ಭಾರತ ವಿರೋಧಿ ವೆಬ್ ಸೀರಿಸ್, ಪಾಕಿಸ್ತಾನ ಮೂಲದ ಒಟಿಟಿ ನಿಷೇಧಿಸಿದ ಕೇಂದ್ರ ಸರ್ಕಾರ!

By Suvarna NewsFirst Published Dec 12, 2022, 6:43 PM IST
Highlights

ಭಾರತ ವಿರೋಧಿ ಚಟುವಟಿಕೆ, ಭಾರತೀಯರ ನಡುವೆ ಒಡಕು ಮೂಡಿಸುವ, ಸರ್ಕಾರ ಹಾಗೂ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಹಲವು ಯೂಟ್ಯೂಬ್ ಚಾನೆಲ್‌ಗಳನ್ನು ಕೇಂದ್ರ ಸರ್ಕಾರ ಬ್ಲಾಕ್ ಮಾಡಿದೆ. ಇದೀಗ ಸದ್ದಿಲ್ಲದೆ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಾಕಿಸ್ತಾನ ಮೂಲಕ ಒಟಿಟಿ ಪ್ಲಾಟ್‌ಫಾರ್ಮ್‌ನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.

ನವದೆಹಲಿ(ಡಿ.12): ಭಾರತದಲ್ಲಿ ನಡೆದಿರುವ ಹಲವು ಘಟನೆಗಳನ್ನು ಭಾರತ ವಿರೋಧಿಯಾಗಿ ಚಿತ್ರಿಸಿ  ಈ ಮೂಲಕ ಭಾರತದ ಭದ್ರತೆ, ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತಿದ್ದ ಪಾಕಿಸ್ತಾನ ಮೂಲದ ಒಟಿಟಿ ಪ್ಲಾಟ್‌ಫಾರ್ಮ್ ವೈಡ್ಲಿ ಟಿವಿಯನ್ನು ಕೇಂದ್ರ ಸರ್ಕಾರ ಬ್ಲಾಕ್ ಮಾಡಿದೆ. 2021ರ ಐಟಿ ನಿಮಯದ ಅಡಿಯಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇಷ್ಟೇ ಅಲ್ಲ ಇದೇ ರೀತಿ ಭಾರತ ವಿರೋಧಿ ಚಟುವಟಿಕೆ ನಡೆಸುತ್ತಿದ್ದ ಪಾಕಿಸ್ತಾನ ಮೂಲದ ಒಂದು ವೆಬ್‌ಸೈಟ್, ಎರಡು ಮೊಬೈಲ್ ಆ್ಯಪ್, ನಾಲ್ಕು ಸೋಶಿಯಲ್ ಮೀಡಿಯಾ ಖಾತೆಗಳು ಹಾಗೂ ಒಂದು ಸ್ಮಾರ್ಟ್ ಟಿವಿ ಆ್ಯಪ್‌ನ್ನು ಕೇಂದ್ರ ಬ್ಲಾಕ್ ಮಾಡಿದೆ.

ಒಟಿಟಿ ಪ್ಲಾಟ್‌ಫಾರ್ಮ್ ವೈಡ್ಲಿ ಟಿವಿಯಲ್ಲಿ ಭಾರತ ವಿರೋಧಿ ವಿಷಗಳನ್ನೇ ಬಿತ್ತರ ಮಾಡಿದೆ. ಸೇವಕ್, ದಿ ಕನಫೆಶನ್( ಸೇವಕನ ತಪ್ಪೊಪ್ಪಿಗೆ) ಅನ್ನೋ ವೆಬ್ ಸೀರಿಸಿ ಪ್ರಸಾರ ಮಾಡಿದೆ. ಈ ವೆಬ್‌ಸೀರಿಸ್‌ನಲ್ಲಿ ಸಂಪೂರ್ಣವಾಗಿ ಭಾರತ ವಿರೋಧಿ ವಿಷಗಳನ್ನು ತುಂಬಲಾಗಿದೆ. ಈ ವೆಬ್‌ಸೀರಿಸ್‌ಗೆ ಪಾಕಿಸ್ತಾನ ಮಾಹಿತಿ ಸಂಸ್ಥೆ ಹಣ ಹೂಡಿಕೆ ಮಾಡಿದೆ. ಮುಂಬೈ ದಾಳಿಯ ಕರಾಳ ದಿನಾಚರಣೆಯಂದು ಈ ವೆಬ್‌ಸೀರಿಸ್ ಪ್ರಸಾರ ಮಾಡಿದೆ.

 

ಕೇಂದ್ರದಿಂದ ಮತ್ತೊಂದು ಬ್ಯಾನ್ ನೋಟಿಸ್, 67 ಅಶ್ಲೀಲ ವೆಬ್‌ಸೈಟ್ ನಿಷೇಧಕ್ಕೆ ಆದೇಶ!

ಈ ವೆಬ್‌ಸೀರಿಸ್‌ನ ಆರಂಭದಲ್ಲಿ ಭಾರತದ ರಾಷ್ಟ್ರಧ್ವಜದಲ್ಲಿರುವ ಅಶೋಕ ಚಕ್ರ ಹೊತ್ತಿ ಉರಿಯುತ್ತಿರುವ ವಿಡಿಯೋ ಬಳಸಲಾಗಿದೆ. ಬಳಿಕ ಈ ವೆಬ್ ಸೀರಿಸ್‌ನಲ್ಲಿ ಆಪರೇಶನ್ ಬ್ಲೂ ಸ್ಟಾರ್, ಬಾಬ್ರಿ ಮಸೀದಿ ದ್ವಂಸ, ಕ್ರಿಶ್ಚಿಯನ್ ಮಿಶಿನರಿಗಳ ಮೇಲಿನ ದಾಳಿ, ಮಾಲೆಗಾಂವ್ ಬ್ಲಾಸ್ಟ್, ಸಂಜೋತ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣಗಳನ್ನು ಭಾರತ ಸರ್ಕಾರ ಮಾಡಿದೆ. ಇದು ಭಾರತದ ಮುಸ್ಲಿಮ್ ಹಾಗೂ ಅಲ್ಪಸಂಖ್ಯಾತರ ಮೇಲೆ ಹಿಂದೂಗಳು ನಡೆಸುತ್ತಿರುವ ದಾಳಿ. ಈ ದಾಳಿಗಳಿಗೆ ಭಾರತ ಸರ್ಕಾರ ನೆರವು ನೀಡಿದೆ ಅನ್ನೋ ರೀತಿಯಲ್ಲಿ ವೆಬ್ ಸೀರಿಸ್ ಪ್ರಸಾರ ಮಾಡಿದೆ.

ಪಾಕಿಸ್ತಾನ ಕುತಂತ್ರದ ವೆಬ್‌ ಸೀರಿಸ್‌ನಲ್ಲಿ ಸಿಖ್ ಸಮುದಾಯ ಭಾರತದ ವಿರುದ್ಧದ ಈಗಾಗಲೇ ತಿರುಗಿಬಿದ್ದಿದೆ. ಆಪರೇಶನ್ ಬ್ಲೂ ಸ್ಟಾರ್‌ಗೆ ಪ್ರತೀಕಾರ ತೀರಿಸಿಕೊಳ್ಳಲು ಸಿಖ್‌ರು ಸಜ್ಜಾಗಿದ್ದಾರೆ. ಇದಕ್ಕಾಗಿ ಖಲಿಸ್ತಾನ ಚಳುವಳಿಗೆ ಭಾರತದಲ್ಲಿ ನಡೆಯುತ್ತಿದೆ ಎಂದು ಬಿಂಬಿಸಲಾಗಿದೆ. ಮುಸ್ಲಿಮರು, ಸಿಖ್‌ರು, ಕ್ರಿಶ್ಚಿಯನ್ ಸಮುದಾಯ ಭಾರತಕ್ಕೆ ಅಪಾಯ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ ಅನ್ನೋ ಸುಳ್ಳು ಹೇಳಿಕೆಗಳನ್ನು ಇದರಲ್ಲಿ ಪ್ರಸಾರ ಮಾಡಲಾಗಿದೆ.

ಭಾರತದ ವಿರುದ್ಧ ಸುಳ್ಳು ಮಾಹಿತಿ, 1 ವರ್ಷದಲ್ಲಿ 747 ವೆಬ್‌ಸೈಟ್, 94 ಯೂಟ್ಯೂಬ್‌ಗೆ ನಿರ್ಬಂಧ!

ಈ ವೆಬ್‌ಸೀರಿಸ್‌ನಲ್ಲಿ ಹಿಂದೂ ಮಕ್ಕಳು ಮಠಗಳಲ್ಲಿ, ಗುರುಕುಲದಲ್ಲಿ ಶಿಕ್ಷಣ ಪಡೆಯುತ್ತಿರುವ ರೀತಿ ತೋರಿಸಲಾಗಿದೆ. ಇಲ್ಲಿ ಮಕ್ಕಳಿಗೆ ಮುಸ್ಲಿಮರನ್ನು ಹತ್ಯೆ ಮಾಡಲು ಹೇಳಿಕೊಡಲಾಗುತ್ತದೆ. ಮುಸ್ಲಿಮರನ್ನು ಭಾರತಕ್ಕೆ ಅಪಾಯ ಎಂದು ಮಕ್ಕಳಿಗೆ ಹೇಳಿಕೊಟ್ಟು ಮುಸ್ಲಿಮರ ಮೇಲೆ ದಾಳಿ ಮಾಡಲು ಮಕ್ಕಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ಬಿಂಬಿಸಲಾಗಿದೆ. ಮುಸ್ಲಿಮರ ಜೊತೆಗೆ ಕ್ರಿಶ್ಚಿಯನ್ನರು, ಸಿಖ್‌ರನ್ನು ಹತ್ಯೆ ಮಾಡಲು ಹಿಂದೂ ಮಕ್ಕಳಿಗೆ ಪ್ರಚೋದನೆ ನೀಡಲಾಗುತ್ತದೆ. ಈ ಮೂಲಕ ಭಾರತದಲ್ಲಿ ಹಿಂದೂಗಳು ಮಾತ್ರ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ಕೋಟಿ ಕೋಟಿ ರೂಪಾಯಿ ಅನುದಾನ ನೀಡುತ್ತಿದೆ ಎಂದು ತೋರಿಸಲಾಗಿದೆ.

ಈ ರೀತಿ ಸುಳ್ಳು ಪ್ರಸಾರ ಮಾಡುವ ಮೂಲಕ ಭಾರತದ ಸಮುದಾಯಗಳ ನಡುವೆ ಒಡಕು ಮೂಡಿಸುವ, ಸರ್ಕಾರದ ವಿರುದ್ಧ ಪಿತೂರಿ ನಡೆಸುವ ಹಾಗೂ ಭಾರತದಲ್ಲಿ ದಂಗೆ ಸೃಷ್ಟಿಸುವ ಕೆಲಸವನ್ನು ಪಾಕಿಸ್ತಾನದ ಮೂಲದ ಈ ಒಟಿಟಿ ಪ್ಲಾಟ್‌ಪಾರ್ಮ್ ಮಾಡುತ್ತಿದೆ. ಇದಕ್ಕೆ ಭಾರತದಲ್ಲಿ ಕೋಟಿ ಕೋಟಿ ಚಂದಾದಾರರಿದ್ದಾರೆ. ಇದೀಗ ಈ ಒಟಿಟಿ ಪ್ಲಾಟ್‌ಫಾರ್ಮ್ ಪತ್ತೆ ಹಚ್ಚಿದ ಕೇಂದ್ರ ಸರ್ಕಾರ ಬ್ಲಾಕ್ ಮಾಡಿದೆ.

click me!