧ ಪ್ರವಾಸಿಗರು ತಮ್ಮ ರಜೆಯನ್ನು ಆನಂದಿಸುತ್ತಿದ್ದರು, ಆದರೆ ಇಸ್ರೇಲ್‌ನಲ್ಲಿ ಜನರು ಸಂಗೀತ ಉತ್ಸವವನ್ನು ಆಚರಿಸುತ್ತಿದ್ದರು ಎಂದು ಅವರು ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡುತ್ತಾ ಹೇಳಿದ್ದಾರೆ.
ಪಹಲ್ಗಾಮ್ ದಾಳಿಗೆ ಹಮಾಸ್ ನಾಯಕರು ಇತ್ತೀಚೆಗೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ) ಭೇಟಿ ನೀಡಿದ್ದು ಕೂಡ ಕಾರಣ ಎಂದು ಅವರು ಹೇಳಿದ್ದಾರೆ. ಅಲ್ಲಿ ಅವರು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರು ಮತ್ತು ಇತರ ಕೆಲವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಇದು ಇವರ ನಡುವಣ ಸಂಭಾವ್ಯ ಸಮನ್ವಯವನ್ನು ಸೂಚಿಸುತ್ತದೆ ಎಂದು ಇಸ್ರೇಲ್ ರಾಯಭಾರಿ ಹೇಳಿದ್ದಾರೆ.
ಪಹಲ್ಗಾಮ್ ದಾಳಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಶಿಸ್ತುಬದ್ಧ ರಾಜತಾಂತ್ರಿಕ ತಿರುಗೇಟಿಗೆ ಅಜರ್ ಇದೇ ವೇಳೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಶೇಷವಾಗಿ ಇಂದು ಬಿಹಾರದ ಮಧುಬನಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮೋದಿ, ಭಯೋತ್ಪಾದಕರನ್ನು ಹಾಗೂ ಅವರಿಗೆ ಬೆನ್ನೆಲುಬಾಗಿ ನಿಂತು ಬೆಂಬಲಿಸುತ್ತಿರುವವರನ್ನು ಸುಮ್ಮನೇ ಬಿಡುವುದಿಲ್ಲ, ಅವರನ್ನು ಭೂಮಿಯ ಅಂಚಿನವರೆಗೆ ಓಡಿಸಿ ಹೊಡೆಯಲಾಗುವುದು ಎಂದು ಹೇಳಿದ್ದರು.
ಇದನ್ನೂ ಓದಿ:ಪೆಹಲ್ಗಾಮ್ ದಾಳಿ, 2 ಕುಟುಂಬದ 17 ಪ್ರವಾಸಿಗರ ಪ್ರಾಣ ಉಳಿಸಿದ ಕುದುರೆ
ಭಾರತ ಸರ್ಕಾರ ತೆಗೆದುಕೊಂಡ ಕಠಿಣ ಕ್ರಮಗಳು ಮಾತ್ರವಲ್ಲದೆ, ತೀವ್ರ ಖಂಡನೆಯೂ ನನಗೆ ತುಂಬಾ ಖುಷಿ ನೀಡಿವೆ ಎಂದು ಅಜರ್ ಪಿಟಿಐಗೆ ತಿಳಿಸಿದ್ದಾರೆ. ಪಾಕಿಸ್ತಾನದೊಂದಿಗಿನ 1960 ರ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸುವುದು ಮತ್ತು ಪಹಲ್ಗಾಮ್ ದಾಳಿಗೆ ಗಡಿಯಾಚೆಗಿನ (ಪಾಕಿಸ್ತಾನ) ಸಂಪರ್ಕಗಳನ್ನು ಗಮನದಲ್ಲಿಟ್ಟುಕೊಂಡು ವಾಘಾ ಅಟ್ಟಾರಿ ಬಾರ್ಡರ್‌ನಲ್ಲಿ ರಸ್ತೆ ಸಂಪರ್ಕವನ್ನು ಸ್ಥಗಿತಗೊಳಿಸುವುದು ಸೇರಿದಂತೆ ಭಾರತದ ರಾಜತಾಂತ್ರಿಕ ನಡೆಗಳನ್ನು ಅವರು ಉಲ್ಲೇಖಿಸಿದರು.
ಈ ಸಮಸ್ಯೆಯು ವೈಯಕ್ತಿಕ ಭಯೋತ್ಪಾದಕರನ್ನು ಮೀರಿ ವಿಸ್ತರಿಸುತ್ತದೆ ಎಂದು ಹೇಳಿದ ಅವರು ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿರುವ ರಾಜ್ಯ ಪ್ರಾಯೋಜಕರನ್ನು(ಪಾಕಿಸ್ತಾನ) ಬಹಿರಂಗಪಡಿಸುವಂತೆ ಜಾಗತಿಕ ಸಮುದಾಯವನ್ನು ಕೇಳಿದರು. ಭಯೋತ್ಪಾದನೆಗೆ ಬೆಂಬಲಿಸುವವರನ್ನು ಬಹಿರಂಗಪಡಿಸಬೇಕಾಗಿದೆ ಏಕೆಂದರೆ ಭಯೋತ್ಪಾದಕರು ಅವರಿಗೆ ಹಣ, ಗುಪ್ತಚರ ಮಾಹಿತಿ ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸುವ ದೇಶಗಳ ಸರಣಿ ಕೃತ್ಯಗಳನ್ನು ಆನಂದಿಸುತ್ತಾರೆ ಇದು ಸ್ವೀಕಾರಾರ್ಹವಲ್ಲ ಎಂದು ಅವರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ