
ನವದೆಹಲಿ (ಅ.7): ಮಹಿಳಾ ಹಕ್ಕುಗಳ ಕುರಿತು ಪಾಕಿಸ್ತಾನದ ಅತ್ಯಂತ ಕೆಟ್ಟ ದಾಖಲೆಯನ್ನು ಭಾರತ ವಿಶ್ವಸಂಸ್ಥೆಯಲ್ಲಿ ತರಾಟೆಗೆ ತೆಗೆದುಕೊಂಡಿತು ಮತ್ತು 1971 ರಲ್ಲಿ ಆಪರೇಷನ್ ಸರ್ಚ್‌ಲೈಟ್ ಸಮಯದಲ್ಲಿ 400,000 ಮಹಿಳೆಯರ ಮೇಲೆ ಸಾಮೂಹಿಕ ಅ*ತ್ಯಾಚಾರ ನಡೆಸಿದ ಜನಾಂಗೀಯ ಹತ್ಯೆಯನ್ನು ತಿಳಿಸುವ ಮೂಲಕ ಪಾಕಿಸ್ತಾನದ ಜನ್ಮ ಜಾಲಾಡಿದೆ. ವಿಶ್ವಸಂಸ್ಥೆಯ ವೇದಿಕೆಯಲ್ಲಿ ಪಾಕಿಸ್ತಾನ ಕಾಶ್ಮೀರಿ ಮಹಿಳೆಯರ ದುಃಖವನ್ನು ತೋರಿಸಲು ಪ್ರಯತ್ನಿಸಿದಾಗ ಭಾರತ 1971ರ ಆಪರೇಷನ್ ಸರ್ಚ್‌ಲೈಟ್‌ಅನ್ನು ಉಲ್ಲೇಖಿಸಿ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿತು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಹಿಳೆಯರು ಮತ್ತು ಭದ್ರತೆಯ ಕುರಿತ ಚರ್ಚೆಯ ಸಂದರ್ಭದಲ್ಲಿ ಮಾಡಿದ ಅತ್ಯಂತ ಕಠೋರ ಭಾಷಣದಲ್ಲಿ, ಭಾರತದ ಖಾಯಂ ಪ್ರತಿನಿಧಿ ಪರ್ವತನೇನಿ ಹರೀಶ್, ಪಾಕಿಸ್ತಾನವು ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ತನ್ನ "ಭ್ರಮೆಯ ದಂಗೆಗಳನ್ನು" ಮುಂದುವರೆಸುತ್ತಿದೆ ಎಂದು ಟೀಕಿಸಿದರು.
"ಮಹಿಳೆಯರು, ಶಾಂತಿ ಮತ್ತು ಭದ್ರತಾ ಕಾರ್ಯಸೂಚಿಯಲ್ಲಿ ನಮ್ಮ ಅಮೂಲ್ಯ ದಾಖಲೆಯು ಕಳಂಕರಹಿತ ಮತ್ತು ಎಂದಿಗೂ ಹಾನಿಗೆ ಒಳಗಾಗದೆ ಇರುವಂಥದ್ದು. ತನ್ನದೇ ಜನರ ಮೇಲೆ ಬಾಂಬ್ ದಾಳಿ ಮಾಡುವ, ವ್ಯವಸ್ಥಿತ ನರಮೇಧವನ್ನು ನಡೆಸುವ ದೇಶವು ತಪ್ಪು ನಿರ್ದೇಶನ ಮತ್ತು ಅತಿಶಯೋಕ್ತಿಯಿಂದ ಜಗತ್ತನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸಬಹುದು" ಎಂದು ಹರೀಶ್ ಹೇಳಿದರು.
ಕಳೆದ ತಿಂಗಳು ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಪಾಕಿಸ್ತಾನಿ ವಾಯುಪಡೆಯು ರಾತ್ರಿಯಿಡೀ ನಡೆಸಿದ ವಾಯುದಾಳಿಯಲ್ಲಿ ಮಕ್ಕಳು ಸೇರಿದಂತೆ 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದನ್ನು ಉಲ್ಲೇಖಿಸಿ "ತನ್ನದೇ ಜನರ ಮೇಲೆ ಬಾಂಬ್ ದಾಳಿ" ಎಂದು ಭಾರತ ಹೇಳಿಕೆ ನೀಡಿದೆ.
ಮಹತ್ವದ ವಿಚಾರದಲ್ಲಿ, ವಿಶ್ವಸಂಸ್ಥೆಯಲ್ಲಿನ ಭಾರತೀಯ ಪ್ರತಿನಿಧಿಯು 1971 ರ ಆಪರೇಷನ್ ಸರ್ಚ್‌ಲೈಟ್ ಅನ್ನು ಪ್ರಸ್ತಾಪಿಸಿದರು, ಈ ಸಮಯದಲ್ಲಿ ಪಾಕಿಸ್ತಾನಿ ಸೈನ್ಯವು ಆಗಿನ ಪೂರ್ವ ಪಾಕಿಸ್ತಾನದಲ್ಲಿ ಬಂಗಾಳಿಗಳ ವಿರುದ್ಧ ತನ್ನ ಕ್ರೂರ ದಮನವನ್ನು ಪ್ರಾರಂಭಿಸಿತು. ಕಾರ್ಯಾಚರಣೆಯ ಸಮಯದಲ್ಲಿ, ಲಕ್ಷಾಂತರ ಮಹಿಳೆಯರನ್ನು ಬಂಧಿಸಲಾಗಿದ್ದಲ್ಲದೆ, ಪದೇ ಪದೇ ಕ್ರೂರವಾಗಿ ದಾಳಿ ಮಾಡಲಾಗಿತ್ತು.
ಈ ಕಾರ್ಯಾಚರಣೆಯನ್ನು ಪಾಕಿಸ್ತಾನದ ಕುಖ್ಯಾತ ಮಿಲಿಟರಿ ಕಮಾಂಡರ್, 'ಬಂಗಾಳಿಗಳ ಕಟುಕ' ಎಂದು ಕರೆಯಲಾಗುತ್ತಿದ್ದ ಜನರಲ್ ಟಿಕ್ಕಾ ಖಾನ್ ಮೇಲ್ವಿಚಾರಣೆ ಮಾಡಿದರು. 1971 ರ ಬಾಂಗ್ಲಾ ವಿಮೋಚನಾ ಯುದ್ಧದ ಸಮಯದಲ್ಲಿ ಈ ಕ್ರೂರ ಕೃತ್ಯಗಳು ನಡೆದವು, ಇದು ಅಂತಿಮವಾಗಿ ಬಾಂಗ್ಲಾದೇಶದ ರಚನೆಗೆ ಕಾರಣವಾಯಿತು, ಪಾಕಿಸ್ತಾನ ಸೋಲನ್ನು ಒಪ್ಪಿಕೊಂಡಿತು ಮತ್ತು ಢಾಕಾದಲ್ಲಿ ಬೇಷರತ್ತಾಗಿ ಶರಣಾಯಿತು. ಇಂತಹ ಐತಿಹಾಸಿಕ ಉಲ್ಲಂಘನೆಗಳನ್ನು ಎತ್ತಿ ತೋರಿಸಿದ ಹರೀಶ್, ಅಂತರರಾಷ್ಟ್ರೀಯ ಸಮುದಾಯವು ಪಾಕಿಸ್ತಾನದ ಪ್ರಚಾರವನ್ನು ಅರ್ಥಮಾಡಿಕೊಂಡಿದೆ ಎಂದು ಹೇಳಿದರು.
"ಇದು 1971 ರಲ್ಲಿ ಆಪರೇಷನ್ ಸರ್ಚ್‌ಲೈಟ್ ನಡೆಸಿದ ದೇಶ ಮತ್ತು ತನ್ನದೇ ಆದ ಸೈನ್ಯದಿಂದ 400,000 ಮಹಿಳೆಯರ ಮೇಲೆ ವ್ಯವಸ್ಥಿತವಾಗಿ ಸಾಮೂಹಿಕ ಅ*ತ್ಯಾಚಾರದ ಅಭಿಯಾನವನ್ನು ಅನುಮೋದನೆ ಮಾಡಿದಂಥ ದೇಶ. ಪಾಕಿಸ್ತಾನದ ಪ್ರಚಾರವನ್ನು ಜಗತ್ತು ನೋಡುತ್ತಿದೆ" ಎಂದು ಅವರು ಹೇಳಿದರು.
ಪಾಕಿಸ್ತಾನದ ಪ್ರತಿನಿಧಿ ಸೈಮಾ ಸಲೀಮ್ ತಮ್ಮ ಭಾಷಣದಲ್ಲಿ, ಕಾಶ್ಮೀರದ ಮಹಿಳೆಯರು ದಶಕಗಳಿಂದ "ಯುದ್ಧದ ಆಯುಧವಾಗಿ ಬಳಸಲಾಗುವ ಲೈಂಗಿಕ ಹಿಂಸೆಯನ್ನು ಸಹಿಸಿಕೊಂಡಿದ್ದಾರೆ" ಎಂದು ಆರೋಪಿಸಿದಾಗ ಭಾರತ ದೃಢವಾದ ಪ್ರತಿಕ್ರಿಯೆ ನೀಡಿತು. ಎಂದಿನಂತೆ, ಪಾಕಿಸ್ತಾನದ ಮಾತುಗಳಿಗೆ ಯಾವುದೇ ಪುರಾವೆಗಳಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ