
ನವದೆಹಲಿ: ಮಕ್ಕಳು ತಪ್ಪು ಮಾಡುವುದು ಸಹಜ. ಆದರೆ ಮಕ್ಕಳು ಸಣ್ಣವರಿರುವಾಗಲೇ ಅವರಿಗೆ ಸರಿತಪ್ಪುಗಳ ಬಗ್ಗೆ ತಿಳಿ ಹೇಳಬೇಕು, ಮಕ್ಕಳಿಗೆ ಸರಿ ಯಾವುದು ತಪ್ಪು ಯಾವುದು ಎಂದು ಅರಿವು ಮಾಡಿ ಕೊಡುವುದು ಪೋಷಕರ ಮುಖ್ಯ ಕರ್ತವ್ಯ. ಆದರೆ ಈಗಿನ ಬಹುತೇಕರು ಮಕ್ಕಳಿಗೆ ಎಳವೆಯಲ್ಲಿ ಬುದ್ಧಿ ಹೇಳದೆ ದೊಡ್ಡವರಾಗುತ್ತ ಮಕ್ಕಳು ಅತೀಯಾಗಿ ವರ್ತಿಸಿದಾಗ ತಿಳಿ ಹೇಳಲಾಗದೇ ಪಾಶ್ಚಾತಾಪ ಪಡುವ ಅನೇಕ ಪೋಷಕರನ್ನು ನಾವು ಕಾಣಬಹುದಾಗಿದೆ. ಆದರೆ ಪ್ರಾಣಿಗಳು ಕೂಡ ತಮ್ಮ ಮಕ್ಕಳಿಗೆ ಬುದ್ಧಿ ಹೇಳಿ ಸರಿದಾರಿಯಲ್ಲಿ ನಡೆಸುತ್ತವೆಯೇ? ಇದನ್ನು ತಿಳಿಯುವ ಕುತೂಹಲ ನಿಮಗೂ ಇರಬಹುದು. ನಿಮ್ಮ ಕುತೂಹಲಕ್ಕೆ ಉತ್ತರ ನೀಡಬಲ್ಲ ವೀಡಿಯೋವೊಂದು ಇಲ್ಲಿದೆ.
ಸಾಮಾನ್ಯವಾಗಿ ಪ್ರಾಣಿಗಳಿಗೆ ಬುದ್ಧಿ ಇಲ್ಲ ಎಂದೇ ಬಹುತೇಕ ಮಾನವರು ಭಾವಿಸುತ್ತಾರೆ. ಆದರೆ ಕೆಲವೊಂದು ಸನ್ನಿವೇಶಗಳು ಪ್ರಾಣಿಗಳು ಮನುಷ್ಯರಿಗಿಂತ ಹೆಚ್ಚು ಬುದ್ಧಿವಂತರು ಎಂಬುದನ್ನು ಸಾಬೀತುಪಡಿಸುತ್ತವೆ. ಅದೇ ರೀತಿ ಇಲ್ಲೊಂದು ಕಡೆ ಮೃಗಾಲಯವೊಂದರ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ ಚಿಂಪಾಜಿ ಮರಿಯೊಂದು (Baby chimpanzee) ತನ್ನನ್ನು ನೋಡಲು ಬಂದ ಪ್ರವಾಸಿಗರ ಮೇಲೆ ಕಲ್ಲೆಸೆದಿದೆ. ಇದನ್ನು ನೋಡಿದೆ ತಡ ತಾಯಿ ಚಿಂಪಾಂಜಿ ಅಲ್ಲಿದ್ದ ಕೋಲೊಂದನ್ನು ತೆಗೆದುಕೊಂಡು ಮರಿಗೆ ಚೆನ್ನಾಗಿ ಬಾರಿಸಿದೆ. 13 ಸೆಕೆಂಡ್‌ಗಳ ಈ ವಿಡಿಯೋ ನೋಡುಗರಿಗೆ ಅಚ್ಚರಿ ಮೂಡಿಸಿದೆ.
ನಮ್ಮ ಏರಿಯಾದಲ್ಲಿ ನಾವೇ ಸಿಂಹ: ಕಾಡಿನ ರಾಜನನ್ನು ಓಡಿಸಿದ ಬೀದಿನಾಯಿಗಳು: ವಿಡಿಯೋ
ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯ (Indian Forest Officer) ಅಧಿಕಾರಿ ಸುಶಾಂತ್ ನಂದಾ (sushanth nanda) ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. 'ಮಕ್ಕಳು ಪ್ರವಾಸಿಗರ ಮೇಲೆ ಕಲ್ಲೆಸೆಯುತ್ತಿವೆ. ಅವುಗಳು ಕೂಡ ನಮ್ಮಂತೆಯೇ, ಇವು ನಿಜವಾಗಿಯೂ ಮಕ್ಕಳಿಗೆ ಪೋಷಕರು ಕಲಿಸಬೇಕಾದ ನಿಜವಾದ ನಡತೆ' ಎಂದು ಅವರು ಬರೆದುಕೊಂಡಿದ್ದಾರೆ.
ಈ ವಿಡಿಯೋವನ್ನು ಒಂದು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಅನೇಕ ಚಿಂಪಾಜಿಗಳು ದೊಡ್ಡದಾದ ಬಂಡೆಯ ಮೇಲೆ ಕುಳಿತುಕೊಂಡಿದ್ದು, ವಿಡಿಯೋದ ಹಿನ್ನೆಲೆಯಲ್ಲಿ ಪ್ರವಾಸಿಗರ ಸ್ವರ ಕೇಳಿ ಬರುತ್ತಿದೆ. ನೋಡುಗರ ಬೊಬ್ಬೆ ಕೇಳಿ ಮರಿ ಚಿಂಪಾಂಜಿಗೆ ಏನನಿಸಿತೋ ಏನೋ ಬಂಡೆಯ (Rock) ಮೇಲಿದ್ದ ಸಣ್ಣ ಪುಟ್ಟ ಕಲ್ಲುಗಳನ್ನು ಹೆಕ್ಕಿ ಪ್ರವಾಸಿಗರತ್ತ ಎಸೆದಿದೆ. ನಂತರ ಮತ್ತಷ್ಟು ಕಲ್ಲುಗಳನ್ನು ಎಸೆಯಲು ನೆಲದತ್ತ ಬಗ್ಗಿದೆ. ಈ ವೇಳೆ ಪಕ್ಕದಲ್ಲೇ ಇದ್ದ ತಾಯಿ ಅಲ್ಲೇ ಇದ್ದ ಕೋಲೊಂದನ್ನು ತೆಗೆದುಕೊಂಡು ಚಿಂಪಾಂಜಿ ಮರಿಗೆ ಸರಿಯಾಗಿ ಬಾರಿಸಿದೆ.
ಚುಕ್ಕಿ ಜಿಂಕೆಯ ಜೊತೆ ಶ್ವೇತವರ್ಣದ ಜಿಂಕೆ ಪತ್ತೆ: ಅಪರೂಪದ ದೃಶ್ಯ ಕ್ಯಾಮರಾದಲ್ಲಿ ಸೆರೆ
ಈ ವಿಡಿಯೋ ಪ್ರಾಣಿಗಳು ಕೂಡ ಹೀಗಿರಲು ಸಾಧ್ಯವೇ ಎಂದು ಯೋಚಿಸುವಂತೆ ಮಾಡುವುದಲ್ಲದೇ, ಮನುಷ್ಯರಿಗೆ ಬುದ್ಧಿ ಹೇಳುವಂತಿದೆ. ತಪ್ಪು ಮಾಡುವಾಗ ಶಿಕ್ಷಿಸಿ ಬುದ್ಧಿ ಹೇಳ ಬೇಕಾಗಿರುವುದು ಪೋಷಕರ ಕರ್ತವ್ಯ. ಅದರ ಬದಲು ಸಣ್ಣವರೆಂದು ತಪ್ಪು ಮಾಡಿದಾಗಲೆಲ್ಲಾ ಸಮರ್ಥಿಸಿಕೊಳ್ಳುತ್ತಾ ಬಂದರೆ ನಂತರ ಮಕ್ಕಳು ದೊಡ್ಡವರಾದಾಗ ಪಶ್ಚಾತ್ತಾಪ ಪಡುವಂತಹ ಸ್ಥಿತಿ ನಿರ್ಮಾಣವಾಗುವುದು. ಪ್ರಾಣಿಗಳು ತಮ್ಮ ಮರಿಗಳಿಗೆ ಬುದ್ಧಿ ಕಲಿಸುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ (Social Media) ಆಗಾಗ ವೈರಲ್ ಆಗುತ್ತಿರುತ್ತವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ