ನಿನ್ನಂಥಾ ಅಪ್ಪ ಇಲ್ಲ... ದಿವ್ಯಾಂಗ ಪುತ್ರಿಗೆ ತಿನ್ನಿಸಲು ರೋಬೋಟ್‌ ನಿರ್ಮಿಸಿದ ಕಾರ್ಮಿಕ

By Kannadaprabha NewsFirst Published Sep 26, 2022, 3:42 PM IST
Highlights

ಕೆಲವು ಘಟನೆಗಳಲ್ಲಿ ತಾಯಿಗಿಂತಲೂ ತಂದೆಯೇ ಮಕ್ಕಳ ಪಾಲನೆ ಪೋಷಣೆ ಹೆಚ್ಚು ಮಾಡುವುದನ್ನು ನೋಡಿರಬಹುದು. ಅದೇ ರೀತಿ ಇಲ್ಲೊಂದು ಕಡೆ (ದಿವ್ಯಾಂಗ) ವಿಶೇಷ ಚೇತನ ಮಗಳನ್ನು ಸ್ವಾಭಿಮಾನಿಯಾಗಿಸಲು ಅಪ್ಪ ಪಟ್ಟ ಶ್ರಮ ಎಲ್ಲರನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. 

ಪಣಜಿ: ನಿನ್ನಂಥಾ ಅಪ್ಪ ಇಲ್ಲ ಒಂದೊಂದು ಮಾತು ಬೆಲ್ಲ. ಡಾ. ರಾಜ್‌ಕುಮಾರ್ ಸುಧಾರಾಣಿ ಅಭಿನಯದ ಈ ಖ್ಯಾತ ಹಾಡನ್ನು ನೀವು ಕೇಳಿರಬಹುದು. ಅದ್ಯಾಕೆ ಈಗ ಅಂತೀರಾ. ಮುಂದೆ ಓದಿ... ಮಕ್ಕಳ ಮೇಲೆ ಮಮತೆ ಪ್ರೀತಿಯ ವಿಚಾರ ಬಂದಾಗ ತಾಯಿಯನ್ನೇ ವೈಭವೀಕರಿಸುವುದು ಹೆಚ್ಚು. ಆದರೆ ಮಕ್ಕಳ ಭವಿಷ್ಯವನ್ನು ರೂಪಿಸಲು ಪೋಷಕರಿಬ್ಬರೂ ಸಮಾನವಾಗಿ ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸುತ್ತಾರೆ. ಕೆಲವು ಘಟನೆಗಳಲ್ಲಿ ತಾಯಿಗಿಂತಲೂ ತಂದೆಯೇ ಮಕ್ಕಳ ಪಾಲನೆ ಪೋಷಣೆ ಹೆಚ್ಚು ಮಾಡುವುದನ್ನು ನೋಡಿರಬಹುದು. ಅದೇ ರೀತಿ ಇಲ್ಲೊಂದು ಕಡೆ ವಿಶೇಷ ಚೇತನ (ದಿವ್ಯಾಂಗ) ಮಗಳನ್ನು ಸ್ವಾಭಿಮಾನಿಯಾಗಿಸಲು ಅಪ್ಪ ಪಟ್ಟ ಶ್ರಮ ಎಲ್ಲರನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. 

ಗೋವಾದ (Goa) ಬಿಪಿನ್‌ ಕದಂ (Bipin Kadam) ಎಂಬುವವರು ತಮ್ಮ ವಿಶೇಷ ಚೇತನ (specially abled) ಮಗಳಿಗೆ ಊಟ ಮಾಡಿಸಲು ವಿಶೇಷವಾದ ರೊಬೋಟ್ ಒಂದನ್ನು ನಿರ್ಮಿಸಿದ್ದಾರೆ. ಯಾವುದೇ ತಾಂತ್ರಿಕ ಜ್ಞಾನ ಇಲ್ಲದಿದ್ದರೂ ಬಿಪಿನ್‌ ಕದಂ ಆನ್‌ಲೈನ್‌ನಲ್ಲೇ ಮಾಹಿತಿ ಪಡೆದು ಧ್ವನಿ ಆದೇಶ ಅನುಸರಿಸುವ ರೋಬೋಟಿನ ಆವಿಷ್ಕಾರ (Inovation)ಮಾಡಿದ್ದಾರೆ. ಇದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಒಂದೆಡೆ ಮಗಳು ಅಂಗವಿಕಲೆ. ಇನ್ನೊಂದು ಕಡೆ ಪತ್ನಿ (Wife) ಕೂಡ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು, ಮಗಳಿಗೆ ತಿನ್ನಿಸಲು ಆಗುತ್ತಿಲ್ಲ. ಹೀಗಾಗಿ ಕದಂ ಈ ವಿಶಿಷ್ಟಆವಿಷ್ಕಾರ ಮಾಡಿದ್ದಾರೆ.

ಇದರ ಬೆನ್ನಲ್ಲೇ ಗೋವಾ ರಾಜ್ಯ ನಾವೀನ್ಯತಾ ಸಮಿತಿ (State Innovation Committee), ಕದಂ ಆವಿಷ್ಕರಿಸಿದ ಮಾ ರೋಬೋಟ್‌ಗೆ (Robot) ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದು, ಈ ರೋಬೋಟ್‌ ಅನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಹಣಕಾಸಿನ ನೆರವನ್ನು ಘೋಷಿಸಿದೆ.

ಲಿವರ್‌ ಕೊಡಲು ಒಪ್ಪಿದ ಅಪ್ರಾಪ್ತ ಮಗ, ಕೋರ್ಟ್‌ನಲ್ಲಿ ವಿಚಾರಣೆಗೂ ಮುನ್ನವೇ ಸಾವು ಕಂಡ ತಂದೆ!

ಸಾಧನೆ ಮಾಡಿದ್ದು ಹೀಗೆ:

ಕದಂ ಮೂಲತಃ ದಕ್ಷಿಣ ಗೋವಾದ ಪೋಂಡಾ ತಾಲೂಕಿನವರು. ಇವರು ದಿನಗೂಲಿ ನೌಕರರಾಗಿದ್ದು (Daily wages), ಇವರಿಗೆ 14 ವರ್ಷದ ವಿಶೇಷಚೇತನ ಮಗಳಿದ್ದಾಳೆ. ಮಗಳಿಗೆ ಎದ್ದೇಳಲು, ಕೈಯನ್ನು ಎತ್ತಲು ಕೂಡಾ ಸಾಧ್ಯವಾಗದ ಹಿನ್ನೆಲೆಯಲ್ಲಿ ಪ್ರತಿ ಬಾರಿ ಅವಳ ತಾಯಿಯೇ ಆಹಾರವನ್ನು ತಿನ್ನಿಸಬೇಕಾಗುತ್ತದೆ. ಆದರೆ 2 ವರ್ಷಗಳ ಹಿಂದೆ ಕದಂ ಪತ್ನಿ ಕೂಡಾ ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದಿದ್ದಾರೆ. ಅವರಿಗೆ ಮಗಳಿಗೆ ಆಹಾರ (Food) ನೀಡಲು ಸಾಧ್ಯವಾಗುತ್ತಿರಲಿಲ್ಲ. ಪ್ರತಿ ಬಾರಿ ಕೆಲಸವನ್ನು ಬಿಟ್ಟು ಕದಂ ಅವರೇ ಮಗಳಿಗೆ ಆಹಾರವನ್ನು ತಿನ್ನಿಸಬೇಕಾಗುತ್ತಿತ್ತು. ಹೀಗಾಗಿ ಸರಿಯಾದ ಸಮಯದಲ್ಲಿ ಊಟ ಮಾಡಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಪ್ರಧಾನಿ ಮೋದಿಯವರ ಆತ್ಮನಿರ್ಭರ ಭಾರತ ಚಿಂತನೆಯಿಂದ ಸ್ಫೂರ್ತಿ ಪಡೆದ ಅವರು ಮಗಳನ್ನು ಯಾರ ಮೇಲೂ ಅವಲಂಬಿತಳಾಗದಂತೇ ಮಾಡಲು ರೋಬೊಟ್‌ ನಿರ್ಮಿಸಿದರು.

ದಿನವೂ 12 ಗಂಟೆ ಕೆಲಸ ಮಾಡಿ ಮನೆಗೆ ಬಂದ ಬಳಿಕ ರೋಬೋಟ್‌ ನಿರ್ಮಾಣದ ಬಗ್ಗೆ ಆನ್‌ಲೈನ್‌ನಲ್ಲಿ ಮಾಹಿತಿ ಪಡೆದು ಕದಂ ತಾವೇ ಸ್ವತಃ ರೋಬೋಟ್‌ ನಿರ್ಮಿಸಿದ್ದಾರೆ. ಈ ರೋಬೋಟ್‌ನಲ್ಲಿ ಒಂದು ತಟ್ಟೆಯಿದೆ. ಅದರಲ್ಲಿ ಎಲ್ಲ ಬಗೆಯ ಆಹಾರವನ್ನು ಹಾಕಿದ ಬಳಿಕ ಕೇವಲ ಧ್ವನಿ ಆದೇಶದ ಮೂಲಕ ಅನ್ನ ಬೇಕೋ, ತರಕಾರಿ ಅಥವಾ ಇನ್ನಿತರೆ ಯಾವುದೇ ತಿನಿಸು ಬೇಕೋ ಎಂದು ಹೇಳಿದರೆ ಸಾಕು. ರೋಬೋಟ್‌ ಆ ಪದಾರ್ಥವನ್ನು ತಿನ್ನಿಸುತ್ತದೆ.

Viral Video : 6 ತಿಂಗಳ ಮಗುವಿಗೆ ಪುಷ್ ಅಪ್ ಹೇಳ್ಕೊಟ್ಟ ತಂದೆ

ಅಗತ್ಯಗಳು ಹೆಚ್ಚಾದಂತೆಲ್ಲಾ ಮನುಷ್ಯ ಅವಿಷ್ಕಾರಕ್ಕೆ ಮುಂದಾಗುತ್ತಾನೆ. ಈ ಅವಶ್ಯಕತೆಗಳೇ ತಂತ್ರಜ್ಞಾನಗಳು ಇಷ್ಟೊಂದು ಮುಂದುವರೆಯಲು ಕಾರಣ. ಆದರೆ ಉತ್ತಮ ಶಿಕ್ಷಣದ ಹಿನ್ನೆಲೆ, ಶ್ರೀಮಂತಿಕೆ ಇವೆಲ್ಲವೂ ಇರುವವರು ಇಂತಹ ಸಾಧನೆ ಮಾಡಿದರೆ ದೊಡ್ಡ ಅಚ್ಚರಿ ಎನಿಸದು ಆದರೆ ತಂತ್ರಜ್ಞಾನದ ಗಂಧಗಾಳಿ ಇಲ್ಲದ ತಂದೆಯೊಬ್ಬರು ಕೇವಲ ತಮ್ಮ ಮಗಳ ಸ್ವಾಭಿಮಾನದ ಬದುಕನ್ನೇ ಗುರಿಯಾಗಿಸಿ ಈ ಕಾರ್ಯ ಮಾಡಿದ್ದು ನಿಜಕ್ಕೂ ಗ್ರೇಟ್, ಅಂತಹ ಮಹಾನ್ ತಂದೆಗೊಂದು ಸೆಲ್ಯೂಟ್. 

click me!