ತಾಜ್‌ಮಹಲ್‌ ಸೌಂದರ್ಯಕ್ಕೆ ಹಾನಿಯುಂಟು ಮಾಡಿದ ಗಾಳಿಮಳೆ!

By Suvarna NewsFirst Published May 31, 2020, 2:12 PM IST
Highlights

ಗುಡುಗು ಸಹಿತ ಗಾಳಿ ಮಳೆ| ಆಗ್ರಾದಲ್ಲಿ ಮೂವರು ಬಲಿ| ವಿಶ್ವ ಪ್ರಸಿದ್ಧ ತಾಜ್‌ ಮಹಲ್‌ಗೆ ಹಾನಿ| 

ಆಗ್ರಾ(ಮೇ.31): ಉತ್ತರ ಪ್ರದೇಶದ ಆಗ್ರಾದಲ್ಲಿ ರಾತ್ರಿ ಸುರಿದ ಗುಡುಗು ಸಹಿತ ಗಾಳಿ ಮಳೆಯಿಂದಾಗಿ ವಿಶ್ವಪ್ರಸಿದ್ಧ ಐತಿಹಾಸಿಕ ಕಟ್ಟಡ ತಾಜ್‌ ಮಹಲ್‌ಗೆ ಹಾನಿಯುಂಟಾಗಿದ್ದು, ಮೂವರು ಮೃತಪಟ್ಟಿದ್ದಾರೆ. ಮೃತರ ಕುಟುಂಬಕ್ಕೆ  ಆಗ್ರಾ ಜಿಲ್ಲಾಡಳಿತ ತಲಾ 4 ಲಕ್ಷ ರೂ ಪರಿಹಾ ಘೋಷಿಸಿದೆ.

ಈ ಭೀಕರ  ಗಾಳಿ ಮಳೆಯಿಂದ ಯಮುನಾ ನದಿಯ ಬದಿಗಿರುವ ತಾ‌ಜ್‌ ಮಹಲ್‌ನ ಹಿಂಭಾಗದಲ್ಲಿರುವ ಅಮೃತಶಿಲೆಯ ಅಡ್ಡಕಂಬಿಗಳ ಒಂದು ಭಾಗ ಬಿದ್ದು ಕೆಂಪು ಮರಳುಗಲ್ಲಿನ ಕಂಬಿಗಳ ಎರಡು ಫಲಕಗಳು ಸಹ ಹಾನಿಗೊಳಗಾಗಿವೆ. ಟಿಕೆಟ್ ನೀಡುವ ಪ್ರದೇಶದ ಪಶ್ಚಿಮ ಗೇಟ್ ಮತ್ತು ಫ್ರಿಸ್ಕಿಂಗ್ ಗೇಟ್‌ಗಳಿಗೆ ಹಾನಿಯಾಗಿದೆ. ಅಲ್ಲದೇ ಆಸು ಪಾಸಿನಲ್ಲಿದ್ದ ಹಲವಾರು ಮರಗಳು ನೆಲಕ್ಕುರುಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ಸಂಬಂಧ ಸುದ್ದಿ ಸಂಸ್ಥೆ ಎಎನ್‌ಐಗೆ ಪ್ರತಿಕ್ರಿಯಿಸಿದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಯೋಗೇಂದ್ರ ಕುಮಾರ್ ಬಿರುಗಾಳಿಯಿಂದಾಗಿ ಮೂವರು ಮೃತಪಟ್ಟಿದ್ದು, ಹಲವಾರು ಪ್ರಾಣಿಗಳೂ ಸಾವನ್ನಪ್ಪಿವೆ. ಕೆಲ ಮನೆಗಳಿಗೂ ಹಾನಿಯಾಗಿದೆ. ಈ ಸಂಬಂಧ ಸಮೀಕ್ಷೆ ನಡೆಸುತ್ತಿದ್ದೇವೆ. ಮೃತರ ರಕ್ತಸಂಬಂಧಿಗಳಿಗೆ ಜಿಲ್ಲಾಡಳಿತ ತಲಾ 4 ಲಕ್ಷ ಪರಿಹಾರವನ್ನು ನೀಡಲಿದೆ ತಿಳಿಸಿದ್ದಾರೆ.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕೂಡಾ ಮೃತರ ಕುಟುಂಬಕ್ಕೆ ಸಾಂತ್ವನ ಕೋರಿದ್ದಾರೆ.

click me!