ಮೋದಿ ಇಟ್ಟ ಹೆಜ್ಜೆಯಿಂದ ಭಾರತ ಹಿರಿಯಣ್ಣ ಆಗುತ್ತೆ: ಪ್ರಹ್ಲಾದ ಜೋಶಿ

By Kannadaprabha News  |  First Published May 31, 2020, 2:24 PM IST

ಕೊರೋನಾ ವಿಚಾರದಲ್ಲಿ ಉಳಿದ ದೇಶಗಳಿಗೆ ಹೋಲಿಸಿದರೆ ಭಾರತ ಸುರಕ್ಷಿತ| ಜನರಿಗೆ ಸಂದೇಶ ನೀಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ನಾನೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರ ಸೇವಕ. ಸಣ್ಣ ಕಾರ್ಯಕರ್ತ. ಅವರ ಆಶೀರ್ವಾದದಿಂದ ನಾನು ಈ ಹಂತಕ್ಕೆ ತಲುಪಿದ್ದೇನೆ: ಪ್ರಹ್ಲಾದ ಜೋಶಿ|


ಧಾರವಾಡ: ಕೇಂದ್ರ ಸರ್ಕಾರದಲ್ಲಿನ ಪ್ರಭಾವಿ ಸಚಿವರುಗಳಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಸದಸ್ಯ, ಸಚಿವ ಪ್ರಹ್ಲಾದ ಜೋಶಿ ಅವರು ಕೂಡ ಒಬ್ಬರಾಗಿ ಹೊರಹೊಮ್ಮಿದ್ದಾರೆ. ಸರ್ಕಾರದ ನೀತಿ ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಕೊರೋನಾ ವೈರಸ್‌ನಿಂದಾಗಿ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಸಂಭವಿಸಿದ ಸಾವು ನೋವುಗಳಿಗೆ ಹೋಲಿಸಿದರೆ ಭಾರತ ಅತ್ಯಂತ ಸುರಕ್ಷಿತವಾಗಿದೆ. ಲಾಕ್‌ಡೌನ್‌ ಘೋಷಣೆಯಾದಾಗಿನಿಂದಲೂ ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ದೆಹಲಿಯಲ್ಲೇ ಠಿಕಾಣಿ ಹೂಡಿ ಬಿಡುವಿಲ್ಲದೇ ಕೆಲಸ ಮಾಡುತ್ತಿದ್ದಾರೆ ಸಚಿವ ಜೋಶಿ 20 ಲಕ್ಷ ಕೋಟಿ ಪ್ಯಾಕೇಜ್‌ ಘೋಷನೆಯ ಹಿಂದೆ ಇವರ ಶ್ರಮವೂ ಇದೆ. ತಮ್ಮ ಬಿಡುವಿಲ್ಲದ ಕೆಲಸದ ಮಧ್ಯ ಕನ್ನಡಪ್ರಭ ಜತೆ ಮಾತನಾಡಿ ಎನ್‌ಡಿಎ ಎರಡನೇ ಅವಧಿಯ ಮೊದಲ ವರ್ಷ ಪೂರೈಸಿದ ಒಂದಷ್ಟು ಮಾತುಗಳನ್ನು ಹಂಚಿಕೊಂಡರು.

ಈಗ ತಾವು ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ ಮೂರು ಪ್ರಮುಖ ಖಾತೆಗಳನ್ನು ಹೊಂದಿದ ಸಚಿವರು ಏನನಿಸುತ್ತದೆ?

Latest Videos

undefined

ನಿಜಕ್ಕೂ ನನ್ನ ಕಲ್ಪನೆಗೂ ಮೀರಿದ್ದು ಸಿಕ್ಕಿದೆ. ಸಾಮಾನ್ಯ ಕುಟುಂಬದಲ್ಲಿ ಜನಿಸಿದವ ನಾನು. 2004ರಲ್ಲಿ ನನಗೆ ಮೊದಲ ಬಾರಿಗೆ ಎಂಪಿ ಟಿಕೆಟ್‌ಗೆ ಆಯ್ಕೆ ಮಾಡಿದ್ದು ಕೂಡ ಅನಿರೀಕ್ಷಿತವಾಗಿತ್ತು. ಆಗ ಟಿಕೆಟ್‌ ಕೊಟ್ಟಾಗ ಕೆಲವರು ನನಗೆ ಹಿಂದಿ ಬರಲ್ಲ. ಅತ್ಯಂತ ವೀಕ್‌ ಕ್ಯಾಂಡಿಡೇಟು, ಭಾಷಣ ಮಾಡಲು ಬರಲ್ಲ ಎಂದೆಲ್ಲ ಟೀಕೆ ಮಾಡಿದ್ದುಂಟು. ಆದರೆ ಎಲ್ಲರಿಗೂ ಉತ್ತರವೆಂಬಂತೆ ನನ್ನ ಕರ್ತವ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ. ಎಲ್ಲವನ್ನು ಅತ್ಯಂತ ಶ್ರದ್ಧೆಯಿಂದ ಕಲಿತ್ತಿದ್ದೇನೆ. ನಾಲ್ಕು ಬಾರಿ ಆರಿಸಿ ಬಂದಿದ್ದೇನೆ. ಈಗ ಸಚಿವನಾಗಿದ್ದೇನೆ. ಆಗಿನಂತೆ ಈಗ ಸಚಿವ ಸ್ಥಾನ ಸಿಕ್ಕಿದ್ದು ಕೂಡ ಅನಿರೀಕ್ಷಿತವೇ ಆಗಿದೆ. ಪ್ರಧಾನ ಮಂತ್ರಿಗಳು ನನ್ನ ಮೇಲೆ ವಿಶ್ವಾಸವಿಟ್ಟು ಮೂರು ಖಾತೆಗಳನ್ನು ಕೊಟ್ಟಿದ್ದಾರೆ. ಸಚಿವನಾಗಿದ್ದು ಸಂತೋಷವೆನಿಸುತ್ತಿದೆ. ದೇವರ ಅನುಗ್ರಹ, ಹಿರಿಯರ ಆಶೀರ್ವಾದ, ಹಿತೈಷಿಗಳ ಹಾರೈಕೆಯಿಂದಾಗಿ ನಿರೀಕ್ಷೆಗೆ ಮೀರಿದ ಅಧಿಕಾರ ನನಗೆ ದೊರೆತಿದೆ. ನನ್ನ ಶಕ್ತಿ ಮೀರಿ ಜನರ ಹಾಗೂ ದೇಶಕ್ಕಾಗಿ ಕೆಲಸ ಮಾಡುತ್ತಿದ್ದೇನೆ.

ಮೋದಿ ಆಶಯದಂತೆ ಹಾವೇರಿ-ಗದಗ ಅಭಿವೃದ್ಧಿ: ಸಂಸದ ಶಿವಕುಮಾರ ಉದಾಸಿ

ಮೂರು ಖಾತೆಗಳು ಪ್ರಮುಖ ಖಾತೆಗಳೇ ಆಡಳಿತ ನಿರ್ವಹಿಸುವಲ್ಲಿ ತಮ್ಮ ಅನುಭವವೇನು?

ನನಗೆ ಮೂರು ಖಾತೆಗಳನ್ನು ಕೊಟ್ಟಮೇಲೆ ಹೇಗೆ ನಿಭಾಯಿಸುವುದು. ಇದರಲ್ಲಿ ನನಗೆ ಅನುಭವವಿಲ್ಲ ಎಂದು ಪ್ರಾರಂಭದಲ್ಲಿ ದುಗುಡವಿದ್ದಿದ್ದಂತೂ ನಿಜ. ಇದನ್ನೇ ಪ್ರಧಾನಿಗಳ ಎದುರಿಗೆ ಹೇಳಿಕೊಂಡಿದ್ದೆ. ಅದಕ್ಕೆ ಅವರು, ಇದೇನೂ ಬ್ರಹ್ಮಜ್ಞಾನವಲ್ಲ. ಗಣಿ ಮತ್ತು ಕಲ್ಲಿದ್ದಲು ಖಾತೆಗಳ ಹಳೆಯ ರಿಪೋರ್ಟ್‌ಗಳನ್ನು ಓದಿ. ಅವುಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ. ಮೂರ್ನಾಲ್ಕು ತಿಂಗಳು ಇದನ್ನೇ ಮುಂದುವರಿಸಿದರೆ ನಿಮಗೆ ಎಲ್ಲವೂ ಗೊತ್ತಾಗುತ್ತೆ. ಇನ್ನೂ ಸಂಸದೀಯ ವ್ಯವಹಾರಗಳ ಖಾತೆ ನಿರ್ವಹಣೆಯಲ್ಲಿ ಸಮಸ್ಯೆಯಾದರೆ ನನ್ನನ್ನೇ ನೇರವಾಗಿ ಕೇಳಿ ಎಂದು ಧೈರ್ಯ ತುಂಬಿದ್ದರು. ಇದೇ ಮಾತನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕೂಡ ಆಡಿದ್ದರು. ಅದರಂತೆ ಸಂಸದೀಯ ವ್ಯವಹಾರಗಳ ಖಾತೆಯ ವಿಷಯದಲ್ಲಿ ಪ್ರಧಾನಿ ಹಾಗೂ ಗೃಹ ಸಚಿವರ ಮಾರ್ಗದರ್ಶನ ಪಡೆಯುತ್ತಿದ್ದೆ. ಎಷ್ಟೇ ಸಲ ಕೇಳಿದರೂ ಇಬ್ಬರು ನಾಯಕರು ಬೇಸರಿಸಿಕೊಳ್ಳಲಿಲ್ಲ. ಅಷ್ಟೇ ಸಮಾಧಾನದಿಂದ ನನಗೆ ತಿಳಿ ಹೇಳುತ್ತಿದ್ದರು. ಮುಂದೆ ಮೊದಲ ಅಧಿವೇಶನ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದೆ. ಆಮೇಲೆ ಧೈರ್ಯ ಬಂತು. ಗಣಿ ಮತ್ತು ಕಲ್ಲಿದ್ದಲು ಖಾತೆಗಳು ಅಷ್ಟೇ. ಪ್ರತಿ ಫೈಲ್‌, ರಿಪೋರ್ಟ್‌ಗಳನ್ನೆಲ್ಲ ನಿರಂತರ ಓದುತ್ತಿದ್ದೆ. ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದೆ. ಈಗಲೂ ಮುಂದುವರಿಸಿದ್ದೇನೆ. ಮೂರೂ ಖಾತೆಗಳನ್ನು ಅಕ್ಷರಶಃ ವಿದ್ಯಾರ್ಥಿಯಂತೆ ತಯಾರಿ ಮಾಡಿಕೊಂಡು ಕಲಿತ್ತಿದ್ದೇನೆ. ಜೀವನಪೂರ್ತಿ ವಿದ್ಯಾರ್ಥಿಯಂತೆ ಇರಬೇಕು. ಅಂದಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ಅಧಿಕಾರಿಗಳೊಂದಿಗೆ ಸಾಕಷ್ಟುಆರೋಗ್ಯಕರ ಚರ್ಚೆಗಳನ್ನು ಮಾಡುತ್ತೇನೆ. ಈಗ ಖಾತೆಗಳಲ್ಲಿ ಸಾಕಷ್ಟುಮೂಲಭೂತ ಬದಲಾವಣೆ ತಂದಿದ್ದೇವೆ.

'ನಮೋ ಪ್ರಧಾನಮಂತ್ರಿ ಆಗಿರೋದು ಅವರ ಪುಣ್ಯವಲ್ಲ, ಭಾರತದ ಪುಣ್ಯ'

ಕಲ್ಲಿದ್ದಲು ಖಾತೆಯಲ್ಲಿ ಮೂಲಭೂತ ಬದಲಾವಣೆಗೆ ಕೈಗೊಂಡ ಕ್ರಮವೇನು?

ಅಪಾರ ಪ್ರಮಾಣದಲ್ಲಿ ಕಲ್ಲಿದ್ದಲು ಹೊಂದಿರುವ ಜಗತ್ತಿನ 5ನೇ ದೇಶ ನಮ್ಮದು. ಬರೋಬ್ಬರಿ 356 ಬಿಲಿಯನ್‌ ಟನ್‌ನಷ್ಟು ಕಲ್ಲಿದ್ದಲು ನಮ್ಮಲ್ಲಿದೆ. ಆದರೆ ಉತ್ಪಾದನೆ ಮಾತ್ರ ತೀರಾ ಕಡಿಮೆಯಿದೆ. 1100-1300 ಮಿಲಿಯನ್‌ ಟನ್‌ ದೇಶದ ಬೇಡಿಕೆ.ನಮ್ಮ ಬೇಡಿಕೆ ಪೂರೈಸಿಕೊಳ್ಳಲು ಹೊರದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. 2015ರಲ್ಲಿ ಕೊಂಚ ಬದಲಾವಣೆ ಮಾಡಿದ್ದರ ಪರಿಣಾಮ 450 ಮಿಲಿಯನ್‌ ಟನ್‌ನಷ್ಟುಇದ್ದ ಕಲ್ಲಿದ್ದಲು ಉತ್ಪಾದನೆ 600 ಮಿಲಿಯನ್‌ ಟನ್‌ನಷ್ಟಾಗಿದೆ. ಈ ಸಲ 730 ಮಿಲಿಯನ್‌ ಟನ್‌ ಉತ್ಪಾದನೆ ಮಾಡಿದ್ದೇವೆ. ಶೇ.50ರಷ್ಟುಕಲ್ಲಿದ್ದಲು ಹೊರದೇಶಗಳಿಂದ ತರಿಸಿಕೊಳ್ಳುತ್ತೇವೆ. ಆಮದು ಮಾಡಿಕೊಳ್ಳುವುದಕ್ಕೆ ಇನ್ನೂ ಮೂರ್ನಾಲ್ಕು ವರ್ಷಗಳಲ್ಲಿ ಸಂಪೂರ್ಣ ಬ್ರೇಕ್‌ ಹಾಕುತ್ತೇವೆ. ಇದರೊಂದಿಗೆ ಪರಿಸರಕ್ಕೆ ಕಡಿಮೆ ಹಾನಿಯಾಗುವಂತಹ ಕೋಲ್‌ ಗ್ಯಾಸ್‌ ಕೂಡ ಮಾಡುವ ಯೋಚನೆಯಿದೆ. ಕಲ್ಲಿದ್ದಲನ್ನು ಮಿಥೇನ್‌ ಗ್ಯಾಸ್‌ ಮಾಡಿ ಉಪಯೋಗಿಸುವ ತಂತ್ರವಿದು. ಈ ಬಗ್ಗೆ ಸರಿಯಾದ ಪಾಲಸಿ ಇರಲಿಲ್ಲ. ಈಗ ಕಾನೂನಿನಲ್ಲಿ ಸೇರಿಸಿ, ತಿದ್ದುಪಡಿ ಮಾಡಿದ್ದೇವೆ.

ಕಲ್ಲಿದ್ದಲು ಬ್ಲಾಕ್‌ಗಳ ಖಾಸಗೀಕರಣಕ್ಕೆ ವಿರೋಧ ಪಕ್ಷಗಳಿಂದ ಅಪಸ್ವರ ಕೇಳಿ ಬರುತ್ತಿದೆಯಲ್ಲ?

ಖಾಸಗೀಕರಣ ಎಂದು ಯಾರು ಹೇಳುತ್ತಿದ್ದಾರೋ ಅವರಿಗೆ ಗೊತ್ತಿಲ್ಲ. ಗೊತ್ತಿದ್ದವರು ಅನಗತ್ಯವಾಗಿ ಅಂತಾರಾಷ್ಟ್ರೀಯ ಹಿತಕ್ಕೆ ಒಳಗಾಗಿ ಮಾತನಾಡುವವರು ಇದ್ದಾರೆ. ಬೇಡಿಕೆಗೆ ತಕ್ಕಂತೆ ಉತ್ಪಾದನೆ ಮಾಡಿಕೊಳ್ಳಲು ನಮ್ಮಲ್ಲಿ ಅವಕಾಶವಿದ್ದಾಗ ಏಕೆ ಮಾಡಿಕೊಳ್ಳಬಾರದು. ಆಮದು ಮಾಡಿಕೊಂಡಿದ್ದರಿಂದ ಕಳೆದ ಸಲ 1.70 ಲಕ್ಷ ಕೋಟಿ ಫಾರೇನ್‌ ಎಕ್ಸ್‌ಚೇಂಜ್‌ ರಿಜವ್‌ರ್‍ ಹಾಳಾಗಿದೆ. ಹಾಗಾದರೆ ದೇಶ ನಡೆಸಬೇಕೋ ಬೇಡವೋ? ಇದನ್ನು ಎಲ್ಲಿವರೆಗೂ ಅರ್ಥ ಮಾಡಿಕೊಳ್ಳುವುದಿಲ್ಲವೋ ಹೀಗೆ ವಿರೋಧಿಸುತ್ತಾರೆ. ಟೀಕೆ ಮಾಡುವವರು ಈ ಬಗ್ಗೆ ಅರಿತುಕೊಂಡಿಲ್ಲ. ಇಲ್ಲವೇ ಭಾರತ ಮುಂದುವರಿದ ರಾಷ್ಟ್ರವಾಗಬಾರದು. ಮುಂದುವರಿಯುತ್ತಿರುವ ರಾಷ್ಟ್ರವಾಗಿಯೇ ಇರಬೇಕೆಂಬ ಅಭಿಲಾಷೆ ಹೊಂದಿದ್ದಾರೆ ಎಂದರ್ಥವಷ್ಟೆ. ಕಲ್ಲಿದ್ದಲಿನಲ್ಲಿ ಸ್ವಾವಲಂಬನೆ ಸಾಧಿಸುತ್ತಿದ್ದೇವೆ. ಇದಕ್ಕೆ ವಿರೋಧ ವ್ಯಕ್ತಪಡಿಸುವಲ್ಲಿ ಯಾವುದೇ ಅರ್ಥವಿಲ್ಲ.

ಸಲಹೆ ಕೇಳಿಯೇ ತೀರ್ಮಾನ ತಗೊಳ್ತಾರೆ: 6 ವರ್ಷದಿಂದ ಮೋದಿ ಜೊತೆಗಿರೋ ಸದಾನಂದ ಗೌಡ ಮುಕ್ತ ಮಾತು

ಗಣಿ ಇಲಾಖೆಯಲ್ಲಿ ಆಗಿರುವ ಮತ್ತು ಆಗುತ್ತಿರುವ ಪ್ರಮುಖ ಬದಲಾವಣೆಗಳೇನು?

ಗಣಿಗಾರಿಕೆಯಲ್ಲಿ ಸಾಕಷ್ಟುಕೆಲಸ ಮಾಡಿದ್ದೇವೆ. ಒಂದೇ ಒಂದು ಉದಾಹರಣೆಯೆಂದರೆ ಓಡಿಸಾದಲ್ಲಿ ಗಣಿಗಾರಿಕೆಯಿಂದಾಗಿ ವರ್ಷಕ್ಕೆ ಅಲ್ಲಿನ ಸರ್ಕಾರಕ್ಕೆ ಬರೀ 50 ಸಾವಿರ ಕೋಟಿ ಮಾತ್ರ ಆದಾಯ ಬರುತ್ತಿತ್ತು. ನಾವು ಬಂದ ಮೇಲೆ ಪಾಲಸಿ ಬದಲಿಸಿ, ಹರಾಜು ಪ್ರಕ್ರಿಯೆ ಅತ್ಯಂತ ಪಾರದರ್ಶಕ ಮಾಡಿದ್ದರಿಂದ 2.04 ಲಕ್ಷ ಕೋಟಿ ಆದಾಯ ಬರುವಂತಾಗಿದೆ. ಇನ್ನೂ ಮಿನರಲ್‌ ಸೋರ್ಸ್‌ಗಳನ್ನು ಅತ್ಯಂತ ಕಡಿಮೆ ಬಳಕೆ ಮಾಡುತ್ತಿದ್ದೇವೆ. ನೈಸರ್ಗಿಕ ಸಂಪತ್ತಿಗೆ ಹಾನಿಯಾಗದಂತೆ ಮಿನರಲ್‌ ಸೋರ್ಸ್‌ ಬಳಕೆ ಮಾಡಿಕೊಳ್ಳುವ ಯೋಚನೆಯಿದೆ. ಸದ್ಯ ದೇಶದ ಜಿಡಿಪಿಯಲ್ಲಿ ಗಣಿ ಮತ್ತು ಕಲ್ಲಿದ್ದಲಿನ ಪಾಲು ಶೇ.1.6ರಷ್ಟಿದೆ. ಇದು ಶೇ.2.5ರಷ್ಟುಮಾಡಬೇಕೆನ್ನುವ ಗುರಿಯಿದೆ. ಸದ್ಯ ಗಣಿ ಮತ್ತು ಕಲ್ಲಿದ್ದಲು ನೆಚ್ಚಿಕೊಂಡು 4 ಕೋಟಿ ನೌಕರರಿದ್ದಾರೆ. 8 ಕೋಟಿ ಜನರಿಗೆ ಉದ್ಯೋಗ ದೊರೆಯುವಂತಾಗಬೇಕು. ಇನ್ನೂ ಮೂರ್ನಾಲ್ಕು ವರ್ಷಗಳಲ್ಲಿ ಇದನ್ನು ಮಾಡಿ ತೋರಿಸುತ್ತೇವೆ.

ಕೊರೋನಾ ನಿಯಂತ್ರಣ ಆಗೋದು ಯಾವಾಗ ? ದೇಶದ ಪರಿಸ್ಥಿತಿ ಏನಾಗಲಿದೆ?

ಕೊರೋನಾ ಅಷ್ಟುಸುಲಭವಾಗಿ ನಿಯಂತ್ರಣಕ್ಕೆ ಬಾರದು. ನನ್ನ ಪ್ರಕಾರ ಇನ್ನು ಕೆಲವು ತಿಂಗಳು ತೊಂದರೆಯಾಗುವುದು ಖಚಿತ. ಔಷಧಿ ಅಥವಾ ವ್ಯಾಕ್ಸಿನ್‌ ಸಿಗಬಹುದು. ಸಿಕ್ಕರೂ ಎಷ್ಟೇ ಫಾಸ್ಟ್‌ ಆಗಿ ಅದನ್ನು ಉತ್ಪಾದಿಸಿದ್ದೇವೆ ಎಂದರೂ ಭಾರತದ 137 ಕೋಟಿ ಜನರಿಗೆ ಅದನ್ನು ನೀಡಲು ಕನಿಷ್ಠವೆಂದರೂ 1-2 ವರ್ಷ ಹಿಡಿಯುತ್ತೆ. ಎಲ್ಲರೂ ಅತ್ಯಂತ ಜಾಗ್ರತೆಯಿಂದ ಇದರ ಜೊತೆಗೆ ಬದುಕುತ್ತಾ ಇದರ ವಿರುದ್ಧ ಜಯ ಸಾಧಿಸಬೇಕಿದೆ. ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕಿದೆ. ಇನ್ಮೇಲೆ ನಮ್ಮ ಜೀವನ ಪದ್ಧತಿಯೇ ಬದಲಾಗುತ್ತೆ. ಈ ಬದಲಾವಣೆಗಳಿಗೆ ಎಲ್ಲರೂ ಹೊಂದಿಕೊಳ್ಳುವುದು ಅಗತ್ಯ ಹಾಗೂ ಅನಿವಾರ್ಯ. ಶುಚಿತ್ವ ಕಾಪಾಡಿಕೊಳ್ಳುವಿಕೆ, ಮುಖಗವಸು ಹಾಕಿಕೊಳ್ಳುವಿಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ. ಶೇಕ್‌ ಹ್ಯಾಂಡ್‌ ಬಿಟ್ಟು ಭಾರತೀಯ ಸಂಸ್ಕೃತಿಯಾಗಿರುವ ನಮಸ್ಕಾರ ಪದ್ಧತಿ ಜಾರಿಗೆ ಬರುತ್ತದೆ.

ಕೊರೋನಾ ವಿಷಯದಲ್ಲೂ ಕೇಂದ್ರ ರಾಜಕಾರಣ ಮಾಡಿತು. ಅಮೆರಿಕಾ ಅಧ್ಯಕ್ಷ ಟ್ರಂಪ್‌ ಕಾರ್ಯಕ್ರಮದಿಂದಾಗಿ ಲಾಕ್‌ಡೌನ್‌ ಘೋಷಿಸಲು ತಡಮಾಡಿತು ಎಂಬ ಆರೋಪವಿದೆಯೆಲ್ಲ?

ವಿರೋಧ ಪಕ್ಷದವರ ಅತ್ಯಂತ ಬೇಜವಾಬ್ದಾರಿ ಆರೋಪವಿದು. ಅಮೆರಿಕಾ ಅಧ್ಯಕ್ಷ ಟ್ರಂಪ್‌ ಬರುವಾಗ ಕೊರೋನಾ ನಮ್ಮ ದೇಶದಲ್ಲೂ ಇರಲಿಲ್ಲ. ಆ ದೇಶದಲ್ಲೂ ಇರಲಿಲ್ಲ. ಅಲ್ಲಿ ಇದ್ದರೂ ಅತ್ಯಂತ ಬೆರಳೆಣಿಕೆಯಷ್ಟುಮಾತ್ರವಿತ್ತು. ಟ್ರಂಪ್‌ ಕಾರ್ಯಕ್ರಮದಿಂದ ಮೋದಿ ಅವರಿಗೇನೂ ಲಾಭವಿಲ್ಲ. ಭಾರತ- ಅಮೆರಿಕಾದ ನಡುವಿನ ಸ್ನೇಹ, ಸೌಹಾರ್ದತೆ ಸಾಧಿಸುವ ಕೆಲಸವಾಗಿತ್ತಷ್ಟೇ. ದೇಶದ ಹಿತದೃಷ್ಟಿಯಿಂದ ಮಾಡಿದ್ದ ಕಾರ್ಯಕ್ರಮವದು. ಕೇಂದ್ರ ಸರ್ಕಾರ ಯಾವುದೇ ಲೋಪವನ್ನು ಮಾಡಿಲ್ಲ. ಇನ್ನೂ ಜನವರಿಯಲ್ಲಿ ಲಾಕ್‌ಡೌನ್‌ ಘೋಷಿಸಿದ್ದರೆ ಅದು ಉಪಯೋಗ ಇರುತ್ತಿರಲಿಲ್ಲ. ಚೀನಾದ ವೂಹಾನ್‌ದಲ್ಲಿ ಕೊರೋನಾ ಕಂಡು ಬಂದಾಗಲೇ ನಾವು ತಯಾರಿ ಮಾಡಿಕೊಳ್ಳಲು ಶುರು ಮಾಡಿದ್ದೇವು. ಈ ನಿಟ್ಟಿನಲ್ಲಿ 2020ರ ಜನವರಿ 1ರಂದೇ ಫಸ್ಟ್‌ ಮೀಟಿಂಗ್‌ ಮಾಡಿದ್ದೇವು. ಆಗ ಪ್ರಧಾನಿ ನರೇಂದ್ರ ಮೋದಿ ಅವರು ಭಯಂಕರ ರೋಗ ಬರತಾ ಇದೆ. ತಯಾರಿ ಮಾಡಿಕೊಳ್ಳಬೇಕು ಎಂದು ಹೇಳಿದ್ದರು. ಅದರಂತೆ ತಯಾರಿ ಮಾಡಿ ಅತ್ಯಂತ ಸಮರ್ಥವಾಗಿ ಕೊರೋನಾ ವೈರಸ್‌ ನಿಭಾಯಿಸಿದ್ದೇವೆ. ಹಾಗೆ ನೋಡಿದರೆ ಇಡೀ ಜಗತ್ತಿನಾದ್ಯಂತ ಕೊರೋನಾ ಇದೆ. ಆದರೆ ಜಗತ್ತಿನ 15 ದೇಶಗಳನ್ನಷ್ಟೇ ಅವಲೋಕಿಸಿದರೆ, ಈ 15 ದೇಶಗಳ ಜನಸಂಖ್ಯೆ ಭಾರತದ ಜನಸಂಖ್ಯೆಗೆ ಸಮವಿದೆ. ಅಲ್ಲಿನ ಸಾವು- ನೋವು ಹೋಲಿಸಿದರೆ ನಾವು ಸಾಕಷ್ಟುಯಶಸ್ವಿಯಾಗಿದ್ದೇವೆ. ನಮ್ಮಲ್ಲಿನ ಒಂದು ಸಾವು ಕೂಡ ಪ್ರಮುಖವೇ. ಆದರೂ ಅವುಗಳಿಗೆ ಹೋಲಿಸಿದರೆ ನಮ್ಮದು ದೊಡ್ಡ ಯಶಸ್ಸು. ಪ್ರಧಾನಿ ಮೋದಿ ಅವರ ಗಟ್ಟಿ, ಉತ್ತಮ ನಿರ್ಧಾರದಿಂದಾಗಿ ಮಾತ್ರ ದೇಶ ಕೊರೋನಾ ವಿಷಯದಲ್ಲಿ ಅತ್ಯಂತ ಯಶಸ್ವಿಯಾಗಿ ಹಿಮ್ಮಿಟ್ಟಿಸಲು ಸಾಧ್ಯವಾಗಿದೆ. ಇದು ಉತೆ್ೊ್ರಕ್ಷೆ ಅಲ್ಲ. ಇಂತಹ ವಿಷಯದಲ್ಲೂ ರಾಜಕಾರಣಕ್ಕಾಗಿ ಟೀಕೆ ಮಾಡುವುದು ಎಷ್ಟುಸರಿ ನೀವೇ ಹೇಳಿ?

'ತೆಗಳುವವರೆಲ್ಲಾ ಮೋದಿಗೆ ರಾಜಮಾರ್ಗ ನಿರ್ಮಿಸಿ ಕೊಟ್ಟಿದ್ರು'..! ಪ್ರಧಾನಿ ಬಗ್ಗೆ ವಾಗ್ಮಿ ಸೂಲಿಬೆಲೆ ಮಾತು

ಕೊರೋನಾ ಸೋಂಕಿತರ ಸಂಖ್ಯೆ 500 ಇದ್ದಾಗ ಲಾಕ್‌ಡೌನ್‌ ಮಾಡಿ, 1 ಲಕ್ಷಕ್ಕೇರಿದಾಗ ಎಲ್ಲವನ್ನು ತೆರೆಯಲು ಅನುಮತಿ ನೀಡಲಾಗುತ್ತಿದೆಯೆಲ್ಲ?

ಲಾಕ್‌ಡೌನ್‌ ಕಂಟಿನ್ಯೂ ಇದೆ. ಕೆಲವೊಂದು ಸಡಿಲಿಕೆ ಕೊಡಲಾಗಿದೆ ಅಷ್ಟೇ. ಇಷ್ಟೊಂದು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಸಂಪೂರ್ಣ ಜನಜೀವನ ಬಂದ್‌ ಮಾಡೋದು ಸಾಧ್ಯವಿಲ್ಲ. ಎಷ್ಟುದಿನಾ ಅಂತ ಜನರು ಮನೆಯಲ್ಲಿರಲು ಸಾಧ್ಯ. ಕೊರೋನಾ ಅತ್ಯಂತ ಗಂಭೀರ ಕಾಯಿಲೆಯಿದೆ ಎಂದು ಲಾಕ್‌ಡೌನ್‌ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮಾಡಿದೇವು. ಜನರ ಜೀವನವೂ ನಡೆಯಬೇಕಲ್ಲ. ಜನರು ಅಡ್ಜೆಸ್ಟ್‌ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಕೆಲ ಲೀಡರ್‌ಗಳು ಇದನ್ನು ಅರ್ಥ ಮಾಡಿಕೊಂಡಿದ್ದಾರೆ. ಕೆಲವರು ಅರ್ಥ ಮಾಡಿಕೊಂಡರೂ ರಾಜಕಾರಣಕ್ಕಾಗಿ ಹೀಗೆಲ್ಲ ಟೀಕೆ ಮಾಡುತ್ತಾರಷ್ಟೇ.

ಕೊರೋನಾ ಪರಿಸ್ಥಿತಿಯಲ್ಲಿ ವಲಸೆ ಕಾರ್ಮಿಕರ ಸಂಕಷ್ಟನಿರ್ವಹಣೆ ಮಾಡುವಲ್ಲಿ ಕೇಂದ್ರ ಸರ್ಕಾರ ಅಷ್ಟಾಗಿ ಸ್ಪಂದಿಸಲಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆಯಲ್ಲ?

ಇದೆಲ್ಲ ಅತ್ಯಂತ ಬಾಲೀಶತನದ ಟೀಕೆ. ನಾವು ಬರೋಬ್ಬರಿ 25 ಲಕ್ಷ ವಲಸೆ ಕಾರ್ಮಿಕರನ್ನು ತವರಿಗೆ ಕಳುಹಿಸಿದ್ದೇವೆ. ವಲಸೆ ಕಾರ್ಮಿಕರ ಡಾಟಾವೇ ಇರಲಿಲ್ಲ. ನಾವು ಡಾಟಾ ಆರಂಭಿಸಿ ನೂರಾರು ಶ್ರಮಿಕ್‌ ರೈಲುಗಳನ್ನು ಓಡಿಸಿ ಎಲ್ಲರನ್ನು ಅವರವರ ಊರಿಗೆ ಕಳುಹಿಸಿದ್ದೇವೆ. ರಾಜ್ಯಗಳಿಗೆ ವಲಸೆ ಕಾರ್ಮಿಕರ ಊಟ, ಉಪಚಾರಗಳಿಗೆ 11 ಸಾವಿರ ಕೋಟಿ ಬಿಡುಗಡೆ ಮಾಡಿದ್ದೇವೆ. ದಿ ಬೆಸ್ಟ್‌ ಥಿಂಗ್‌ ಇಸ್‌ 25 ಲಕ್ಷ ಜನರನ್ನು ಸಾಗಿಸಿರುವುದು. ಇದು ಯಾರಿಗೂ ಕಾಣಲ್ಲ. ಈ ಬಗ್ಗೆ ವಿರೋಧ ಪಕ್ಷಗಳೇಕೆ ಮಾತನಾಡಲ್ಲ? ಬರೀ ರಾಜಕಾರಣ ಮಾಡುವುದೊಂದೆ. ಏನು ಮಾಡಕ್ಕಾಗಲ್ಲ.

ಕೊರೋನಾದಿಂದಾಗಿ ದೇಶದ ಆರ್ಥಿಕತೆ ಬಿದ್ದು ಹೋಗಿದೆ.20 ಲಕ್ಷ ಕೋಟಿ ಪ್ಯಾಕೇಜ್‌ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಬಲ್ಲದೇ?

ಕೆಲವರು ಸಮಸ್ಯೆಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಳ್ಳುತ್ತಾರೆ. ಮತ್ತೆ ಕೆಲವರು ಅವಕಾಶಗಳನ್ನೇ ಸಮಸ್ಯೆಗಳನ್ನಾಗಿ ಮಾಡಿಕೊಳ್ಳುತ್ತಾರೆ. ಪ್ರಧಾನಿ ಮೋದಿ ಮೊದಲನೆಯ ಕ್ಯಾಟಗೇರಿಗೆ ಸೇರಿದವರು. ಅತ್ಯಂತ ಜಾಣ್ಮೆಯಿಂದ ಈ ಪ್ಯಾಕೇಜ್‌ ಘೋಷಿಸಿದ್ದಾರೆ. ಖಂಡಿತವಾಗಿಯೂ ದೇಶದ ಆರ್ಥಿಕತೆ ಸುಧಾರಿಸುತ್ತೆ. ಸ್ವಾವಲಂಬನೆಯತ್ತ ಹೆಜ್ಜೆಹಾಕುತ್ತೆ. ಇದರಲ್ಲಿ ಸಂದೇಹ ಬೇಡ. ಎಲ್ಲ ರಂಗಗಳಿಗೂ ಪ್ಯಾಕೇಜ್‌ನ ಲಾಭ ದೊರೆಯಲಿದೆ. ಹಿಂದೆ 1919ರಲ್ಲಿ ಪ್ಲೇಗ್‌ ಬಂದಿತ್ತು. ಆಗ ಅಂದಾಜಿನಂತೆ 4-5 ಕೋಟಿ ಜನರು ಮೃತರಾಗಿದ್ದರು. ಭಾರತದಲ್ಲೇ 1.5 ಕೋಟಿ ಜನ ಸತ್ತಿದ್ದರು ಎಂದು ಹೇಳಲಾಗುತ್ತೆ. ಅಮೆರಿಕಾ ಉಳಿಸಿಕೊಳ್ಳಲು ಆ ದೇಶ ಬಹಳ ಶ್ರಮಪಟ್ಟಿತ್ತು. ಅದಾದ ಬಳಿಕ ಅಮೆರಿಕಾ ಮೊದಲು, ಉಳಿದ ದೇಶಗಳು ನಂತರ ಎಂಬಂತಾಗಿ ಅದು ದೊಡ್ಡಣ್ಣವಾಯಿತು. ಅದೇ ರೀತಿ ಇದೀಗ ಸುಪರ್‌ ಪಾವರ್‌ ದೇಶವಾಗುತ್ತ ಭಾರತ ಹೆಜ್ಜೆ ಇಟ್ಟಿದೆ.

ಕೊರೋನಾ ಬಳಿಕ ಭಾರತ ಸುಪರ್‌ ಪವರ್‌ ಆಗುತ್ತೆ? ಜಗತ್ತಿಗೆ ದೊಡ್ಡಣ್ಣ ಆಗುತ್ತೆ ಎಂದು ಹಲವು ಬಜೆಪಿ ನಾಯಕರು ಹೇಳುತ್ತಿದ್ದಾರೆ. ಇದು ಸಾಧ್ಯವೇ?

ಸುಪರ್‌ ಪವರ್‌ ದೇಶದ ಕನಸು ಹೊತ್ತು ಸಾಗುತ್ತಿದೆ ಭಾರತ. ದೊಡ್ಡಣ್ಣ (ಬಿಗ್‌ ಬ್ರದರ್‌) ಅಲ್ಲ. ಎಲ್ಲ ದೇಶಗಳಿಗೆ ಎಲ್ಡರ್‌ ಬ್ರದರ್‌ (ಅಣ್ಣ) ಆಗುವುದು ಖಚಿತ. ಪ್ರಧಾನಿ ಮೋದಿ ಅವರು ಇಟ್ಟಿರುವ ಹೆಜ್ಜೆಗಳಲ್ಲಿ ಈ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ಕೊರೋನಾ ಸಂಕಷ್ಟದಲ್ಲಿ ನಿಮ್ಮ ಧಾರವಾಡ ಲೋಕಸಭಾ ಕ್ಷೇತ್ರದ ಜನತೆಗೆ ನಿಮ್ಮ ಸ್ಪಂದನೆ ಹೇಗಿತ್ತು?

ಕ್ಷೇತ್ರದಲ್ಲಿ ಉಳಿದು ಕೆಲಸ ಮಾಡಿದರೆ ದೇಶದ ಕೆಲಸ ಯಾರು ಮಾಡಬೇಕು? ಹೀಗಾಗಿ ಕ್ಷೇತ್ರಕ್ಕೆ ನಾನು ಹೋಗಲು ಸಾಧ್ಯವಾಗಲಿಲ್ಲ. ಪ್ರಧಾನಿಯವರ ಸೂಚನೆಯಂತೆ ದೆಹಲಿಯಲ್ಲೇ ಉಳಿದೆ. ಆದರೆ ಜನರ ಸಂಕಷ್ಟಗಳಿಗೆ ಇಲ್ಲಿಂದಲೇ ಸ್ಪಂದಿಸಿದ್ದೇನೆ. ಕೊರೋನಾ ಕಂಡು ಬಂದ ತಕ್ಷಣ ಮೊದಲು ಓಲಾದವರನ್ನು ಸಂಪರ್ಕಿಸಿ ನನ್ನ ಕ್ಷೇತ್ರದಲ್ಲಿ ಕೊರೋನಾ ಹೊರತು ಪಡಿಸಿ ಅನ್ಯ ಕಾಯಿಲೆಗಳಿಂದ ಬಳಲುವವರೆಗೆ ಆಸ್ಪತ್ರೆಗೆ ಕರೆದುಕೊಂಡು ಮರಳಿ ತರುವಂತೆ ವಿನಂತಿಸಿದೆ. ಮೊದಲಿಗೆ 5 ವಾಹನಗಳನ್ನು ಬಿಡಲಾಗಿತ್ತು. ಬಳಿಕ ಪ್ರತಿವಿಧಾನ ಸಭಾ ಕ್ಷೇತ್ರಕ್ಕೂ ತಲಾ 3 ವಾಹನಗಳನ್ನು ಬಿಡಲಾಯಿತು. ಈ ಸೇವೆ ಮೇ 31ರವರೆಗೆ ಮುಂದುವರಿಯಲಿದೆ. ಇನ್ನು ಕೆಲವರಿಗೆ ಡಯಾಲಿಸಿಸ್‌ ಮಾಡಿಸಿಕೊಳ್ಳಲು ದುಡ್ಡು ಇರಲಿಲ್ಲ. ಅದಕ್ಕೂ ವ್ಯವಸ್ಥೆ ಮಾಡಿದೆ. ಒಬ್ಬ ಕ್ಯಾನ್ಸರ್‌ ರೋಗಿಗಂತೂ ಎಲ್ಲೂ ಔಷಧಿ ಸಿಕ್ಕಿರಲಿಲ್ಲ. ಸಿಕ್ಕರೂ ಅದನ್ನು ಕೊಂಡುಕೊಳ್ಳಲು ಅವರ ಬಳಿ ದುಡ್ಡಿರಲಿಲ್ಲ. ಆ ಮಾತ್ರೆ ಹೈದ್ರಾಬಾದ್‌ನಲ್ಲಿ ಸಿಗುತ್ತದೆ ಎಂಬುದು ಗೊತ್ತಾಗಿ ಹೈದ್ರಾಬಾದ್‌ನಲ್ಲಿನ ನನ್ನ ಸ್ನೇಹಿತರಿಂದ ಅದನ್ನು ತರಿಸಿ ಕಳುಹಿಸಿಕೊಟ್ಟಿದ್ದೆ. ಹೈದ್ರಾಬಾದ್‌ನಲ್ಲಿನ ನನ್ನ ಸ್ನೇಹಿತರು ನನ್ನಿಂದ ಆ ದುಡ್ಡನ್ನು ಇಸಿದುಕೊಳ್ಳಲಿಲ್ಲ. ಅವರೂ ಇದು ನನ್ನ ಅಲ್ಪ ಸೇವೆ ಎಂದು ಹೇಳಿದ್ದರು. ಇನ್ನು ಕ್ಷೇತ್ರದಲ್ಲಿ ಸುಮಾರು 20 ಸಾವಿರ ಆಹಾರದ ಕಿಟ್‌ಗಳನ್ನು ವಿತರಿಸಲಾಗಿದೆ. 1 ಲಕ್ಷಕ್ಕೂ ಅಧಿಕ ಮಾಸ್ಕ್‌ಗಳನ್ನು ವಿತರಣೆ ಮಾಡಿದ್ದೇವೆ. ಟೆಕ್ಕಿಯೊಬ್ಬ ಲಂಡನ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಅಂತ್ಯಕ್ರಿಯೆಯನ್ನು ಭಾರತದಲ್ಲೇ ಮಾಡಬೇಕೆಂಬುದು ಆತನ ತಂದೆ ತಾಯಿಯ ಅಭಿಲಾಷೆಯಾಗಿತ್ತು. ಅದಕ್ಕೂ ಸ್ಪಂದಿಸಿ ಮೃತದೇಹ ಹಾಗೂ ಕುಟುಂಬಸ್ಥರನ್ನು ವಿಮಾನದಲ್ಲಿ ತರಿಸುವ ವ್ಯವಸ್ಥೆ ಮಾಡಿದ್ದೆ. ಹೀಗೆ ಜನರ ಹತ್ತಾರು ಸಂಕಷ್ಟಗಳಿಗೆ ಸ್ಪಂದಿಸಿದ್ದೇನೆ ಎಂಬ ಧನ್ಯತೆ ಇದೆ.

ಚುನಾವಣೆ ವೇಳೆ ಕ್ಷೇತ್ರದ ಜನತೆಗೆ ನೀಡಿರುವ ಭರವಸೆ ಈ ಒಂದು ವರ್ಷದ ಅವಧಿಯಲ್ಲಿ ಎಷ್ಟರ ಮಟ್ಟಿಗೆ ಈಡೇರಿಸಿದ್ದೀರಿ? ಆ ಕೆಲಸಗಳು ತಮಗೆ ತೃಪ್ತಿ ತಂದಿವೆಯೇ?

ಸಾಕಷ್ಟು ಕೆಲಸಗಳನ್ನು ಮಾಡಿದ್ದೇವೆ. ಈ ಲಾಕ್‌ಡೌನ್‌ನಲ್ಲೂ ಸಿಸಿಐನಿಂದ ಹತ್ತಿ ಖರೀದಿಗೆ ವ್ಯವಸ್ಥೆ ಮಾಡಿದ್ದೇನೆ. ಇದರಿಂದ ಕರ್ನಾಟಕದಲ್ಲೇ ಸುಮಾರು 2.5 ಲಕ್ಷ ಬೇಲ್‌ಗಳನ್ನು ಸಿಸಿಐಯಿಂದ ಖರೀದಿಸಿದ್ದೇವೆ. ಕಡಲೆ ಖರೀದಿ ಮಾಡಬೇಕೆಂದು ರೈತರು ಒತ್ತಾಯಿಸಿದ್ದರು. ಕಡಲೆ ಖರೀದಿಸಿದ್ದು ಆಯಿತು. ಬಳಿಕ ದುಡ್ಡು ಕೂಡ ಕೊಡಿಸಿದ್ದೇನೆ. 155 ಕೋಟಿ ರು. ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯ ರಸ್ತೆಗೆ ಮಂಜೂರಾತಿ ತೆಗೆದುಕೊಂಡಿದ್ದೇನೆ. ಹುಬ್ಬಳ್ಳಿ ಚೆನ್ನಮ್ಮ ಸರ್ಕಲ್‌ನಲ್ಲಿ ಫ್ಲೈಓವರ್‌ಗೂ ಮಂಜೂರಾತಿ ದೊರೆತಿದೆ. 300 ಕೋಟಿ ರು. ಯೋಜನೆಯಿದು. ಹುಬ್ಬಳ್ಳಿ-ಧಾರವಾಡ ರೈಲ್ವೆ ನಿಲ್ದಾಣ, ಐಐಟಿ ಬಿಲ್ಡಿಂಗ್‌ ನಿರ್ಮಾಣಕ್ಕೆ ಮಂಜೂರಾತಿ ಹೀಗೆ ಸಾಕಷ್ಟುಕೆಲಸಗಳಾಗಿವೆ. ಸಿಆರ್‌ಎಫ್‌ ರಸ್ತೆಗಳನ್ನು ಕೈಗೊಳ್ಳಲು ವಿಳಂಬವಾಗಿದೆ. ಅದಕ್ಕೆ ಹಿಂದಿನ ರಾಜ್ಯ ಸರ್ಕಾರಗಳೇ ಕಾರಣ. ಈಗಿನ ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುವಷ್ಟರಲ್ಲೇ ಕೊರೋನಾ ಬಂದಿತು. ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಿಆರ್‌ಎಫ್‌ ರಸ್ತೆಗಳನ್ನು ಮುಗಿಸುವಂತೆ ಕೇಳಿದ್ದೇನೆ. ಕೊರೋನಾ ಹಾವಳಿ ಮುಗಿದ ಮೇಲೆ ಕೈಗೆತ್ತಿಕೊಳ್ಳುವುದಾಗಿ ಹೇಳಿದ್ದಾರೆ. ಅದು ಆಗುತ್ತೆ. ಸಿಆರ್‌ಎಫ್‌ ರಸ್ತೆ ವಿಳಂಬವಾಗಿದೆ ಎಂಬುದನ್ನು ಬಿಟ್ಟರೆ ಎಲ್ಲ ಕೆಲಸಗಳು ತೃಪ್ತಿ ನೀಡಿವೆ.

ಯುಪಿಎ ಸರ್ಕಾರದ ಎರಡೂ ಅವಧಿಯನ್ನೂ ತಾವು ನೋಡಿದ್ದೀರಿ. ಈಗ ಎನ್‌ಡಿಎ ಸರ್ಕಾರದ ಎರಡನೆಯ ಅವಧಿಯಲ್ಲಿದ್ದೀರಿ; ಇವರಡಲ್ಲಿನ ವ್ಯತ್ಯಾಸವೇನು?

ನಮ್ಮದು ನಿರ್ಣಯ ಮಾಡುವಂತ ಸರ್ಕಾರ. ಆದರೆ ಯುಪಿಎ ಸರ್ಕಾರದ ಅವಧಿಯಲ್ಲಿ ನಿರ್ಣಯಗಳೇ ಆಗುತ್ತಿರಲಿಲ್ಲ. ಆಗಿನ ಪ್ರಧಾನಿ ಮನಮೋಹನ ಸಿಂಗ್‌ ಅವರಿಗೆ ಗೊತ್ತಾಗದೇ ಕೆಲವೊಂದು ನಿರ್ಣಯಗಳಾಗುತ್ತಿದ್ದವು. ಅವರು ರಾಜಕೀಯ ಲೀಡರ್‌ ಆಗಿರಲಿಲ್ಲ. ಬರೀ ಎಕ್ಸ್ಯೂಟಿವ್‌ ಆಗಿದ್ದರು. ಆದರೆ ಮೋದಿ ಅವರು ದೇಶದ ಪರ ನಿರ್ಣಯವನ್ನೂ ಕೈಗೊಳ್ಳುತ್ತಾರೆ. ಅನುಷ್ಠಾನವನ್ನೂ ಮಾಡುತ್ತಾರೆ. ಅದರ ಬಗ್ಗೆ ಚರ್ಚೆಯನ್ನೂ ಮಾಡುತ್ತಾರೆ. ಇದೇ ಎರಡು ಸರ್ಕಾರಗಳ ನಡುವಿನ ವ್ಯತ್ಯಾಸ.

ತಮ್ಮ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಧ್ಯೆ ಒಡನಾಟ ಹೇಗಿದೆ?

ಆರಂಭಕ್ಕೆ ಬಹಳ ಭಯವೆನಿಸುತ್ತಿತ್ತು. ಈಗ ನನಗೆ ಹಿರಿಯ ಅಣ್ಣನಂತೆ ಪ್ರಧಾನಿ ಮೋದಿ ಇದ್ದಾರೆ. ಅವರು ಅದ್ಭುತ ಟೀಚರೂ ಹೌದು. ಗೈಡೂ ಹೌದು. ತತ್ವಜ್ಞಾನಿಯೂ ಹೌದು. ವಜ್ರದಷ್ಟೇ ಕಠೋರ, ಅಷ್ಟೇ ಮೃಧು ಕೂಡ. ನಮ್ಮಂತಹ ಹೊಸಬರಿಗೆ ಸಹೃದಯದಿಂದ ತಿಳಿಸಿಕೊಡುತ್ತಾರೆ. ತಪ್ಪಾದಾಗ ಗದರಿಸುತ್ತಾರೆ. ಬಳಿಕ ತಿದ್ದಿ ಹೇಳುತ್ತಾರೆ. ಒಳ್ಳೆಯ ಕೆಲಸ ಮಾಡಿದಾಗ ಬೆನ್ನು ಚಪರಿಸುತ್ತಾರೆ. ಶ್ರಮ ಎಂದರೇನು ಎನ್ನುವುದನ್ನು ಅವರಿಂದ ಕಲಿತಾ ಇದ್ದೇನೆ. ವೆರಿ ವೆರಿ ಗ್ರೇಟ್‌ ಮ್ಯಾನ್‌. ಗ್ರೇಟ್‌ ಫ್ರೇಂಡ್‌. ಅಂತಹ ಮನುಷ್ಯನೊಂದಿಗೆ ಕೆಲಸ ಮಾಡುವುದೇ ನಮ್ಮ ಪುಣ್ಯ.

ಮಹದಾಯಿ ಅನುಷ್ಠಾನಕ್ಕೆ ಮುಂದಿನ ಯೋಜನೆಯೇನು? ಕೇಂದ್ರದ ಪಾತ್ರವೇನು?

ಕೇಂದ್ರದ ಕೆಲಸವನ್ನೆಲ್ಲ ಮುಗಿಸಿದ್ದೇವು. ಮಹದಾಯಿ ವಿಷಯದಲ್ಲಿ ಸಾಕಷ್ಟುಕೆಲಸ ಮಾಡಿದ್ದೇವೆ. ಕೆಲವೊಂದನ್ನು ಮಾಧ್ಯಮದ ಮುಂದೆ ಹೇಳೋಕೆ ಬರಲ್ಲ. ನೋಟಿಫಿಕೇಶನ್‌ ಹೊರಡಿಸಿದ್ದೇವೆ. ಇನ್ನು ರಾಜ್ಯದ ಕೆಲಸ ಉಳಿದಿರುವುದು. ಆ ಕೆಲಸವನ್ನು ಅದು ಮಾಡಬೇಕು. ಕೊರೋನಾ ಮುಗಿದ ಬಳಿಕ ಮಹದಾಯಿ ಕೆಲಸ ರಾಜ್ಯ ಸರ್ಕಾರ ಪ್ರಾರಂಭ ಮಾಡುತ್ತದೆ.

ಎನ್‌ಡಿಎ ಎರಡನೇ ಅವಧಿಯ ಮೊದಲ ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಕ್ಷೇತ್ರದ ಜನತೆಗೆ ಏನು ಹೇಳಲು ಬಯಸುತ್ತೀರಿ?

ಜನರಿಗೆ ಸಂದೇಶ ನೀಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ನಾನೊಬ್ಬ ಅವರ ಸೇವಕ. ಸಣ್ಣ ಕಾರ್ಯಕರ್ತ. ಅವರ ಆಶೀರ್ವಾದದಿಂದ ನಾನು ಈ ಹಂತಕ್ಕೆ ತಲುಪಿದ್ದೇನೆ. ನಾನು ಅವರಿಗೆ ಸಂದೇಶ ಕೊಡುವವನಲ್ಲ. ಅವರ ಆದೇಶವನ್ನು ಶಿರಸಾವಹಿಸಿ ಪಾಲಿಸುವವನು. ಏನೇ ಸಲಹೆ ಕೊಟ್ಟರು ಅದನ್ನು ಚಾಚುತಪ್ಪದೇ ಜವಾಬ್ದಾರಿಯಿಂದ ಮಾಡಿ ತೋರಿಸುತ್ತೇನೆ.
 

click me!