
ನವದೆಹಲಿ: ದೆಹಲಿ ಸರ್ಕಾರದ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಇಡಿಯಿಂದ ಬಂಧಿತರಾಗಿ ತಿಹಾರ್ ಜೈಲಿನಲ್ಲಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೊಸ ಆರೋಪ ಮಾಡಿದ್ದಾರೆ. ವೈದ್ಯಕೀಯ ಕಾರಣ ನೀಡಿ ಜಾಮೀನು ಪಡೆಯಲು ದೆಹಲಿ ಸಿಎಂ ಸಂಚು ಮಾಡುತ್ತಿದ್ದು, ಇದಕ್ಕಾಗಿ ರಕ್ತದ ಸಕ್ಕರೆ ಪ್ರಮಾಣ ಹೆಚ್ಚಾಗಲಿ ಎಂಬ ಕಾರಣಕ್ಕೆ ಬರೀ ಬ್ಲಡ್ ಶುಗರ್ ಹೆಚ್ಚಿಸುವಂತಹ ಆಹಾರಗಳನ್ನೇ ಸೇವಿಸುತ್ತಿದ್ದಾರೆ ಎಂದು ಇಡಿ ಅಧಿಕಾರಿಗಳು ಆರೋಪಿಸಿದ್ದಾರೆ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಕ್ಕರೆ ರೋಗಿಯಾಗಿದ್ದು, ದೇಹದ ಸಕ್ಕರೆ ಪ್ರಮಾಣದ ನಿಯಂತ್ರಣಕ್ಕಾಗಿ ಸಿಹಿ ಹೆಚ್ಚಿರುವ ಆಹಾರವನ್ನು ನಿರ್ಲಕ್ಷಿಸಿ ಕಡ್ಡಾಯವಾದ ಡಯಟ್ ಫಾಲೋ ಮಾಡಬೇಕಾಗುತ್ತದೆ. ಆದರೆ ಕೇಜ್ರಿವಾಲ್ ಜೈಲಿನಲ್ಲಿ ಕುಳಿತು ಸಕ್ಕರೆ ಪ್ರಮಾಣ ಹೆಚ್ಚಿಸುವಂತಹ ಆಹಾರಗಳಾದ ಆಲೂಪುರಿ, ಮಾವಿನ ಹಣ್ಣುಗಳನ್ನೇ ಹೆಚ್ಚಾಗಿ ಸೇವಿಸುತ್ತಿದ್ದಾರೆ, ಈ ಮೂಲಕ ಶುಗರ್ ಜಾಸ್ತಿಯಾಗಿದೆ ಎಂಬ ನೆಪ ಹೇಳಿ ವೈದ್ಯಕೀಯ ಕಾರಣದಲ್ಲಿ ಜಾಮೀನು ಪಡೆಯಲು ಮುಂದಾಗುತ್ತಿದ್ದಾರೆ ಎಂದು ಇಡಿ ಅಧಿಕಾರಿಗಳು ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದಾರೆ.
ಕೇಜ್ರಿವಾಲ್‌ಗೆ ಮತ್ತೊಂದು ಶಾಕ್, ಆಪ್ತ ಕಾರ್ಯದರ್ಶಿ ಅಮಾನತು ಎತ್ತಿಹಿಡಿದ CAT!
ಈ ಹಿನ್ನೆಲೆಯಲ್ಲಿ ನ್ಯಾಯಾಲಯವೂ ತಿಹಾರ್ ಜೈಲಿನ ಅಧಿಕಾರಿಗಳಿಗೆ ಕೇಜ್ರಿವಾಲ್ ಅವರು ಸೇವಿಸುವ ಆಹಾರದ ಬಗ್ಗೆ ವರದಿ ನೀಡುವಂತೆ ಕೇಳಿದೆ. ಅಲ್ಲದೇ ಅರವಿಂದ್ ಕೇಜ್ರಿವಾಲ್ ಅವರ ವಕೀಲರಿಗೂ, ಎಎಪಿ ನಾಯಕನಿಗೆ ವೈದ್ಯರು ಸಲಹೆ ನೀಡಿದ ಆಹಾರ ಕ್ರಮದ ವರದಿ ನೀಡುವಂತೆ ನ್ಯಾಯಾಲಯ ಕೇಳಿದೆ. ಅರವಿಂದ್ ಕೇಜ್ರಿವಾಲ್ ಅವರು ಡಯಾಬಿಟೀಸ್ ಟೈಪ್ 2 ನಿಂದ ಬಳಲುತ್ತಿದ್ದಾರೆ.
ನ್ಯಾಯಾಲಯದ ವಿಚಾರಣೆ ವೇಳೆ ತನಿಖಾಧಿಕಾರಿಗಳು, ಕೇಜ್ರಿವಾಲ್ ಅವರಿಗೆ ಮನೆಯಲ್ಲಿ ಮಾಡಿದ ಅಡುಗೆಯನ್ನು ತಿನ್ನಲು ಅವಕಾಶ ನೀಡಲಾಗಿದೆ. ಆದರೆ ಸಕ್ಕರೆ ಪ್ರಮಾಣವನ್ನು ತೀವ್ರವಾಗಿ ಹೆಚ್ಚಿಸುವ ಆಹಾರವನ್ನು ಅವರಿಗೆ ನೀಡಲಾಗುತ್ತಿದ್ದು, ಈ ಮೂಲಕ ವೈದ್ಯಕೀಯ ಕಾರಣ ನೀಡಿ ಜಾಮೀನು ಪಡೆಯಲು ಅವರು ಹವಣಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರು ಒಬ್ಬ ಡಯಾಬಿಟೀಸ್ ಪೇಶೆಂಟ್ ಆಗಿಯೂ ಕೂಡ, ತಿಳಿದು ತಿಳಿದೇ, ಸಕ್ಕರೆ ಹಾಕಿದ ಟೀ, ಬಾಳೆಹಣ್ಣು, ಸಿಹಿ ತಿನಿಸು, ಪುರಿ, ಆಲೂ ಸಬ್ಜಿ, ಮುಂತಾದವುಗಳನ್ನು ನಿರಂತರವಾಗಿ ಸೇವಿಸುತ್ತಿದ್ದಾರೆ. ಇದರಿಂದ ರಕ್ತದ ಸಕ್ಕರೆ ಪ್ರಮಾಣ ನಿರಂತರವಾಗಿ ಏರಿಕೆಯಾಗುತ್ತದೆ ಎಂಬುದು ಕೂಡ ಅವರಿಗೆ ತಿಳಿದಿದೆ ಎಂದು ಇಡಿ ಪರ ವಕೀಲರು ನ್ಯಾಯಾಧೀಶರ ಮುಂದೆ ದೂರಿದ್ದಾರೆ.
ದೆಹಲಿ ಅಬಕಾರಿ ಹಗರಣ: ನಾನು ಬಿಜೆಪಿ ಕಸ್ಟಡಿಯಲ್ಲಿದ್ದೇನೆ, ಸಿಬಿಐ ಕಸ್ಟಡಿಯಲ್ಲಿ ಅಲ್ಲ: ಕೆ ಕವಿತಾ
ವೈದ್ಯಕೀಯ ತುರ್ತುಸ್ಥಿತಿ ಆಹ್ವಾನಿಸುವುದಕ್ಕಾಗಿ ಅವರು ಹೀಗೆ ಮಾಡುತ್ತಿದ್ದಾರೆ, ಈ ಮೂಲಕ ಕೋರ್ಟ್‌ನ ಅನುಕಂಪ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಜೈಲಿನ ವೈದ್ಯರು ಪ್ರತಿದಿನವೂ ಎರಡು ಬಾರಿ ಕೇಜ್ರಿವಾಲ್ ಅವರ ಬ್ಲಡ್ ಶುಗರ್ ತಪಾಸಣೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನು ವೈದ್ಯಕೀಯ ವರದಿಯನ್ನು ಉಲ್ಲೇಖಿಸಿದ ಇಡಿ ವಕೀಲರು, ಕೇಜ್ರಿವಾಲ್ ಏಪ್ರಿಲ್ 1 ರಂದು ಜೈಲಿಗೆ ಬರುವ ವೇಳೆ ಕೇಜ್ರಿವಾಲ್ ಬ್ಲಡ್ ಶುಗರ್ ಪ್ರಮಾಣ 139 ಎಂಜಿ /ಡಿಲ್ ಇತ್ತು. ಆದರೆ ಏಪ್ರಿಲ್ 14 ರಂದು ತಪಾಸಣೆ ಮಾಡಿದಾಗ ದಾಖಲೆಯ ಏರಿಕೆ ಆಗಿದ್ದು, 276 ಎಂಜಿ ದಾಖಲಾಗಿದೆ ಎಂದು ಹೇಳಿದ್ದಾರೆ.
ಆದರೆ ಕೇಜ್ರಿವಾಲ್ ವಕೀಲರು ಇದನ್ನು ನಿರಾಕರಿಸಿದ್ದು, ಇಡಿ ಅಧಿಕಾರಿಗಳು ಮಾಧ್ಯಮಕ್ಕೋಸ್ಕರ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಶುಗರ್ ಇರುವವರಿಗೆ ಈ ರೀತಿ ಆಹಾರ ಯಾರಾದರೂ ನೀಡುತ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ. ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ನಾಳೆಗೆ ಮುಂದೂಡಿಕೆ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ