ರಾಹುಲ್ ಗಾಂಧಿ ಮದ್ವೆಯಾಗ್ತಿದ್ದಾರಾ? ಕೈ ನಾಯಕನ ಪುತ್ರಿ ಮದ್ವೆ ಕಾಗದದಲ್ಲಿ ರಾಗಾ ಫೋಟೋ

By Anusha Kb  |  First Published Apr 24, 2023, 5:41 PM IST

ತಮಿಳುನಾಡಿನ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಎಸ್ ಅಳಗಿರಿ (K.S. Alagiri) ಅವರ ಪುತ್ರಿ ಕಾಂಚನ (Kanchana) ಅವರ ಮದ್ವೆ ಕಾಗದ ಈಗ ತಮಿಳುನಾಡಿನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.


ತಮಿಳುನಾಡು: ಮದ್ವೆ ಕಾಗದದಲ್ಲಿ ವಧು ವರರ ಫೋಟೋಗಳನ್ನು ಅವರ ಮನೆಯವರ ಫೋಟೋಗಳನ್ನು ಹಾಕುವುದು   ಸಾಮಾನ್ಯವಾಗಿದೆ. ಆದರೆ ರಾಜಕಾರಣಿಗಳ ಫೋಟೋ, ಅದರಲ್ಲೂ ವಯಸ್ಸು 50 ಕಳೆದರೂ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿ ಉಳಿದಿರುವ ರಾಹುಲ್ ಗಾಂಧಿ ಫೋಟೋ ಮದ್ವೆ ಕಾಗದದಲ್ಲಿ ಇದ್ರೆ ಮದ್ವೆ ಆಹ್ವಾನ ಪತ್ರಿಕೆ ತೆರೆದು ನೋಡುವವರು  ಒಂದು ಕ್ಷಣ ಮದ್ವೆ ಯಾರಿಗೆ ಅಂತ ಗೊಂದಲಕ್ಕೊಳಗಾಗದೇ ಇರಲ್ಲ. ಹೀಗೆ ಗೊಂದಲ ಹುಟ್ಟು ಹಾಕಿರುವುದು ತಮಿಳುನಾಡಿನ ರಾಜಕಾರಣಿಯೊಬ್ಬರ ಮಗಳ ಮದುವೆ ಕಾಗದ. 

ತಮಿಳುನಾಡಿನ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಎಸ್ ಅಳಗಿರಿ (K.S. Alagiri) ಅವರ ಪುತ್ರಿ ಕಾಂಚನ (Kanchana) ಅವರ ಮದ್ವೆ ಕಾಗದ ಈಗ ತಮಿಳುನಾಡಿನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ತಮಿಳುನಾಡಿನ ರಾಜಕೀಯ ಕುಟುಂಬಗಳ ಮದುವೆಗಳು ಕುಟುಂಬದ ವಿಚಾರವಾಗಿ ಉಳಿಯುವುದಕ್ಕಿಂತ ಹೆಚ್ಚು ರಾಜಕೀಯದ ಕಾರಣಕ್ಕೆ ಸದಾ ಸುದ್ದಿಯಾಗುತ್ತಿರುತ್ತದೆ. ಹಾಗೆಯೇ ಈ ಕಾಂಗ್ರೆಸ್ ನಾಯಕ ಅಳಗಿರಿ ಮಗಳ ಮದ್ವೆ ಕಾಗದಲ್ಲಿರುವ ಬ್ರಹ್ಮಚಾರಿ ರಾಹುಲ್ ಫೋಟೋ ಬಹಳ ಚರ್ಚೆಗೆ ಕಾರಣವಾಗಿದೆ. 

Tap to resize

Latest Videos

ಕೆಲಸಗಾರರಿಗೆ ಹಸ್ತಲಾಘವ್ ಮಾಡಿ ಕೈ ಒರೆಸಿಕೊಂಡ್ರಾ ರಾಹುಲ್‌ ಗಾಂಧಿ: ವಿಡಿಯೋದಲ್ಲೇನಿದೆ?

ನಾಲ್ಕು ಪುಟಗಳ ಈ ಮದ್ವೆ ಕಾಗದದಲ್ಲಿ ಕೇವಲ ರಾಹುಲ್ ಗಾಂಧಿ (Rahul Gandhi) ಫೋಟೋ ಮಾತ್ರವಲ್ಲದೇ ಹಲವು ಕಾಂಗ್ರೆಸ್ ನಾಯಕರ ಫೋಟೋಗಳಿವೆ. ನಾಲ್ಕು ಪುಟಗಳ ಈ ಮದ್ವೆ ಕಾಗದ ನೋಡಿದರೆ ನಿಮಗೂ ಅಚ್ಚರಿಯಾಗದೇ ಇರದು. ಏಕೆಂದರೆ ಮೊದಲ ಪೇಜ್‌ನಲ್ಲಿ ವೆಡ್ಡಿಂಗ್ ರಿಸೆಪ್ಷನ್ ಇನ್ವಿಟೇಷನ್ ಎಂದು ಇಂಗ್ಲೀಷ್‌ನಲ್ಲಿ ಬರೆದಿದ್ದು, ರಾಹುಲ್ ಗಾಂಧಿಯವರ ನಗುಮುಖದ ಫೋಟೋವನ್ನು ಅಲ್ಲಿ ಹಾಕಲಾಗಿದೆ. ಇದನ್ನು ನೋಡಿದ ಯಾರಿಗಾದರೂ, 'ಏನು 52 ವರ್ಷದ ರಾಹುಲ್ ಗಾಂಧಿ ಕೊನೆಗೂ ಮದ್ವೆಯಾಗ್ತಿದ್ದಾರಾ ಹೇಗೆ ? ಎಂಬ ಪ್ರಶ್ನೆ ಮೂಡುವುದು. ಆದರೆ ಈ ಮದ್ವೆ ಕಾಗದದ ಎರಡನೇ ಪೇಜ್‌ಗೆ ಹೋದಾಗ ನೀವು ಮತ್ತಷ್ಟು ಶಾಕ್ ಆಗುವಿರಿ ಏಕೆಂದರೆ ಅಲ್ಲಿ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರ (Mallikharjun Kharge) ನಗುಮುಖದ ಫೋಟೋ ಇದೆ. ಹಾಗೆಯೇ ಮೂರನೇ ಪೇಜ್‌ಗೆ ತಿರುಗಿದಾಗ ನಿಮಗೆ ಅಲ್ಲಿ ಸೋನಿಯಾ ಗಾಂಧಿಯವರ ಫೋಟೋ ಕಾಣುತ್ತದೆ. 

ಸತ್ಯಮಾರ್ಗದಲ್ಲಿ ಸಾಗಲು ಬಸವಣ್ಣ ಹೇಳಿಕೊಟ್ಟಿದ್ದಾರೆ: ರಾಹುಲ್‌ ಗಾಂಧಿ

ಹಾಗೆಯೇ ನೀವು 4ನೇ ಪೇಜ್‌ನಲ್ಲಿ ರಾಹುಲ್ ಸಹೋದರಿ ಪ್ರಿಯಾಂಕಾ ಅವರನ್ನು ನಿರೀಕ್ಷಿಸುತ್ತಿದ್ದರೆ ನಿಮ್ಮ ಊಹೆ ಸುಳ್ಳಾಗಲಿದೆ. ನಾಲ್ಕನೇ ಪೇಜ್‌ನ್ನು ತಮಿಳುನಾಡಿನ ಮಾಜಿ  ಮುಖ್ಯಮಂತ್ರಿ ಕೆ.ಕೆ ಕಾಮರಾಜ್ (K K Kamraj) ಅವರಿಗೆ ಮೀಸಲಾಗಿಡಲಾಗಿದೆ.  ಆದರೆ ಈ ಫೋಟೋಗಳನ್ನೆಲ್ಲಾ ನಿರ್ಲಕ್ಷಿಸಿ ವಿವಾಹ ಆಹ್ವಾನ (Wedding Invitation) ಪತ್ರಿಕೆಯನ್ನು ಓದಿದಾಗಲಷ್ಟೇ ರಾಹುಲ್ ಗಾಂಧಿ ಈ ದೇಶದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಪಟ್ಟ ರಾಹುಲ್ ಹೆಸರಲ್ಲೇ ಮುಂದುವರೆಯುತ್ತದೆ ಎಂಬುದು ತಿಳಿಯುತ್ತದೆ. ಹಾಗಾದರೆ ಅಳಗಿರಿ ಅವರ ಫೋಟೋ ಮದ್ವೆ ಕಾಗದದಲ್ಲಿ ಇಲ್ವಾ ಎಂದು ಕೇಳಿದ್ರೆ, ಖಂಡಿತ ಇದೆ. ರಾಹುಲ್ ಫೋಟೋ ಇದ್ದ ಪೇಜ್‌ನ ಕೆಳಗೆ ಸಣ್ಣದಾಗಿ ಅಳಗಿರಿ ಅವರ ಫೋಟೋವನ್ನು ಪ್ರಕಟಿಸಲಾಗಿದೆ. ಒಟ್ಟಿನಲ್ಲಿ ಈ ಮದ್ವೆ ಕಾಗದ ಈಗ ತಮಿಳುನಾಡಿನಲ್ಲಿ ಟಾಕ್ ಆಫ್ ದಿ ಟೌನ್ ಆಗಿದ್ದು, ಮದ್ವೆ ಯಾರದ್ದು ಎಂದು ಜನ ಕೇಳುವಂತೆ ಮಾಡಿದೆ. 

click me!